ಲಿಂಗಸುಗೂರು | ಸಿಸಿ ರಸ್ತೆಗಳಿಗೆ ವೇಗ ನಿಯಂತ್ರಕಗಳನ್ನು ಅಳವಡಿಸಲು ಕರವೇ ಮನವಿ
ಲಿಂಗಸುಗೂರು : ಲಿಂಗಸುಗೂರು ಪುರಸಭೆ ವ್ಯಾಪ್ತಿಯಲ್ಲಿನ ಸಿಸಿ ರಸ್ತೆಗಳಲ್ಲಿ ವೇಗ ನಿಯಂತ್ರಕಗಳನ್ನು ಅಳವಡಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ತಾಲೂಕು ಘಟಕದ ಕಾರ್ಯಕರ್ತರು ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ವಿವಿಧ ಬಡಾವಣೆಯೊಳಗಿನ ಸಿಸಿ ರಸ್ತೆಗಳ ಮೇಲೆ ಇತ್ತೀಚಿನ ದಿನಗಳಲ್ಲಿ ವಾಹನ ಸಂಚಾರವು ಹೆಚ್ಚಾಗಿದ್ದು, ಕೆಲವು ವಾಹನ ಚಾಲಕರು ಅತಿವೇಗದಲ್ಲಿ ಸಂಚರಿಸುತ್ತಿದ್ದಾರೆ. ಇದರಿಂದ ಪಾದಚಾರಿಗಳು, ಶಾಲಾ ಮಕ್ಕಳು, ವೃದ್ಧರು ಹಾಗೂ ಮಹಿಳೆಯರಿಗೆ ರಸ್ತೆ ದಾಟುವ ಸಂದರ್ಭದಲ್ಲಿ ಅಪಾಯ ಎದುರಾಗುತ್ತಿದೆ.
ಸಾರ್ವಜನಿಕರ ಸುರಕ್ಷತೆಗಾಗಿ ಸಿಸಿ ರಸ್ತೆಗಳಲ್ಲಿ ಸೂಕ್ತ ಅಂತರದಲ್ಲಿ ರಬ್ಬರ್ ಹಂಪ್ಸ್ (ವೇಗ ನಿಯಂತ್ರಕಗಳು) ಅಳವಡಿಸುವುದು ಅತ್ಯಂತ ಅಗತ್ಯವಾಗಿದೆ. ಪುರಸಭೆ ವ್ಯಾಪ್ತಿಯಲ್ಲಿ ನಿರ್ಮಿಸಲಾಗುತ್ತಿರುವ ಸಿಸಿ ರಸ್ತೆಗಳಲ್ಲಿ ರಬ್ಬರ್ ಹಂಪ್ಸ್ ಗಳನ್ನು ಅಳವಡಿಸಿ ಅಪಘಾತಗಳನ್ನು ತಡೆಯಬೇಕೆಂದು ಈ ಮೂಲಕ ತಮ್ಮಲ್ಲಿ ಒತ್ತಾಯಿಸುತ್ತೇವೆ. ಒಂದು ವೇಳೆ ನಮ್ಮ ಮನವಿಗೆ ಸ್ಪಂದಿಸದಿದ್ದರೆ ತಮ್ಮ ಕಾರ್ಯಾಲಯದ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ರವಿಕುಮಾರ್ ಬರಗೋಡಿ, ಅಲ್ಲಾವುದ್ದೀನ್ ಬಾಬಾ, ಮೋಸಿನ್ ಖಾನ್, ಮರಿಯಪ್ಪ ಹಟ್ಟಿ, ಅಜೀಜ್ ಪಾಷಾ, ಶಬ್ಬೀರ್, ವಿರೇಶ ಐದನಾಳ ಸೇರಿ ಇತರರು ಇದ್ದರು.