Raichur | ಐಸಿಡಿಎಸ್ ಅನುದಾನ ಹೆಚ್ಚಳಕ್ಕೆ ಆಗ್ರಹಿಸಿ ಅಂಗನವಾಡಿ, ಬಿಸಿಯೂಟ ನೌಕರರ ಪ್ರತಿಭಟನೆ
ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಒತ್ತಾಯ
ರಾಯಚೂರು : ಐಸಿಡಿಎಸ್ ಯೋಜನೆಗೆ ಕೇಂದ್ರ ಸರ್ಕಾರ ಸಮರ್ಪಕ ಅನುದಾನ ನೀಡುತ್ತಿಲ್ಲ ಎಂದು ಆರೋಪಿಸಿ, ಅಂಗನವಾಡಿ ನೌಕರರ ಸಂಘ ಹಾಗೂ ಬಿಸಿಯೂಟ ನೌಕರರ ಸಂಘದ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಶುಕ್ರವಾರ ಕರಾಳ ದಿನ ಆಚರಿಸಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಐಸಿಡಿಎಸ್ ಯೋಜನೆಗೆ ಬೆಲೆ ಏರಿಕೆಗೆ ಅನುಗುಣವಾಗಿ ಅನುದಾನ ಹೆಚ್ಚಿಸದ ಪರಿಣಾಮ ಯೋಜನೆಗೆ ತೀವ್ರ ಹೊಡೆತ ಬಿದ್ದಿದೆ. ಬಿಸಿಯೂಟ ಯೋಜನೆಗೆ ಅಗತ್ಯ ಅನುದಾನ ನೀಡದೇ ಖಾಸಗಿ ಸಂಸ್ಥೆಗಳಿಗೆ ವಹಿಸಲು ಸರ್ಕಾರ ಮುಂದಾಗಿರುವುದು ಯೋಜನೆಯನ್ನು ದುರ್ಬಲಗೊಳಿಸುವ ಪ್ರಯತ್ನವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ತಡೆದು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು.
2017ರಿಂದ ಪೌಷ್ಠಿಕ ಆಹಾರದ ಘಟಕ ವೆಚ್ಚವನ್ನು ಹೆಚ್ಚಿಸದ ಕಾರಣ ಅಂಗನವಾಡಿ ವ್ಯವಸ್ಥೆ ದುರ್ಬಲಗೊಳ್ಳುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಡಿ 3ರಿಂದ 6 ವರ್ಷದ ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಆರಂಭವಾಗುತ್ತಿರುವುದರಿಂದ ಅಂಗನವಾಡಿ ಕೇಂದ್ರಗಳ ಫಲಾನುಭವಿಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ದೂರಿದರು.
ಬಿಸಿಯೂಟ ಯೋಜನೆ ಆರಂಭವಾಗಿ 25 ವರ್ಷಗಳಾದರೂ ನೌಕರರ ಗೌರವಧನದಲ್ಲಿ ಸಮರ್ಪಕ ಹೆಚ್ಚಳವಾಗಿಲ್ಲ. ಉದ್ಯೋಗ ಭದ್ರತೆಯಿಲ್ಲದೆ ಬಡ ಮಹಿಳೆಯರ ಶೋಷಣೆ ನಡೆಯುತ್ತಿದ್ದು, ಯೋಜನೆಯನ್ನು ಇಸ್ಕಾನ್‌ಗೆ ವಹಿಸುವ ಪ್ರಸ್ತಾವನೆಯನ್ನು ಸರ್ಕಾರ ಕೈಬಿಡಬೇಕು ಎಂದು ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಎಚ್. ಪದ್ಮಾ ಒತ್ತಾಯಿಸಿದರು.
ಅಂಗನವಾಡಿ ನೌಕರರಿಗೆ ಎಫ್‌ಆರ್‌ಎಸ್, ಇ-ಕೆವೈಸಿ, ಪೋಷಣ್ ಟ್ರ್ಯಾಕರ್ ಸೇರಿದಂತೆ ವಿವಿಧ ಆನ್‌ಲೈನ್ ಕೆಲಸಗಳನ್ನು ಗುಣಮಟ್ಟದ ಮೊಬೈಲ್, 5ಜಿ ಡೇಟಾ ಹಾಗೂ ವೈ-ಫೈ ಸೌಲಭ್ಯ ಒದಗಿಸದೆ ನಿರ್ವಹಿಸಲು ಒತ್ತಾಯಿಸಲಾಗುತ್ತಿದೆ. ಸರ್ಕಾರದ ಈ ನೌಕರ ವಿರೋಧಿ ನೀತಿಯನ್ನು ತಕ್ಷಣ ಹಿಂಪಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ರಾಜ್ಯ ಸರ್ಕಾರ ಚುನಾವಣಾ ಭರವಸೆಯಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ 15,000 ರೂ. ಹಾಗೂ ಸಹಾಯಕಿಯರಿಗೆ 10,000 ರೂ. ಗೌರವಧನ ಜಾರಿಗೊಳಿಸಬೇಕು. ಬಿಸಿಯೂಟ ನೌಕರರ ಗೌರವಧನವನ್ನು 7,000 ರೂ. ಹೆಚ್ಚಳ ಮಾಡಬೇಕು. ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಎಲ್‌ಕೆಜಿ–ಯುಕೆಜಿ ವಿಸ್ತರಿಸಬೇಕು. ಸಾದಿಲ್ವಾರು ಜಂಟಿ ಖಾತೆಯ ಜವಾಬ್ದಾರಿಯನ್ನು ಎಸ್‌ಡಿಎಂಸಿಗೆ ವರ್ಗಾವಣೆ ಮಾಡಿರುವ ಆದೇಶವನ್ನು ಹಿಂಪಡೆದು ಹಿಂದಿನ ವ್ಯವಸ್ಥೆಯನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದರು.
ನಂತರ ಜಿಲ್ಲಾಧಿಕಾರಿ ಪೂವಿತಾ ಎಸ್. ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಬಿಸಿಯೂಟ ನೌಕರರ ಸಂಘದ ಅಧ್ಯಕ್ಷೆ ರೇಣುಕಮ್ಮ, ಸಿಐಟಿಯು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಡಿ.ಎಸ್.ಶರಣಬಸವ, ವರಲಕ್ಷ್ಮಿ, ಮರಿಯಮ್ಮ, ರಮಾದೇವಿ, ಮಹ್ಮದ್ ಹನೀಫ್, ಕೆ.ಜಿ ವೀರೇಶ, ಗೋಕುರಮ್ಮ, ಗಂಗಮ್ಮ, ಅಕ್ಕಮಹಾದೇವಿ, ವಿಶಾಲಾಕ್ಷಮ್ಮ, ಜರೀನಾಬೇಗಂ, ಅಲ್ಲಾಭಕ್ಷ, ಶರಣಮ್ಮ, ನಿಂಗಪ್ಪ, ಶ್ರೀಲೇಖಾ, ಶ್ರೀಧರ, ಕಲಾಣಮ್ಮ ಸೇರಿದಂತೆ ಅಂಗನವಾಡಿ, ಬಿಸಿಯೂಟ ಪಾಲ್ಗೊಂಡಿದ್ದರು.