×
Ad

Raichur | ಗ್ರಾಪಂ ಮಾಜಿ ಅಧ್ಯಕ್ಷನ ಕೊಲೆ ಪ್ರಕರಣ : 6 ಆರೋಪಿಗಳ ಬಂಧನ

Update: 2026-07-10 19:42 IST

ರಾಯಚೂರು, ಜು.10: ಜಿಲ್ಲೆಯ ಇಡಪನೂರು ಪೊಲೀಸ್ ಠಾಣೆ ವ್ಯಾಪ್ತಿಯ ಹಂಚಿನಾಳ ಗ್ರಾಮದ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ಹಣದ ವಿಚಾರವಾಗಿ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರು ಆರೋಪಿಗಳನ್ನು ಬಂಧಿಸಿದ್ದಾರೆ.

ಜುಲೈ 8ರಂದು ರಾತ್ರಿ ಸುಮಾರು 8.35ಕ್ಕೆ ಮಹೇಶ್ ಪೆಟ್ರೋಲ್ ಹಾಕಿಸಿಕೊಂಡ ಬಳಿಕ ಹಣ ಪಾವತಿಸುವ ವೇಳೆ 10 ರೂ. ಕಡಿಮೆ ನೀಡಿದ್ದ ವಿಚಾರವಾಗಿ ಪೆಟ್ರೋಲ್ ಬಂಕ್ ಸಿಬ್ಬಂದಿ ರವಿ ಹಾಗೂ ಮಹೇಶ್ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಅಲ್ಲಿಗೆ ನಾಗರಾಜ್ ಆಗಮಿಸಿದ್ದು, ಗಲಾಟೆ ಬಿಡಿಸಲು ಮೇಘನಾಥ್ ಮಧ್ಯಪ್ರವೇಶಿಸಿದ್ದಾರೆ.

ಆ ಸಂದರ್ಭದಲ್ಲಿ ಪೆಟ್ರೋಲ್ ಬಂಕ್‌ನಲ್ಲಿದ್ದ ಆರೋಪಿಗಳು ಗುಂಪು ಕಟ್ಟಿಕೊಂಡು ಬಂದು ಮೇಘನಾಥ್ ಅವರೊಂದಿಗೆ ಜಗಳವಾಡಿ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಲ್ಲದೆ ಜಾತಿ ನಿಂದನೆಯನ್ನೂ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ದೂರಿನ ಪ್ರಕಾರ, ವೀರೇಶ್ ಕಟ್ಟಿಗೆಯಿಂದ ಮೇಘನಾಥ್ ಅವರ ತಲೆಗೆ ಹೊಡೆದಿದ್ದು, ಬಳಿಕ ರವಿ ಮತ್ತೊಮ್ಮೆ ಹಲ್ಲೆ ನಡೆಸಿದ್ದಾನೆ. ನರಸಿಂಹ ಕಟ್ಟಿಗೆಯಿಂದ ಬೆನ್ನಿಗೆ ಹೊಡೆದ ಪರಿಣಾಮ ಮೇಘನಾಥ್ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಗಲಾಟೆ ಬಿಡಿಸಲು ಮುಂದಾದ ಮಹೇಶ್ ಹಾಗೂ ನಾಗರಾಜ್ ಮೇಲೂ ಇತರ ಆರೋಪಿಗಳು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಗಂಭೀರವಾಗಿ ಗಾಯಗೊಂಡ ಮೇಘನಾಥ್ ಅವರನ್ನು ರಾಯಚೂರಿನ ಬಾಲಂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜುಲೈ 9ರಂದು ಬೆಳಿಗ್ಗೆ ತಲೆಗೆ ಶಸ್ತ್ರಚಿಕಿತ್ಸೆ ನಡೆಸಿದರೂ ಅವರು ಚಿಕಿತ್ಸೆ ಫಲಕಾರಿಯಾಗದೆ ಬೆಳಿಗ್ಗೆ 8.25ಕ್ಕೆ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಮೃತರ ಪತ್ನಿ ನೀಡಿದ ದೂರಿನ ಮೇರೆಗೆ ಇಡಪನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್-2023) ವಿವಿಧ ಕಲಂಗಳು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ರವಿ, ವೀರೇಶ್, ನರಸಿಂಹ, ಮಾರೆಪ್ಪ, ರಮೇಶ್ ಹಾಗೂ ಪ್ರವೀಣ್ ಎಂಬ ಆರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News