Raichur | ಹಿರೇಕೊಟ್ಟೆಕಲ್ ಗ್ರಾಪಂನಲ್ಲಿ ಭ್ರಷ್ಟಾಚಾರ ಆರೋಪ: ತನಿಖೆಗೆ ಆಗ್ರಹ
ರಾಯಚೂರು: ಮಾನ್ವಿ ತಾಲೂಕಿನ ಹಿರೇಕೊಟ್ಟೆಕಲ್ ಗ್ರಾಮ ಪಂಚಾಯತಿಯಲ್ಲಿ 15ನೇ ಹಣಕಾಸು ಯೋಜನೆಯ ಕಾಮಗಾರಿಗಳು, ಗ್ರಂಥಾಲಯ ಅನುದಾನದ ಬಳಕೆ, ಹಣಕಾಸು ವ್ಯವಹಾರಗಳು ಹಾಗೂ ಎರಡನೇ ಕರವಸೂಲಿಗಾರರ ನೇಮಕಾತಿಯಲ್ಲಿ ಗಂಭೀರ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ, ಸಮಗ್ರ ಹಾಗೂ ಸ್ವತಂತ್ರ ತನಿಖೆ ನಡೆಸುವಂತೆ ಅಖಿಲ ಭಾರತ ವಾಲ್ಮೀಕಿ ನಾಯಕರ ಗಜಪಡೆ (ರಿ) ಜಿಲ್ಲಾ ಘಟಕವು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಮನವಿಯಲ್ಲಿ, 2024-25ನೇ ಸಾಲಿನ 15ನೇ ಹಣಕಾಸು ಯೋಜನೆಯಡಿ ಕೈಗೊಂಡಿರುವ ಸುಮಾರು 60 ಕಾಮಗಾರಿಗಳ ಓಚರ್ ಬಿಲ್‌ಗಳು, ಕಾಮಗಾರಿಗಳ ಅನುಷ್ಠಾನ, ಹಣ ಬಿಡುಗಡೆ ಹಾಗೂ ವೆಂಡರ್‌ಗಳ ಪಾತ್ರದ ಕುರಿತು ಗಂಭೀರ ಅನುಮಾನ ವ್ಯಕ್ತಪಡಿಸಲಾಗಿದೆ. ಹಲವು ಕಾಮಗಾರಿಗಳು ಪೂರ್ಣಗೊಂಡಿಲ್ಲ ಅಥವಾ ಕಳಪೆ ಮಟ್ಟದಲ್ಲಿ ನಡೆದಿರುವ ಸಾಧ್ಯತೆ ಇದೆ ಎಂದು ಆರೋಪಿಸಲಾಗಿದೆ.
ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸಿ, ಸಂಬಂಧಪಟ್ಟ ಪಿಡಿಒ, ವೆಂಡರ್‌ಗಳು, ಗುತ್ತಿಗೆದಾರರು ಹಾಗೂ ಇತರೆ ಅಧಿಕಾರಿಗಳ ಪಾತ್ರವನ್ನು ತನಿಖೆಗೊಳಪಡಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
ಗ್ರಾಮ ಪಂಚಾಯತಿಯ ಎರಡನೇ ಕರವಸೂಲಿಗಾರರ ನೇಮಕಾತಿಯೂ ನಿಯಮಬಾಹಿರವಾಗಿದೆ ಎಂಬ ಆರೋಪ ಕೇಳಿಬಂದಿದ್ದು, ತಪ್ಪು ಮಾಹಿತಿ ಹಾಗೂ ದಾಖಲೆಗಳ ಆಧಾರದ ಮೇಲೆ ಅನುಮೋದನೆ ಪಡೆದಿರುವ ಸಾಧ್ಯತೆ ಇರುವುದರಿಂದ ನೇಮಕಾತಿಯನ್ನು ಮರುಪರಿಶೀಲಿಸಿ ಅಗತ್ಯವಿದ್ದಲ್ಲಿ ರದ್ದುಪಡಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಇದಲ್ಲದೆ, 2023-24, 2024-25 ಹಾಗೂ 2025-26ನೇ ಸಾಲುಗಳಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಂಥಾಲಯಕ್ಕೆ ಬಿಡುಗಡೆಯಾದ ಅನುದಾನದ ಬಳಕೆ, ಖರ್ಚು-ವೆಚ್ಚ, ಖರೀದಿ ವಿವರಗಳು, ಓಚರ್ ಬಿಲ್‌ಗಳು ಹಾಗೂ ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಿ ತನಿಖೆ ನಡೆಸುವಂತೆ ಕೋರಲಾಗಿದೆ.
02-02-2026ರಿಂದ 06-07-2026ರವರೆಗೆ ಗ್ರಾಮ ಪಂಚಾಯತಿಯಿಂದ ವಿವಿಧ ಕಾಮಗಾರಿಗಳು ಹಾಗೂ ಇತರೆ ಉದ್ದೇಶಗಳಿಗೆ ಮಾಡಿದ ಖರ್ಚು-ವೆಚ್ಚ, ಬ್ಯಾಂಕ್ ಪಾಸ್‌ಬುಕ್ ಪ್ರತಿಗಳು, ಚೆಕ್ ವಿವರಗಳು, ವೌಚರ್‌ಗಳು ಸೇರಿದಂತೆ ಹಣಕಾಸು ದಾಖಲೆಗಳನ್ನು ಪರಿಶೀಲಿಸಿ ಸಾರ್ವಜನಿಕ ಹಣದ ದುರುಪಯೋಗ ನಡೆದಿದೆಯೇ ಎಂಬುದನ್ನು ತನಿಖೆ ಮೂಲಕ ಬಹಿರಂಗಪಡಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಹಿರೇಕೊಟ್ಟೆಕಲ್ ಗ್ರಾಮ ಪಂಚಾಯತಿಯಲ್ಲಿ ಸಾರ್ವಜನಿಕ ನಿಧಿಗಳ ಬಳಕೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ನಕಲಿ ದಾಖಲೆಗಳ ಬಳಕೆ ಹಾಗೂ ನಿಯಮ ಉಲ್ಲಂಘನೆಗಳು ನಡೆದಿರುವ ಗಂಭೀರ ಅನುಮಾನಗಳಿರುವುದರಿಂದ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂದು ಈರಣ್ಣ ನಾಯಕ ಆಗ್ರಹಿಸಿದ್ದಾರೆ.
ಅಲ್ಲದೆ, ತನಿಖೆ ಪೂರ್ಣಗೊಳ್ಳುವವರೆಗೆ ಸಂಬಂಧಪಟ್ಟ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹಾಗೂ ಸಂಬಂಧಿತ ಅಧಿಕಾರಿಗಳನ್ನು ಅಮಾನತುಗೊಳಿಸಿ, ಸಾಕ್ಷ್ಯಾಧಾರಗಳ ನಾಶ ಹಾಗೂ ದಾಖಲೆಗಳ ತಿರುಚುವಿಕೆಯನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಈರಣ್ಣ ನಾಯಕ,ಕಿರಣ್ ಕುಮಾರ್,ವೆಂಕಟೇಶ್ ನಾಯಕ ಇದ್ದರು.