ರಾಯಚೂರು ಉಸ್ತುವಾರಿ ವಿಚಾರ: ಅಜಯಸಿಂಗ್ ಗೆ ಘೇರಾವ್ ಗೆ ಯತ್ನ; ಪ್ರತಿಭಟನಾಕಾರರ ಬಂಧನ
Update: 2026-08-15 09:09 IST
ರಾಯಚೂರು: ರಾಯಚೂರು ಜಿಲ್ಲೆಗೆ ಡಾ.ಅಜಯಸಿಂಗ್ ಅವರಿಗೆ ಉಸ್ತುವಾರಿ ನೀಡಿದ್ದನ್ನು ಖಂಡಿಸಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ, ರಾಯಚೂರು ಜಿಲ್ಲಾ ನಾಗರಿಕರ ಸಮಿತಿ ಮುಖಂಡರು ಸಚಿವ ಡಾ.ಅಜಯಸಿಂಗ್ ಅವರನ್ನು ಘೇರಾವ್ ಹಾಕಲು ಯತ್ನಿಸಿದಾಗ ಪೊಲೀಸರು ಬಂದಿಸಿದ ಘಟನೆ ಶನಿವಾರ ನಡೆಯಿತು.
ನಗರದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನಾಕಾರರು ಗೋ ಬ್ಯಾಕ್ ಅಜಯಸಿಂಗ್ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ನೀಡದೇ ಸರ್ಕಾರ ಅನ್ಯಾಯ ಮಾಡಿದೆ. ಹೊರ ಜಿಲ್ಲೆಯ ಸಚಿವರನ್ನು ಧ್ವಜಾರೋಹಣ ನೆರವೇರಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಜಿಲ್ಲಾ ಕ್ರೀಡಾಂಗಣಕ್ಕೆ ಸಚಿವರು ಬರುವ ಮುನ್ನವೆ ಡಾ.ವೃತ್ತದಲ್ಲಿ ಪ್ರತಿಭಟನಾಕಾರರನ್ನು ಪೊಲೀಸರು ತಡೆದು ವಾಹನದಲ್ಲಿ ಕರೆದೊಯ್ದರು.
ಹಿರಿಯ ಹೋರಾಟಗಾರ ವಕೀಲ ಎಸ್ ಮಾರೆಪ್ಪ, ರವೀಂದ್ರನಾಥ ಪಟ್ಟಿ, ಅಶೋಕ ಕುಮಾರ ಸಿ.ಕೆ ಜೈನ್, ವಿಶ್ವನಾಥ ಪಟ್ಟಿ, ಅಮರೇಗೌಡ ಪಾಟೀಲ, ನರಸಪ್ಪ ಮತ್ತಿತರರು ಇದ್ದರು.