Raichur | ಎಸ್‌ಐಆರ್‌ನಿಂದ ಮತದಾನದ ಹಕ್ಕು ಕಸಿಯುವ ಯತ್ನ: ಎ.ಶರಣಕುಮಾರ ಆರೋಪ
ರಾಯಚೂರು, ಆ.5: ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಿಂದ ಲಕ್ಷಾಂತರ ಮತದಾರರು ಮತದಾನದ ಹಕ್ಕು ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಎದ್ದೇಳು ಕರ್ನಾಟಕ ಸಂಘಟನೆಯ ಸಂಚಾಲಕ ಎ.ಶರಣಕುಮಾರ ಆರೋಪಿಸಿದರು.
ಬುಧವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಆಯೋಗದ ಅಂಕಿ-ಅಂಶಗಳ ಪ್ರಕಾರ ರಾಜ್ಯದಲ್ಲಿ ಸುಮಾರು 1.10 ಕೋಟಿ ಮತದಾರರು ಡಿಲೀಟ್ ಪಟ್ಟಿಯಲ್ಲಿದ್ದು, ಇದು ಒಟ್ಟು ಮತದಾರರಲ್ಲಿ ಶೇ.20ರಷ್ಟಾಗಿದೆ. ಬೆಂಗಳೂರಿನಲ್ಲಿ ಮಾತ್ರ ಶೇ.40ರಷ್ಟು ಮತದಾರರು ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ರಾಜ್ಯದಲ್ಲಿ 34 ಲಕ್ಷಕ್ಕೂ ಹೆಚ್ಚು ಮ್ಯಾಪಿಂಗ್ ಆಗದ ಮತದಾರರಿಗೆ ನೋಟಿಸ್ ನೀಡುವ ಸಾಧ್ಯತೆ ಇದ್ದು, ‘ಲಾಜಿಕಲ್ ಡಿಸ್ಕ್ರೆಪೆನ್ಸಿ’ ಪ್ರಕ್ರಿಯೆಯಿಂದಲೂ ಮತದಾನದ ಹಕ್ಕಿನ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಬಹುದು ಎಂದು ಹೇಳಿದರು.
ಚುನಾವಣಾ ಆಯೋಗವು ಸಮರ್ಪಕ ಯೋಜನೆ ಮತ್ತು ತರಬೇತಿಯಿಲ್ಲದೆ ಎಸ್‌ಐಆರ್ ಪ್ರಕ್ರಿಯೆ ಜಾರಿಗೊಳಿಸಿದ್ದು, ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್‌ಒ) ಮೇಲೆ ಹೆಚ್ಚುವರಿ ಹೊಣೆಗಾರಿಕೆ ಹೊರಿಸಲಾಗಿದೆ. ಪ್ರಕ್ರಿಯೆಯಲ್ಲಿನ ದೋಷಗಳಿಗೆ ಬಿಎಲ್‌ಒಗಳನ್ನು ಹೊಣೆಗಾರರನ್ನಾಗಿಸುವ ಬದಲು ಚುನಾವಣಾ ಆಯೋಗವೇ ಜವಾಬ್ದಾರಿ ವಹಿಸಬೇಕು ಎಂದು ಆಗ್ರಹಿಸಿದರು.
ಉದ್ಯೋಗ, ಶಿಕ್ಷಣ, ದುಡಿಮೆ ಹಾಗೂ ಇತರ ಕಾರಣಗಳಿಂದ ತಾತ್ಕಾಲಿಕವಾಗಿ ಸ್ಥಳಾಂತರಗೊಂಡಿರುವ ಮತದಾರರನ್ನು ಡಿಲೀಟ್ ಮತದಾರರೆಂದು ಪರಿಗಣಿಸುವುದು ಅನ್ಯಾಯವಾಗಿದೆ. ವಲಸೆ ಕಾರ್ಮಿಕರು, ಬಾಡಿಗೆ ಮನೆ ಬದಲಾಯಿಸಿರುವವರು ಹಾಗೂ ತಾತ್ಕಾಲಿಕವಾಗಿ ಮನೆಯಲ್ಲಿ ಇಲ್ಲದವರ ಹೆಸರನ್ನು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ತೆಗೆದುಹಾಕಬಾರದು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಎಂ.ಆರ್. ಬೇರಿ, ಜಮಾತೆ ಇಸ್ಲಾಂ ಜಿಲ್ಲಾಧ್ಯಕ್ಷ ಅಸಿಮುದ್ದೀನ್ ಅಖ್ತರ್, ಮಾರೆಪ್ಪ ಹರವಿ, ಆಂಜನೇಯ ಕುರುಬದೊಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.