×
Ad

Raichur | ಶಾಸಕ ಶಿವರಾಜ್ ಪಾಟೀಲ್ ವಿರುದ್ಧ ಕ್ರಮಕ್ಕೆ ಬಸನಗೌಡ ಪಿ.ಗೋನಾಳ್ ಒತ್ತಾಯ

Update: 2026-05-13 12:55 IST

ರಾಯಚೂರು : ರಾಯಚೂರು ಜಿಲ್ಲೆಯನ್ನು ತೆಲಂಗಾಣಕ್ಕೆ ಸೇರಿಸಬೇಕೆಂದು ಹೇಳಿಕೆ ನೀಡಿದ ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಈ ವಿಷಯವನ್ನು ವಿಧಾನಸಭೆ ಅಧಿವೇಶನದಲ್ಲಿ ಚರ್ಚೆಗೆ ತರಬೇಕೆಂದು ಬಸವನಗೌಡ ಪಾಟೀಲ್ ಗೋನಾಳ ಅವರು ಮುಖ್ಯಮಂತ್ರಿಗಳು ಮತ್ತು ಸಭಾಧ್ಯಕ್ಷರನ್ನು ಒತ್ತಾಯಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಶಿವರಾಜ್ ಪಾಟೀಲ್ ಅವರು ಕನ್ನಡ ನಾಡಿನ ವಿರುದ್ಧ ರಾಜ್ಯದ್ರೋಹಿ ಹೇಳಿಕೆ ನೀಡಿದ್ದು, ಇದು ರಾಜ್ಯದ ಏಕತೆಗೆ ಧಕ್ಕೆ ತರುವಂತದ್ದಾಗಿದೆ ಎಂದು ಆರೋಪಿಸಿದರು. ಈ ಸಂಬಂಧ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿದ್ದು, ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ರಾಜ್ಯದಿಂದ ಗಡಿಪಾರು ಮಾಡುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದರು.

ಈ ಕುರಿತು ತಾವು ಎಲ್ಲಾ ದಾಖಲೆಗಳೊಂದಿಗೆ ಅಂದಿನ ವಿಧಾನಸಭೆ ಸಭಾಧ್ಯಕ್ಷರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಕಚೇರಿಗೆ ದೂರು ಸಲ್ಲಿಸಿದ್ದಾಗಿ ತಿಳಿಸಿದ ಅವರು, ಬಳಿಕ ಪ್ರಸ್ತುತ ಸಭಾಧ್ಯಕ್ಷ ಯು.ಟಿ.ಖಾದರ್ ಅವರ ಗಮನಕ್ಕೂ ಹಲವು ಬಾರಿ ವಿಷಯವನ್ನು ತಂದಿದ್ದರೂ ಯಾವುದೇ ಕ್ರಮವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಮೂರು ಬಾರಿ ದಾಖಲೆಗಳ ಸಮೇತ ಮನವಿ ಸಲ್ಲಿಸಿರುವುದಾಗಿ ಹೇಳಿದ ಗೋನಾಳ ಅವರು, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರಿಗೂ ದೂರವಾಣಿ ಹಾಗೂ ವಾಟ್ಸಪ್ ಮೂಲಕ ಮಾಹಿತಿ ನೀಡಿದ್ದು, ಸಚಿವರು ವಿಚಾರಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.

ಕನ್ನಡ ನಾಡು ಮತ್ತು ಕನ್ನಡ ತಾಯಿಗೆ ಅವಮಾನ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗುವವರೆಗೆ ಹೋರಾಟ ಮುಂದುವರಿಸುತ್ತೇನೆ ಎಂದು ಬಸವನಗೌಡ ಪಾಟೀಲ್ ಗೋನಾಳ ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News