Raichur | ಆರೋಗ್ಯ ಇಲಾಖೆಯಲ್ಲಿ ʼಕೂಲಿ ಕಳ್ಳತನʼ : ಆರ್.ಮಾನಸಯ್ಯ ಆರೋಪ
ರಾಯಚೂರು : ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಹೊರಗುತ್ತಿಗೆ ನೌಕರರ ಶ್ರಮವನ್ನು ವ್ಯವಸ್ಥಿತವಾಗಿ ಶೋಷಣೆ ಮಾಡಲಾಗುತ್ತಿದ್ದು, ಭಾರಿ ಪ್ರಮಾಣದ “ಕೂಲಿ ಕಳ್ಳತನ” ನಡೆಯುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಸಿ ಮತ್ತು ಡಿ ವೃಂದದ ಹೊರಗುತ್ತಿಗೆ ನೌಕರರ ಸಂಘದ ಗೌರವಾಧ್ಯಕ್ಷ ಆರ್. ಮಾನಸಯ್ಯ ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಆರೋಗ್ಯ ಇಲಾಖೆಯಲ್ಲಿ ಸುಮಾರು 30,00,449 ರೂ. ಕೂಲಿಯನ್ನು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಹೊರಗುತ್ತಿಗೆ ಸಂಸ್ಥೆಗಳು ಸೇರಿಕೊಂಡು ದುರುಪಯೋಗಪಡಿಸಿಕೊಂಡಿವೆ ಎಂದು ದೂರಿದರು. ಹೊರಗುತ್ತಿಗೆ ಪದ್ಧತಿ ಅಗ್ಗದ ದರದಲ್ಲಿ ಶ್ರಮಶಕ್ತಿಯನ್ನು ಖರೀದಿಸಿ ಕಾರ್ಮಿಕರ ಕೂಲಿಯನ್ನು ಕಸಿದುಕೊಳ್ಳುವ ವ್ಯವಸ್ಥೆಯಾಗಿದೆ ಎಂದು ಕಿಡಿಕಾರಿದರು.
ವಿಭಾಗದ ಖಾಲಿ ಹುದ್ದೆಗಳಿಗೆ ಕಾನೂನುಬಾಹಿರವಾಗಿ ಹೊರಗುತ್ತಿಗೆ ನೌಕರರನ್ನು ನೇಮಕ ಮಾಡಿಕೊಳ್ಳಲಾಗಿದೆ. ಈ ನೇಮಕಾತಿಗಾಗಿ ಪ್ರತಿಯೊಬ್ಬ ಅಭ್ಯರ್ಥಿಯಿಂದ 1 ಲಕ್ಷ ರೂ. ದಿಂದ 2 ಲಕ್ಷ ರೂ. ವರೆಗೆ ಲಂಚ ಪಡೆಯಲಾಗಿದ್ದು, ಶಾಸಕರು ಹಾಗೂ ಸಚಿವರ ಶಿಫಾರಸಿನ ಮೇರೆಗೆ ಉದ್ಯೋಗ ನೀಡಲಾಗಿದೆ ಎಂದು ಆರೋಪಿಸಿದರು.
ಪ್ರತಿ ವರ್ಷ ಹೊರಗುತ್ತಿಗೆ ಏಜೆನ್ಸಿಗಳು ಬದಲಾಗುವ ಸಂದರ್ಭದಲ್ಲಿ ನೌಕರರಿಂದ ಸರಾಸರಿ 25 ಸಾವಿರ ರೂ. ವರೆಗೆ ಕಮಿಷನ್ ವಸೂಲಿ ಮಾಡಲಾಗುತ್ತಿದೆ. ಜಿಲ್ಲೆಯ ವಿವಿಧ ಆರೋಗ್ಯ ಕೇಂದ್ರಗಳಲ್ಲಿ 119 ಡಿ ಗ್ರೂಪ್ ಸಿಬ್ಬಂದಿ, 34 ನಾನ್ ಕ್ಲಿನಿಕಲ್ ಸಿಬ್ಬಂದಿ, 17 ಕಿರಿಯ ವೈದ್ಯಕೀಯ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳು ಸೇರಿದಂತೆ ಒಟ್ಟು 228 ಹೊರಗುತ್ತಿಗೆ ನೌಕರರು ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.
ಈ ನೌಕರರಿಗೆ ಕಳೆದ 9 ತಿಂಗಳಿಂದ ಸಂಬಳ ಪಾವತಿಯಾಗಿಲ್ಲ. 2025ರ ಸೆಪ್ಟೆಂಬರ್‌ನಿಂದ ಡಿಸೆಂಬರ್‌ವರೆಗೆ ಹಾಗೂ 2026ರ ಜನವರಿಯಿಂದ ಏಪ್ರಿಲ್‌ವರೆಗಿನ ಒಟ್ಟು 8 ತಿಂಗಳ ಬಾಕಿ ವೇತನ ಸುಮಾರು 1,33,38,088 ರೂ. ನೀಡದೆ ವಂಚಿಸಲಾಗಿದೆ ಎಂದು ದೂರಿದರು.
ಕನಿಷ್ಠ ವೇತನ ಕಾಯ್ದೆ, ಸಾಮಾಜಿಕ ಭದ್ರತೆ ಹಾಗೂ ಉದ್ಯೋಗ ಭದ್ರತೆಗಳು ಈ ಕಾರ್ಮಿಕರ ಪಾಲಿಗೆ ಗಗನಕುಸುಮಗಳಾಗಿವೆ. “ಸರ್ಕಾರಿ ನೌಕರಿ” ಎಂಬ ಆಸೆಗಾಗಿ ಹೊರಗುತ್ತಿಗೆ ನೌಕರರು ಜೀವಂತ ಜೀತದಾಳುಗಳಂತೆ ದುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಲಿ ಕೇಳಿದ ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕುವ ಬೆದರಿಕೆ ಹಾಕಲಾಗುತ್ತಿದೆ ಎಂದು ಆರೋಪಿಸಿದರು.
ಈ ಕುರಿತು ಈಗಾಗಲೇ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿದ್ದು, ಕೂಡಲೇ ಬಾಕಿ ವೇತನ ಪಾವತಿಸಿ, ತಪ್ಪಿತಸ್ಥ ಏಜೆನ್ಸಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಜಿಲ್ಲಾ ಪಂಚಾಯತ್ ಕಚೇರಿ ಎದುರು ನ್ಯಾಯ ಸಿಗುವವರೆಗೆ ಅನಿರ್ದಿಷ್ಟಾವಧಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಟಿ.ಯು.ಸಿ.ಐ ರಾಜ್ಯ ಕಾರ್ಯದರ್ಶಿ ಎಂ. ಗಂಗಾಧರ, ಅಧ್ಯಕ್ಷ ಶಂಕ್ರಪ್ಪ ಗುಂಡಸಾಗರ, ಉಪಾಧ್ಯಕ್ಷ ಆಂಜನೇಯ ಅರಕೇರ, ಅಮರೇಶ ಬಡಿಗೇರ, ಯಲ್ಲಪ್ಪ ಅನ್ವರಿ, ಜಗದೀಶ್ ಹಾಗೂ ನಾಗಸ್ವಾಮಿ ಚಿಕ್ಕಮಠ ಉಪಸ್ಥಿತರಿದ್ದರು.