ರಾಯಚೂರು: 'ಮಾಗಿದ ಮುತ್ಸದ್ದಿ' ಗ್ರಂಥ ಲೋಕಾರ್ಪಣೆ
ನೈತಿಕ ಮೌಲ್ಯಗಳ ಕುಸಿತ ಪ್ರಜಾಪ್ರಭುತ್ವಕ್ಕೆ ವಿರುದ್ಧ: ಮಾಜಿ ಸ್ಪೀಕರ್ ರಮೇಶ್ ಕುಮಾರ್
ರಾಯಚೂರು: ಪ್ರಸ್ತುತ ರಾಜಕೀಯ ಎಂದರೆ ಹಣಗಳಿಸುವುದು, ವಿರೋಧ ಪಕ್ಷದವರನ್ನು ಹೀಯಾಳಿಸುವುದು, ವೈಯಕ್ತಿಕ ತೇಜೋವಧೆ ನಡೆಯುತ್ತಿದ್ದು, ನೈತಿಕ ಮೌಲ್ಯ ಕುಸಿತಗೊಳ್ಳುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.
ನಗರದ ಗಂಜ್ ಕಲ್ಯಾಣ ಮಂಟಪದಲ್ಲಿ ಮಾಜಿ ಸಚಿವ ಎಂ.ಎಸ್. ಪಾಟೀಲ ಅವರ ಕುರಿತ 'ಮಾಗಿದ ಮುತ್ಸದ್ದಿ' ಗ್ರಂಥ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಮಾಜಿ ಶಾಸಕ ಪಾಪಾರೆಡ್ಡಿ ಹಾಗೂ ಎಂ.ಎಸ್. ಪಾಟೀಲರು ರಾಜಕೀಯದಲ್ಲಿ ಪರಸ್ಪರ ವಿರೋಧಿಯಾಗಿದ್ದರು. ಚುನಾವಣೆಯಲ್ಲಿ ಸ್ಪರ್ಧಿಸಿ ರಾಜಕೀಯ ಎದುರಾಳಿಯಾಗಿದ್ದರು. ಈಗ ಗ್ರಂಥ ಲೋಕಾರ್ಪಣೆ ಮಾಡುತ್ತಿರುವುದು ಶ್ಲಾಘನೀಯ. ಮುಂದಿನ ಜನಾಂಗಕ್ಕೆ ಏನು ಬಿತ್ತಬೇಕು ಎಂಬ ಪ್ರಶ್ನೆಗೆ ಅವರು ಉತ್ತರವಾಗಿದ್ದಾರೆ ಎಂದು ಹೇಳಿದರು.
ಪಾಪಾರೆಡ್ಡಿ ಅವರು ಹೃದಯ ವೈಶಾಲ್ಯತೆ ಉಳ್ಳವರು. ಶಾಸಕರು, ಮಿನಿಸ್ಟರ್ ಆಗುವುದು ಸುಲಭ. ಆದರೆ ಮನುಷ್ಯತ್ವರಾಗುವುದು ಕಷ್ಟ. ರಾಜಕೀಯ ಕಾಲದಲ್ಲಿ ವಿರೋಧಿಗಳ ಸ್ಥಾನದಲ್ಲಿದ್ದರು. ಅವರ ಸಾಧನೆ, ವ್ಯಕ್ತಿತ್ವಕ್ಕೆ ಗೌರವಿಸುವ ನಿಟ್ಟಿನಲ್ಲಿ ಗ್ರಂಥ ಲೋಕಾರ್ಪಣೆ ಮಾಡುವ ಜವಾಬ್ದಾರಿ ಹೊತ್ತು ಹೃದಯ ವೈಶಾಲ್ಯತೆ ಮೆರೆದಿದ್ದಾರೆ ಎಂದರು.
ಪ್ರಜಾಪ್ರಭುತ್ವ ಅಂದರೆ ಪರಸ್ಪರ ವಿರುದ್ಧವಾಗಿದ್ದರು ಚುನಾವಣೆಯಲ್ಲಿ ವಿರೋಧಿಗಳಷ್ಟೇ. ಪಾಪಾರೆಡ್ಡಿ ಅವರು ಮುಂದಿನ ಜನಾಂಗಕ್ಕೆ ಏನು, ಯಾವ ವಿಚಾರ ಬಿತ್ತಬೇಕು ಎಂಬ ಪ್ರಶ್ನೆಗೆ ಅವರು ಉತ್ತರವಾಗಿದ್ದಾರೆ ಎಂದು ಹೇಳಿದರು. ಮುಂದಿನ ಎಂ.ಎಸ್. ಪಾಟೀಲರು ಹಿರಿಯ ಮುತ್ಸದ್ದಿಗಳು, ಸಾರ್ವಜನಿಕ ಜೀವನದಲ್ಲಿ ಅನೇಕ ಏಳುಬೀಳು ಕಂಡು ಈಗಿನ ಕಾಲದ ಜನರಿಗೆ ಮಾದರಿಯಾಗಿದ್ದಾರೆ. ವ್ಯವಹಾರದಲ್ಲಿ ನಿಸ್ವಾರ್ಥ ಇರುವವರು. ಅವರ ವ್ಯಕ್ತಿತ್ವದ ಬಗ್ಗೆ ಎಷ್ಟು ಹೇಳಿದರು ಸಾಲುವುದಿಲ್ಲ ಎಂದರು.
ಎನ್.ಎಸ್. ಬೋಸರಾಜು ಮಾತನಾಡಿ, ಎಂ.ಎಸ್. ಪಾಟೀಲ ರಾಜಕೀಯ ಜೀವನದಲ್ಲಿ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ನಡೆದುಕೊಂಡವರು, ಅನೇಕ ಅಭಿವೃದ್ಧಿ ಕಾರ್ಯಗಳು ಮಾಡಿದ್ದಾರೆ. ಅವರ ಹುಟ್ಟುಹಬ್ಬದ ಅಂಗವಾಗಿ ಗ್ರಂಥ ಲೋಕಾರ್ಪಣೆ ಕಾರ್ಯ ಅಭಿನಂದನಾರ್ಹ ಎಂದರು.
ಡಾ. ಶಿವರಾಜ ಪಾಟೀಲ ಮಾತನಾಡಿ, ರಾಜಕೀಯ ವಿರೋಧಿಯಾಗಿದ್ದು ಅವರ ಜೀವನ ಸಾಧನೆ ಬಗ್ಗೆ ಗ್ರಂಥ ಬಿಡುಗಡೆ ಕಾರ್ಯಕ್ರಮ ಮಾಡುತ್ತಿರುವುದು ಐತಿಹಾಸಿಕ ಹಾಗೂ ಮಾದರಿಯಾಗಿದೆ. ಎಂ.ಎಸ್. ಪಾಟೀಲ ಅವರು ರಮೇಶ ಕುಮಾರ ಅವರ ಅವಧಿಯಲ್ಲಿ ರಾಜಕೀಯ ಮಾಡಿದವರು. ಅಕ್ಷರ ರೂಪದಲ್ಲಿ ಇರುವ ಗ್ರಂಥವನ್ನು ಅವರ ಜೀವನ, ರಾಜಕೀಯ ಅನುಭವವನ್ನು ಇಂದಿನ ರಾಜಕಾರಣಿಗಳು ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ರೂವಾರಿ ಮಾಜಿ ಶಾಸಕ ಎ. ಪಾಪಾರೆಡ್ಡಿ, ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ್ ಅನ್ವರಿ, ಮಾಜಿ ಸಚಿವ ಎನ್.ಎಸ್. ಬೋಸರಾಜು, ಕೆ. ಶಿವನಗೌಡ ನಾಯಕ, ಸಂಸದ ಜಿ. ಕುಮಾರ ನಾಯಕ, ಶಾಸಕರಾದ ಡಾ. ಶಿವರಾಜ ಪಾಟೀಲ್, ಹಂಪನಗೌಡ ಬಾದರ್ಲಿ, ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ, ಶರಣಪ್ಪ ಬಲ್ಲಟಗಿ, ಮಹಮ್ಮದ್ ಶಾಲಂ, ಎನ್. ಶಂಕರಪ್ಪ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನಂದವಾಡಗಿ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿ, ಚನ್ನಬಸವ ಶಿವಾಚಾರ್ಯ ಮಹಾಸ್ವಾಮಿ, ಬೂದಿ ಬಸವ ಶಿವಾಚಾರ್ಯರು, ರಾಚೋಟಿ ವೀರ ಶಿವಾಚಾರ್ಯ ಮಹಾಸ್ವಾಮಿ, ರೈತ ಹೋರಾಟಗಾರ ಚಾಮರಸ ಮಾಲಿ ಪಾಟೀಲ್, ಸೋಮವಾರಪೇಟೆಯ ಅಭಿನವ ರಾಚೋಟಿ ವೀರಶಿವಾಚಾರ್ಯ ಮಹಾಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.