ರಾಯಚೂರು | ನಕಲಿ ದಾಖಲೆ ಸೃಷ್ಟಿಸಿ ಭೂಮಾಫಿಯಾ ಮಾಡುತ್ತಿರುವ ಅಧಿಕಾರಿಗಳ ಅಮಾನತಿಗೆ ಆಗ್ರಹ
ರಾಯಚೂರು : ಜಿಲ್ಲೆಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂಮಾಫಿಯಾ ಮಾಡುತ್ತಿರುವ ಭ್ರಷ್ಟ ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ಸಾಮಾಜಿಕ ಹೋರಾಟಗಾರ ಅಂಬಾಜಿ ರಾವ್ ಮೈದರಕರ್ ಆಗ್ರಹಿಸಿದರು.
ಅವರಿಂದು ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಭೂ ಲೂಟಿ, ನಕಲಿ ದಾಖಲೆ ಸೃಷ್ಟಿ ಮತ್ತು ನಕಲಿ ಹೆಸರಿನಲ್ಲಿ ಆಸ್ತಿಗಳ ಪರಿವಹಣ ನಡೆದಿದೆ ಎಂಬ ಮಾಹಿತಿ ಬಹಿರಂಗವಾಗಿದ್ದು, ಜಿಲ್ಲೆಯ ಜನತೆಯಲ್ಲಿ ಆತಂಕ ಉಂಟುಮಾಡಿದೆ ಎಂದರು.
ನೂರಾರು ಎಕರೆ ಭೂಮಿ ಹಾಗೂ ನೂರಾರು ಪ್ಲಾಟ್‌ಗಳ ನಕಲಿ ದಾಖಲೆಗಳ ಆಧಾರದ ಮೇಲೆ ಮರು ಮಾರಾಟವಾಗಿದ್ದು,ಇದು ಕೇವಲ ಖಾಸಗಿ ವ್ಯಕ್ತಿಗಳ ಕಾರ್ಯವಲ್ಲ, ಇದರ ಹಿಂದೆ ಮಹಾನಗರ ಪಾಲಿಕೆ, ಸಬ್-ರಿಜಿಸ್ಟ್ರಾರ್ ಕಚೇರಿ ಮತ್ತು ಇತರ ಇಲಾಖೆಗಳ ಕೆಲವು ಅಧಿಕಾರಿಗಳೂ ಕೈಜೋಡಿಸಿರುವ ಕುರಿತು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳ ಸಹಕಾರದಿಂದ ನಕಲಿ ಮ್ಯೂಟೇಷನ್, ಇ-ಖಾತೆಗಳು ಸೃಷ್ಟಿಯಾಗುತ್ತಿವೆ. " ಇನ್ನಷ್ಟು ಆತಂಕಕರವಾದ ವಿಷಯವೆಂದರೆ-ಇದರಲ್ಲಿ ತೀವ್ರ ಭ್ರಷ್ಟಾಚಾರ ನಡೆದಿದ್ದು,ಸಾರ್ವಜನಿಕ ಆಸ್ತಿಗಳ ಲೂಟಿ ನಡೆ-ಯುತ್ತಿದೆ ಎಂಬ ಸ್ಪಷ್ಟ ಸಾಕ್ಷ್ಯಗಳಿದ್ದರೂ ಅಧಿಕಾರಿಗಳ ವಿರುದ್ಧ ಯಾವುದೇ ತುರ್ತು ಕ್ರಮಕೈಗೊಳ್ಳದೇ ಇರುವುದು ಹಲವು ಅನುಮಾನಕ್ಕೆ ಕಾರಣವಾಗಿದ್ದು, ಈಗಾಗಲೇ ಹಲವಾರು ಪ್ರಕರಣಗಳು ಕೂಡ ದಾಖಲಾಗಿದ್ದು , ಅಧಿಕಾರಿಗಳ ಹೆಸರುಗಳು ಇದ್ದರೂ ಅವರ ವಿರುದ್ಧ ಅಮಾನತ್ತು, ತನಿಖೆ ಅಥವಾ ಶಿಕ್ಷಾತ್ಮಕ ಕ್ರಮವನ್ನೂ ಜಿಲ್ಲಾಡಳಿತ ಅಥವಾ ಆಯುಕ್ತರು ಮಹಾನಗರ ಪಾಲಿಕೆ ರಾಯಚೂರು ಇವರು ಕೈಗೊಳ್ಳದೇ ಮೂಖ ಪ್ರೇಕ್ಷಕರಾಗಿದ್ದಾರೆಂದು ಆರೋಪಿಸಿದರು.
ಈ ಪ್ರಕರಣಗಳಲ್ಲಿ ಹೆಸರುಗಳಿರುವ ಎಲ್ಲಾ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಬೇಕು, ಭ್ರಷ್ಟ ಅಧಿಕಾರಿಗಳ ವಿರುದ್ಧ ಇಲಾಖಾತ್ಮಕ ವಿಚಾರಣೆ ನಡೆಯಬೇಕು. ಜಿಲ್ಲೆಯ ಎಲ್ಲಾ ಸಬ್ ರಿಜಿಸ್ಟ್ರಾರ್ ಕಚೇರಿಗಳು ಹಾಗೂ ಮಹಾನಗರ ಪಾಲಿಕೆ ಕಚೇರಿಗಳಲ್ಲಿ 24 ಗಂಟೆ ಕಾರ್ಯನಿರ್ವಹಿಸುವ ಸಿಸಿಟಿವಿ ಅಳವಡಿಸುವ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಸೂದ್ ಅಲಿ, ಚಂದ್ರು ಉಪಸ್ಥಿತರಿದ್ದರು.