Raichur | ನ್ಯಾಯಾಲಯದ ಆದೇಶದಂತೆ ಕಾರು ಜಪ್ತಿಗೆ ಬಂದ ಸಂತ್ರಸ್ತ ರೈತರಿಗೆ ನಿರಾಸೆ
ಸಂಜೆಯವರೆಗೆ ಕಾಯಿಸಿ ಕಾರು ಚಲಾಯಿಸಿಕೊಂಡು ಹೋದ ಸಿಬ್ಬಂದಿ; ಭೂಸ್ವಾಧೀನ ಸಂತ್ರಸ್ತರ ಆಕ್ರೋಶ
ರಾಯಚೂರು: ಕೃಷ್ಣಾ ಮೇಲ್ದಂಡೆ ಯೋಜನೆಯ 9ನೇ ಕಾಲುವೆಗೆ ಭೂಸ್ವಾಧೀನಪಡಿಸಿಕೊಂಡ ಸಂತ್ರಸ್ತರಿಗೆ ಪರಿಹಾರ ನೀಡುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಜಿಲ್ಲಾಧಿಕಾರಿ ಕಚೇರಿಯ ಎರಡು ಕಾರುಗಳನ್ನು ಜಪ್ತಿ ಮಾಡಲು ನ್ಯಾಯಾಲಯ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಕಚೇರಿಗೆ ಬಂದ ಸಂತ್ರಸ್ತ ರೈತರು ಸಂಜೆವರೆಗೂ ಕಾಯ್ದರೂ ಕಾರುಗಳನ್ನು ಹಸ್ತಾಂತರಿಸದೆ, ಸಿಬ್ಬಂದಿ ಕಾರುಗಳನ್ನು ಚಲಾಯಿಸಿಕೊಂಡು ಹೋಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆ ಸಂತ್ರಸ್ತ ರೈತರ ಅಸಮಾಧಾನಕ್ಕೆ ಕಾರಣವಾಗಿದೆ.
ಭೂಸ್ವಾಧೀನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನ್ವಿ ಹಿರಿಯ ಸಿವಿಲ್ ನ್ಯಾಯಾಲಯವು ರಾಯಚೂರಿನ ಜಿಲ್ಲಾಧಿಕಾರಿ ಕಚೇರಿಯ ಎರಡು ಇನ್ನೋವಾ ಕ್ರಿಸ್ಟಾ ಕಾರುಗಳನ್ನು ಜಪ್ತಿ ಮಾಡಲು ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಸಂತ್ರಸ್ತ ರೈತರು ಬೆಳಗ್ಗೆ 10 ಗಂಟೆಗೆ ಯಕ್ಲಾಸಪುರದಲ್ಲಿರುವ ಜಿಲ್ಲಾಡಳಿತ ಕಚೇರಿಗೆ ಆಗಮಿಸಿದ್ದರು. ಅವರ ಪರವಾಗಿ ವಕೀಲರಾದ ಉಮಾದೇವಿ ಪಾಟೀಲ ಕೂಡ ಬಂದಿದ್ದರು. ಇದೇ ವೇಳೆ ನ್ಯಾಯಾಲಯದ ಸಿಬ್ಬಂದಿಯೂ ಸ್ಥಳಕ್ಕೆ ಆಗಮಿಸಿದ್ದರು.
ಆರಂಭದಲ್ಲಿ ಸಂತ್ರಸ್ತ ರೈತರೊಂದಿಗೆ ಸಂಧಾನಕ್ಕೆ ಮುಂದಾದ ಅಧಿಕಾರಿಗಳು, ಸ್ವಲ್ಪ ಸಮಯಾವಕಾಶ ನೀಡುವಂತೆ ಕೇಳಿಕೊಂಡರು. ಆದರೆ, ಮೌಖಿಕವಾಗಿ ಹೇಳಿದರೆ ಒಪ್ಪಲು ಸಾಧ್ಯವಿಲ್ಲ, ಪತ್ರದ ಮೂಲಕ ದಾಖಲೆ ನೀಡಿದರೆ ಮಾತ್ರ ಒಪ್ಪಿಕೊಳ್ಳುತ್ತೇವೆ ಎಂದು ರೈತರು ತಿಳಿಸಿದರು. ಬಳಿಕ ಮಧ್ಯಾಹ್ನದವರೆಗೆ ಸಮಯಾವಕಾಶ ಕೇಳಲಾಯಿತು.
ಹೆಚ್ಚುವರಿ ಜಿಲ್ಲಾಧಿಕಾರಿಯವರ ಕೆಎ-05-1008 ನೋಂದಣಿ ಸಂಖ್ಯೆಯ ಕಾರು ಜಪ್ತಿಗೆ ಆದೇಶಿಸಿದ್ದರಿಂದ ಅವರು ಮಧ್ಯಾಹ್ನ ಊಟಕ್ಕೆ ಖಾಸಗಿ ಕಾರಿನಲ್ಲಿ ತೆರಳಿ ಮರಳಿದ್ದರು. ಕಚೇರಿಯ ಮುಂಭಾಗದಲ್ಲೇ ನಿಂತಿದ್ದ ಕಾರನ್ನು ಸಂಜೆ ಹಸ್ತಾಂತರಿಸುವುದಾಗಿ ಹೇಳುತ್ತಾ ರೈತರನ್ನು ಕಚೇರಿ ಬಳಿ ಕಾಯುವಂತೆ ಮಾಡಲಾಯಿತು. ಬಳಿಕ ಚಾಲಕನ ಮೂಲಕ ಕಾರನ್ನು ಚಲಾಯಿಸಿಕೊಂಡು ಹೋಗಲಾಗಿದೆ ಎಂದು ಸಂತ್ರಸ್ತರಲ್ಲಿ ಒಬ್ಬರಾದ ಎಂ.ಪ್ರೇಮ್ ಕುಮಾರ್ ಆರೋಪಿಸಿದರು.
ಕಾರುಗಳನ್ನು ಸಂತ್ರಸ್ತರ ಸಮ್ಮುಖದಲ್ಲೇ ನ್ಯಾಯಾಲಯಕ್ಕೆ ಹಸ್ತಾಂತರಿಸುವುದಾಗಿ ಹೇಳುತ್ತಿದ್ದ ಸಿಬ್ಬಂದಿ, ಬಳಿಕ ವೇಗವಾಗಿ ಕಾರುಗಳನ್ನು ಚಲಾಯಿಸಿಕೊಂಡು ಹೋಗಿದ್ದಾರೆ ಎಂದು ಅವರು ದೂರಿದರು.
ಪ್ರಕರಣದ ವಿವರ:
ಪ್ರಕರಣ ಸಂಖ್ಯೆ EX/27/2024ರಲ್ಲಿ ದಿವಂಗತ ಲಿಂಗಪ್ಪ ಅವರ ಪರವಾಗಿ 50,66,705 ರೂ. ಬಾಕಿ ಇರುವ ಹಿನ್ನೆಲೆಯಲ್ಲಿ ಕೆಎ-03-5ಜಿಬಿ-0045 ನೋಂದಣಿ ಸಂಖ್ಯೆಯ ಇನ್ನೋವಾ ಕಾರನ್ನು ಜಪ್ತಿ ಮಾಡಲು ಆದೇಶಿಸಲಾಗಿತ್ತು. ಮತ್ತೊಂದು ಪ್ರಕರಣ ಸಂಖ್ಯೆ EX/14/2025ರಲ್ಲಿ ಎಲ್ಲಯ್ಯ ಅವರ ಪರವಾಗಿ 41,09,240 ರೂ. ಬಾಕಿ ಮೊತ್ತದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಕೆಎ-05-ಜಿಎ-1008 ನೋಂದಣಿ ಸಂಖ್ಯೆಯ ಇನ್ನೋವಾ ಕ್ರಿಸ್ಟಾ ಕಾರನ್ನು ಜಪ್ತಿ ಮಾಡಲು ನ್ಯಾಯಾಲಯ ಆದೇಶಿಸಿತ್ತು.
ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ನಾಲ್ವರು ಸಂತ್ರಸ್ತ ರೈತರಿಗೆ ಒಟ್ಟು 4 ಕೋಟಿ ರೂ. ಪರಿಹಾರ ನೀಡಬೇಕಾಗಿತ್ತು. ಇದರ ಭಾಗವಾಗಿ ಎರಡು ಕಾರುಗಳನ್ನು ಜಪ್ತಿ ಮಾಡಲು ನ್ಯಾಯಾಲಯ ಆದೇಶಿಸಿತ್ತು. ಬಳಿಕ ಪೂರ್ಣ ಮೊತ್ತವನ್ನು ಪಾವತಿಸುವಂತೆಯೂ ನ್ಯಾಯಾಲಯ ಆದೇಶಿಸಿತ್ತು ಎಂದು ವಕೀಲರಾದ ಉಮಾದೇವಿ ಪಾಟೀಲ ತಿಳಿಸಿದರು.
ನ್ಯಾಯಾಲಯದ ಆದೇಶವನ್ನು ಪಾಲಿಸಬೇಕಾದ ಜಿಲ್ಲಾಡಳಿತದ ಅಧಿಕಾರಿಗಳು ಮತ್ತು ಸಿಬ್ಬಂದಿ ರೈತರ ದಿಕ್ಕು ತಪ್ಪಿಸಿ, ಸಂಜೆ ಕಾರುಗಳನ್ನು ತೆಗೆದುಕೊಂಡು ಹೋಗುವ ಮೂಲಕ ವಂಚಿಸಿದ್ದಾರೆ. ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂತ್ರಸ್ತರಾದ ವಿಜಯಕುಮಾರ ಹೀರಾ, ಜಯಪ್ಪ ಹೀರಾ, ಅಯ್ಯಪ್ಪ ಹುಡಾ ಹಾಗೂ ಶಿವಕುಮಾರ ಹುಡಾ ಉಪಸ್ಥಿತರಿದ್ದರು.