Lingsugur | ಅತಿಥಿ ಉಪನ್ಯಾಸಕರ ಗೌರವಧನದಿಂದ ತೆರಿಗೆ ಕಡಿತ ಸುತ್ತೋಲೆ ಮರುಪರಿಶೀಲನೆಗೆ ಆಗ್ರಹ
ಲಿಂಗಸುಗೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಗೌರವಧನದಿಂದ ವೃತ್ತಿ ತೆರಿಗೆ ಹಾಗೂ ಟಿಡಿಎಸ್ ಕಡಿತಗೊಳಿಸುವಂತೆ ಹೊರಡಿಸಿರುವ ಸುತ್ತೋಲೆಯನ್ನು ಮರುಪರಿಶೀಲಿಸಬೇಕು ಎಂದು ಒತ್ತಾಯಿಸಿ ಅತಿಥಿ ಉಪನ್ಯಾಸಕರು ಪ್ರಾಂಶುಪಾಲರ ಮೂಲಕ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಸೀಮಿತ ಗೌರವಧನ ಹಾಗೂ ಉದ್ಯೋಗದ ಅನಿಶ್ಚಿತತೆಯ ನಡುವೆ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ತೆರಿಗೆ ಕಡಿತವು ಮತ್ತಷ್ಟು ಆರ್ಥಿಕ ಹೊರೆಯಾಗಲಿದೆ. ತೆರಿಗೆ ಪಾವತಿಗೆ ವಿರೋಧವಿಲ್ಲವಾದರೂ, ತೆರಿಗೆ ನಿಯಮಗಳು ಹಾಗೂ ಅನ್ವಯಿಸುವ ಮಿತಿಗಳ ಕುರಿತು ಸ್ಪಷ್ಟತೆ ನೀಡದೆ ಏಕರೂಪವಾಗಿ ತೆರಿಗೆ ಕಡಿತಗೊಳಿಸುವ ಕ್ರಮವನ್ನು ಮರುಪರಿಶೀಲಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷ ಮಹಾದೇವಪ್ಪ ನಾಗರಹಾಳ, ರೇಷ್ಮಾ, ವೈಷ್ಣವಿ, ರೇಣುಕಾ, ಜಾನ್ಸಿರಾಣಿ, ಹುಲಗಪ್ಪ, ಮಂಜುನಾಥ, ಭೀಮಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.