Raichur | ತಿಪ್ಪೆಯಲ್ಲಿ ಆರೋಗ್ಯ ಇಲಾಖೆಯ ಔಷಧಿಗಳು ಪತ್ತೆ : ಸಾರ್ವಜನಿಕರ ಆಕ್ರೋಶ
ರಾಯಚೂರು: ಬಡ ರೋಗಿಗಳಿಗೆ ತಲುಪಬೇಕಿದ್ದ ಆರೋಗ್ಯ ಇಲಾಖೆಯ ಔಷಧಿಗಳನ್ನು ನಗರದ ಬಸವೇಶ್ವರ ವೃತ್ತದ ಬಳಿಯ ರಾಯಚೂರು ಕೋಟೆಯ ಕಂದಕದ ಸಮೀಪ ತಿಪ್ಪೆಗೆ ಎಸೆದಿರುವ ಘಟನೆ ಬೆಳಕಿಗೆ ಬಂದಿದೆ.
ಮಧುಮೇಹ, ರಕ್ತದೊತ್ತಡ, ಜ್ವರ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಬಳಸುವ ಔಷಧಿಗಳ ಬಾಕ್ಸ್ಗಳು ಕಸದ ರಾಶಿಯಲ್ಲಿ ಪತ್ತೆಯಾಗಿವೆ. ಆರೋಗ್ಯ ಇಲಾಖೆಯಿಂದ ಆರೋಗ್ಯ ಕೇಂದ್ರಗಳಿಗೆ ಸರಬರಾಜು ಮಾಡಲಾಗಿದ್ದ ಈ ಔಷಧಿಗಳು ಬಳಕೆಯಾಗದೆ ಅವಧಿ ಮುಗಿದಿವೆ.
ಅವಧಿ ಮೀರಿದ ಔಷಧಿಗಳನ್ನು ನಿಯಮಾನುಸಾರ ಸುರಕ್ಷಿತವಾಗಿ ವಿಲೇವಾರಿ ಮಾಡಬೇಕಿತ್ತು. ಆದರೆ, ಸಾರ್ವಜನಿಕರು ಹಾಗೂ ಜಾನುವಾರುಗಳು ಓಡಾಡುವ ಪ್ರದೇಶದಲ್ಲಿ ಔಷಧಿಗಳನ್ನು ಎಸೆಯಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಆರೋಗ್ಯ ಕೇಂದ್ರಗಳಿಗೆ ಸರಬರಾಜು ಮಾಡಲಾದ ಔಷಧಿಗಳ ದಾಸ್ತಾನು ಮತ್ತು ನಿರ್ವಹಣೆಯಲ್ಲಿ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.
ರಾಯಚೂರು ನಗರದಲ್ಲಿ ಈ ರೀತಿಯ ಘಟನೆಗಳು ಈ ಹಿಂದೆಯೂ ಹಲವು ಬಾರಿ ನಡೆದಿವೆ. ಮತ್ತೆ ಇಂತಹ ಘಟನೆ ಮರುಕಳಿಸಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಡ ರೋಗಿಗಳಿಗೆ ತಲುಪಬೇಕಾದ ಔಷಧಿಗಳು ಬಳಕೆಯಾಗದೆ ವ್ಯರ್ಥವಾಗುತ್ತಿರುವುದಕ್ಕೆ ಹೊಣೆ ಯಾರು ಎಂಬ ಪ್ರಶ್ನೆಯೂ ಮೂಡಿದೆ. ಈ ಹಿಂದೆಯೂ ಔಷಧಿಗಳು ಪೋಲಾದ ಪ್ರಕರಣಗಳು ನಡೆದಿದ್ದರೂ, ಸಂಬಂಧಪಟ್ಟ ಇಲಾಖೆ ತಿಪ್ಪೆ ಸಾರಿಸುವ ಕೆಲಸ ಮಾಡಿದೆ ಹೊರತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ಔಷಧಿಗಳನ್ನು ಎಸೆದವರ ವಿರುದ್ಧ ಸೂಕ್ತ ಕ್ರಮ:
ಅವಧಿ ಮೀರಿದ ಔಷಧಿಗಳನ್ನು ಎಸೆದವರ ವಿರುದ್ಧ ಎಫ್ಐಆರ್ ದಾಖಲಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಂದಿತಾ ಎಂ.ಎನ್. ತಿಳಿಸಿದ್ದಾರೆ.
ಆರೋಗ್ಯ ಇಲಾಖೆಗೆ ಸರಬರಾಜಾಗುವ ಔಷಧಿಗಳನ್ನು ಬಳಕೆ ಮಾಡಿದ ಬಳಿಕ ಅವುಗಳ ಅವಧಿ ಮುಗಿದರೆ, ಸರ್ಕಾರದ ಮಾರ್ಗಸೂಚಿಯಂತೆ ನಿಯಮಾನುಸಾರ ವಿಲೇವಾರಿ ಮಾಡಲಾಗುತ್ತದೆ. ಪ್ರಸ್ತುತ ಪ್ರಕರಣದಲ್ಲಿ ಔಷಧಿಗಳನ್ನು ಎಸೆದವರನ್ನು ಇ-ಔಷಧ ಪೋರ್ಟಲ್ ಮೂಲಕ ಪತ್ತೆಹಚ್ಚಿ, ಸಂಬಂಧಪಟ್ಟವರ ವಿರುದ್ಧ ಎಫ್ಐಆರ್ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ಔಷಧಿಗಳು ಗೃಹ ಆರೋಗ್ಯ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಸಮುದಾಯ ಆರೋಗ್ಯ ಅಧಿಕಾರಿಗಳ ಮೂಲಕ ಮನೆಮನೆಗೆ ತೆರಳಿ ವಿತರಿಸಬೇಕಾದ ಮಾತ್ರೆಗಳಾಗಿವೆ. ಕಳೆದ ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳಿಂದ ನಿರಂತರವಾಗಿ ಸಭೆಗಳನ್ನು ನಡೆಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಕುರಿತು ಮಾಹಿತಿ ನೀಡಲಾಗಿದೆ. ಎಲ್ಲ ತಾಲೂಕುಗಳಲ್ಲಿ ಔಷಧಿಗಳ ಬಳಕೆಯ ಮೇಲೆ ನಿರಂತರ ನಿಗಾ ವಹಿಸಲಾಗುತ್ತಿದ್ದು, ಮಾತ್ರೆಗಳನ್ನು ವಿತರಿಸಿದ ವಿವರಗಳನ್ನು ಇ-ಔಷಧ ಪೋರ್ಟಲ್ನಲ್ಲಿ ದಾಖಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕಂದಕದ ಬಳಿ ಔಷಧಿಗಳು ಪತ್ತೆಯಾಗಿರುವ ಮಾಹಿತಿ ದೊರೆತ ತಕ್ಷಣ ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅಧಿಕಾರಿ ಹಾಗೂ ತಂಡವನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ನಡೆಸಲಾಗಿದೆ. ಪತ್ತೆಯಾದ ಔಷಧಿಗಳು ಅವಧಿ ಮೀರಿದವುಗಳಾಗಿದ್ದು, ಅವುಗಳನ್ನು ಈಗಾಗಲೇ ಸಂಗ್ರಹಿಸಿ ಇಲಾಖೆಯ ಸುಪರ್ದಿಗೆ ತೆಗೆದುಕೊಳ್ಳಲಾಗಿದೆ. ಈ ಕುರಿತು ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.