Raichur | ಮಕ್ಕಳ ಸಾಹಿತ್ಯದ ಮೂಲಕ ಪರಿಸರ ಪ್ರಜ್ಞೆ ಬೆಳೆಸಬೇಕು: ಈರಣ್ಣ ಬೆಂಗಾಲಿ
ರಾಯಚೂರು: ಡಿಜಿಟಲ್ ಯುಗದಲ್ಲಿ ಮಕ್ಕಳು ಮೊಬೈಲ್ ಬಳಕೆಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಕನ್ನಡ ಸಾಹಿತ್ಯ ಹಾಗೂ ಪರಿಸರ ಸಂರಕ್ಷಣೆಯ ಸಂದೇಶವನ್ನು ಮಕ್ಕಳಿಗೆ ಪರಿಣಾಮಕಾರಿಯಾಗಿ ತಲುಪಿಸಬೇಕು ಎಂದು ಯುವ ಕವಿ ಈರಣ್ಣ ಬೆಂಗಾಲಿ ಹೇಳಿದರು.
ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನಡೆಯುತ್ತಿರುವ 12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಮಕ್ಕಳ ಸಾಹಿತ್ಯದಲ್ಲಿ ಪರಿಸರ ಪ್ರಜ್ಞೆ’ ವಿಷಯ ಕುರಿತು ಅವರು ಮಾತನಾಡಿದರು.
ಮಕ್ಕಳ ಸಾಹಿತ್ಯದ ಪುಸ್ತಕಗಳ ಸಂಖ್ಯೆ ಕಡಿಮೆಯಿದೆ. ಮಕ್ಕಳಿಗಾಗಿ ಸಾಹಿತ್ಯ ರಚಿಸುವುದು ಅಷ್ಟು ಸುಲಭದ ಕೆಲಸವಲ್ಲ. ಮಕ್ಕಳ ಮನಸ್ಸು, ಆಸಕ್ತಿ ಹಾಗೂ ಕಲ್ಪನಾಶಕ್ತಿಯನ್ನು ಅರ್ಥಮಾಡಿಕೊಂಡು ಸಾಹಿತ್ಯ ರಚಿಸಬೇಕಾಗುತ್ತದೆ. ದೊಡ್ಡ ಗ್ರಂಥಗಳನ್ನು ರಚಿಸುವುದಕ್ಕಿಂತ ಮಕ್ಕಳ ಮನೋಭಾವಕ್ಕೆ ತಕ್ಕಂತೆ ಸರಳ ಹಾಗೂ ಆಕರ್ಷಕ ಸಾಹಿತ್ಯ ಸೃಷ್ಟಿಸುವುದು ಹೆಚ್ಚು ಸವಾಲಿನ ಕೆಲಸವಾಗಿದೆ ಎಂದರು.
ಕಥೆ, ಕವನಗಳ ಮೂಲಕ ಪರಿಸರ ಸಂರಕ್ಷಣೆ, ಜೀವವೈವಿಧ್ಯದ ಮಹತ್ವ ಹಾಗೂ ಪ್ರಕೃತಿಯೊಂದಿಗಿನ ಮಾನವನ ಸಂಬಂಧವನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡಬಹುದು. ಶಾಲೆಗಳಲ್ಲಿ ಪಾಠದ ಜತೆಗೆ ಪರಿಸರ ಆಧಾರಿತ ನಾಟಕ, ಕಥೆ, ಕವನ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಮಕ್ಕಳಲ್ಲಿ ಪ್ರಕೃತಿಯ ಬಗ್ಗೆ ಪ್ರೀತಿ ಬೆಳೆಸಬೇಕು. ಸರಳ ಭಾಷೆಯ ಕಥೆ, ಕವನಗಳ ಮೂಲಕ ಮಕ್ಕಳಿಗೆ ಕನ್ನಡದ ಮಹತ್ವವನ್ನು ತಿಳಿಸಬೇಕು ಎಂದು ಸಲಹೆ ನೀಡಿದರು.
ಹಿರಿಯ ಸಾಹಿತಿ ಅಯ್ಯಪ್ಪಯ್ಯ ಹುಡಾ ಮಾತನಾಡಿದರು. ಪ್ರಕಾಶ ಗುತ್ತಲ ನಿರೂಪಿಸಿದರು. ಯಲ್ಲಪ್ಪ ಸ್ವಾಗತಿಸಿದರು.