ರಾಯಚೂರು: ಸಮಾನತೆ, ಮಾನವೀಯತೆ ಮತ್ತು ಸಾಮಾಜಿಕ ನ್ಯಾಯದ ಆಶಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ದಾರ್ಶನಿಕರು ತೋರಿಸಿದ ಹಾದಿಯಲ್ಲಿ ಸಮಾಜ ಸಾಗಿದಾಗ ಮಾತ್ರ ನಿಜವಾದ ಸಮಸಮಾಜ ನಿರ್ಮಾಣ ಸಾಧ್ಯ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಜೆ.ಎಲ್. ಈರಣ್ಣ ಹೇಳಿದರು.

ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಆಯೋಜಿಸಿದ್ದ ಗೋಷ್ಠಿ-6ರ ‘ಸಮಸಮಾಜ ಸಾರಿದ ದಾರ್ಶನಿಕರು’ ವಿಷಯ ಕುರಿತು ಅವರು ಮಾತನಾಡಿದರು.

ಸಮಾನತೆಯ ಸಂದೇಶವನ್ನು ಶರಣರು, ಸಾಮರಸ್ಯದ ಚಿಂತನೆಯನ್ನು ದಾಸರು, ಅರಿವಿನ ವಿಚಾರವನ್ನು ತತ್ತ್ವಪದಕಾರರು ಹಾಗೂ ಪ್ರೀತಿಯ ಸಂದೇಶವನ್ನು ಸೂಫಿಗಳು ಸಮಾಜಕ್ಕೆ ನೀಡಿದ್ದಾರೆ. ಇವರೆಲ್ಲರ ಚಿಂತನೆಗಳು ಸಮಾಜವನ್ನು ಸಮಾನತೆಯತ್ತ ಕೊಂಡೊಯ್ಯುವ ಮಹತ್ವದ ಪ್ರಯತ್ನಗಳಾಗಿವೆ ಎಂದರು.

ಸಮಸಮಾಜ ಎಂದರೆ ಕೇವಲ ಅಸಮಾನತೆ ಇಲ್ಲದ ಸಮಾಜವಲ್ಲ. ಸಮಾನತೆ, ಸಾಮರಸ್ಯ, ಅರಿವು ಮತ್ತು ಪ್ರೀತಿಯ ಮೇಲೆ ನಿಂತಿರುವ ಸಮಾಜವೇ ಸಮಸಮಾಜ. ಈ ನಾಲ್ಕು ಅಂಶಗಳು ಅದರ ಪ್ರಮುಖ ಆಧಾರ ಸ್ತಂಭಗಳಾಗಿವೆ ಎಂದು ಹೇಳಿದರು.

ದಾರ್ಶನಿಕರು ನೀಡಿದ ಸಮಾನತೆಯ ಸಂದೇಶವನ್ನು ಸಮಾಜ ಎಷ್ಟರ ಮಟ್ಟಿಗೆ ಅಳವಡಿಸಿಕೊಂಡಿದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಇಂದಿಗೂ ರೈತರು, ಶ್ರಮಿಕರು ಹಾಗೂ ವಿವಿಧ ಸಮುದಾಯಗಳ ಮೇಲೆ ನಡೆಯುತ್ತಿರುವ ಅನ್ಯಾಯಗಳನ್ನು ಗಮನಿಸಿದಾಗ ಸಮಸಮಾಜದ ಗುರಿ ಇನ್ನೂ ಸಂಪೂರ್ಣವಾಗಿ ಸಾಕಾರಗೊಂಡಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸಿಂಧನೂರಿನ ಬಸವ ಕೇಂದ್ರದ ಮುಖಂಡ ಗೋವಿಂದರಾಜ ಬಾರಿಕೇರಿ ಮಾತನಾಡಿ, ಪ್ರಾಚೀನ ಕಾಲದಿಂದಲೂ ಧಾರ್ಮಿಕ ಸಂಸ್ಕೃತಿ ಮತ್ತು ಪರಂಪರೆಯ ಹೆಸರಿನಲ್ಲಿ ಅಸಮಾನತೆಯನ್ನು ಸಂರಕ್ಷಿಸಿಕೊಂಡು ಬರಲಾಗುತ್ತಿತ್ತು. ಇದಕ್ಕೆ ಧಾರ್ಮಿಕ ನೆಲೆಯಲ್ಲಿಯೇ ಪ್ರಬಲವಾಗಿ ಪ್ರತಿಕ್ರಿಯಿಸಿದವರು ಶರಣರು ಎಂದು ಹೇಳಿದರು.

ಭಾರತೀಯ ಧಾರ್ಮಿಕ ಸಂಸ್ಕೃತಿಯ ಭಾಗವಾಗಿರುವ ಅನೇಕ ಉಪನಿಷತ್ತುಗಳು ಹಾಗೂ ಸನಾತನ ಪರಂಪರೆಯ ಚಿಂತನೆಗಳಲ್ಲಿ ಮಾನವ ಪ್ರೇಮದ ವಿಚಾರಗಳಿದ್ದರೂ, ಅವುಗಳನ್ನು ಸಮಾಜವು ಕಾಲಕ್ರಮೇಣ ವಿಭಿನ್ನ ರೀತಿಯಲ್ಲಿ ಅರ್ಥೈಸಿಕೊಂಡು ಅಸಮಾನತೆಯನ್ನು ಸಂಪ್ರದಾಯದ ರೂಪದಲ್ಲಿ ಬೆಳೆಸಿಕೊಂಡು ಬಂದಿದೆ. ಆದರೆ ಆತ್ಮಕಲ್ಯಾಣವನ್ನು ಪ್ರಧಾನವಾಗಿಟ್ಟುಕೊಂಡಿದ್ದ ಧಾರ್ಮಿಕ ಪರಂಪರೆಯ ನಡುವೆ ಸಮಾಜಕಲ್ಯಾಣದ ಸಾಧ್ಯತೆಯನ್ನು ತೋರಿಸಿಕೊಟ್ಟದ್ದು ಶರಣರ ಚಿಂತನೆ ಎಂದು ತಿಳಿಸಿದರು.

ವೈಯಕ್ತಿಕ ಸಾಧನೆಗಿಂತ ಸಾಮಾಜಿಕ ಶುದ್ಧತೆ ಮುಖ್ಯ ಎಂಬುದನ್ನು ಶರಣರು ಪ್ರತಿಪಾದಿಸಿದರು. ಮನುಷ್ಯರನ್ನು ಮನುಷ್ಯರನ್ನಾಗಿ ಕಾಣುವ ಮತ್ತು ಸಮಾನತೆಯ ಆಧಾರದ ಮೇಲೆ ಸಮಾಜ ನಿರ್ಮಿಸುವ ಸಾಧ್ಯತೆಯನ್ನು ಅವರು ತೋರಿಸಿಕೊಟ್ಟರು ಎಂದರು.

ಬಸವಣ್ಣನವರ ಚಿಂತನೆ ಇಂದು ವಿಧಾನಸಭೆ, ಸಂಸತ್ ಸೇರಿದಂತೆ ಪ್ರಜಾಪ್ರಭುತ್ವದ ಸಂಸ್ಥೆಗಳಲ್ಲಿ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಚರ್ಚೆಗೆ ಪ್ರೇರಣೆಯಾಗಿರುವುದು ಗಮನಾರ್ಹ. ಮನುಷ್ಯಪ್ರೇಮದ ಜತೆಗೆ ಮನುಷ್ಯರನ್ನು ಮನುಷ್ಯರಾಗಿ ಕಾಣುವ ದೃಷ್ಟಿಕೋನವನ್ನು ಶರಣರು ಸಮಾಜಕ್ಕೆ ನೀಡಿದ್ದಾರೆ ಎಂದು ಹೇಳಿದರು.

ಸಾಹಿತಿ ರಾಜಶ್ರೀ ಕಲ್ಲೂರುಕರ್ ಮಾತನಾಡಿದರು. ಪ್ರಾಧ್ಯಾಪಕ ಶಿವಯ್ಯ ಹಿರೇಮಠ, ಮಾರುತಿ, ಹನುಮಂತಪ್ಪ ಮನ್ನಾಪುರಿ ಹಾಗೂ ಸಿದ್ದಪ್ಪ ಜೇಗರ್ ಉಪಸ್ಥಿತರಿದ್ದರು. ಮೌನೇಶ ಹಣಗಿ ನಿರೂಪಿಸಿದರು. ಮಲ್ಲಿಕಾರ್ಜುನ ಗೌಡೂರು ಸ್ವಾಗತಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಬಾವಸಲಿ, ರಾಯಚೂರು/ವಾರ್ತಾಭಾರತಿ

ರಾಯಚೂರು ಜಿಲ್ಲಾ ವರದಿಗಾರರು

ಬವಸಾಲಿ ಅವರು 2013ರಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಬಿ.ಎ ಪದವಿ ಹಾಗೂ 2017ರಲ್ಲಿ ಎಂ.ಎ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕಳೆದ ಒಂಬತ್ತು ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು, ಪ್ರಾದೇಶಿಕ ಹಾಗೂ ರಾಜ್ಯಮಟ್ಟದ ಪ್ರತಿಷ್ಠಿತ ಪತ್ರಿಕೆಗಳು, ವೆಬ್‌ಸೈಟ್‌ಗಳು ಮತ್ತು ವೆಬ್ ಪೋರ್ಟಲ್‌ಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಪ್ರಸ್ತುತ ವಾರ್ತಾಭಾರತಿಯಲ್ಲಿ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ