ರಾಯಚೂರು: ಸಾಹಿತ್ಯವು ಜನರ ಬದುಕಿನೊಂದಿಗೆ ಬೆಸೆದುಕೊಂಡಾಗ ಮಾತ್ರ ಅದರ ಸಾಮಾಜಿಕ ಪ್ರಸ್ತುತತೆ ಹೆಚ್ಚುತ್ತದೆ. ಹೈದರಾಬಾದ್ ಕರ್ನಾಟಕ ಪ್ರದೇಶವು ಹಲವು ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಳವಳಿಗಳಿಗೆ ಸಾಕ್ಷಿಯಾಗಿದೆ ಎಂದು ಸಾಹಿತಿ ವೆಂಕಟೇಶ ಬೇವಿನಬೆಂಚಿ ಅಭಿಪ್ರಾಯಪಟ್ಟರು.

ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಆಯೋಜಿಸಿದ್ದ ಕವಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕಲೆ, ಕಾವ್ಯ ಮತ್ತು ಸಾಹಿತ್ಯವು ಕೇವಲ ಸೌಂದರ್ಯದ ಅನುಭವ ನೀಡುವ ಮಾಧ್ಯಮಗಳಲ್ಲ. ಅವು ಸಮಾಜದಲ್ಲಿ ಚೈತನ್ಯ, ಜಾಗೃತಿ, ಸಮಾನತೆ ಹಾಗೂ ಸಾಮಾಜಿಕ ನ್ಯಾಯದ ಪರವಾದ ಸಾಮೂಹಿಕ ಮನೋಭಾವವನ್ನು ರೂಪಿಸುವ ಶಕ್ತಿಗಳಾಗಬೇಕು. ಹೈದರಾಬಾದ್ ಕರ್ನಾಟಕ (ಕಲ್ಯಾಣ ಕರ್ನಾಟಕ) ಭಾಗದ ಸಾಹಿತ್ಯದಲ್ಲಿ ಇಲ್ಲಿನ ಜನರ ಬದುಕು, ನೋವು, ಹೋರಾಟ, ಕನಸುಗಳು ಹಾಗೂ ಸಾಮಾಜಿಕ ವಾಸ್ತವಗಳು ಪ್ರತಿಬಿಂಬಿತವಾಗಿವೆ. ಶರಣರು, ದಾಸರು, ಸಂತರು ಹಾಗೂ ತತ್ವಪರಂಪರೆಯ ಚಿಂತನೆಗಳು ಈ ನೆಲದ ಜನಜೀವನದೊಂದಿಗೆ ಬೆಸೆದುಕೊಂಡಿವೆ ಎಂದು ಹೇಳಿದರು.

ಕನ್ನಡ ಶರಣ ಸಾಹಿತ್ಯ, ದಾಸ ಸಾಹಿತ್ಯ, ಸೂಫಿ ಪರಂಪರೆ, ಮರಾಠಿ ಸಾಹಿತ್ಯ ಹಾಗೂ ಜನಪದ ಸಂಸ್ಕೃತಿಗಳು ಈ ಭಾಗದಲ್ಲಿ ಪರಸ್ಪರ ಅನುಸಂಧಾನಗೊಂಡಿವೆ. ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆಗಳ ಜತೆಗೆ ಸಾಮಾಜಿಕ ಪರಿವರ್ತನೆಯ ಆಶಯವೂ ಈ ಸಾಹಿತ್ಯ ಪರಂಪರೆಗಳಲ್ಲಿ ಅಡಕವಾಗಿದೆ. ಇವು ಕೇವಲ ಪುಸ್ತಕಗಳಲ್ಲಿರುವ ವಿಚಾರಗಳಲ್ಲ; ಬದುಕಿನ ಮೌಲ್ಯಗಳನ್ನು ರೂಪಿಸಿದ ಚಿಂತನಾ ಪರಂಪರೆಗಳಾಗಿವೆ ಎಂದು ತಿಳಿಸಿದರು.

ರಾಯಚೂರು ಜಿಲ್ಲೆ ಸಾಹಿತ್ಯಿಕವಾಗಿ ಸಮೃದ್ಧವಾಗಿದ್ದು, ಅನೇಕ ಸಾಹಿತಿಗಳು, ಕವಿಗಳು ಮತ್ತು ಚಿಂತಕರು ಕನ್ನಡ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಇಲ್ಲಿನ ಸಾಹಿತಿಗಳ ಕೃತಿಗಳು ಜನರ ಬದುಕು, ಶ್ರಮ ಮತ್ತು ಹೋರಾಟಗಳಿಗೆ ಧ್ವನಿಯಾಗಿವೆ. ಶಾಂತವೀರರು ಸೇರಿದಂತೆ ಹಲವು ಸಾಹಿತಿಗಳ ಬರಹಗಳು ರಾಜ್ಯದ ಸಾಹಿತ್ಯ ಲೋಕದ ಗಮನ ಸೆಳೆದಿವೆ ಎಂದರು.

ಸಮಾನತೆ, ನ್ಯಾಯ, ಮಾನವೀಯತೆ ಮತ್ತು ಸ್ವಾತಂತ್ರ್ಯದ ಆಶಯಗಳನ್ನು ಹೊತ್ತ ಸಾಹಿತ್ಯವು ಸಮಾಜವನ್ನು ಪರಿವರ್ತನೆಯತ್ತ ಕೊಂಡೊಯ್ಯುವ ಶಕ್ತಿಯನ್ನು ಹೊಂದಿದೆ. ಆದ್ದರಿಂದ ಹೈದರಾಬಾದ್ ಕರ್ನಾಟಕದ ಬಹುಮುಖ ಸಾಹಿತ್ಯ ಪರಂಪರೆಯನ್ನು ಹೊಸ ತಲೆಮಾರಿಗೆ ಪರಿಚಯಿಸುವ ಅಗತ್ಯವಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಶರೀಪ್ ಹಸಮಕಲ್, ವೆಂಕಟೇಶ ನವಲಿ, ಮಹಾದೇವ ಎಸ್. ಪಾಟೀಲ, ಕೋದಂಡ ರೆಡ್ಡಿ, ತಿಮ್ಮಯ್ಯ ರಾಯಚೂರು, ಮಹಾಂತೇಶ ಗವಿಗಟ್ಟ, ಶರಣಯ್ಯ ಸ್ವಾಮಿ, ಸಾಯಿ ಸಾಗರ, ದೇವರಾಜ ಗಂಟಿ, ಬಸವರಾಜ ಉಪ್ಪೇರಿ ಹಾಗೂ ಲಕ್ಷ್ಮಣ ಬಾರೀಕೆರಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಬಾವಸಲಿ, ರಾಯಚೂರು/ವಾರ್ತಾಭಾರತಿ

ರಾಯಚೂರು ಜಿಲ್ಲಾ ವರದಿಗಾರರು

ಬವಸಾಲಿ ಅವರು 2013ರಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಬಿ.ಎ ಪದವಿ ಹಾಗೂ 2017ರಲ್ಲಿ ಎಂ.ಎ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕಳೆದ ಒಂಬತ್ತು ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು, ಪ್ರಾದೇಶಿಕ ಹಾಗೂ ರಾಜ್ಯಮಟ್ಟದ ಪ್ರತಿಷ್ಠಿತ ಪತ್ರಿಕೆಗಳು, ವೆಬ್‌ಸೈಟ್‌ಗಳು ಮತ್ತು ವೆಬ್ ಪೋರ್ಟಲ್‌ಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಪ್ರಸ್ತುತ ವಾರ್ತಾಭಾರತಿಯಲ್ಲಿ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ