ರಾಯಚೂರು | ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ರೈತನ ರಕ್ಷಣೆ
ರಾಯಚೂರು: ಲಿಂಗಸುಗೂರು ತಾಲ್ಲೂಕಿನ ಚಿತ್ತಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಜಾಗೀರನಂದಿಹಾಳ ಗ್ರಾಮದಲ್ಲಿ ಹಳ್ಳ ತುಂಬಿ ಹರಿದು, ರೈತ ಬಂಡೆಪ್ಪ ಅಮಾರಾವತಿ (55) ಹಳ್ಳಕ್ಕೆ ಬಿದ್ದು ಪ್ರಾಣಾಪಾಯದಿಂದ ಪಾರಾದ ಘಟನೆ ಸೋಮವಾರ ನಡೆದಿದೆ.
ಜಮೀನಿಗೆ ತೆರಳಿದ್ದ ಬಂಡೆಪ್ಪ, ಹಳ್ಳದ ಪ್ರವಾಹಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗುತ್ತಿದ್ದಾಗ, ಸ್ಥಳೀಯರು ಹಗ್ಗದ ಸಹಾಯದಿಂದ ಅವರನ್ನು ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ.
ರಾಂಪುರ, ಚಿತ್ತಾಪುರ ಮತ್ತು ಆನೆಹೊಸೂರು ಗ್ರಾಮಗಳ ಹೊಲಗಳಿಗೆ ರಾಂಪುರ ಏತ ನೀರಾವರಿ ನಾಲೆ ಮತ್ತು ಮಳೆಯ ನೀರು ಸೇರ್ಪಡೆಯಾಗಿ, ಜಾಗೀರನಂದಿಹಾಳ ಹಳ್ಳದಲ್ಲಿ ಸೇತುವೆ ಕೆಳಮಟ್ಟದಲ್ಲಿರುವುದರಿಂದ ಸೇತುವೆ ಮೇಲೆ ನೀರು ಹರಿದು ವಿದ್ಯಾರ್ಥಿಗಳು ಹಾಗೂ ರೈತರು ಸಂಕಷ್ಟ ಅನುಭವಿಸುವ ಪರಿಸ್ಥಿತಿ ಎದುರಾಗುತ್ತಿದೆ.
ಈ ಹಳ್ಳದಲ್ಲಿ ವರ್ಷದ ಹತ್ತು ತಿಂಗಳು ನೀರು ಹರಿಯುತ್ತಿದ್ದು, ಸೇತುವೆ ನಿರ್ಮಾಣ ತುರ್ತು ಅಗತ್ಯವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಕುರಿತು ಗ್ರಾಮಸ್ಥ ಗದ್ದೆನಗೌಡ ಪಾಟೀಲ್ ಮಾತನಾಡಿ, 2022ರಲ್ಲಿ ಮಾಜಿ ಶಾಸಕ ಡಿ.ಎಸ್. ಹೂಲಗೇರಿ 2.50 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದರು. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದರೂ, ಸರ್ಕಾರ ಬದಲಾದ ಕಾರಣ ಕಾಮಗಾರಿ ನಿಂತಿತು. ಇದೀಗ ಶಾಸಕ ಮಾನಪ್ಪ ವಜ್ಜಲ್ ಅವರು ನನೆಗುದಿಗೆ ಬಿದ್ದ ಸೇತುವೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.