Raichur | ಸ್ವಾಮಿನಾಥನ್ ವರದಿ ಜಾರಿಗೆ ಆಗ್ರಹಿಸಿ ಆ.31ರಂದು ರೈತ ಜಾಗೃತಿ ಸಮಾವೇಶ
ರಾಯಚೂರು: ರೈತರ ಆತ್ಮಹತ್ಯೆ ತಡೆಗಟ್ಟುವುದು, ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಹಾಗೂ ಕಾನೂನುಬದ್ಧ ಬೆಂಬಲ ಬೆಲೆ ಕಲ್ಪಿಸುವುದು ಸೇರಿದಂತೆ ಕೃಷಿ ಕ್ಷೇತ್ರದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಲು ಡಾ. ಎಂ.ಎಸ್. ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಆ.31ರಂದು ಮಸ್ಕಿ ತಾಲೂಕಿನ ಸಂತೆಕೆಲ್ಲೂರಿನಲ್ಲಿ ಬೃಹತ್ ರೈತ ಜಾಗೃತಿ ಸಮಾವೇಶ ಆಯೋಜಿಸಲಾಗಿದೆ ಎಂದು ಡಾ. ಎಂ.ಎಸ್. ಸ್ವಾಮಿನಾಥನ್ ಆಯೋಗದ ವರದಿ ಜಾರಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಶರಣಪ್ಪ ಮರಳಿ ಸುಲ್ತಾನಪುರ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಡಾ. ಎಂ.ಎಸ್. ಸ್ವಾಮಿನಾಥನ್ ಆಯೋಗದ ವರದಿ ಜಾರಿ ಹೋರಾಟ ಸಮಿತಿ ಹಾಗೂ ರಾಯಚೂರು ಜಿಲ್ಲಾ ಮತ್ತು ಮಸ್ಕಿ ತಾಲೂಕು ಘಟಕಗಳ ನೇತೃತ್ವದಲ್ಲಿ ಸಮಾವೇಶ ನಡೆಯಲಿದೆ ಎಂದರು.
‘ರೈತ ಸಾಲಗಾರನಲ್ಲ, ಸರ್ಕಾರವೇ ಬಾಕಿದಾರ’ :
‘ರೈತ ಸಾಲಗಾರನಲ್ಲ, ಸರ್ಕಾರವೇ ಬಾಕಿದಾರ; ರೈತರ ಆತ್ಮಹತ್ಯೆಗೆ ಸಾವು ಪರಿಹಾರವಲ್ಲ, ಸವಾಲಿಗೆ ಪರಿಹಾರವೇ ಮಾರ್ಗ’ ಎಂಬ ಆಶಯದೊಂದಿಗೆ ಸಮಾವೇಶ ನಡೆಯಲಿದೆ. ರೈತರ ವಿವಿಧ ಬೇಡಿಕೆಗಳನ್ನು ಮಂಡಿಸಿ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಆ.31ರಂದು ಬೆಳಿಗ್ಗೆ 9 ಗಂಟೆಗೆ ಸಂತೆಕೆಲ್ಲೂರು ಘನಮಠೇಶ್ವರ ಕಲ್ಯಾಣ ಮಂಟಪದಲ್ಲಿ ಸಮಾವೇಶ ನಡೆಯಲಿದ್ದು, ಇದಕ್ಕೂ ಮುನ್ನ ಬಸ್ ನಿಲ್ದಾಣದಿಂದ ಕಲ್ಯಾಣ ಮಂಟಪದವರೆಗೆ ಬೃಹತ್ ರೈತ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಂತೆಕೆಲ್ಲೂರು ಘನಮಠದ ಗುರುಬಸವ ಮಹಾಸ್ವಾಮಿಗಳು, ಇಂಚಗೇರಿ ಮಠದ ಶ್ರೀ ಶಶಿಕಾಂತ ಪಡಸಲಗಿ, ಅಡವಿ ಸಿದ್ದೇಶ್ವರಮಠದ ಮರಿಬಸವರಾಜ ದೇಶಿಕೇಂದ್ರ ಮಹಾಸ್ವಾಮಿಗಳು, ಮಸ್ಕಿಯ ಗಚ್ಚಿನಮಠದ ವರರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಸಂತೆಕೆಲ್ಲೂರು ಮಹಾಂತಿನಮಠದ ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಚುನ್ನಪ್ಪ ಪೂಜೇರಿ ಸಮಾವೇಶ ಉದ್ಘಾಟಿಸಲಿದ್ದು, ಶರಣಪ್ಪ ಮರಳಿ ಸುಲ್ತಾನಪುರ ಅಧ್ಯಕ್ಷತೆ ವಹಿಸಲಿದ್ದಾರೆ. ರಾಯಚೂರು ಜಿಲ್ಲಾಧಿಕಾರಿ ಪೂವಿತಾ ಎಸ್. ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಶು ಗಿರಿ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ.
ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸುವುದು, ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಹಾಗೂ ಕಾನೂನುಬದ್ಧ ಬೆಂಬಲ ಬೆಲೆ ನೀಡುವುದು ಮತ್ತು ರೈತರ ಆತ್ಮಹತ್ಯೆ ತಡೆಗೆ ಪರಿಣಾಮಕಾರಿ ಕ್ರಮ ಕೈಗೊಳ್ಳುವುದು ಸೇರಿದಂತೆ ರೈತರ ಪ್ರಮುಖ ಸಮಸ್ಯೆಗಳಿಗೆ ಸರ್ಕಾರ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.
ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಸಮಾವೇಶದಲ್ಲಿ ಭಾಗವಹಿಸಿ ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಬೇಕು ಎಂದು ಶರಣಪ್ಪ ಮರಳಿ ಸುಲ್ತಾನಪುರ ಮನವಿ ಮಾಡಿದರು.