Sindhanur | ತುಂಗಭದ್ರಾ ನದಿಗೆ ನೀರು ಹರಿಸಲು ಆಗ್ರಹ ; ಮುನಿರಾಬಾದ್‌ನಲ್ಲಿ ರೈತರ ಬೃಹತ್ ಪ್ರತಿಭಟನೆ
ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಭಾಗಿ
ಸಿಂಧನೂರು: ತುಂಗಭದ್ರಾ ಆಣೆಕಟ್ಟು ಮಂಡಳಿಯಿಂದ ತುಂಗಭದ್ರಾ ನದಿಗೆ ಕೂಡಲೇ ನೀರು ಹರಿಸಬೇಕು ಎಂದು ಆಗ್ರಹಿಸಿ ಸಿಂಧನೂರು, ಸಿರುಗುಪ್ಪ, ಮಾನವಿ ಸೇರಿದಂತೆ ವಿವಿಧ ತಾಲೂಕುಗಳ ಸಾವಿರಾರು ರೈತರು ಮುನಿರಾಬಾದ್ ಕಾಡಾ ಕಚೇರಿ ಎದುರು ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.
ತುಂಗಭದ್ರಾ ನದಿಪಾತ್ರದಲ್ಲಿರುವ ಕೊಪ್ಪಳ, ಸಿರುಗುಪ್ಪ, ಸಿಂಧನೂರು ಹಾಗೂ ಮಾನವಿ ತಾಲೂಕುಗಳ ಹಲವು ಗ್ರಾಮಗಳಲ್ಲಿ ಸುಮಾರು 2 ಲಕ್ಷ ಕುಟುಂಬಗಳು ವಾಸಿಸುತ್ತಿವೆ. ಲಕ್ಷಾಂತರ ಜಾನುವಾರುಗಳಿದ್ದು, ನದಿಪಾತ್ರದ ಬಡ ರೈತರು ಪಂಪ್‌ಸೆಟ್‌ಗಳ ಮೂಲಕ ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ. ಹೀಗಾಗಿ ನದಿಗೆ ತಕ್ಷಣ ನೀರು ಹರಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ತುಂಗಭದ್ರಾ ನದಿಯಲ್ಲಿ ಸುಮಾರು ನಾಲ್ಕು ತಿಂಗಳಿಂದ ನೀರಿಲ್ಲದೆ ಅಂತರ್ಜಲ ಮಟ್ಟ ಕುಸಿದಿದೆ. ಇದರಿಂದ ನದಿಪಾತ್ರದ ಗ್ರಾಮಗಳಲ್ಲಿ ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಜಲಚರಗಳು ಹಾಗೂ ಇತರ ಜೀವಸಂಕುಲದ ಮೇಲೂ ಪ್ರತಿಕೂಲ ಪರಿಣಾಮ ಬೀರುವ ಆತಂಕವಿದೆ ಎಂದು ರೈತರು ಹೇಳಿದರು.
ಕೃಷ್ಣಾ ಜಲ ವಿವಾದ ನ್ಯಾಯಮಂಡಳಿಯ ಆದೇಶದಲ್ಲಿ ಪರಿಸರ ಸಂರಕ್ಷಣೆ, ಜಲಚರ ಸಸ್ಯ-ಪ್ರಾಣಿಗಳ ಸಂರಕ್ಷಣೆ ಹಾಗೂ ನದಿಪಾತ್ರದ ಗ್ರಾಮಗಳಿಗೆ ಕುಡಿಯುವ ನೀರಿನ ಲಭ್ಯತೆಯನ್ನು ಗಮನದಲ್ಲಿಟ್ಟುಕೊಂಡು ನದಿಗಳಲ್ಲಿ ಅಗತ್ಯ ನೀರಿನ ಹರಿವು ಕಾಯ್ದುಕೊಳ್ಳುವ ಅಂಶಗಳನ್ನು ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ನ್ಯಾಯಮಂಡಳಿಯ ಆದೇಶದಂತೆ ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಹರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ತುಂಗಭದ್ರಾ ನದಿಗೆ ನೀರು ಹರಿಸುವಂತೆ ತುಂಗಭದ್ರಾ ಮಂಡಳಿ ಅಧಿಕಾರಿಗಳು ಹಾಗೂ ಸಂಬಂಧಿಸಿದ ಸಚಿವರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ ಸುಮಾರು 40 ವರ್ಷಗಳಿಂದ ಪ್ರತಿವರ್ಷ ಇದೇ ರೀತಿಯ ಸಮಸ್ಯೆ ಎದುರಾಗುತ್ತಿದ್ದು, ನದಿಪಾತ್ರದ ಜನರು ಹಾಗೂ ರೈತರ ಹಿತದೃಷ್ಟಿಯಿಂದ ಶಾಶ್ವತ ಪರಿಹಾರ ರೂಪಿಸಬೇಕು. ತುಂಗಭದ್ರಾ ನದಿಗೆ ಅಗತ್ಯ ಪ್ರಮಾಣದ ನೀರು ಹರಿಸುವ ಮೂಲಕ ಜನ-ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಕೃಷಿಗೆ ಅನುಕೂಲ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ, ಮಾಜಿ ಶಾಸಕ ಬಸವರಾಜ ದಢೇಸೂಗುರು, ಸೋಮಲಿಂಗಪ್ಪ, ಜೆಡಿಎಸ್ ಮುಖಂಡ ಬಸವರಾಜ ನಾಡಗೌಡ, ತುಂಗಭದ್ರಾ ಆಣೆಕಟ್ಟಿನ ತುಂಗಭದ್ರಾ ನದಿಪಾತ್ರದ ರೈತ ಸಂಘದ ಮುಖಂಡರಾದ ಚೆನ್ನಬಸವ ಉಪ್ಪಳ, ಅಶೋಕ ಭೂಪಾಲಗೌಡ, ಖಾಸೀಂಸಾಬ್ ದಢೇಸೂಗುರು, ಎಂ.ಲಿಂಗಪ್ಪ, ಬಸನಗೌಡ ಪಾಟೀಲ್ ಹುಡಾ, ಅಮಾಜಪ್ಪ ಮುಕ್ಕುಂದಾ, ಗೋಪಾಲರೆಡ್ಡಿ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.