ರಾಯಚೂರು: ತುಂಗಭದ್ರಾ ಎಡದಂಡೆ ವಿತರಣಾ ಕಾಲುವೆ-92ರ ವ್ಯಾಪ್ತಿಯಲ್ಲಿನ ಬೆಳೆಗಳು ಹಾಗೂ ಜಾನುವಾರುಗಳನ್ನು ರಕ್ಷಿಸಲು ಐಸಿಸಿ ಸಭೆಯ ನಿರ್ಣಯದಂತೆ ವಾರಬಂದಿ ಪದ್ಧತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ, ತಕ್ಷಣ ಸಮರ್ಪಕವಾಗಿ ನೀರು ಹರಿಸಬೇಕು ಎಂದು ಒತ್ತಾಯಿಸಿ ಅಚ್ಚುಕಟ್ಟು ಪ್ರದೇಶದ ರೈತರು ಒಣಗಿದ ಬೆಳೆಗಳನ್ನು ಪ್ರದರ್ಶಿಸಿ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ತುಂಗಭದ್ರಾ ಎಡದಂಡೆ ವಿತರಣಾ ಕಾಲುವೆ-92ರ ವ್ಯಾಪ್ತಿಯಲ್ಲಿ ಸಿರವಾರ, ಜಕ್ಕಲದಿನ್ನಿ, ಜಕ್ಕಲದಿನ್ನಿ ಕ್ಯಾಂಪ್, ಭಾಗ್ಯನಗರ, ಲಕ್ಕಮದಿನ್ನಿ, ಗಣದಿನ್ನಿ, ಜಾಲಪುರ, ಮಾಡಗಿರಿ, ಹಳ್ಳಿ ಹೊಸೂರು, ಬೇವನೂರು, ತುಪ್ಪದೂರು ಹಾಗೂ ಮಾಚನೂರು ಸೇರಿದಂತೆ ಹಲವು ಗ್ರಾಮಗಳ ಸುಮಾರು 35 ಸಾವಿರ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವಿದೆ ಎಂದು ರೈತರು ತಿಳಿಸಿದರು.

ಈ ಭಾಗದ ರೈತರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮೆಣಸಿನಕಾಯಿ ಮತ್ತು ಭತ್ತ ಬೆಳೆದಿದ್ದಾರೆ. ಪ್ರಸ್ತುತ ಮೆಣಸಿನಕಾಯಿ ಬೆಳೆ ಹೂವು ಹಾಗೂ ಕಾಯಿ ಬಿಡುವ ಹಂತದಲ್ಲಿದ್ದರೆ, ಭತ್ತದ ಬೆಳೆ ತೆನೆ ಬಿಡುವ ಹಂತದಲ್ಲಿದೆ. ಈ ನಿರ್ಣಾಯಕ ಸಮಯದಲ್ಲಿ ಬೆಳೆಗಳಿಗೆ ನೀರು ಅತ್ಯಗತ್ಯವಾಗಿದೆ. ಸಮರ್ಪಕವಾಗಿ ನೀರು ದೊರೆಯದಿದ್ದರೆ ಬೆಳೆಗಳು ಒಣಗಿ ಸಂಪೂರ್ಣ ನಾಶವಾಗುವ ಆತಂಕ ಎದುರಾಗಿದೆ. ಜತೆಗೆ ಜಾನುವಾರುಗಳು ಹಾಗೂ ಪಕ್ಷಿಗಳಿಗೂ ಕುಡಿಯುವ ನೀರಿನ ಅಭಾವ ಉಂಟಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಗಣೇಕಲ್ ಬ್ಯಾಲೆನ್ಸಿಂಗ್ ರಿಸರ್ವಾಯರ್ ತುಂಬಿಸುವ ಉದ್ದೇಶದಿಂದ 144ನೇ ಕಾಯ್ದೆ ಜಾರಿಗೊಳಿಸಿ, 8ರಿಂದ 9 ಅಡಿ ನೀರನ್ನು ಕೆಳಭಾಗಕ್ಕೆ ಹರಿಸುವ ಸಂದರ್ಭದಲ್ಲಿ 92ನೇ ವಿತರಣಾ ಕಾಲುವೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುತ್ತಿದೆ. ಮೇಲ್ಭಾಗದಲ್ಲಿ ನೀರಿನ ಲಭ್ಯತೆ ಇದ್ದರೂ, ಅಚ್ಚುಕಟ್ಟು ಪ್ರದೇಶಕ್ಕೆ ಹಂಚಿಕೆಯಾಗಬೇಕಾದ ನಿಗದಿತ ಪ್ರಮಾಣದ ನೀರನ್ನು ಒದಗಿಸದೆ ರೈತರೊಂದಿಗೆ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಕಾಲುವೆಯಲ್ಲಿ ನೀರು ಹರಿಯದ ಕಾರಣ ಕೃಷಿ ಹೊಂಡಗಳು ಒಣಗಿವೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂಬರುವ ಬೇಸಿಗೆಯಲ್ಲಿ ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟು ತೀವ್ರವಾಗಲಿದೆ. ಈಗಾಗಲೇ ಬೆಳೆಗಳಿಗೆ ಮಾಡಿದ ಹೂಡಿಕೆ ಕೈಗೆಟುಕದ ಸ್ಥಿತಿಯಲ್ಲಿದ್ದು, ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಆತಂಕವಿದೆ ಎಂದು ತಿಳಿಸಿದರು.

ಐಸಿಸಿ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ವಾರಬಂದಿ ಪದ್ಧತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಗಣೇಕಲ್ ಬ್ಯಾಲೆನ್ಸಿಂಗ್ ರಿಸರ್ವಾಯರ್ ತುಂಬಿಸುವ ಸಂದರ್ಭದಲ್ಲಿ 92ನೇ ವಿತರಣಾ ಕಾಲುವೆಯನ್ನು ಸಂಪೂರ್ಣವಾಗಿ ಬಂದ್ ಮಾಡದೆ, ಅಚ್ಚುಕಟ್ಟು ಪ್ರದೇಶಕ್ಕೆ ನಿಗದಿಪಡಿಸಿದ ಪ್ರಮಾಣದ ನೀರನ್ನು ಹರಿಸಬೇಕು. ಒಣಗಿರುವ ಕೃಷಿ ಹೊಂಡಗಳನ್ನು ತುಂಬಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು. ಬೆಳೆಗಳು ಹಾಗೂ ಜಾನುವಾರುಗಳನ್ನು ರಕ್ಷಿಸಲು ತಕ್ಷಣ ನೀರು ಪೂರೈಸಬೇಕು ಎಂದು ರೈತರು ಆಗ್ರಹಿಸಿದರು.

ಪ್ರತಿಭಟನೆಯ ಬಳಿಕ ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಮಲ್ಲಿಕಾರ್ಜುನ ಜಕ್ಕಲದಿನ್ನಿ, ವೆಂಕಟರೆಡ್ಡಿ, ಶ್ರೀಧರ, ಸೂರ್ಯನಾರಾಯಣ, ಹನುಮೇಶ, ರಾಮಬಾಬು, ಕರೆಪ್ಪ ಸೇರಿದಂತೆ ಜಕ್ಕಲದಿನ್ನಿ, ಜಕ್ಕಲದಿನ್ನಿ ಕ್ಯಾಂಪ್, ಭಾಗ್ಯನಗರ ಕ್ಯಾಂಪ್, ಲಕ್ಕಮದಿನ್ನಿ, ಗಣದಿನ್ನಿ, ಜಾಲಪುರ, ಮಾಡಗಿರಿ, ಹಳ್ಳಿ ಹೊಸೂರು, ಬೇವನೂರು, ತುಪ್ಪದೂರು ಹಾಗೂ ಮಾಚನೂರು ಗ್ರಾಮಗಳ ನೂರಾರು ರೈತರು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor