ಮೂರು ದಿನಗಳ ಸಿಂಧನೂರು ದಸರಾ ಉತ್ಸವಕ್ಕೆ ತೆರೆ: ಜಂಬೂ ಸವಾರಿಗೆ ಮೆರಗು ನೀಡಿದ ಪುಣೆಯ ಮಹಿಳಾ ಡೊಳ್ಳು ಕುಣಿತ
ಸಿಂಧನೂರು: ಸಿಂಧನೂರು ದಸರಾ ಉತ್ಸವದ ಕೊನೆಯ ದಿನವಾದ ಬುಧವಾರ ಸಂಜೆ ಅಂಬಾದೇವಿಯ ಉತ್ಸವ ಮೂರ್ತಿಯನ್ನು ಹೊತ್ತ ಅದ್ದೂರಿಯಾಗಿ ಜಂಬೂ ಸವಾರಿ ನಡೆಯಿತು.
ನಗರದ ಮಿನಿವಿಧಾನಸೌಧದ ಮುಂದೆ ಗಾಂಧಿ ವೃತ್ತದಲ್ಲಿ ವಿಶೇಷವಾಗಿ ಅಲಂಕೃತಗೊಂಡಿದ್ದ ಆನೆಯ ಮೇಲೆ ಅಂಬಾರಿಯಲ್ಲಿದ್ದ ಅಂಬಾದೇವಿ ಮೂರ್ತಿಗೆ ರಂಭಾಪುರಿ ಶಾಖಾಮಠದ ಸೋಮನಾಥ ಶಿವಾಚಾರ್ಯರು, ರೌಡಕುಂದಾದ ಸಿದ್ದರಾಮೇಶ್ವರ ಶರಣರು, ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ್, ಶಾಸಕ ಹಂಪನಗೌಡ ಬಾದರ್ಲಿ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್, ತಹಶೀಲ್ದಾರ್ ಅರುಣ್ ಎಚ್.ದೇಸಾಯಿ ಮತ್ತಿತರ ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ಸಿಂಧನೂರು ಜಂಬೂ ಸವಾರಿಗೆ ಚಾಲನೆ ನೀಡಿದರು.
ಸಾವಿರಾರು ಮಹಿಳೆಯರು ಕುಂಭ-ಕಳಸಗಳನ್ನು ಹಿಡಿದು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ವೀರಗಾಸೆ ನೃತ್ಯ, ಹಲಗೆ ಮೇಳ, ಚಿಲಿಪಿಲಿಗೊಂಬೆ, ಕೀಲು ಕುದುರೆ, ಲಂಬಾಣ ನೃತ್ಯ, ಡೊಳ್ಳಿನ ವಾದ್ಯಮೇಳಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿದರು.
ಈ ಬಾರಿ ವಿಶೇಷವಾಗಿ ಪುಣೆಯ 150 ಜನ ಮಹಿಳಾ ತಂಡದ ಡೊಳ್ಳು ಕುಣಿತ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಜೊತೆಗೆ ಅಂಬಾಮಠದ ಅಂಬಾದೇವಿ ದೇವಸ್ಥಾನದ ನೂತನ ವಿನ್ಯಾಸದ ಕಲಾಕೃತಿ, ಸಿಂಹದ ಮೇಲೆ ಕುಳಿತ ಅಂಬಾದೇವಿ ಮೂರ್ತಿ, ಕಾಳಿ ಮಾತೆ, ಬಸವಣ್ಣ, ಅಲ್ಲಮ್ಮಪ್ರಭು, ಹಡಪದ ಅಪ್ಪಣ್ಣ, ಸರ್ವಜ್ಞ, ಅಕ್ಕಮಹಾದೇವಿ, ವೀರರಾಣ ಕಿತ್ತೂರು ಚನ್ನಮ್ಮ, ಮಹಾತ್ಮಗಾಂಧಿ, ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದ ಶಿವಲಿಂಗ ಸೇರಿದಂತೆ ವಿವಿಧ ದಾರ್ಶನಿಕರ ಸ್ತಬ್ದಚಿತ್ರಗಳು ಮೆರವಣಿಗೆಯ ಆಕರ್ಷಕವಾಗಿದ್ದವು.
ಈ ಮೆರವಣಿಗೆಯಲ್ಲಿ ರಾಜಕಾರಣಿಗಳು, ಅಧಿಕಾರಿಗಳು, ವಿವಿಧ ಪಕ್ಷಗಳ, ಸಂಘ-ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು.