ರಾಯಚೂರು | ಮಹಿಳೆಯರ ಸಮಸ್ಯೆಗಳ ಪರಿಹಾರಕ್ಕೆ ಗ್ರಾಮ ಸಭೆ ನಡೆಸಿ : ಡಾ.ನಾಗಲಕ್ಷ್ಮಿ ಚೌಧರಿ ಸೂಚನೆ
ಸಿಂಧೋಳ ಸಮುದಾಯದ ಅಲೆಮಾರಿ ಮಹಿಳೆಯರು, ಮಾಜಿ ದೇವದಾಸಿ ಮಹಿಳೆಯರೊಂದಿಗೆ ಸಂವಾದ
ರಾಯಚೂರು : ಸಿಂಧನೂರ, ಮಸ್ಕಿ ನಗರ ಸೇರಿದಂತೆ ತಾಲೂಕು ವ್ಯಾಪ್ತಿಯ ಎಲ್ಲಾ ಕ್ಯಾಂಪ್‌ಗಳು ಮತ್ತು ಹಳ್ಳಿಗಳಲ್ಲಿ ಅಲೆಮಾರಿ, ಅರೆ ಅಲೆಮಾರಿ ಹಾಗೂ ಮಾಜಿ ದೇವದಾಸಿ ಮಹಿಳೆಯರನ್ನು ಸೇರಿಸಿ ಮಹಿಳಾ ಗ್ರಾಮ ಸಭೆಗಳನ್ನು ಆಯೋಜಿಸಬೇಕು. ಆ ಸಭೆಗಳಲ್ಲಿ ಮಹಿಳೆಯರ ಸಮಸ್ಯೆಗಳನ್ನು ಚರ್ಚಿಸಿ, ಪರಿಹಾರ ಕ್ರಮಗಳನ್ನು ಕೈಗೊಂಡ ಬಳಿಕ ಮಹಿಳಾ ಆಯೋಗಕ್ಕೆ ವರದಿ ಸಲ್ಲಿಸಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಸೂಚಿಸಿದರು.
ಸೆ.18ರಂದು ಸಿಂಧನೂರ ನಗರದ ಸುಕ್ಕಲಪೇಟೆ ರಸ್ತೆಯಲ್ಲಿರುವ ಟೌನ್‌ಹಾಲಿನಲ್ಲಿ ಸಿಂದೋಳ ಸಮುದಾಯದ ಅಲೆಮಾರಿ ಹಾಗೂ ಮಾಜಿ ದೇವದಾಸಿ ಮಹಿಳೆಯರೊಂದಿಗೆ ನಡೆದ ಸಂವಾದದಲ್ಲಿ ಅವರು ಮಾತನಾಡಿದರು.
ಸಿಂಧನೂರ, ಮಸ್ಕಿ, ಮಾನ್ವಿ ತಾಲೂಕುಗಳ ಗ್ರಾಮಗಳು ಮತ್ತು ಕ್ಯಾಂಪ್‌ಗಳಲ್ಲಿ ಅನೇಕ ವಯೋವೃದ್ಧೆಯರು ಇನ್ನೂ ಹಳೆಯ ಮಾಸಿಕ ಪಿಂಚಣಿ ಪಡೆಯುತ್ತಿದ್ದಾರೆ. ಇವರಿಗೆ ಪರಿಷ್ಕೃತ ಪಿಂಚಣಿ ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಹುವರ್ಷಗಳಿಂದ ನಮಗೆ ಮನೆ ಇಲ್ಲ, ನಿವೇಶನ ಇಲ್ಲ ಎಂದು ಸಿಂಧನೂರ ನಗರ ಮತ್ತು ಸುತ್ತಲಿನ ಕ್ಯಾಂಪ್‌ಗಳ ಮಾಜಿ ದೇವದಾಸಿ ಮಹಿಳೆಯರು ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಅವರು, ವೇದಿಕೆಗೆ ನಗರಸಭೆ ಆಯುಕ್ತರನ್ನು ಕರೆಸಿ ಚರ್ಚಿಸಿದರು. ಸಿಂಧನೂರ ನಗರಸಭೆ ವ್ಯಾಪ್ತಿಯಲ್ಲಿ ನಿವೇಶನ ಪಡೆಯದ ಮಹಿಳೆಯರು ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಿದರೆ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತ ಪಾಂಡುರಂಗ ಭರವಸೆ ನೀಡಿದರು.
ಕ್ಯಾಂಪ್‌ಗಳಲ್ಲಿ ಜಮೀನು, ರಸ್ತೆ, ಪಿಂಚಣಿ ಸೇರಿದಂತೆ ಯಾವುದೇ ಸಮಸ್ಯೆಗಳಿದ್ದರೆ ಅವುಗಳ ಪಟ್ಟಿ ಸಿದ್ಧಪಡಿಸಿ ನೀಡಬೇಕು. ಮಹಿಳೆಯರಿಂದ ಬಂದ ಅಹವಾಲುಗಳನ್ನು ಆಯೋಗ ಪರಿಶೀಲಿಸಿ ಕ್ರಮ ವಹಿಸುತ್ತದೆ. ಆದರೆ ಜಾಗ ಸಂಬಂಧಿತ ಸಮಸ್ಯೆಗಳು ಆಯೋಗದ ವ್ಯಾಪ್ತಿಗೆ ಬರುವುದಿಲ್ಲ. ಅವುಗಳಿಗೆ ತಹಸೀಲ್ದಾರರು ಹಾಗೂ ಜಿಲ್ಲಾಧಿಕಾರಿಗಳಲ್ಲಿ ಮನವಿ ಸಲ್ಲಿಸುವಂತೆ ಅವರು ಸಲಹೆ ನೀಡಿದರು.
ಸಂವಾದದಲ್ಲಿ ಸಿಂಧನೂರ, ಹೊಸಳ್ಳಿ, ಶಾಸಲಮರಿ, ಯೋಳರಾಗಿ ಕ್ಯಾಂಪ್, ಗ್ವಾಮರಿಸಿ, ಜಾಲಹಳ್ಳಿ ಸೇರಿದಂತೆ ಅನೇಕ ಗ್ರಾಮ ಮತ್ತು ಕ್ಯಾಂಪ್‌ನ ಮಹಿಳೆಯರು, ಮಾಜಿ ದೇವದಾಸಿ ಮಹಿಳೆಯರು ಪಾಲ್ಗೊಂಡಿದ್ದರು.
ಬೆಳಗ್ಗೆ ಸಿಂಧನೂರಿಗೆ ಪ್ರವೇಶಿಸಿದಾಗ ಸಿಂದೋಳ ಸಮುದಾಯದ ಮಹಿಳೆಯರು ಮತ್ತು ಪುರುಷರು ಡೋಲು, ಹಲಗೆ ಬಾರಿಸಿ, ಬಾರಕೋಲ ಬೀಸಿ ಅದ್ದೂರಿ ಸ್ವಾಗತ ಕೋರಿದರು. ನಂತರ ಮೆರವಣಿಗೆಯ ಮೂಲಕ ಅವರನ್ನು ಟೌನ್‌ಹಾಲಿಗೆ ಕರೆತಂದರು.
ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಮಹಿಳಾ ಆಯೋಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ತಾಲೂಕು ಆಡಳಿತ, ತಾಲೂಕು ಪಂಚಾಯತ್, ತಾಲೂಕು ಪೊಲೀಸ್ ಇಲಾಖೆ, ಸಿಂಧನೂರ ಹಾಗೂ ತುರವಿಹಾಳ ಶಿಶು ಅಭಿವೃದ್ಧಿ ಕಾರ್ಯಾಲಯ ಮತ್ತು ಸಿಂಧನೂರ ತಾಲೂಕು ಇಂದಿರಾಗಾಂಧಿ ಸ್ತ್ರೀ ಶಕ್ತಿ ಒಕ್ಕೂಟದ ಆಶ್ರಯದಲ್ಲಿ ಆಯೋಜಿಸಲಾಯಿತು.
ಸಮಾರಂಭದಲ್ಲಿ ತಹಶೀಲ್ದಾರ್ ಅರುಣಕುಮಾರ ದೇಸಾಯಿ, ಸಿಡಿಪಿಓ ಅಶೋಕ, ಲಿಂಗನಗೌಡ್ರ ಹಾಗೂ ಇತರರು ಭಾಗವಹಿಸಿದ್ದರು.