ರಾಯಚೂರು | ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಹಿಳೆಯರಿಂದ ಅನಿರ್ದಿಷ್ಟಾವಧಿ ಧರಣಿ
ರಾಯಚೂರು : ಮಹತ್ವಾಕಾಂಕ್ಷೆಯ ಜಿಲ್ಲೆಯಾದ ರಾಯಚೂರು- ಯಾದಗಿರಿ ಜಿಲ್ಲೆಯಲ್ಲಿ ಮಕ್ಕಳ ಅಪೌಷ್ಟಿಕತೆ ನಿವಾರಣೆ ಮಾಡಬೇಕು. ದೇವದಾಸಿಯರ ಮರು ಸಮೀಕ್ಷೆ ಮಾಡಬೇಕು. ಗ್ರಾಮೀಣ ಭಾಗದಲ್ಲಿ ಶುದ್ಧೀಕರಣ ಘಟಕ ದುರಸ್ತಿಗೊಳಿಸಬೇಕು ಎಂದು ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಜಂಟಿ ಕ್ರಿಯಾ ವೇದಿಕೆ ಸಮಿತಿಯ ವತಿಯಿಂದ ಶನಿವಾರ ಅನಿರ್ಧಿಷ್ಠಾವಧಿ ಧರಣಿ ನಡೆಯಿತು.
ನಗರದ ಜಿಲ್ಲಾ ಮಹತ್ಮಾಗಾಂಧಿ ಕ್ರೀಡಾಂಗಣದಲ್ಲಿ ರಾಯಚೂರು, ಕಲಬುರಗಿ, ಯಾದಗಿರಿ, ಧಾರವಾಡ, ವಿಜಯನಗರ, ಬಳ್ಳಾರಿ, ಬಾಗಲಕೋಟೆ, ಮೈಸೂರು ಹಾಗೂ ಜಿಲ್ಲೆಯ ಸಿಂಧನೂರು, ಮಾನ್ವಿ ಹಾಗೂ ಜಿಲ್ಲೆಯ ವಿವಿಧ ತಾಲೂಕಿನ ಗಡಿ ಭಾಗದ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಸೇರಿ ಕ್ರೀಡಾಂಗಣದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಬೃಹತ್ ಕಾಲ್ನಡಿಗೆ ಜಾಥಾ ನಡೆಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಜಿಲ್ಲಾಧಿಕಾರಿ ನಿತಿಶ್ ಕೆ. ಹಾಗೂ ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ತುಕಾರಾಂ ಪಾಂಡ್ವೆಗೆ ಮನವಿ ಸಲ್ಲಿಸಿ, ರಾಯಚೂರು ಸೇರಿ ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ, ಆರೋಗ್ಯ, ಕುಡಿಯುವ ನೀರಿನ ಸಮಸ್ಯೆ, ದೇವದಾಸಿಯರ ಪಿಂಚಣಿ ಸೇರಿ ಅವರ ಕೌಟುಂಬಿಕ ಹಾಗೂ ಸಾಮಾಜಿಕ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಸರಕಾರದ ಪರವಾಗಿ ನಮ್ಮ ಧ್ವನಿ ಕೇಳಿಸಬೇಕು ಎಂದು ಮನವಿ ಮಾಡಿದರು.
ರಕ್ತ ಹೀನತೆ ಸಮಸ್ಯೆ ಬಗೆಹರಿಸಿ :
ಕಲ್ಯಾಣ ಕರ್ನಾಟಕ ಭಾಗದಲ್ಲಿ 30 ಲಕ್ಷಕ್ಕಿಂತ ಹೆಚ್ಚು ಮಹಿಳೆಯರು (ರಕ್ತ ಹೀನತೆ) ಸಮಸ್ಯೆಯಿಂದ ಬಳಲುತ್ತಿದ್ದಾರೆ. ನಮಗೆ ಕೇವಲ ಗ್ಯಾರಂಟಿ ನೀಡಿದರೆ ಸಾಲದು ನಮ್ಮ ಮಕ್ಕಳ ಭವಿಷ್ಯ ಹಾಗೂ ಮುಂದಿನ ಪೀಳಿಗೆಯ ಮಕ್ಕಳು ಇದಕ್ಕೆ ಗುರಿಯಾಗದಂತೆ ಮನವಿ ಮಾಡಿದರು.
ಕಳೆದ 1.5 ವರ್ಷಗಳಲ್ಲಿ ನಾವು ಹಲವಾರು ಪ್ರತಿಭಟನೆಗಳನ್ನು ಮಾಡಿದ್ದೇವೆ. ಆಗ ಕರ್ನಾಟಕ ಸರಕಾರದ ಶಾಸಕರು ಮತ್ತು ಸಚಿವರು ನಮಗೆ ಕಾಲಮಿತಿಯಲ್ಲಿ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದರು, ಆದರೆ ಅವರು ಜನರ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲಗೊಂಡಿದ್ದಾರೆ ಎಂದು ದೂರಿದರು.
ಸರಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಣೆ :
ಸುಮಾರು 1/3 ಭಾಗದಷ್ಟು ಮಕ್ಕಳು ಮುಖ್ಯವಾಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಹಿನ್ನೆಲೆಯುಳ್ಳವರಾಗಿದ್ದಾರೆ. ತಮ್ಮ ತರಗತಿಯ ಸರಳ ಕನ್ನಡ, ಗಣಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಕ್ರಿಯಾ ಯೋಜನೆಯನ್ನು ರೂಪಿಸಬೇಕು.
ಕಲ್ಯಾಣ ಕರ್ನಾಟಕದಲ್ಲಿ ಸಾವಿರಾರು ಶಿಕ್ಷಕರ ಹುದ್ದೆಗಳು ಖಾಲಿಯಿವೆ ಹಾಗೂ ತರಗತಿವಾರು, ವಿಷಯವಾರು ಶಿಕ್ಷಕರನ್ನು ಕೂಡಲೇ ನೇಮಿಸಬೇಕು ಹಾಗೂ ಪ್ರತಿ ಶಾಲೆಗೆ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಗೃಹ ಪಾಠ ಮಾಡುವವರನ್ನು ಸಹ ನೇಮಿಸಬೇಕು.
ಸರಕಾರಿ ಶಾಲೆಗಳಲ್ಲಿ ಕ್ಲಸ್ಟರ್ ವಿಧಾನವನ್ನು ಸುಧಾರಣೆಗೆ ಮಾದರಿಯಾಗಿ ಬಳಸಬೇಕು. ಪ್ರತಿ ಶಾಲೆಗೆ ಕನಿಷ್ಠ 1 ಅರಕಾಲಿಕ ಜವಾನ (ಪಿಒನ್) ನೀಡಬೇಕು. ಸರಕಾರಿ ಶಾಲೆಗಳಲ್ಲಿ ಭೌತಿಕ ಮತ್ತು- ಮಾನವ ಮೂಲಸೌಕರ್ಯವನ್ನು ಸುಧಾರಿಸಬೇಕು. ನಾವು ಈಗಾಗಲೇ 1947 ರಿಂದ ಕರ್ನಾಟಕದ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಅನೇಕ ತಲೆಮಾರುಗಳ ಜೀವನವನ್ನು ವ್ಯರ್ಥ ಮಾಡಿದ್ದೇವೆ. ಇದು ಈಗ ನಿಲ್ಲಬೇಕು. ಇದು ಲಕ್ಷಾಂತರ ಮಕ್ಕಳ ಜೀವನದ ಜೊತೆ ಸರಕಾರವು ಚೆಲ್ಲಾಟವಾಡುತ್ತಿದೆ ಎಂದು ಹೋರಾಟದ ಸಂಚಾಲಕಿ ವಿದ್ಯಾ ಪಾಟೀಲ ದೂರಿದರು.
ದೇವದಾಸಿಯರ ಮರು ಸಮೀಕ್ಷೆಯನ್ನು ತಕ್ಷಣ ಮಾಡಬೇಕು :
ಮಹಿಳೆಯರಿಗೆ ಪಿಂಚಣಿ ಮತ್ತು ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ನಿಯಮಿತವಾಗಿ ನೀಡಬೇಕು. ಕರ್ನಾಟಕ ಸರಕಾರವು ಈಗಾಗಲೇ ಬಜೆಟ್ನಲ್ಲಿ ಇದಕ್ಕಾಗಿ ಹಣವನ್ನು ಮೀಸಲಿಟ್ಟಿದೆ. ಆದರೆ ಕೆಎಸ್ಡಬ್ಲ್ಯುಡಿಸಿ ಮತ್ತು ಮಹಿಳಾ-ಮಕ್ಕಳ ಅಭಿವೃದ್ಧಿ ಇಲಾಖೆ ಕಳೆದ 9 ತಿಂಗಳಿಂದ ಈ ಕೆಲಸವನ್ನು ಕೈಗೆತ್ತಿಕೊಂಡಿಲ್ಲ. ಒಂಟಿ ಮಹಿಳೆಯರ ಪಿಂಚಣಿ ವಯೋಮಿತಿಯನ್ನು 21 ವರ್ಷಕ್ಕೆ ಇಳಿಸಬೇಕು, ಇದರಿಂದ ಗಂಡನಿಂದ ಪರಿತ್ಯಕ್ತರಾಗಿರುವ ಎಲ್ಲಾ ಮಹಿಳೆಯರು ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಮತ್ತು ತಮ್ಮ ಚಿಕ್ಕ ಮಕ್ಕಳನ್ನು ಬೆಳೆಸಲು ಸರಕಾರ ಬೆಂಬಲಿಸಿದಂತಾಗುತ್ತದೆ ಎಂದು ಹೋರಾಟದ ಸಂಚಾಲಕಿ ವಿರುಪಮ್ಮ ಆಗ್ರಹಿಸಿದರು.
ಗ್ರಾಮಗಳಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳ (ಆರ್ಒ ವಾಟರ್ ಪ್ಲಾಂಟ್ಗಳನ್ನು) ದುರಸ್ತಿ ಮಾಡಲು ಕೂಡಲೇ ಹಣ ಬಿಡುಗಡೆ ಮಾಡಬೇಕು.
ಸರಕಾರಿ ಆಸ್ಪತ್ರೆಗಳಲ್ಲಿ ಹೆಚ್ಚುತ್ತಿರುವ ತಾಯಿ ಮತ್ತು ಮಕ್ಕಳ ಸಾವಿನ ಬಗ್ಗೆ ಸರಕಾರಗಳ ನಿರಾಸಕ್ತಿ ವಹಿಸುತ್ತಿದೆ. ಈ ಬಗ್ಗೆ ಸರಕಾರದ ಕ್ರಿಯಾಶೀಲ ಕ್ರಮಗಳು ನಮಗೆ ಕಾಣುತ್ತಿಲ್ಲ. "ಮಹಿಳೆಯರಿಗೆ ಅಧಿಕಾರ” ಎಂಬ ಘೋಷಣೆಯೊಂದಿಗೆ ಅಧಿಕಾರಕ್ಕೆ ಬಂದ ಸರಕಾರರ ಈ ರೀತಿ ವರ್ತಿಸುತ್ತಿರುವುದು ನಾಚಿಕೆಗೇಡಿನ ಸಂಗತಿ.
ತಮಿಳುನಾಡಿನಂತೆ ಕರ್ನಾಟಕದಲ್ಲಿ ಪಾರದರ್ಶಕ ಔಷಧ ಖರೀದಿ ನೀತಿ ಏಕೆ ಸಾಧ್ಯವಿಲ್ಲ? ಇನ್ನೂ ಅನೇಕ ಲೋಪಗಳಿವೆ, ತಮಿಳು ಮಾದರಿಯಲ್ಲಿ ಚಿಕಿತ್ಸೆ ವ್ಯವಸ್ಥೆ ರೂಪಿಸಬೇಕು ಎಂದು ಹೋರಾಟಗಾರ್ತಿ ಸ್ವರ್ಣ ಭಟ್ ಒತ್ತಾಯಿಸಿದರು.
ಜನರು ರಾಯಚೂರಿನಲ್ಲಿ ಸುಮಾರು 1000 ದಿನಗಳಿಂದ ಏಮ್ಸ್ ಬೇಕೆಂದು ಹೋರಾಟ ನಡೆಸುತ್ತಿದ್ದಾರೆ. ರಾಜ್ಯ ಸರಕಾರ ಕೂಡಲೇ ಕೇಂದ್ರ ಸರಕಾರದ ಮೇಲೆ ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗಾಗಿ ಕ್ರಮ ಜರುಗಿಸಲು ಒತ್ತಾಯಿಸಬೇಕು.
ಸುಳ್ಳು ಆಶ್ವಾಸನೆಗಳನ್ನು ನೀಡದೆ, ಈ ವಿಷಯಗಳ ಬಗ್ಗೆ ನಿರ್ಧಿಷ್ಟ ಕ್ರಮ ಕೈಗೊಳ್ಳುವವರೆಗೆ ನಾವು ಸತ್ಯಾಗ್ರಹವನ್ನು ಹಿಂಪಡೆಯುವುದಿಲ್ಲ. ಈ ಹೋರಾಟಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಕಲ್ಯಾಣ ಕರ್ನಾಟಕದಲ್ಲಿರುವ ಪ್ರತಿಯೊಂದು ಜನ ಪ್ರತಿನಿಧಿಗಳು ತಕ್ಷಣ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯನ್ನು ಭೇಟಿ ಮಾಡಿ ಈ ಮೇಲಿನ ಬೇಡಿಕೆಗಳ ಮೇಲೆ ಕ್ರಮ ಜರುಗಿಸಲು ಒತ್ತಡ ಹಾಕಬೇಕು. ಕೇವಲ ಆಶ್ವಾಸನೆ ಕೊಡದೆ ಕನಿಷ್ಠ 3,000 ಕೋಟಿ ರೂ. ಪ್ರತಿ ವರ್ಷ ಬಜೆಟ್ ನಲ್ಲಿ ಕೊಡುವಂತೆ ಮಾಡಿದರೆ ಕಲ್ಯಾಣ ಕರ್ನಾಟಕ ಜಿಲ್ಲೆಗಳನ್ನು ಕರ್ನಾಟಕದ ಇತರ ಜಿಲ್ಲೆಗಳ ಮಟ್ಟಕ್ಕೆ ತರುವಂತೆ ಸಾಧ್ಯವಾಗುತ್ತದೆ ಎಂದು ಹೋರಾಟಗಾರರು ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಅವರು ಪ್ರತಿಭಟನಾ ಸ್ಥಳಕ್ಕೆ ಅಗಮಿಸಿ, ಮನವಿ ಸ್ವೀಕರಿಸಿ ಜಿಲ್ಲೆಯಲ್ಲಿ ಆರೋಗ್ಯ, ಶಿಕ್ಷಣ, ಬಾಣಂತಿಯರ ಸಾವು ತಡೆ, ಗುಳೆ ಸಮಸ್ಯೆಗೆ ಸರಕಾರ ಅನೇಕ ಕೆಲಸ ಮಾಡುತ್ತಿದೆ. ನಿಮ್ಮ ಬೇಡಿಕೆಗಳ ಈಡೇರಿಕೆಗೆ ಸರಕಾರದ ಗಮನಕ್ಕೆ ತಂದು ಹೆಚ್ಚಿನ ಅನುದಾನ ಹಾಗೂ ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತೇನೆ ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಹೋರಾಟಗಾರ್ತಿ ಮಾರೆಮ್ಮ, ರಾಧ, ಗುರುರಾಜ, ಕೃಷ್ಣ ಪ್ರಸಾದ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.