Raichur | ಗುಣಮಟ್ಟದ ಆರೋಗ್ಯ ಸೇವೆಯಲ್ಲಿ ಯಾವುದೇ ರಾಜಿ ಬೇಡ: ಡಾ.ರಜನಿ ಎಂ.
ರಾಯಚೂರು: ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುವಲ್ಲಿ ಯಾವುದೇ ರಾಜಿಯಾಗದಂತೆ ವೈದ್ಯರು ಹಾಗೂ ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕಿ ಡಾ. ರಜನಿ ಎಂ. ಸೂಚಿಸಿದರು.
ಭಾನುವಾರ ರಾಯಚೂರು ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ ವಿವಿಧ ವಿಭಾಗಗಳನ್ನು ಪರಿಶೀಲಿಸಿದ ಅವರು, ಹೆರಿಗೆ ಕೊಠಡಿ, ಹೆರಿಗೆ ವಾರ್ಡ್, ಔಷಧಿ ವಿಭಾಗ, ಪ್ರಯೋಗಾಲಯ ಸೇರಿದಂತೆ ಆಸ್ಪತ್ರೆಯ ವಿವಿಧ ಸೇವೆಗಳ ಬಗ್ಗೆ ಮಾಹಿತಿ ಪಡೆದರು.
ಆಸ್ಪತ್ರೆಗೆ ಆಗಮಿಸಿದ್ದ ಸಾರ್ವಜನಿಕರು ಹಾಗೂ ತಾಯಂದಿರೊಂದಿಗೆ ಮಾತನಾಡಿ, ಆಸ್ಪತ್ರೆಯಲ್ಲಿ ದೊರೆಯುತ್ತಿರುವ ಆರೋಗ್ಯ ಸೇವೆಗಳ ಕುರಿತು ಅಭಿಪ್ರಾಯ ಸಂಗ್ರಹಿಸಿದರು.
ತಾಯಿ ಮತ್ತು ಮಗುವಿನ ಆರೈಕೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಆಸ್ಪತ್ರೆಗೆ ಬರುವ ಪ್ರತಿಯೊಬ್ಬ ರೋಗಿಯೊಂದಿಗೆ ಸೌಜನ್ಯಯುತವಾಗಿ ನಡೆದುಕೊಂಡು ಗುಣಮಟ್ಟದ ಚಿಕಿತ್ಸೆ ನೀಡಬೇಕು. ಆಸ್ಪತ್ರೆಯ ಒಳ ಮತ್ತು ಹೊರ ಆವರಣವನ್ನು ಸದಾ ಸ್ವಚ್ಛವಾಗಿಟ್ಟುಕೊಳ್ಳುವಂತೆ ವೈದ್ಯರು ಹಾಗೂ ಸಿಬ್ಬಂದಿಗೆ ಸೂಚನೆ ನೀಡಿದರು.
ಇದೇ ವೇಳೆ ಜಿಲ್ಲಾ ಔಷಧಿ ಉಗ್ರಾಣಕ್ಕೂ ಭೇಟಿ ನೀಡಿ ಔಷಧಿಗಳ ಸಂಗ್ರಹಣೆ ಹಾಗೂ ಲಭ್ಯತೆ ಕುರಿತು ಪರಿಶೀಲನೆ ನಡೆಸಿದರು.
ನಂತರ ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದ ಸ್ಕಿಲ್ ಲ್ಯಾಬ್‌ಗೆ ಭೇಟಿ ನೀಡಿ, ಹೆರಿಗೆ ನಿರ್ವಹಣೆಗೆ ಸಂಬಂಧಿಸಿದ ತಾಂತ್ರಿಕ ಕೌಶಲ್ಯಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಇದಕ್ಕೂ ಮುನ್ನ ಗುಂಜಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೂ ಭೇಟಿ ನೀಡಿ ಅಲ್ಲಿನ ಆರೋಗ್ಯ ಸೇವೆಗಳ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಂದಿತಾ ಎಮ್.ಎನ್., ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಡಾ.ಸುರೇಂದ್ರ ಬಾಬು, ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ.ಗಣೇಶ್ ಕೆ., ಡಿಎಫ್‌ಡಬ್ಲ್ಯುಓ ಡಾ.ಶಿವಕುಮಾರ್ ನಾರಾ, ಡಿಟಿಓ ಡಾ.ಯಶೋಧಾ, ಕೆಸೆಪ್ಸ್ನ ಹಿರಿಯ ಫಾರ್ಮಸಿ ಅಧಿಕಾರಿ ವಿಜಯಲಕ್ಷ್ಮೀ, ತಾಲೂಕಾ ಆರೋಗ್ಯಾಧಿಕಾರಿ ಡಾ.ಸತೀಶ್ ಕೆ., ನಿರ್ದೇಶನಾಲಯದ ಕಚೇರಿ ಅಧಿಕ್ಷಕ ಪಿ.ಎಮ್. ರಮೇಶ್ ಸೇರಿದಂತೆ ಆಡಳಿತ ವೈದ್ಯಾಧಿಕಾರಿಗಳು, ತಜ್ಞ ವೈದ್ಯರು, ಸಿಬ್ಬಂದಿಯವರು ಉಪಸ್ಥಿತರಿದ್ದರು.