ರಾಯಚೂರು| ದಸರಾ ಹಬ್ಬದ ಪ್ರಯುಕ್ತ ಬಹುಭಾಷಾ ಕವಿಗೋಷ್ಠಿ
ರಾಯಚೂರು: ಕವಿಗಳು ಸದಾ ಆಡಳಿತವನ್ನು ಎಚ್ಚರಿಸುವ ಕೆಲಸ ಮಾಡಬೇಕು. ನಗರ ಸ್ವಚ್ಛತೆ ವಿಚಾರದಲ್ಲಿ ಜನಜಾಗೃತಿ ಮೂಡಿಸುವಂತ ಕವನಗಳನ್ನು ರಚಿಸುವಂತೆ ಮಹಾನಗರ ಪಾಲಿಕೆಯ ಆಯುಕ್ತ ಜುಬಿನ್ ಮೊಹಪಾತ್ರ ತಿಳಿಸಿದರು.
ನಗರದ ಮಕ್ಕಾ ದರವಾಜದಲ್ಲಿ ನಾಡ ಹಬ್ಬ ದಸರಾ ಪ್ರಯುಕ್ತ ಮಹಾನಗರ ಪಾಲಿಕೆಯಿಂದ ಆಯೋಜಿಸಿದ್ದ ಬಹುಭಾಷಾ ಕವಿಗೋಷ್ಠಿಯಲ್ಲಿ ಮಾತನಾಡಿದರು. ನೀವು ಕೊಡುವ ಕವಿತೆಗಳಿಗೆ ಉತ್ತಮ ರಾಗ ಸಂಯೋಜನೆ ಮಾಡಿಸಿ ಜಾಗೃತಿಗಾಗಿ ಬಳಸಿಕೊಳ್ಳುತ್ತೇವೆ ಎಂದರು.
ಹಿಂದಿನಿಂದಲೂ ಅನೇಕ ರಾಜ ಮನೆತನಗಳು, ಸಂಸ್ಥಾನಗಳು ಈ ರೀತಿ ಕಲಾಪೋಷಣೆ ಮಾಡಿಕೊಂಡು ಬಂದ ನಿದರ್ಶನಗಳಿವೆ. ರಾಯಚೂರು ಕೂಡ ತನ್ನದೇ ಇತಿಹಾಸವುಳ್ಳ ನಾಡಾಗಿದ್ದು, ಈ ಭಾಗವನ್ನು ಆಳ್ವಿಕೆ ಮಾಡಿದ ವಿಜಯನಗರ ಸಾಮ್ರಾಜ್ಯವು ಎಂಟು ಜನ ಕವಿಗಳನ್ನು ಪೋಷಣೆ ಮಾಡುತ್ತಿತ್ತು ಎಂದರು.
ಕಳೆದ ಬಾರಿ 1.5 ಕೋಟಿ ರೂ. ವೆಚ್ಚದಲ್ಲಿ ಕೋಟೆ ಪಕ್ಕದ ರಾಜಕಾಲುವೆ ಸ್ವಚ್ಛಗೊಳಿಸಲಾಗಿತ್ತು. ಈ ಒಂದು ಕೋಟಿ ರೂ. ವೆಚ್ಚದಲ್ಲಿ ನಗರದೊಳಗಿನ ಚರಂಡಿಗಳ ಸ್ವಚ್ಛತೆ ಕೈಗೊಂಡಿದ್ದೇವೆ. ಪ್ಲಾಸ್ಟಿಕ್ ಬಳಸದಂತೆ, ಸ್ವಚ್ಛತೆ ಕಾಪಾಡುವಂತೆ ಕವಿಗಳು ಜನರನ್ನು ಎಚ್ಚರಿಸುವ ಕೆಲಸ ಮಾಡಬೇಕಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ಆಂಜನೇಯ ಜಾಲಿಬೆಂಚಿ, ಕವಿಗಳು ಅಧ್ಯಯನಶೀಲರಾಗಬೇಕು. ಕಾವ್ಯದಲ್ಲಿ ವಿಷಯಗಳನ್ನು ನೇರವಾಗಿ ಹೇಳಬೇಕು. ಕಾವ್ಯದ ವಿಷಯ ವಸ್ತು ಪುನರಪಿಯಾಗದಂತೆ ನೋಡಿಕೊಳ್ಳಬೇಕು. ಹಾಗಾಗಬೇಕಾದರೆ ನೀವು ಹೆಚ್ಚು ಓದಬೇಕು ಎಂದರು.
ಕಸಾಪ ತಾಲೂಕು ಅಧ್ಯಕ್ಷ ಡಾ.ಬಿ.ವಿಜಯ ರಾಜೇಂದ್ರ ಮಾತನಾಡಿ, ಮುಂದಿನ ದಿನಗಳಲ್ಲಿ ಕವಿಗೋಷ್ಠಿಯನ್ನು ಜಿಲ್ಲಾ ಮಟ್ಟಕ್ಕೆ ವಿಸ್ತರಿಸಬೇಕು. ಇಲ್ಲಿ ವಾಚಿಸುವ ಕವನಗಳ ಸಂಕಲನ ರೂಪದಲ್ಲಿ ಪ್ರಕಟಿಸಬೇಕು. ಕವಿಗೋಷ್ಠಿಗೆ ಬರುವ ಕವಿಗಳಿಗೆ ಗೌರವ ಧನ ನೀಡುವಂತಾಗಬೇಕು ಎಂದು ಸಲಹೆ ನೀಡಿದರು.
ಆಶಯ ನುಡಿಗಳನ್ನಾಡಿದ ಸಾಹಿತಿ ಪಲಗುಲ ನಾಗರಾಜ, ಕವಿಗಳು ಆಡಳಿತವನ್ನು ಕಟುವಾಗಿ ಟೀಕಿಸಿ ಬರೆಯುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಸರ್ಕಾರದ ಕಾರ್ಯಕ್ರಮಗಳಿಗೆ ಜಾತಿ ಧರ್ಮದ ಲೇಪ ಮಾಡುವುದು ಸರಿಯಲ್ಲ. ಸರಕಾರಕ್ಕೆ ಎಲ್ಲರೂ ಒಂದೇ ಎಂಬ ಭಾವ ಇರಬೇಕು ಎಂದರು.
ಪತ್ರಕರ್ತ ಸಿದ್ಧಯ್ಯ ಸ್ವಾಮಿ ಮಾತನಾಡಿ, ಸಾಹಿತ್ಯ ಮತ್ತು ಮಾಧ್ಯಮಗಳ ನಡುವೆ ಅವಿನಾಭಾವ ನಂಟಿದೆ. ಕವಿಗಳು ಪತ್ರಿಕೆಗಳಲ್ಲಿ ಕಾವ್ಯ ಪ್ರಕಟಿಸುವುದರ ಜತೆಗೆ ಫೇಸಬುಕ್ ನಂತಹ ಸಾಮಾಜಿಕ ಜಾಲತಾಣಗಳ ಮೂಲಕವೂ ನಿಮ್ಮ ಕಾವ್ಯ ಪ್ರಸ್ತುತಪಡಿಸುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ಸಾಹಿತಿ ರಘುನಾಥ ರೆಡ್ಡಿ ಮನ್ಸಲಾಪುರ ಮಾತನಾಡಿ, ಕವಿಗಳು ಸಕಾಲಿಕ ಎನ್ನುವಂಥ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವಂಥ ಕಾವ್ಯಗಳನ್ನು ರಚಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ ಸಾಹಿತಿ ವೆಂಕಟರಾವ್ ಕುಲಕರ್ಣಿ ಎಲ್ಲ ಕವನಗಳ ವಿಮರ್ಶೆ ಮಾಡಿದರು. ಸಾಹಿತಿಯಾದವರು ಓದುವ ಪ್ರವೃತ್ತಿ ಬೆಳೆಸಿಕೊಳ್ಳದಿದ್ದರೆ ಉತ್ತಮ ಕಾವ್ಯ ರಚನೆ ಮಾಡಲು ಆಗುವುದಿಲ್ಲ. ಯಾರ ಮುಲಾಜಿಗೂ ಬೀಳದೆ ಸ್ವತಂತ್ರವಾಗಿ ಕಾವ್ಯ ರಚನೆ ಮಾಡಬೇಕು ಎಂದರು. ಪಾಲಿಕೆಯ ಉಪ ಆಯುಕ್ತ ಮುರಳೀಧರ, ಶಿಖಾ ಜುಬೀನ್ ಮೊಹಪಾತ್ರ ಸೇರಿದಂತೆ ಇತರರಿದ್ದರು. ಮುರಳೀಧರ ಕುಲಕರ್ಣಿ ನಿರೂಪಿಸಿದರು.