ರಾಯಚೂರು | ಮಹಿಳೆಯರ ದೂರು ಅರ್ಜಿಗಳಿಗೆ ಸ್ಪಂದಿಸಿ 15 ದಿನಗಳಲ್ಲಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ನಾಗಲಕ್ಷ್ಮಿ ಚೌಧರಿ ಸೂಚನೆ
ರಾಯಚೂರು, ಸೆ.19: ನಗರದ ಶ್ರೀ ಪಂಡಿತ ಸಿದ್ಧರಾಮ ಜಂಬಲದಿನ್ನಿ ಜಿಲ್ಲಾ ರಂಗಮಂದಿರದಲ್ಲಿ ಸೆ.19ರಂದು ನಡೆದ ಮಹಿಳಾ ಸಂವಾದ ಸಮಾರಂಭದಲ್ಲಿ ಬಂದ ದೂರು ಅರ್ಜಿಗಳಿಗೆ 15 ದಿನಗಳೊಳಗೆ ಸ್ಪಂದಿಸಿ ವರದಿ ಸಲ್ಲಿಸಲು ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಹೇಳಿದರು.
ನಂತರ ಹಳೆಯ ಜಿಲ್ಲಾಧಿಕಾರಿಗಳ ಆವರಣದಲ್ಲಿರುವ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸಂವಾದದಲ್ಲಿ ಸ್ವೀಕೃತವಾದ ದೂರುಗಳನ್ನು ಸಂಬಂಧಿತ ಇಲಾಖೆಯ ಆಯುಕ್ತರಿಗೆ ಕಳುಹಿಸಲಾಗುತ್ತದೆ. 15 ದಿನಗಳೊಳಗೆ ವರದಿ ಕಳುಹಿಸುವಂತೆ ಸೂಚಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಕುಬ್ಜ ಮಕ್ಕಳ ಸಂಖ್ಯೆ, ಅಪೌಷ್ಠಿಕತೆ ಹಾಗೂ ರಕ್ತಹೀನತೆಯ ಸಮಸ್ಯೆ ಹೆಚ್ಚಾಗಿದೆ ಎಂಬ ದೂರುಗಳು ಬಂದಿವೆ. ಕಾರ್ಖಾನೆ ನೀರು ನದಿಗೆ ಹರಿದು ಪರಿಸರ ಕಲುಷಿತವಾಗುತ್ತಿದೆ, ಯರಮರಸ್ ಸುತ್ತಮುತ್ತ ಪರಿಸರ ಮಾಲಿನ್ಯ ಹೆಚ್ಚುತ್ತಿದೆ ಎಂಬ ಅಹವಾಲುಗಳನ್ನೂ ಜನರು ನೀಡಿದ್ದಾರೆ. ಇಂತಹ ದೂರುಗಳಿಗೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಸ್ಪಂದಿಸಬೇಕು, ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.
ರಾಜ್ಯದ ಎಲ್ಲಾ ಕಚೇರಿಗಳ ಗೋಡೆಗಳ ಮೇಲೆ ಮಹಿಳಾ ಸಹಾಯವಾಣಿ ಸಂಖ್ಯೆಯನ್ನು ಬರೆಯುವಂತೆ ನೀಡಿರುವ ಸರ್ಕಾರಿ ಸುತ್ತೋಲೆ ಜಾರಿಯಲ್ಲಿದೆಯೇ ಎಂಬುದನ್ನು ಪರಿಶೀಲಿಸಲಾಗುವುದು. ಜೊತೆಗೆ ಎಲ್ಲ ಗ್ರಾಮಗಳಲ್ಲಿ ಮಹಿಳಾ ಗ್ರಾಮ ಸಭೆಗಳನ್ನು ಕಡ್ಡಾಯ ನಡೆಸುವಂತೆ ಮುಖ್ಯಮಂತ್ರಿ ಸೂಚಿಸಿರುವ ಬಗ್ಗೆ ರಾಯಚೂರು ಜಿಲ್ಲೆಯಲ್ಲಿ ಪಾಲನೆ ಆಗಿದೆಯೇ ಎಂಬುದನ್ನೂ ಪರಿಶೀಲಿಸಲಾಗುವುದು ಎಂದರು.
ಸಿಂಧನೂರ ಭೇಟಿ ವೇಳೆ ಕಂಡ ಆಘಾತಕಾರಿ ಸ್ಥಿತಿಯ ಬಗ್ಗೆ ಅವರು ಮಾತನಾಡಿ, ಅಲ್ಲಿ ಸಿಂದೋಲ ಅಲೆಮಾರಿ ಸಮುದಾಯ, ಮಾಜಿ ದೇವದಾಸಿ ಮಹಿಳೆಯರು ದುಸ್ಥಿತಿಯಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ನಿವೇಶನ ಹಾಗೂ ಮೂಲಸೌಕರ್ಯಗಳು ಸಮರ್ಪಕವಾಗಿ ದೊರಕಿಲ್ಲ. 600ಕ್ಕೂ ಹೆಚ್ಚು ಮಹಿಳೆಯರು ತೊಂದರೆ ಅನುಭವಿಸುತ್ತಿದ್ದಾರೆ. ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು ಎಂದು ಸೂಚನೆ ನೀಡಿದರು.
ವಿದ್ಯಾರ್ಥಿನಿಯರೊಂದಿಗೆ ನಡೆದ ಸಂವಾದದಲ್ಲಿ ಸಾರಿಗೆ ಬಸ್‌ಗಳ ಕೊರತೆ, ಹಾಸ್ಟೆಲ್‌ಗಳಲ್ಲಿ ದುರ್ಬಲ ವ್ಯವಸ್ಥೆ ಬಗ್ಗೆ ವಿದ್ಯಾರ್ಥಿನಿಯರು ದೂರು ನೀಡಿದ್ದಾರೆ. ಈ ಸಮಸ್ಯೆಗಳಿಗೆ ಕೆಎಸ್ಆರ್‌ಟಿಸಿ ಹಾಗೂ ಸಂಬಂಧಿಸಿದ ಇಲಾಖೆ ತಕ್ಷಣ ಸ್ಪಂದಿಸಬೇಕು ಎಂದು ನಿರ್ದೇಶಿಸಿದರು.
ಸಂವಾದಕ್ಕೆ ಹಾಜರಾದ ಅನೇಕ ಮಹಿಳೆಯರು ತಮ್ಮ ಸಂಕಷ್ಟವನ್ನು ಹೇಳುವಾಗ ಕಣ್ಣೀರು ಹಾಕಿದರು. ಅಂತಹ ವಿಧವೆಗಳು ಹಾಗೂ ಸೌಲಭ್ಯ ವಂಚಿತ ಹೆಣ್ಣುಮಕ್ಕಳಿಗೆ ಸರ್ಕಾರ ಹಾಗೂ ಅಧಿಕಾರಿಗಳು ಸ್ಪಂದಿಸಲೇಬೇಕು ಎಂದು ನಾಗಲಕ್ಷ್ಮಿ ಚೌಧರಿ ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಎಂ., ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮೊಹಪಾತ್ರ, ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ, ಸಹಾಯಕ ಆಯುಕ್ತ ಗಜಾನನ ಬಾಳೆ, ಮಹಿಳಾ ಒಕ್ಕೂಟದ ಜಿಲ್ಲಾಧ್ಯಕ್ಷೆ ಶ್ರೀದೇವಿ ಶ್ರೀನಿವಾಸ, ಈರಮ್ಮ, ಸಾಬಣ್ಣ ಗಟ್ಟುಬಿಚ್ಚಾಲಿ ಹಾಗೂ ಅನೇಕರು ಉಪಸ್ಥಿತರಿದ್ದರು.