Raichur | ‘ಜಾತಿವಾದಿಗಳಿಗೆ ಇಲ್ಲಿ ಪ್ರವೇಶವಿಲ್ಲ’ ಮಸ್ಕಿಯ 3ನೇ ವಾರ್ಡ್‌ನಲ್ಲಿ ವಿವಿಧ ಧರ್ಮದ ಯುವಕರಿಂದ ಗಣೇಶ ಪ್ರತಿಷ್ಠಾಪನೆ
ಸಾಮಾಜಿಕ ಸಾಮರಸ್ಯ, ಮಹಿಳಾ ಸುರಕ್ಷತೆ ಕುರಿತು ಜಾಗೃತಿ
ಮಸ್ಕಿ : ಜಾತಿ–ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ಭಿನ್ನಾಭಿಪ್ರಾಯಗಳು ಮೂಡುತ್ತಿರುವ ಇಂದಿನ ಸಂದರ್ಭದಲ್ಲಿ ವಿವಿಧ ಧರ್ಮಗಳ ಯುವಕರು ಒಗ್ಗೂಡಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಮೂಲಕ ಭಾವೈಕ್ಯತೆ ಹಾಗೂ ಸಾಮಾಜಿಕ ಸಾಮರಸ್ಯದ ಸಂದೇಶ ಸಾರಿರುವುದು ಪಟ್ಟಣದ ಜನರ ಗಮನ ಸೆಳೆದಿದೆ.
ಪಟ್ಟಣದ 3ನೇ ವಾರ್ಡ್‌ನಲ್ಲಿ ಗಜಕೇಸರಿ ಮಿತ್ರ ಮಂಡಳಿಯ ವತಿಯಿಂದ ವಿವಿಧ ಧರ್ಮಗಳಿಗೆ ಸೇರಿದ ಯುವಕರು ಒಗ್ಗೂಡಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ. ಗಣೇಶ ಮಂಟಪದ ಬಳಿ ಅಳವಡಿಸಿರುವ ‘ಜಾತಿವಾದಿಗಳಿಗೆ ಇಲ್ಲಿ ಪ್ರವೇಶವಿಲ್ಲ’ ಹಾಗೂ ‘ನಾವೆಲ್ಲ ಒಂದೇ’ ಎಂಬ ಸಂದೇಶ ಸಾರುವ ಬ್ಯಾನರ್ ಸಾರ್ವಜನಿಕರ ಗಮನ ಸೆಳೆಯುತ್ತಿದೆ.
ಇದರ ಜೊತೆಗೆ ‘ಹೆಣ್ಣಿನ ಕಣ್ಣೀರಲ್ಲ, ಅವಳ ನಗು ಬೇಕು; ಅತ್ಯಾಚಾರಕ್ಕೆ ಅಂತ್ಯ ಹಾಡಿ, ಸುರಕ್ಷಿತ ಸಮಾಜ ಕಟ್ಟೋಣ’ ಎಂಬ ಮಹಿಳಾ ಸುರಕ್ಷತೆ ಮತ್ತು ಗೌರವ ಕುರಿತ ಜಾಗೃತಿ ಸಂದೇಶವನ್ನೂ ಅಳವಡಿಸಲಾಗಿದೆ. ಧಾರ್ಮಿಕ ಆಚರಣೆಯ ಜೊತೆಗೆ ಸಾಮಾಜಿಕ ಜಾಗೃತಿಗೂ ಆದ್ಯತೆ ನೀಡಲಾಗಿದೆ.
ಜಾತಿ–ಧರ್ಮದ ವಿಚಾರದಲ್ಲಿ ಸಮಾಜದಲ್ಲಿ ವಿಭಜನೆಯ ವಾತಾವರಣ ನಿರ್ಮಾಣವಾಗುತ್ತಿರುವ ಸಂದರ್ಭದಲ್ಲಿ ವಿವಿಧ ಸಮುದಾಯಗಳ ಯುವಕರು ಒಂದಾಗಿ ಗಣೇಶೋತ್ಸವ ಆಚರಿಸುತ್ತಿರುವುದು ಸಹಬಾಳ್ವೆ, ಸ್ನೇಹ, ಸೌಹಾರ್ದತೆ ಹಾಗೂ ಭಾವೈಕ್ಯತೆಯ ಸಂದೇಶವನ್ನು ಸಾರುತ್ತಿದೆ.
ಗಣೇಶೋತ್ಸವವನ್ನು ಕೇವಲ ಧಾರ್ಮಿಕ ಕಾರ್ಯಕ್ರಮಕ್ಕೆ ಸೀಮಿತಗೊಳಿಸದೆ, ಪರಸ್ಪರ ಗೌರವ, ಸಹೋದರತ್ವ ಮತ್ತು ಸಮಾನತೆಯ ಮನೋಭಾವ ಬೆಳೆಸುವ ವೇದಿಕೆಯನ್ನಾಗಿ ಬಳಸಿಕೊಳ್ಳುವ ಪ್ರಯತ್ನಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಈ ಕುರಿತು 3ನೇ ವಾರ್ಡ್ ಪುರಸಭೆ ಸದಸ್ಯೆ ಭಾಗ್ಯಶ್ರೀ ಕೇಶವಮೂರ್ತಿ ದಾಸರ ಹಾಗೂ ಗಜಕೇಸರಿ ಮಿತ್ರ ಮಂಡಳಿಯ ಯುವಕರು ಎಲ್ಲರೂ ಜಾತಿ–ಧರ್ಮದ ಭೇದ ಮರೆತು ಶಾಂತಿ ಮತ್ತು ಸೌಹಾರ್ದತೆಯಿಂದ ಬದುಕುವ ಅಗತ್ಯವನ್ನು ಒತ್ತಿ ಹೇಳಿದರು.
ಕಾರ್ಯಕ್ರಮದಲ್ಲಿ ಸಂತೋಷ್ ಬಳಿಗಾರ್, ಯಮನೂರ್ ಗೌಡ, ಇಮಾಮ್ ಸಾಬ್ ಕಾತರ್ಕಿ, ರವಿಕುಮಾರ್, ಇಬ್ರಾಹಿಂ, ಸತ್ಯ, ನವೀನ್ ಕುಮಾರ್, ದಾವೂದ್, ಮೆಹಬೂಬ್ ಸಾಬ್, ಅಜ್ಮೀರ್ ಸೇರಿದಂತೆ ಅನೇಕ ಯುವಕರು ಉಪಸ್ಥಿತರಿದ್ದರು.