Raichur | 371(ಜೆ) ಕಲಂ ವ್ಯಾಪ್ತಿಗೆ ಬೇರೆ ಜಿಲ್ಲೆಗಳ ಸೇರ್ಪಡೆಗೆ ವಿರೋಧ : ಎ.ವಸಂತಕುಮಾರ್
ರಾಯಚೂರು: ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ದೀರ್ಘಕಾಲದ ಹೋರಾಟದ ಫಲವಾಗಿ 371(ಜೆ) ಕಲಂ ಜಾರಿಯಾಗಿದೆ. ಇದರ ವ್ಯಾಪ್ತಿಗೆ ಬೇರೆ ಜಿಲ್ಲೆಗಳನ್ನು ಸೇರ್ಪಡೆಗೊಳಿಸುವ ಪ್ರಯತ್ನವನ್ನು ಸಹಿಸುವುದಿಲ್ಲ. ಇತರ ಜಿಲ್ಲೆಗಳ ಸಮಸ್ಯೆಗಳನ್ನು ಪ್ರತ್ಯೇಕವಾಗಿ ಪರಿಹರಿಸಿಕೊಳ್ಳಲಿ ಎಂದು ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ್ ಹೇಳಿದರು.
ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 371(ಜೆ) ಕಲಂ ಜಾರಿಯ ಉದ್ದೇಶವೇ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಶೈಕ್ಷಣಿಕ, ಔದ್ಯೋಗಿಕ ಹಾಗೂ ಆರ್ಥಿಕ ಅಭಿವೃದ್ಧಿಯಾಗಿದೆ. ಈ ಭಾಗವು ಇತರ ಜಿಲ್ಲೆಗಳೊಂದಿಗೆ ಸರಿಸಮಾನವಾಗಿ ಅಭಿವೃದ್ಧಿ ಹೊಂದಬೇಕು, ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶಗಳು ದೊರೆಯಬೇಕು ಹಾಗೂ ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಸೂಕ್ತ ಅವಕಾಶಗಳು ಸಿಗಬೇಕು ಎಂಬ ಉದ್ದೇಶದಿಂದ ದೀರ್ಘಕಾಲ ಹೋರಾಟ ನಡೆಸಿ 371(ಜೆ) ಕಲಂನ ಸೌಲಭ್ಯಗಳನ್ನು ಪಡೆದುಕೊಳ್ಳಲಾಗಿದೆ ಎಂದರು.
371(ಜೆ) ಕಲಂನಿಂದ ಈ ಭಾಗದ ಜನರಿಗೆ ಹಾಗೂ ಯುವಕರಿಗೆ ಸಾಕಷ್ಟು ಅನುಕೂಲವಾಗಿದೆ. ಅಭಿವೃದ್ಧಿಯೂ ಸಾಗುತ್ತಿದೆ. ಇಂತಹ ಸಂದರ್ಭದಲ್ಲಿ ಬೇರೆ ಜಿಲ್ಲೆಗಳನ್ನು 371(ಜೆ) ಕಲಂ ವ್ಯಾಪ್ತಿಗೆ ಸೇರ್ಪಡೆಗೊಳಿಸಬೇಕು ಎಂಬ ಬೇಡಿಕೆಗಳು ಕೇಳಿಬಂದರೆ ಅದನ್ನು ಒಪ್ಪಲು ಸಾಧ್ಯವಿಲ್ಲ. ಆಯಾ ಜಿಲ್ಲೆಗಳ ಸಮಸ್ಯೆಗಳೇ ಬೇರೆ ಇದ್ದು, ಅವುಗಳನ್ನು ಪ್ರತ್ಯೇಕವಾಗಿ ಹೋರಾಟ ನಡೆಸುವ ಮೂಲಕ ಪರಿಹರಿಸಿಕೊಳ್ಳಬೇಕು. ತಮ್ಮ ಸಮಸ್ಯೆಗಳಿಗೆ ಪ್ರತ್ಯೇಕ ಅನುದಾನ ಹಾಗೂ ಪರಿಹಾರ ಒದಗಿಸುವಂತೆ ಸರ್ಕಾರದ ಗಮನ ಸೆಳೆಯಲಿ ಎಂದು ತಿಳಿಸಿದರು.
371(ಜೆ) ಕಲಂಗೆ ತಿದ್ದುಪಡಿ ಮಾಡುವ ಅಥವಾ ಅದರ ವ್ಯಾಪ್ತಿಗೆ ಬೇರೆ ಜಿಲ್ಲೆಗಳನ್ನು ಸೇರಿಸುವ ಯಾವುದೇ ಪ್ರಯತ್ನವನ್ನು ಸಹಿಸುವುದಿಲ್ಲ. ಈ ಭಾಗದ ಜನರ ಹಲವು ವರ್ಷಗಳ ಹೋರಾಟದ ಫಲವಾಗಿ ದೊರೆತ ಸೌಲಭ್ಯದಲ್ಲಿ ಬೇರೆಯವರಿಗೆ ಯಾವುದೇ ಪಾಲು ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಈ ಹಿಂದೆ ಕಡಿಮೆ ಪ್ರಮಾಣದಲ್ಲಿದ್ದ ಅನುದಾನವನ್ನು ಹಂತ ಹಂತವಾಗಿ ಹೆಚ್ಚಿಸಿ, ಪ್ರಸ್ತುತ 5,000 ಕೋಟಿ ರೂ. ಮೀಸಲಿಡಲಾಗಿದೆ. ಇದರಿಂದ ಈ ಭಾಗದ ಅಭಿವೃದ್ಧಿಗೆ ಹೆಚ್ಚಿನ ವೇಗ ದೊರೆಯುತ್ತಿದೆ. ಇದನ್ನು ಗಮನಿಸಿ ಇತರ ಜಿಲ್ಲೆಗಳಿಗೂ ಇಂತಹ ಸೌಲಭ್ಯಗಳು ಬೇಕೆಂಬ ಚಿಂತನೆ ಮೂಡಿದೆ ಎಂದರು.
ಇತರ ಜಿಲ್ಲೆಗಳ ಜನರು 371(ಜೆ) ಕಲಂ ಅಡಿಯಲ್ಲಿ ಸೌಲಭ್ಯಗಳನ್ನು ಪಡೆಯಲು ಅರ್ಹರಲ್ಲ. ಅವರ ಸಮಸ್ಯೆಗಳಿಗೆ ಪ್ರತ್ಯೇಕ ಯೋಜನೆ, ಅನುದಾನ ಹಾಗೂ ಪರಿಹಾರ ರೂಪಿಸುವಂತೆ ಸರ್ಕಾರವನ್ನು ಒತ್ತಾಯಿಸಬೇಕು. 371(ಜೆ) ಕಲಂ ವ್ಯಾಪ್ತಿಗೆ ತಮ್ಮ ಜಿಲ್ಲೆಗಳನ್ನೂ ಸೇರಿಸಬೇಕೆಂಬ ಬೇಡಿಕೆಯನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ. ಅಗತ್ಯಬಿದ್ದರೆ ಇದರ ವಿರುದ್ಧ ಪ್ರತಿಭಟನೆಗೂ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.