ರಿಪೋರ್ಟರ್ಸ್ ಗಿಲ್ಡ್ ಬೆಳ್ಳಿ ಮಹೋತ್ಸವ: ನವೀಕೃತ ಎಸಿ ಪ್ರೆಸ್ ಕಾನ್ಫರೆನ್ಸ್ ಹಾಲ್ ಉದ್ಘಾಟನೆ
ರಾಯಚೂರು: ರಾಯಚೂರು ರಿಪೋರ್ಟರ್ಸ್ ಗಿಲ್ಡ್ನ 25ನೇ ವರ್ಷದ ಬೆಳ್ಳಿ ಮಹೋತ್ಸವದ ಅಂಗವಾಗಿ ನವೀಕರಣಗೊಳಿಸಲಾದ ಎಸಿ ಪ್ರೆಸ್ ಕಾನ್ಫರೆನ್ಸ್ ಹಾಲ್ ಅನ್ನು ವಿಧಾನ ಪರಿಷತ್ ಸದಸ್ಯ ಎ. ವಸಂತಕುಮಾರ ಅವರು ಉದ್ಘಾಟಿಸಿದರು.
ಸುಮಾರು 20 ಲಕ್ಷ ರೂ.ವೆಚ್ಚದಲ್ಲಿ ಹಾಲ್ನ ನವೀಕರಣ ಕಾಮಗಾರಿ ಕೈಗೊಳ್ಳಲಾಗಿದ್ದು, ನವೀಕೃತ ಸಭಾಂಗಣಕ್ಕೆ ಕಾರ್ಯಕ್ರಮದಲ್ಲಿ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ನಂತರ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎ. ವಸಂತಕುಮಾರ ಅವರು, ಪತ್ರಕರ್ತರ ಸಭಾಂಗಣವನ್ನು ಸುಸಜ್ಜಿತಗೊಳಿಸುವುದು, ಉತ್ತಮ ಪೀಠೋಪಕರಣಗಳು ಹಾಗೂ ಆಸನ ವ್ಯವಸ್ಥೆ ಕಲ್ಪಿಸುವುದು ಹಲವು ವರ್ಷಗಳ ಬೇಡಿಕೆಯಾಗಿತ್ತು. ಈ ಕುರಿತು ಪತ್ರಕರ್ತರು ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ, ಮೈಸೂರು ಮತ್ತು ಶಿವಮೊಗ್ಗದ ಪತ್ರಕರ್ತರ ಸಭಾಂಗಣಗಳನ್ನು ವೀಕ್ಷಿಸಿ, ಅದೇ ಮಾದರಿಯಲ್ಲಿ ರಾಯಚೂರಿನಲ್ಲಿಯೂ ಉತ್ತಮ ಸೌಲಭ್ಯಗಳನ್ನು ಕಲ್ಪಿಸುವ ಭರವಸೆ ನೀಡಿದ್ದೆ ಎಂದರು.
ಪತ್ರಕರ್ತರಿಗೆ ಮಾತ್ರವಲ್ಲದೆ, ಪತ್ರಿಕಾಗೋಷ್ಠಿ ನಡೆಸುವ ರಾಜಕೀಯ ಮುಖಂಡರು, ರಾಜಕೀಯ ಪಕ್ಷಗಳು, ಸಂಘಟನೆಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳಿಗೂ ಅನುಕೂಲವಾಗುವ ರೀತಿಯಲ್ಲಿ ಸಭಾಂಗಣ ನಿರ್ಮಿಸುವ ಅಗತ್ಯವಿದೆ ಎಂಬುದನ್ನು ಮನಗಂಡು, ಎರಡು ಹಂತಗಳಲ್ಲಿ ಅನುದಾನ ಬಿಡುಗಡೆ ಮಾಡಲಾಗಿದೆ. ಇದೀಗ ಉತ್ತಮ ಹಾಗೂ ಸುಸಜ್ಜಿತ ಸಭಾಂಗಣ ಸಿದ್ಧಗೊಂಡಿದೆ ಎಂದು ತಿಳಿಸಿದರು.
ಸಭಾಂಗಣದ ವಾತಾವರಣ ಉತ್ತಮವಾಗಿದ್ದು, ಉಲ್ಲಾಸ ಹಾಗೂ ಉತ್ಸಾಹ ಮೂಡಿಸುವಂತಿರಬೇಕು. ಇಂತಹ ವ್ಯವಸ್ಥೆ ಪತ್ರಿಕಾಗೋಷ್ಠಿ ನಡೆಸುವವರ ಮೇಲೆಯೂ, ವರದಿ ಮಾಡುವ ಪತ್ರಕರ್ತರ ಮೇಲೆಯೂ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಉತ್ತಮ ವಾತಾವರಣದಲ್ಲಿ ಕುಳಿತು ಸಹನೆಯಿಂದ, ಸೃಜನಶೀಲ ಮನಸ್ಸಿನಿಂದ ಚಿಂತನೆ ನಡೆಸಿ ವರದಿ ಮಾಡಲು ಅನುಕೂಲವಾಗಬೇಕು. ಸಭಾಂಗಣಕ್ಕೆ ಬಂದಾಗ ಬೇಗ ಹೊರಹೋಗಬೇಕು ಎನ್ನುವ ಭಾವನೆ ಮೂಡದೆ, ಪತ್ರಕರ್ತರಿಗೆ ಅನುಕೂಲಕರ ವ್ಯವಸ್ಥೆ ಇರಬೇಕು ಎಂದು ಹೇಳಿದರು.
25 ವರ್ಷದ ಹಿಂದೆ ನಿರ್ಮಾಣವಾಗಿ ಉದ್ಘಾಟನೆಗೊಂಡಿದ್ದ ಪತ್ರಿಕಾ ಭವನದ ಹಾಲ್, ಆಧುನೀಕರಣ ಆಗಿರಲಿಲ್ಲ. ಇದೀಗ ವಸಂತಕುಮಾರ ಅವರು. ಈ ಪತ್ರಿಕಾ ಭವನವನ್ನು ನವೀರಕರಣಗೊಳಿಸಲು ಮುಂದೆ ಬಂದು. ಸುಸಜ್ಜಿತವಾದ ಹಾಲ್ ನಿರ್ಮಾಣ ಮಾಡಲು ನೆರವಾಗಿದ್ದಾರೆ. ಪತ್ರಿಕಾ ಭವನದ ಕಾನ್ಫರೆನ್ಸ್ ಹಾಲ್ ಪತ್ರಕರ್ತರಿಗೆ, ಪತ್ರಿಕಾ ಗೋಷ್ಠಿ ನಡೆಸಲು ಆಗಮಿಸುವವರಿಗೂ ಅನುಕೂಲವಾಗಬೇಕು ಎಂದರು.
ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರಾದ ಎ.ವಸಂತಕುಮಾರ್ , ಮಾಹಿತಿ ಆಯೋಗ ಕಲುಬುರಗಿ ಪೀಠದ ಆಯುಕ್ತ ಬಿ.ವೆಂಕಟಸಿಂಗ್ , ಕೆ.ಪಿ.ಸಿ.ಸಿ ಮಾಧ್ಯಮ ವಕ್ತಾರ ರಜಾಕ್ ಉಸ್ತಾದ್ , ಬಸವರಾಜ್ ದರೂರು, ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಆರ್.ಗುರುನಾಥ , ಕಾರ್ಯದರ್ಶಿ ವೆಂಕಟೇಶ್ ಹೂಗಾರ್ , ಅಂಬಣ್ಣ ಆರೋಲಿ, ಹಿರಿಯ ಪತ್ರಕರ್ತರು, ಗಿಲ್ಡ್ನ ಪದಾಧಿಕಾರಿಗಳು ಹಾಗೂ ವಿವಿಧ ಮಾಧ್ಯಮಗಳ ಪತ್ರಕರ್ತರು ಉಪಸ್ಥಿತರಿದ್ದರು.