ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆಗೆ ಶಾಸಕ ಮಾನಪ್ಪ ವಜ್ಜಲ್ ಅಡ್ಡಿ: ಡಿ.ಎಸ್.ಹೂಲಗೇರಿ ಆರೋಪ
ಲಿಂಗಸುಗೂರು: ಸುಮಾರು 35 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಉದ್ಘಾಟನೆ ಮುಂದೂಡಿಕೆಯಾಗಲು ಶಾಸಕ ಮಾನಪ್ಪ ವಜ್ಜಲ್ ಅವರೇ ಕಾರಣ ಎಂದು ಮಾಜಿ ಶಾಸಕ ಡಿ.ಎಸ್. ಹೂಲಗೇರಿ ಆರೋಪಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವಂಬರ್ 29ರಂದು ಸಚಿವರು ಆಸ್ಪತ್ರೆ ಉದ್ಘಾಟನೆಗೆ ನಿಗದಿಯಾಗಿತ್ತು. ಆದರೆ, ಸಚಿವರು ಉದ್ಘಾಟನೆಗೆ ಆಗಮಿಸಿದರೆ ಗಲಾಟೆ ನಡೆಯುವ ಸಾಧ್ಯತೆಯಿದೆ ಎಂದು ಪೊಲೀಸ್ ಗುಪ್ತಚರ ಇಲಾಖೆ ಸುಳ್ಳು ವರದಿ ನೀಡಿದ ಹಿನ್ನೆಲೆಯಲ್ಲಿ ಉದ್ಘಾಟನಾ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದರು.
ಜನರ ಬಹುದಿನಗಳ ಬೇಡಿಕೆಯಾಗಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣಗೊಂಡಿದ್ದರೂ ಉದ್ಘಾಟನೆ ವಿಳಂಬವಾಗುತ್ತಿರುವುದು ಸಾರ್ವಜನಿಕರಿಗೆ ಅನಾನುಕೂಲ ಉಂಟುಮಾಡಿದೆ. ಆಸ್ಪತ್ರೆ ಸಿದ್ಧಗೊಂಡಿರುವಾಗ ರಾಜಕೀಯ ಕಾರಣಗಳಿಂದ ಉದ್ಘಾಟನೆಗೆ ಅಡ್ಡಿಯಾಗುತ್ತಿರುವುದು ಸರಿಯಲ್ಲ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ, ಎಪಿಎಂಸಿ ಅಧ್ಯಕ್ಷ ಅಮರೇಶ ಹಿರೇಹೆಸರೂರು, ಮೊಹಮ್ಮದ್ ರಫಿ , ಮುದುಕಪ್ಪ ವಕೀಲ್, ಸಂಜೀವಪ್ಪ ಚ್ಚಲುವಾದಿ, ಉಮೇಶ್ ಐಳೋಯರ್, ವಿಶ್ವಕ್ರಾಂತಿ, ಗದ್ದೆನಗೌಡ ಸೇರಿ ಇತರರು ಇದ್ದರು.