ರಾಯಚೂರು | ಅಲ್ಲಮಪ್ರಭು ಶಾಲೆಗೆ ಮೂಲ ಸೌಕರ್ಯ ಒದಗಿಸಲು ಎಸ್ ಡಿಟಿಯು ಮನವಿ
ರಾಯಚೂರು: ರಾಯಚೂರಿನ ಕೊಳೆಗೇರಿ ಬಡಾವಣೆಯ ಎಲ್ ಬಿಎಸ್ ನಗರದ ಅಲ್ಲಮಪ್ರಭು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ದುರಸ್ತಿಗೊಳಿಸಬೇಕು ಹಾಗೂ ಮೂಲಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ನಗರದ ವಾರ್ಡ್ ನಂಬರ್ 29ರ ಅಲ್ಲಮಪ್ರಭು ಕಾಲೋನಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು ಖಾಸಗಿ ಕಂಪೆನಿಯಿಂದ ಆರ್ ಒ ಫಿಲ್ಟರ್ ವಾಟರ್ ನೀಡಿದರೂ ಶಾಲೆಯಲ್ಲಿ ಅಳವಡಿಸಿಲ್ಲ. ಸ್ಮಾರ್ಟ್ ಕ್ಲಾಸ್ ಗಾಗಿ 10 ಗಣಕಯಂತ್ರ ನೀಡಿದರೂ ಇದುವರೆಗೆ ಉಪಯೋಗಿಸಿಲ್ಲ. ಶಾಲೆಯ ಮೈದಾನದಲ್ಲಿ ಮಳೆ ನೀರು ಸಂಗ್ರಹ ವಾಗಿದ್ದು ಮಕ್ಕಳಿಗೆ ಪ್ರಾರ್ಥನೆ ಮಾಡಲು ಹಾಗೂ ಆಟ ವಾಡಲು ಆಗುತ್ತಿಲ್ಲ. ಈ ಬಗ್ಗೆ ಮುಖ್ಯ ಶಿಕ್ಷಕರು ಎಸ್ ಡಿಎಂಸಿ ಅಧ್ಯಕ್ಷರು ಕಾಳಜಿ ವಹಿಸದೆ ನಿರ್ಲಕ್ಷ್ಯ ವಹಿಸಿದ್ದು ಕೂಡಲೇ ಮೂಲಸೌಕರ್ಯ ಒದಗಿಸಬೇಕು ಎಂದು ಮನವಿ ಮಾಡಲಾಗಿದೆ.
ಈ ವೇಳೆ ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ರಾಜ್ಯ ಮುಖಂಡ ಮಹಮ್ಮದ್ ಶಫಿ ಮತ್ತಿತರರು ಉಪಸ್ಥಿತರಿದ್ದರು.