ರಾಜ್ಯೋತ್ಸವ ಪ್ರಶಸ್ತಿಗೆ ರಾಯಚೂರು ಜಿಲ್ಲೆಯ ಸಾಹಿತಿ ವೀರಹನುಮಾನ, ಹಗಲುವೇಷ ಕಲಾವಿದ ಈರಣ್ಣ ರುದ್ರಾಕ್ಷಿ ಆಯ್ಕೆ
ವೀರಹನುಮಾನ, ಈರಣ್ಣ ರುದ್ರಾಕ್ಷಿ
ರಾಯಚೂರು : ರಾಜ್ಯ ಸರ್ಕಾರ 2026ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರ ಪಟ್ಟಿಯಲ್ಲಿ ರಾಯಚೂರು ಜಿಲ್ಲೆಯ ಹಿರಿಯ ಸಾಹಿತಿ ವೀರಹನುಮಾನ ಹಾಗೂ ಜಾನಪದ ಕ್ಷೇತ್ರದ ಹಗಲುವೇಷ ಕಲಾವಿದ ಈರಣ್ಣ ರುದ್ರಾಕ್ಷಿ ಸ್ಥಾನ ಪಡೆದಿದ್ದಾರೆ.
ಹಿರಿಯ ಹಾಗೂ ಅನುಭವಿ ಸಾಧಕರನ್ನು ಗುರುತಿಸಿ ಗೌರವಿಸಿರುವುದು ಜಿಲ್ಲೆಯ ಜನರಲ್ಲಿ ಸಂತಸ ಮೂಡಿಸಿದೆ.
ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗಾಗಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವ ವೀರಹನುಮಾನ ಅವರು ಸಾಹಿತ್ಯದ ಜೊತೆಗೆ ಕಲೆ, ಚಿತ್ರಕಲೆ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿಯೂ ಗುರುತಿಸಿಕೊಂಡಿದ್ದಾರೆ. ಶಿಕ್ಷಣ ಇಲಾಖೆಯ ರಾಯಚೂರು ಡಯಟ್ ಸಂಸ್ಥೆಯ ಅಧೀಕ್ಷಕರಾಗಿ, ಸಾಕ್ಷರತಾ ಆಂದೋಲನದ ಲೇಖಕರಾಗಿ, ತರಬೇತುದಾರರಾಗಿ, ಸಂಯೋಜಕರಾಗಿ, ಉಪನ್ಯಾಸಕರಾಗಿ ಹಾಗೂ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. 2015ರಲ್ಲಿ ಸೇವೆಯಿಂದ ನಿವೃತ್ತರಾಗಿದ್ದಾರೆ.
ಸಾಹಿತಿ ವೀರಹನುಮಾನ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ :
ರಾಯಚೂರು ಮೂಲದ ವೀರಹನುಮಾನ ಅವರು 1955ರಲ್ಲಿ ಜನಿಸಿದ್ದು, ಬಿ.ಎ. ಮತ್ತು ಕಾನೂನು ಪದವಿ ಪಡೆದಿದ್ದಾರೆ. ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಮನೆತನದ ವೃತ್ತಿಯಾದ ಕಟ್ಟಡ ನಿರ್ಮಾಣ ಹಾಗೂ ವಾಸ್ತುಶಿಲ್ಪದಲ್ಲಿ ಪರಿಣತಿ ಹೊಂದಿರುವ ಅವರು, ಅನೇಕ ಕಟ್ಟಡಗಳ ನಕಾಶೆ ರಚನೆ ಮತ್ತು ಪರಿವೀಕ್ಷಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಕಳೆದ 35 ವರ್ಷಗಳಿಂದ ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಒಡನಾಟ ಹೊಂದಿರುವ ಅವರು, ಎಸ್ಎಫ್ಐ, ಡಿವೈಎಫ್ಐ ಹಾಗೂ ಸಮುದಾಯ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು. ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮದೇ ಆದ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ರಾಯಚೂರಿನ ಐತಿಹಾಸಿಕ ಕೋಟೆಗಳ ಸಂರಕ್ಷಣೆ ಮತ್ತು ಅಧ್ಯಯನ ಸಮಿತಿಯ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಒಟ್ಟು 23 ಕೃತಿಗಳನ್ನು ರಚಿಸಿರುವ ಅವರು, 11 ಸಂಪಾದಿತ ಕೃತಿಗಳನ್ನು ಹೊರತಂದಿದ್ದಾರೆ. ಎಂಟು ಕಥೆಗಳನ್ನೂ ಬರೆದಿದ್ದಾರೆ.
ಹಗಲುವೇಷ ಕಲಾವಿದನಿಗೆ ಸಂದ ಗೌರವ :
ಜಿಲ್ಲೆಯ ದೇವದುರ್ಗ ತಾಲೂಕಿನ ಜಾನಪದ ಕಲಾವಿದ ಈರಣ್ಣ ರುದ್ರಾಕ್ಷಿ ಅವರಿಗೆ ಹಗಲುವೇಷ ಕಲಾ ಕ್ಷೇತ್ರದಲ್ಲಿನ ಸಾಧನೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ನಿರಂತರ 50 ವರ್ಷಗಳ ಕಲಾಸೇವೆಗೆ ಸಂದ ಗೌರವ ಇದಾಗಿದೆ.
66 ವರ್ಷದ ಈರಣ್ಣ ರುದ್ರಾಕ್ಷಿ ಅವರು ಕೇವಲ ಐದನೇ ತರಗತಿವರೆಗೆ ಶಿಕ್ಷಣ ಪಡೆದಿದ್ದರೂ ಕಲೆಯಲ್ಲಿ ಅಸಾಧಾರಣ ಸಾಧನೆ ಮಾಡಿದ್ದಾರೆ. ಅಲೆಮಾರಿ ಸಮುದಾಯಕ್ಕೆ ಸೇರಿದ ಇವರು ಸಾಂಪ್ರದಾಯಿಕ ಹಗಲುವೇಷ ಹಾಗೂ ಜಾನಪದ ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಳ್ಳಿಗಳು ಮತ್ತು ಪಟ್ಟಣಗಳ ಹೊರವಲಯದಲ್ಲಿ ಬಟ್ಟೆ ಹಾಗೂ ಗುಡಾರಗಳನ್ನು ಹಾಕಿಕೊಂಡು ವಾಸಿಸುತ್ತಾ, ಕಲೆಯನ್ನೇ ಉಸಿರಾಗಿಸಿಕೊಂಡು ಜೀವನ ನಡೆಸುತ್ತಿದ್ದಾರೆ.
ಹಗಲುವೇಷವು ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಜನಪ್ರಿಯವಾಗಿರುವ ಸಾಂಪ್ರದಾಯಿಕ ಜನಪದ ಕಲಾಪ್ರಕಾರವಾಗಿದೆ. ಪೌರಾಣಿಕ, ಐತಿಹಾಸಿಕ ಹಾಗೂ ಸಾಮಾಜಿಕ ಕಥಾವಸ್ತುಗಳನ್ನು ವೇಷಭೂಷಣ, ಅಭಿನಯ ಮತ್ತು ಸಂಭಾಷಣೆಗಳ ಮೂಲಕ ಜನರಿಗೆ ತಲುಪಿಸುವುದು ಈ ಕಲೆಯ ವಿಶೇಷತೆ. ಗ್ರಾಮೀಣ ಪ್ರದೇಶಗಳಲ್ಲಿ ಜನಜಾಗೃತಿ ಮೂಡಿಸುವುದರ ಜೊತೆಗೆ ಮನರಂಜನೆಯ ಮಾಧ್ಯಮವಾಗಿಯೂ ಹಗಲುವೇಷ ಕಲೆ ಗುರುತಿಸಿಕೊಂಡಿದೆ.