ಸಿಂಧನೂರು: ಸರ್ಕಾರ ದಲಿತರ ಪರವಾಗಿದೆ. ತಿಡಿಗೋಳದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ. ಅಮಾಯಕರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಸುಳ್ಳು ಪ್ರಕರಣಗಳನ್ನು ವಾಪಸ್ ಪಡೆದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಅಜಯ್ ಸಿಂಗ್ ಹೇಳಿದರು.

ನಗರದ ಗಾಂಧಿ ವೃತ್ತದಲ್ಲಿ ಶುಕ್ರವಾರ ತಿಡಿಗೋಳದಲ್ಲಿ ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಮನವಿ ಸ್ವೀಕರಿಸಿ ಅವರು ಮಾತನಾಡಿದರು.

ಸರ್ಕಾರ ದಲಿತರ ಪರವಾಗಿ ಕೆಲಸ ಮಾಡುತ್ತಿದೆ. ರಾಜ್ಯದ ದಲಿತರ ಸಹಕಾರದಿಂದ 137 ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸಿದ್ದೇವೆ. ತಿಡಿಗೋಳ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರು ಜನರನ್ನು ಬಂಧಿಸಲಾಗಿದೆ. ಯಾರೇ ತಪ್ಪು ಮಾಡಿದರೂ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ. ತಪ್ಪಿತಸ್ಥರನ್ನು ರಕ್ಷಿಸುವ ಕೆಲಸ ಮಾಡುವುದಿಲ್ಲ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಎಲ್ಲಿಯೂ ಬಹಿಷ್ಕಾರ ಹಾಗೂ ಅಸ್ಪೃಶ್ಯತೆಗೆ ಅವಕಾಶ ನೀಡುವುದಿಲ್ಲ. ತಿಡಿಗೋಳ ಗ್ರಾಮಕ್ಕೆ ಭೇಟಿ ನೀಡಿ ವರದಿ ನೀಡುವಂತೆ ಈಗಾಗಲೇ ಸಹಾಯಕ ಆಯುಕ್ತರು ಹಾಗೂ ತಹಸೀಲ್ದಾರರಿಗೆ ಸೂಚಿಸಿದ್ದೇನೆ. ನವೆಂಬರ್ 2ರಂದು ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಖುದ್ದಾಗಿ ಗ್ರಾಮಕ್ಕೆ ಭೇಟಿ ನೀಡಿ, ಅಲ್ಲಿನ ಸ್ಥಿತಿಗತಿಗಳನ್ನು ಆಲಿಸುತ್ತೇನೆ. ಗ್ರಾಮಸ್ಥರ ಎಲ್ಲ ಬೇಡಿಕೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಬಳಿಕ ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಚಿವ ಅಜಯ್ ಸಿಂಗ್ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ಮತ್ತು ತಿಡಿಗೋಳ ಗ್ರಾಮದ ನಿವಾಸಿಗಳು ಉಪಸ್ಥಿತರಿದ್ದರು.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor