ರಾಯಚೂರು | ಮಹಿಳೆಯ ಹತ್ಯೆ ಪ್ರಕರಣ; ಮೂವರು ಆರೋಪಿಗಳ ಬಂಧನ
ರಾಯಚೂರು : ತಾಲೂಕಿನ ಮಾಲನಕುಂಟಾ ಹಳ್ಳದಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಆರೋಪಿಗಳನ್ನು ಪೋಲಿಸರು ಶುಕ್ರವಾರ ಬಂಧಿಸಿದ್ದಾರೆ.
ಅಂತಂಪಲ್ಲಿ ರಾಮಚಂದ್ರ (21), ವಡವಟ್ಟಿ ತಿಮ್ಮಪ್ಪ (35), ಅಂತಂಪಲ್ಲಿ ಬೊಮ್ಮಗಿರಿ ಚಿಟ್ಟಿಬಾಬು (26) ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ.
ತಾಲ್ಲೂಕಿನ ಯಾಪಲದಿನ್ನಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೆಲದಿನಗಳ ಹಿಂದೆ ತೆಲಂಗಾಣ ಜಿಲ್ಲೆಯ ಗದ್ವಾಲ್ ತಾಲೂಕಿನ ಐಜ ಗ್ರಾಮದ ರೋಗೆಮ್ಮ ಎಂಬ ಮಹಿಳೆಯ ಕೊಲೆ ಮಾಡಲಾಗಿತ್ತು.
ಆರೋಪಿಗಳು ಕಟ್ಟರ್ ಬ್ಲೇಡಿನಿಂದ ಆಕೆಯ ಕತ್ತನ್ನು ಕೊಯ್ದು ಕೊಲೆ ಮಾಡಿ ಆಕೆಯ ಮೈಮೇಲಿದ್ದ ಡಾಬು, ಕಡಗಗಳು, ಕಾಲುಚೈನು ಮತ್ತು ಜನಿವಾರ ಹೀಗೆ ಸುಮಾರು 60 ತೊಲೆ ಬೆಳ್ಳಿಯ ಆಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ನೇತೃತ್ವದಲ್ಲಿ ಗ್ರಾಮೀಣ ಠಾಣೆಯ ಸಿಪಿಐ ಸಾಬಯ್ಯ ನಾಯಕ, ಪಿಎಸ್ಐ ಹುಲಿಗೇಶ, ಪೇದೆಗಳಾದ ಮಹಿಬೂಬ್, ಮಲ್ಲೇಶ, ಮುನಿಸ್ವಾಮಿ, ಭಾಸ್ಕರ, ವಿರುಪಾಕ್ಷಯ್ಯ, ಸುದರ್ಶನ, ಆನಂದ, ಶಿವಪ್ಪ, ಅಮರೇಶ, ತಾಯಪ್ಪ, ವೆಂಕಟೇಶ, ಅಮರನಾಥ, ಯಮುನಪ್ಪ, ಅಜೀಮ್ ಒಳಗೊಂಡ ವಿಶೇಷ ತಂಡ ರಚಿಸಿ ರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿತರಿಂದ ಸುಮಾರು 48 ಸಾವಿರ ರೂ. ಬೆಲೆ ಬಾಳುವ ಬೆಳ್ಳಿ ಆಭರಣ ಹಾಗೂ ಮೃತಳಿಗೆ ಸಂಬಂಧಿಸಿದ ವಸ್ತುಗಳನ್ನು ಜಪ್ತು ಮಾಡಿಕೊಳ್ಳಲಾಗಿದೆ. ಬಂಧಿತ ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ತಿಳಿಸಿದರು.