Sindhanur | ಥಾರ್ ವಾಹನ ಹರಿದು ವಿದ್ಯಾರ್ಥಿನಿ ಮೃತ್ಯು
ಸಿಂಧನೂರು : ನಗರದ ಗಂಗಾವತಿ ರಸ್ತೆಯ ಪ್ರವಾಸಿ ಮಂದಿರದ ಸಮೀಪ ಶುಕ್ರವಾರ ಸಂಜೆ ಕಾಲೇಜು ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಯರ ಮೇಲೆ ಥಾರ್ ವಾಹನ ಹರಿದ ಪರಿಣಾಮ ಓರ್ವ ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಭೂಮಿಕಾ ಜವಳಗೇರಾ (17) ಮೃತಪಟ್ಟ ವಿದ್ಯಾರ್ಥಿನಿ. ಈ ವೇಳೆ ಮಹೇಶ್ವರಿ ಸಾಸಲಮರಿ ಎಂಬ ವಿದ್ಯಾರ್ಥಿನಿಗೆ ಗಂಭೀರ ಗಾಯಗಳಾಗಿದ್ದು, ಸಿಂಧನೂರಿನ ಶಾಂತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗೆ ಗಂಗಾವತಿಗೆ ಕರೆದೊಯ್ಯಲು ಪಾಲಕರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಮೇಘನಾ ಅಮರಾಪುರ ಹಾಗೂ ಜಹೀಬಾ ಸಿಂಧನೂರು ಅವರಿಗೆ ಸಹ ಗಾಯಗಳಾಗಿದ್ದು, ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಗಾಯಾಳು ವಿದ್ಯಾರ್ಥಿನಿಯರು ನಗರದ ಎವಿಎಸ್ ಬ್ರಿಲಿಯಂಟ್ ವಾಣಿಜ್ಯ ಮತ್ತು ವಿಜ್ಞಾನ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರಾಗಿದ್ದಾರೆ.
ತರಗತಿಗಳು ಮುಗಿದ ಬಳಿಕ ಗಾಂಧಿ ವೃತ್ತ ಮಾರ್ಗವಾಗಿ ಮನೆಗೆ ತೆರಳುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಗಂಗಾವತಿ ಮೂಲದ ಥಾರ್ ವಾಹನ ವಿದ್ಯಾರ್ಥಿನಿಯರ ಮೇಲೆ ಹರಿದಿದೆ. ವಾಹನ ಚಾಲಕ ಮದ್ಯಪಾನದ ಅಮಲಿನಲ್ಲಿ ವಾಹನವನ್ನು ರಿವರ್ಸ್ ತೆಗೆದುಕೊಳ್ಳುವಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದ್ದು, ನಗರ ಹಾಗೂ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ವಾಹನ ಮತ್ತು ಚಾಲಕನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.