ರಾಯಚೂರಿನ ವಿವಿಧೆಡೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
ಮಹಿಳೆಯರ ನೋವಿಗೆ ಆತ್ಮೀಯ ಸ್ಪಂದನೆ ನೀಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ
ರಾಯಚೂರು : ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಅವರು ರಾಯಚೂರು ಪ್ರವಾಸದ ಮೊದಲ ದಿನ (ಸೆ.17) ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಮಹಿಳೆಯರ ನೋವು-ನಲಿವಿಗೆ ಆತ್ಮೀಯ ಸ್ಪಂದನೆ ನೀಡಿದರು.
ಬೆಳಿಗ್ಗೆ ಕಾಲೇಜೊಂದರಲ್ಲಿ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದ ಬಳಿಕ, ಎಂಸಿಎಚ್ ಆಸ್ಪತ್ರೆಗೆ ತೆರಳುವಾಗ ದಾರಿ ಮಧ್ಯೆ ವಾಹನ ನಿಲ್ಲಿಸಿ, ರಸ್ತೆ ಬದಿಯಲ್ಲಿ ಕುಳಿತಿದ್ದ ವಯೋವೃದ್ಧೆಯ ಆರೋಗ್ಯ ವಿಚಾರಿಸಿದರು. ಹಲ್ಲು ನೋವು, ಕಣ್ಣು ಕಾಣದ ತೊಂದರೆಯನ್ನು ಹೇಳಿದ ಆ ಅಜ್ಜಿಯನ್ನು ಸ್ವತಃ ಪರೀಕ್ಷಿಸಿ, ಆಸ್ಪತ್ರೆಗೆ ದಾಖಲಿಸುವ ಭರವಸೆ ನೀಡಿದರು.
ನಂತರ ಸಖಿ ಒನ್ ಸ್ಟಾಪ್ ಸೆಂಟರಿನಲ್ಲಿ ಪರಿಶೀಲನೆ ನಡೆಸುವ ವೇಳೆ, ಪತಿಯ ಮೋಸದ ಕುರಿತು ಅಳುತ್ತ ಅಹವಾಲು ಸಲ್ಲಿಸಿದ ಮಹಿಳೆಯನ್ನು ಅಪ್ಪಿಕೊಂಡು ಸಾಂತ್ವನ ಹೇಳಿದರು ಹಾಗೂ ಅವರ ಸಂಪರ್ಕ ಸಂಖ್ಯೆ ಪಡೆದುಕೊಂಡರು.
ರಿಮ್ಸ್ ಆಸ್ಪತ್ರೆಯಲ್ಲಿ ವಾರ್ಡುಗಳಿಗೆ ಭೇಟಿ ನೀಡಿದ ಅವರು, ರೋಗಿ ಸಂಬಂಧಿಕರೊಂದಿಗೆ ಆತ್ಮೀಯವಾಗಿ ಮಾತನಾಡಿದರು. ತಾವು ಬೆಳಗ್ಗೆಯಿಂದ ಊಟ ಮಾಡಿಲ್ಲವೆಂದು ಹೇಳಿ, ಒಬ್ಬ ರೋಗಿಯ ಸಂಬಂಧಿಕರಿಂದ ಕೈತುತ್ತು ಪಡೆದು ಆಹಾರ ಸೇವಿಸಿದರು.
ಶ್ರೀದೇವಿ ನಾಯಕರು ಮಾತನಾಡಿ, ಜಾತಿ-ಭೇದವಿಲ್ಲದೆ ಮಹಿಳೆಯರ ನೋವಿಗೆ ಸ್ಪಂದಿಸಿ, ಅವರೊಂದಿಗೆ ಊಟ ಮಾಡುವ ನಿಮ್ಮ ನಡೆ ಇಡೀ ಮಹಿಳಾ ಸಮುದಾಯಕ್ಕೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಮುಖಂಡರಾದ ಶ್ರೀದೇವಿ ಶ್ರೀನಿವಾಸ, ಈರಮ್ಮ ಗುಂಜಳ್ಳಿ, ಮಂಜುಳಾ ಅಮರೇಶ, ವಂದನಾ ಶಿವಕುಮಾರ, ಪ್ರತಿಭಾ ರೆಡ್ಡಿ, ಲಕ್ಷ್ಮಿ ಹಾಗೂ ಇತರರು ಉಪಸ್ಥಿತರಿದ್ದರು.