ರಾಯಚೂರು ಗ್ರಾಮೀಣ ಕ್ಷೇತ್ರದ ಸಿಎಂ ಕಾರ್ಯಕ್ರಮಕ್ಕೆ ಸಹಸ್ರಾರು ಮಂದಿ ಭಾಗಿ
ರಾಯಚೂರು: ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಜೂ.23ರಂದು ನಡೆದ ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ಹಳ್ಳಿಯ ಜನರು ತಂಡೋಪ ತಂಡವಾಗಿ ಸೇರಿದ್ದರು.
ಸಿಎಂ ಕಾರ್ಯಕ್ರಮದಲ್ಲಿ ಭಾಗಿಯಾಗಲು ಉತ್ಸುಕರಾಗಿ ಜನರು ಬೆಳಗ್ಗೆಯಿಂದಲೇ ವಾಹನಗಳನ್ನು ಏರಿ ಯರಗೇರಾ ಗ್ರಾಮದತ್ತ ಬರುವ ದೃಶ್ಯಗಳು ಎಲ್ಲೆಡೆ ಕಾಣಿಸಿತು.
ಸಾರಿಗೆ ಬಸ್ಸುಗಳು, ಕ್ರೂಷರ್, ಮಿನಿಬಸ್, ಟಿಪ್ಪರ್, ಮಿನಿಲಾರಿ ಏರಿ ಜನರು ಯರಗೇರಾ ಗ್ರಾಮದತ್ತ ಆಗಮಿಸುತ್ತಿದ್ದರು. ರಾಯಚೂರು ಗ್ರಾಮೀಣ ಕ್ಷೇತ್ರ ಸೇರಿದಂತೆ, ರಾಯಚೂರು ನಗರ, ಸುತ್ತಲಿನ ಜಿಲ್ಲೆಗಳಾದ ಯಾದಗಿರಿ, ಕಲಬುರಗಿ, ಬೀದರ್, ಬಳ್ಳಾರಿ, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಯ ಜನರು ಸಹ ಕಾರ್ಯಕ್ರಮಕ್ಕೆ ಆಗಮಿಸಿ, ಅದ್ದೂರಿಯಾಗಿ ನಡೆದ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಪೂರ್ವ ನಿಗದಿಯಂತೆ ಬೆಂಗಳೂರಿನಿಂದ ವಾಯುಮಾರ್ಗವಾಗಿ ಹೊರಟ ಮುಖ್ಯಮಂತ್ರಿಗಳು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಹೆಲಿಪ್ಯಾಡಗೆ ಆಗಮಿಸಿ, ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ನಂತರ ಯರಗೇರಾ ಗ್ರಾಮದಲ್ಲಿನ ಮುಖ್ಯ ವೇದಿಕೆಯತ್ತ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಸಿಳ್ಳೆ ಹಾಕಿ ಸಂಭ್ರಮಿಸಿ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಕಿಕ್ಕಿರಿದು ಸೇರಿದ್ದ ಜನತೆಗೆ ಯಾವುದೇ ತೊಂದರೆಯಾಗದಂತೆ ಮುಖ್ಯ ವೇದಿಕೆಯ ಬಳಿಯಲ್ಲಿ ಊಟ ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು. ಸರಕಾರಿ ಬಸ್‌ಗಳು ಸೇರಿದಂತೆ ಹೆಚ್ಚಿನ ಖಾಸಗಿ ವಾಹನಗಳ ಮೂಲಕ ಜನತೆಗೆ ಉತ್ತಮವಾದ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು.
ಶಾಸಕರಿಂದ ಅಭಿನಂದನೆ:
ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಅಂದಾಜು 936. ಕೋಟಿ ರೂ.ಗಳ ವೆಚ್ಚದಲ್ಲಿ ವಿವಿಧ ಕಾಮಗಾರಿಗಳ ಅಡಿಗಲ್ಲು ಹಾಗೂ ಉದ್ಘಾಟನೆ, ರಾಯಚೂರಿಲ್ಲಿನ ವಿಶ್ವವಿದ್ಯಾಲಯಕ್ಕೆ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ನಾಮಕರಣ, ಬುಡಕಟ್ಟು ಸಾಂಸ್ಕೃತಿಕ ಉತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ನಿರೀಕ್ಷೆಗೂ ಮೀರಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಕಾರ್ಯಕ್ರಮ ಯಶಗೊಳಿಸಿದ್ದಕ್ಕೆ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್ ಅವರು ತಮ್ಮ ಕ್ಷೇತ್ರದ ಜನತೆಗೆ ಕೃತಜ್ಞತೆಗಳನ್ನು ತಿಳಿಸಿದರು.
ಎಲ್ಲ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ವಿವಿಧ ಮಂಡಳಿ, ಸಮಿತಿಗಳು, ನಿಗಮಗಳ ಅಧ್ಯಕ್ಷರು, ರಾಯಚೂರು ಸೇರಿದಂತೆ ವಿವಿಧ ಗ್ರಾಮಗಳ ಅಧ್ಯಕ್ಷರು ಮತ್ತು ಸದಸ್ಯರಿಗೆ, ಎಲ್ಲ ಗ್ರಾಮಸ್ಥರಿಗೆ, ಅಭಿಮಾನಿಗಳಿಗೆ ಅಭಿನಂದನೆ ತಿಳಿಸಿದರು.