31 ವರ್ಷಗಳ ಸೇವೆಗೆ ಗೌರವ: ನಿವೃತ್ತ ಶಿಕ್ಷಕ ವೆಂಕಟೇಶ್ ಚಂದ್ರಬಂಡ ಅವರಿಗೆ ಸನ್ಮಾನ
ರಾಯಚೂರು : ಶಿಕ್ಷಣ ಕ್ಷೇತ್ರದಲ್ಲಿ ಮೂರು ದಶಕಗಳಿಗೂ ಅಧಿಕ ಕಾಲ ನಿಷ್ಠೆ, ಪ್ರಾಮಾಣಿಕತೆ ಹಾಗೂ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಿ ವಯೋನಿವೃತ್ತರಾದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಚಂದ್ರಬಂಡದ ಹಿರಿಯ ಮುಖ್ಯ ಶಿಕ್ಷಕ ವೆಂಕಟೇಶ್ ಚಂದ್ರಬಂಡ ಅವರಿಗೆ ನಗರದ ಇಶಾ ಬ್ಯಾಂಕ್ವೆಟ್ ಹಾಲ್‌ನಲ್ಲಿ ರವಿವಾರ ಸ್ನೇಹಿತರು, ಸಹೋದ್ಯೋಗಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಮುಖಂಡರ ವತಿಯಿಂದ ಆತ್ಮೀಯ ಸನ್ಮಾನ ಸಮಾರಂಭ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ನಿವೃತ್ತ ಹಿರಿಯ ಮುಖ್ಯ ಶಿಕ್ಷಕರಾದ ನಂದೀಶ್ ಹಾಗೂ ವೀರಭದ್ರಪ್ಪ, ಮಾನ್ವಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮೂಕಪ್ಪ ಕಟ್ಟಿಮನಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೃಷ್ಣ, ಸಾಹಿತಿ ರಮೇಶ್ ಗಬ್ಬೂರು, ವಕೀಲ ದೊಡ್ಡಪ್ಪ ದೇವನಪಲ್ಲಿ ಹಾಗೂ ಬಾಲ್ಯದ ಗೆಳೆಯ ಚಿನ್ನ ಜಂಬಯ್ಯ ಅವರು, ಶಿಕ್ಷಕ ವೃತ್ತಿಯು ಕೇವಲ ಉದ್ಯೋಗವಲ್ಲ; ಅದು ಸಮಾಜ ನಿರ್ಮಾಣದ ಮಹತ್ತರ ಜವಾಬ್ದಾರಿ ಎಂದು ಅಭಿಪ್ರಾಯಪಟ್ಟರು.
ವೆಂಕಟೇಶ್ ಚಂದ್ರಬಂಡ ಅವರು ತಮ್ಮ 31 ವರ್ಷಗಳ ಸೇವಾ ಅವಧಿಯಲ್ಲಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದು, ಪಠ್ಯ ಬೋಧನೆಯ ಜೊತೆಗೆ ಮಾನವೀಯ ಮೌಲ್ಯಗಳು, ಶಿಸ್ತು, ನೈತಿಕತೆ ಹಾಗೂ ಸಾಮಾಜಿಕ ಬದ್ಧತೆಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಮೂಲಕ ಆದರ್ಶ ಶಿಕ್ಷಕರಾಗಿ ಗುರುತಿಸಿಕೊಂಡಿದ್ದಾರೆ ಎಂದು ಪ್ರಶಂಸಿಸಿದರು.
ಶಿಕ್ಷಕರೊಬ್ಬರ ಪ್ರಭಾವ ಶಾಲೆಯ ನಾಲ್ಕು ಗೋಡೆಗಳಿಗೆ ಸೀಮಿತವಾಗದೆ ವಿದ್ಯಾರ್ಥಿಗಳ ಬದುಕಿನುದ್ದಕ್ಕೂ ಮುಂದುವರಿಯುತ್ತದೆ. ಆ ನಿಟ್ಟಿನಲ್ಲಿ ವೆಂಕಟೇಶ್ ಅವರು ಅನೇಕ ವಿದ್ಯಾರ್ಥಿಗಳ ಬದುಕಿನಲ್ಲಿ ಶಾಶ್ವತ ಛಾಪು ಮೂಡಿಸಿದ್ದಾರೆ ಎಂದು ಹೇಳಿದರು.
ನಿವೃತ್ತಿ ಎನ್ನುವುದು ಸೇವೆಯ ಅಂತ್ಯವಲ್ಲ, ಜೀವನದ ಹೊಸ ಅಧ್ಯಾಯದ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಅವರು ಉತ್ತಮ ಆರೋಗ್ಯ, ನೆಮ್ಮದಿ, ಸುಖ ಮತ್ತು ಸಂತೃಪ್ತಿಯಿಂದ ಕೂಡಿದ ಜೀವನ ನಡೆಸಲಿ ಎಂದು ಹಾರೈಸಿದ ಗಣ್ಯರು, ಅವರ ಸುದೀರ್ಘ ಶೈಕ್ಷಣಿಕ ಸೇವೆಯನ್ನು ಸ್ಮರಿಸಿ ಅಭಿನಂದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ಕಾರಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಮುಖ್ಯೋಪಾಧ್ಯಾಯರ ಸಂಘದ ಜಿಲ್ಲಾಧ್ಯಕ್ಷ ದೇವೇಂದ್ರಪ್ಪ ವಹಿಸಿದ್ದರು.
ವೇದಿಕೆಯಲ್ಲಿ ನಿವೃತ್ತ ಹಿರಿಯ ಮುಖ್ಯ ಶಿಕ್ಷಕರಾದ ಲಕ್ಷ್ಮಿಕುಮಾರ್, ನಿವೃತ್ತ ಸಹ ಶಿಕ್ಷಕ ಮಹಾದೇವಪ್ಪ ಮಾನ್ವಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಮಹಾಂತೇಶ ಬಿರಾದಾರ್, ನಿವೃತ್ತ ಹಿರಿಯ ಮುಖ್ಯ ಶಿಕ್ಷಕ ಪೆದ್ದ ಜಂಬಯ್ಯ, ಗದಾರ್ ಶಾಲೆಯ ಮುಖ್ಯ ಶಿಕ್ಷಕ ಹನುಮಂತಪ್ಪ, ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿಯ ಜಿಲ್ಲಾಧ್ಯಕ್ಷ ಜಿಂದಪ್ಪ, ಪ್ರಧಾನ ಕಾರ್ಯದರ್ಶಿ ಸಂತೋಷ ನಂದಿನಿ, ಸರ್ಕಾರಿ ನೌಕರರ ಸಂಘದ ಹಿರಿಯ ಉಪಾಧ್ಯಕ್ಷ ಯಂಕಪ್ಪ ಪಿರಂಗಿ, ಚಂದ್ರಬಂಡ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ತಾಯಣ್ಣ, ಮಾನ್ವಿ ತಾಲೂಕು ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ನರಸಿಂಹಲು ಗುಂಜಳ್ಳಿ, ಸಿರವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮೌನೇಶ್, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಕಟಪೂರ್ವ ತಾಲೂಕು ಅಧ್ಯಕ್ಷ ಮಲ್ಲೇಶ್ ನಾಯಕ, ಚಂದ್ರಬಂಡ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯಗುರು ಶಾಂತಾ ಕುಲಕರ್ಣಿ ಹಾಗೂ ಮಾತೆ ಸಾವಿತ್ರಿಬಾಯಿ ಫುಲೆ ಪ್ರಾಥಮಿಕ ಶಾಲಾ ಶಿಕ್ಷಕಿಯರ ಸಂಘದ ತಾಲೂಕು ಅಧ್ಯಕ್ಷೆ ಧನಲಕ್ಷ್ಮಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕವಿ ಈರಪ್ಪ ಕೊಂಬಿನ ಅವರು ವೆಂಕಟೇಶ್ ಚಂದ್ರಬಂಡ ಅವರ ವ್ಯಕ್ತಿತ್ವ ಹಾಗೂ ಸೇವಾ ಸಾಧನೆಯನ್ನು ಬಿಂಬಿಸುವ ಸ್ವರಚಿತ ಕವನವನ್ನು ವಾಚಿಸಿ ಮೆಚ್ಚುಗೆ ಗಳಿಸಿದರು.
ಸಹ ಶಿಕ್ಷಕ ಚಂದ್ರಪ್ರಕಾಶ್ ಪ್ರಾರ್ಥಿಸಿದರು. ತಾಯರಾಜ್ ಮರ್ಚಟ್ಹಾಳ್ ಸ್ವಾಗತಿಸಿದರು. ರಾಜಶೇಖರ್ ಕಾರ್ಯಕ್ರಮ ನಿರೂಪಿಸಿ, ಕೊನೆಯಲ್ಲಿ ವಂದಿಸಿದರು.