ರಾಯಚೂರಿನಲ್ಲಿ ವಿಶ್ವ ಪರಿಸರ ದಿನಾಚರಣೆ
ಸಸಿ ನೆಟ್ಟರೆ ಸಾಲದು, ಪೋಷಣೆಯೂ ಅಗತ್ಯ : ನ್ಯಾಯಾಧೀಶೆ ಮಾಲಾ ಎನ್.ಡಿ.
ರಾಯಚೂರು: ಸಸಿ, ಗಿಡಗಳನ್ನು ನೆಟ್ಟಾಕ್ಷಣ ಜವಾಬ್ದಾರಿ ಮುಗಿಯುವುದಿಲ್ಲ. ಅವುಗಳನ್ನು ಬೆಳೆಸಿ, ಸಂರಕ್ಷಿಸಿ ಜನ ಹಾಗೂ ಜಾನುವಾರುಗಳಿಂದ ರಕ್ಷಿಸಿದಾಗ ಮಾತ್ರ ನಿಜವಾದ ಪರಿಸರ ಸಂರಕ್ಷಣೆ ಸಾಧ್ಯ ಎಂದು ರಾಯಚೂರಿನ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಮಾಲಾ ಎನ್.ಡಿ. ಹೇಳಿದರು.
ನಗರದ ಹೈದರಾಬಾದ್ ರಸ್ತೆಯ ನೂತನ ನ್ಯಾಯಾಲಯ ಕಟ್ಟಡದ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನ್ಯಾಯಾಂಗ ಇಲಾಖೆ, ಜಿಲ್ಲಾಡಳಿತ, ಅರಣ್ಯ ಇಲಾಖೆ ಹಾಗೂ ಜಿಲ್ಲಾ ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮನುಷ್ಯನ ಸ್ವಾರ್ಥದಿಂದ ಮರಗಳ ನಾಶ ಹೆಚ್ಚುತ್ತಿದ್ದು, ಪರಿಸರ ಸಮತೋಲನಕ್ಕೆ ಧಕ್ಕೆ ಉಂಟಾಗುತ್ತಿದೆ. ಪರಿಸರ ಸಂರಕ್ಷಣೆಯತ್ತ ಎಲ್ಲರೂ ಗಮನಹರಿಸದಿದ್ದರೆ ಭವಿಷ್ಯದಲ್ಲಿ ಇನ್ನಷ್ಟು ಪ್ರಕೃತಿ ವಿಕೋಪಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಉಳಿಸಿ ಕೊಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ‘ಪ್ರಕೃತಿಯಿಂದ ಪ್ರೇರಿತವಾಗಿದೆ, ಹವಾಮಾನಕ್ಕಾಗಿ, ನಮ್ಮ ಭವಿಷ್ಯಕ್ಕಾಗಿ’ ಎಂಬುದು 2026ರ ವಿಶ್ವ ಪರಿಸರ ದಿನದ ಘೋಷವಾಕ್ಯವಾಗಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಸಿರು ಪ್ರಮಾಣ ಹೆಚ್ಚಿಸಲು ಮಳೆಗಾಲದಲ್ಲಿ ಹೆಚ್ಚಿನ ಸಸಿ ನೆಡುವ ಕಾರ್ಯ ಅಗತ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶ ಸಿದ್ದರಾಮಪ್ಪ ಕಲ್ಯಾಣರಾವ್ ಮಾತನಾಡಿ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ರಾಜ್ಯಾದ್ಯಂತ 5 ಕೋಟಿ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ. ಶಾಲೆ, ಕಾಲೇಜು ಹಾಗೂ ಲಭ್ಯವಿರುವ ಸಾರ್ವಜನಿಕ ಸ್ಥಳಗಳಲ್ಲಿ ಸಸಿ ನೆಡುವ ಕಾರ್ಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ, ರಾಯಚೂರಿನ ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ ಬಾಬು, ಕುಟುಂಬ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಶ್ರೀಕಾಂತ್.ಎಸ್.ವಿ., ಸಿ.ಜೆ.ಎಂ. ನ್ಯಾಯಾಲಯದ ಪ್ರಧಾನ ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶರಾದ ಬಿ.ಟಿ. ಅನ್ನಪೂರ್ಣೇಶ್ವರಿ, ಜೆ.ಎಂ.ಎಫ್.ಸಿ ನ್ಯಾಯಾಲಯದ 1ನೇ ಹೆಚ್ಚುವರಿ ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶರಾದ ಶಂಕರಪ್ಪ ಮಾಲಶೆಟ್ಟಿ, ಜೆ.ಎಂ.ಎಫ್.ಸಿ ನ್ಯಾಯಾಲಯದ 2ನೇ ಹೆಚ್ಚುವರಿ ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶರಾದ ಸಾಗರ್ ಗುರುಗೌಡ ಪಾಟೀಲ್, ಜೆ.ಎಂ.ಎಫ್.ಸಿ. 3ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಚನ್ನಬಸಪ್ಪ ಆರ್. ಕೂಡಿ, ವಲಯ ಅರಣ್ಯ ಅಧಿಕಾರಿ ರಾಜೇಶ ನಾಯಕ ಅವರು ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಇದ್ದರು.