ಸಮಾಜದ ಬೆಳಗಿಗೆ ಜ್ಞಾನದಾಸೋಹವಾಗಿ ನಾಟಕ

ರಂಗಭೂಮಿಯು ಸದಾ ಹೊಸತಿಗೆ ತೆರೆದುಕೊಳ್ಳುತ್ತ, ಪ್ರಯೋಗಶೀಲತೆಗೆ ಒಡ್ಡಿಕೊಳ್ಳುತ್ತ ಸಾಗುತ್ತಿದೆ. ಜೇವರ್ಗಿ ರಾಜಣ್ಣ ಅವರ ಪ್ರಯೋಗವು ಉಳಿದ ಕಂಪೆನಿ ಗಳಲ್ಲೂ ನಡೆದು ಶಿವಾನುಭವ ಮಂಟಪವಾದರೆ ಪ್ರೇಕ್ಷಕರಿಗೆ ಸಿಗುವ ಸಂಸ್ಕಾರ ಅನನ್ಯ. ಇದರಿಂದ ಬದುಕುವ ಭಂಡತನವನ್ನು ಕಲಾವಿದರೊಂದಿಗೆ ಪ್ರೇಕ್ಷಕರೂ ಅಳವಡಿಸಿಕೊಂಡಾರು. ಈ ಮೂಲಕ ಕಂಪೆನಿ ನಾಟಕಗಳನ್ನು ನೋಡುವ ಪ್ರೇಕ್ಷಕರ ಸಂಖ್ಯೆಯೂ ಹೆಚ್ಚಲಿ. ಜೊತೆಗೆ ಎಲ್ಲ ಬಗೆಯ ನಾಟಕಗಳನ್ನು ನೋಡುವವರ ಸಂಖ್ಯೆಯೂ ವೃದ್ಧಿಸಲಿ.

Update: 2024-03-30 06:48 GMT

‘‘ಎಲ್ಲರನ್ನೂ ಆಕರ್ಷಿಸಬಲ್ಲ ರಂಗಭೂಮಿಯು ಶಿವಾನುಭವ ಮಂಟಪವಾದರೆ ಆಯುಷ್ಯದಲ್ಲಿ ಸಾಧಿಸುವ ಸಿದ್ಧಿಯನ್ನು ಆರು ತಿಂಗಳಲ್ಲಿ ಸಾಧಿಸಬಹುದೆಂದು ಹಾನಗಲ್ಲ ಕುಮಾರ ಶಿವಯೋಗಿಗಳು ಬಗೆದಿದ್ದರು.

ಜಾತಿ-ವಯೋಮಾನಗಳನ್ನು, ಮೇಲು- ಕೀಳುಗಳನ್ನು ಎಣಿಸದೆ ಎಲ್ಲರ ಮನವನ್ನು ಸೆಳೆದು ಜ್ಞಾನವನ್ನು ಸರಳವಾಗಿ ದಾನ ಮಾಡುವ ನಾಟಕ ಮಂಡಳಿಯೇ ಸಂಚಾರಿ ಪಾಠಶಾಲೆಯಾಗ ಬಹುದೆಂದು ತಿಳಿದ ಅವರು, ಅದನ್ನು ಕಾರ್ಯರೂಪಕ್ಕೆ ತರಲು ಅನೇಕ ಪ್ರಯತ್ನಗಳನ್ನು ನಡೆಸಿದರು. ನಾಟಕ ರಂಗವು ಜ್ಞಾನದಾಸೋಹವಾಗಿ ಸಾಗಿದರೆ ಸಮಾಜ ಹೊಸ ಬೆಳಗು ಕಂಡು ಪರಿಶುದ್ಧವಾಗುವುದೆಂಬ ನಂಬಿಕೆ ಅವರದಾಗಿತ್ತು. ಆದರೆ ಹಳೆಯ ಮನ್ವಂತರದ ಪೀಳಿಗೆಗೆ ಅದು ಕಾಣದಾಗಿತ್ತು...’’

ಹೀಗೆ ಕಲಾಯೋಗಿ ಹಾನಗಲ್ಲ ಕುಮಾರ ಶಿವಯೋಗಿಗಳ ಕುರಿತು ಚಿತ್ತರಗಿ ಗಂಗಾಧರ ಶಾಸ್ತ್ರಿಗಳು ಬರೆದ ಲೇಖನ, ಶಿವಯೋಗ ಮಂದಿರದ ಸುವರ್ಣ ಮಹೋತ್ಸವ ಅಂಗವಾಗಿ 1960ರಲ್ಲಿ ಪ್ರಕಟವಾದ ‘ಬೆಳಗು’ ಕೃತಿಯಲ್ಲಿದೆ. ಆಮೇಲೆ ಗದುಗಿನಲ್ಲಿ ಶ್ರೀ ಕುಮಾರೇಶ್ವರ ಕೃಪಾಪೋಷಿತ ಸಂಚಾರಿ ನಾಟಕ ಸಂಸ್ಥೆ ರೂಪುಗೊಂಡು ಸಂಗೀತ ನಾಟಕಗಳನ್ನು ಆಡುತ್ತ, ಶರಣರ ತತ್ವಗಳನ್ನು ಸಾರುತ್ತಿದೆ. ಈ ಸಂಸ್ಥೆಯನ್ನು ಹಾನಗಲ್ಲ ಕುಮಾರ ಶಿವಯೋಗಿಗಳ ಶಿಷ್ಯರಾದ ಪುಟ್ಟರಾಜ ಗವಾಯಿಗಳು ಮುನ್ನಡೆಸಿದರು.

ಈಗಲೂ ಈ ಸಂಸ್ಥೆ ಭಕ್ತಿಪ್ರಧಾನ ನಾಟಕಗಳನ್ನೇ ಪ್ರದರ್ಶಿಸುತ್ತಿದೆ. ಹೀಗೆ ಹಾನಗಲ್ಲ ಕುಮಾರ ಶಿವಯೋಗಿಗಳು ಕಂಡ ಕನಸು ಸಾಕಾರಗೊಳ್ಳುತ್ತಿದೆ. ಹಿಂದೆ ನಾಟಕ ಕಂಪೆನಿಗಳೇ ಮನರಂಜನೆಯ ಪ್ರಮುಖ ಮಾಧ್ಯಮವಾಗಿದ್ದವು. ನಂತರ ಮನರಂಜನೆಯು ವಿಕೇಂದ್ರೀಕರಣಗೊಂಡ ಪರಿಣಾಮ ನಾಟಕ ಕಂಪೆನಿಗಳತ್ತ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗತೊಡಗಿತು. ಆದರೂ ಉಳಿದ ನಾಟಕ ಕಂಪೆನಿಗಳು ಪ್ರೇಕ್ಷಕರನ್ನೇ ನೆಚ್ಚಿ ಸಾಗುತ್ತಿವೆ.

ಬಾಗಲಕೋಟೆ ಜಿಲ್ಲೆಯ ಇಲಕಲ್ಲದಲ್ಲಿ ಜೇವರ್ಗಿ ರಾಜಣ್ಣ ಅವರ ವಿಶ್ವಜ್ಯೋತಿ ಶ್ರೀ ಪಂಚಾಕ್ಷರ ನಾಟ್ಯ ಸಂಘವು 2021ರಲ್ಲಿ ಮೊಕ್ಕಾಂ ಹೂಡಿದ್ದಾಗ, ಅವರೇ ರಚಿಸಿದ ‘ಕುಂಟ ಕೋಣ ಮೂಕ ಜಾಣ’ ನಾಟಕ ಪ್ರದರ್ಶನಗೊಂಡಿತ್ತು. ಇದರಲ್ಲಿ ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಅವರ ರಂಗಶಾಲೆಯಲ್ಲಿ ಕಲಿತ ಬೆಳಗಾವಿ ಜಿಲ್ಲೆಯ ಕಿತ್ತೂರಿನ ಗೀತಾ ವಿಠಲ ಮೋಹಿತೆ, ಮರಿಯಮ್ಮನಹಳ್ಳಿಯ ರವಿ, ಶಿವಮೊಗ್ಗ ರಂಗಾಯಣದ ಕಲಾವಿದೆಯಾಗಿದ್ದ ಶ್ವೇತಾ ಅಭಿಷೇಕ್, ಹುಬ್ಬಳ್ಳಿಯ ಸಂಸ್ಕೃತಿ ಕಾಲೇಜಿನಲ್ಲಿ ಕಲಿತ ಬಸು ಧಾರವಾಡ, ಸುಹಾಸ್ ಹೆಗ್ಗೋಡು ಹಾಗೂ ಸುಭಾಷ್ ಬೆಟಗೇರಿಯವರು ಬಣ್ಣ ಹಚ್ಚಿದ್ದರು. ಇವರಿಗೆಲ್ಲ ರಂಗಭೂಮಿಯ ತರಬೇತಿ ಸಿಕ್ಕಿ ಬದುಕಿಗಾಗಿ ಸಿನೆಮಾ, ಟಿವಿ ಧಾರವಾಹಿಗಳತ್ತ ಮುಖ ಮಾಡದೆ ಜೇವರ್ಗಿ ರಾಜಣ್ಣ ಅವರ ಕಂಪೆನಿಯನ್ನು ಆಶ್ರಯಿಸಿದ್ದರು. ಮುಖ್ಯವಾಗಿ ಜೇವರ್ಗಿ ರಾಜಣ್ಣ ಅವರ ಪುತ್ರಿ ನೀಲಾ ಜೇವರ್ಗಿ ಅವರು ಸಾಣೇಹಳ್ಳಿಯಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದು, ಪ್ರಯೋಗಶೀಲತೆಗೆ ಒಡ್ಡಿಕೊಂಡಿದ್ದಾರೆ. ರಾಜಣ್ಣ ಅವರ ನಾಟಕಗಳಲ್ಲಿ ಅಶ್ಲೀಲ ಸಂಭಾಷಣೆ ಇರುವುದಿಲ್ಲ ಜೊತೆಗೆ ಐಟಂ ಸಾಂಗ್‌ಗೆ ನೃತ್ಯ ಇರುವುದಿಲ್ಲ. ಇವುಗಳನ್ನು ಹೊರತುಪಡಿಸಿ ಮನರಂಜನೆ ನೀಡುವ ಉದ್ದೇಶದಿಂದ ಈ ಕಲಾವಿದರಿಗೆ ತಮ್ಮ ಕಂಪೆನಿಯಲ್ಲಿ ಅವಕಾಶವನ್ನು ರಾಜಣ್ಣ ನೀಡಿದ್ದರು. ಊಟ, ವಸತಿ ನೀಡಿ ತಿಂಗಳಿಗೆ 20 ಸಾವಿರ ರೂ. ಪಗಾರವನ್ನೂ ಕೊಟ್ಟಿದ್ದರು. ಇದರಿಂದ ರಂಗಭೂಮಿಗೊಂದು ಶಿಸ್ತು ಬಂದಾಗಿದೆ. ಅಂದರೆ ಮದ್ಯ ಸೇವಿಸಿ ರಂಗದ ಮೇಲೆ ಬರುತ್ತಿದ್ದ ಕಲಾವಿದರ ಹಾವಳಿ ಕಡಿಮೆಯಾಗಿದೆ. ಇದನ್ನು ನವವೃತ್ತಿರಂಗಭೂಮಿ ಎಂದು ರಾಜಣ್ಣ ಕರೆದರು. ಅಂದರೆ ಸಾಣೇಹಳ್ಳಿ, ನೀನಾಸಂನಲ್ಲಿ ಕಲಿತು ಬಂದ ಕಲಾವಿದರಿಗೆ ಅವರು ಅವಕಾಶ ನೀಡುವ ಮೂಲಕ ವೃತ್ತಿ ಹಾಗೂ ಹವ್ಯಾಸಿ ರಂಗಭೂಮಿಯನ್ನು ಬೆಸೆದರು. ಹವ್ಯಾಸಿಯಲ್ಲಿದ್ದ ಶಿಸ್ತು, ಅಭಿನಯ, ಮೈಕ್ ಇಲ್ಲದೆ ಮಾತಾಡುವ ಕ್ರಮವನ್ನು ಅವರು ಅಳವಡಿಸಿಕೊಳ್ಳಲು ಮುಂದಾದರು. ಕಲಾವಿದರು ಕೂಡಾ ತಾವು ಕಲಿತು ಬಂದಿರುವುದನ್ನು ಮರೆಯದೆ ಇಲ್ಲಿನ ನಾಟಕಗಳಿಗೂ ಅನ್ವಯಿಸಿದರು. ಆದರೆ ಸಾಮಾನ್ಯ ಪ್ರೇಕ್ಷಕರೊಂದಿಗೆ ಕ್ಲಾಸ್ ಪ್ರೇಕ್ಷಕರ ಸಂಖ್ಯೆ ಹೆಚ್ಚಬೇಕಿದೆ. ಜೇವರ್ಗಿ ರಾಜಣ್ಣ ಅವರ ಈ ಪ್ರಯತ್ನ ಗಮನಾರ್ಹ.

ಇದನ್ನೇ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ 2021ರ ರಂಗ ಸಂದೇಶ ನೀಡಿರುವ ಯುನೈಟೆಡ್ ಕಿಂಗ್‌ಡಮ್‌ನ ಹೆಲನ್ ಮಿರ್ರೇನ್ ಹೇಳಿದ್ದಾರೆ; ‘‘ಪ್ರೇಕ್ಷಕರೊಡನೆ ನೇರ ಅನುಸಂಧಾನದ ಸಾಧ್ಯತೆಯನ್ನು ಒದಗಿಸುವ ಪ್ರದರ್ಶನಗಳಿಗೆ ಪ್ರಸಕ್ತ ಅತ್ಯಂತ ಸಂಕಷ್ಟದ ಕಾಲ ಬಂದೊದಗಿದೆ. ಹಲವಾರು ಕಲಾವಿದರು, ತಂತ್ರಜ್ಞರು, ವಿನ್ಯಾಸಗಾರರು, ಕರಕುಶಲಿಗಳು ಮತ್ತು ಮಹಿಳೆಯರು ಇಂದು ಸದಾ ಅಭದ್ರತೆಯನ್ನು ಹೊಂದಿರುವ ತಮ್ಮ ರಂಗವೃತ್ತಿಯ ಜೊತೆಗೆ ಏಗುತ್ತಿದ್ದಾರೆ. ಈ ನಿರಂತರವಾದ ಅಭದ್ರತೆಯೇ ಅವರನ್ನು ಪ್ರಸಕ್ತದ ಸಾಂಕ್ರಾಮಿಕ ರೋಗದಂತಹ ವಿಷಮ ಕಾಲಘಟ್ಟದಲ್ಲಿಯೂ ಆತ್ಮವಿಶ್ವಾಸದ ಗಟ್ಟಿತನವನ್ನು ಕಳೆದುಕೊಳ್ಳದಂತೆ ಮಾಡಿದೆ. ಈ ಕಲಾವಿದರ ಕಲ್ಪನಾಶೀಲತೆಯು ಬದಲಾದ ಹೊಸ ಪರಿಸ್ಥಿತಿಗಳಿಗೆ ಅನುಗುಣವಾಗಿ ತನ್ನನ್ನು ಮಾರ್ಪಡಿಸಿಕೊಂಡು ಸೃಜನಶೀಲತೆಯಿಂದ ಸಾಕ್ಷಾತ್ಕರಿಸುತ್ತ ಜನಸಮುದಾಯದ ಜೊತೆ ಅನುಸಂಧಾನದ ಸಾಧ್ಯತೆಯನ್ನು ಇನ್ನೂ ಜೀವಂತವಾಗಿರಿಸಿಕೊಂಡಿದೆ. ಕಲಾವಿದರ ಕ್ರಿಯಾಶೀಲತೆಯು ಕುಬ್ಜವಾಗದಿರಲಿ ಮತ್ತು ಹೊಸತನಗಳ ಸಾಮರ್ಥ್ಯದೊಂದಿಗೆ ಜಿಗಿದು ಬಂದು ಸಮೃದ್ಧವಾಗುವ ಕಾಲ ತೀರಾ ಹತ್ತಿರದಲ್ಲಿದೆ ಎನ್ನುವುದು ನನ್ನ ವಿಶ್ವಾಸ...’’

ಇದು ನಿಜ. ರಂಗಭೂಮಿಯು ಸದಾ ಹೊಸತಿಗೆ ತೆರೆದುಕೊಳ್ಳುತ್ತ, ಪ್ರಯೋಗಶೀಲತೆಗೆ ಒಡ್ಡಿಕೊಳ್ಳುತ್ತ ಸಾಗುತ್ತಿದೆ. ಜೇವರ್ಗಿ ರಾಜಣ್ಣ ಅವರ ಪ್ರಯೋಗವು ಉಳಿದ ಕಂಪೆನಿಗಳಲ್ಲೂ ನಡೆದು ಶಿವಾನುಭವ ಮಂಟಪವಾದರೆ ಪ್ರೇಕ್ಷಕರಿಗೆ ಸಿಗುವ ಸಂಸ್ಕಾರ ಅನನ್ಯ. ಇದರಿಂದ ಬದುಕುವ ಭಂಡತನವನ್ನು ಕಲಾವಿದರೊಂದಿಗೆ ಪ್ರೇಕ್ಷಕರೂ ಅಳವಡಿಸಿಕೊಂಡಾರು. ಈ ಮೂಲಕ ಕಂಪೆನಿ ನಾಟಕಗಳನ್ನು ನೋಡುವ ಪ್ರೇಕ್ಷಕರ ಸಂಖ್ಯೆಯೂ ಹೆಚ್ಚಲಿ. ಜೊತೆಗೆ ಎಲ್ಲ ಬಗೆಯ ನಾಟಕಗಳನ್ನು ನೋಡುವವರ ಸಂಖ್ಯೆಯೂ ವೃದ್ಧಿಸಲಿ.

ಇದರೊಂದಿಗೆ ಈ ವರ್ಷ ಅಂದರೆ 2024ನೇ ಸಾಲಿನ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಜಾನ್ ಫೋಸೆ ನೀಡಿದ ಸಂದೇಶ ನೆನಪಾಗುತ್ತಿದೆ. ‘‘ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವಗಳಲ್ಲಿ ಇರುವಂತೆ, ಯುದ್ಧ ಮತ್ತು ಕಲೆ ಕೂಡ ಪರಸ್ಪರ ವಿರೋಧ ಮುಖಗಳು. ಆದರೆ ಕಲೆಯ ಮೂಲಕ ಯಾರು ಕಾಯಕ ಮಾಡುತ್ತಾರೋ ಅವರು ಶಾಂತಿಯ ಸಾರ್ವತ್ರಿಕ ಪ್ರತಿಪಾದಕರಾಗಿ ನಿಲ್ಲುತ್ತಾರೆ ಎನ್ನುವುದು ಈ ಜಗತ್ತಿನ ಬಹುದೊಡ್ಡ ಹಾಗೂ ಸಾರ್ವತ್ರಿಕವಾದ ಸತ್ಯವಾಗಿದೆ’’ ಎನ್ನುವ ನಾರ್ವೆಯ ನಾಟಕಕಾರ ಜಾನ್ ಅವರು 2023ರಲ್ಲಿ ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದವರು.

ಕಲೆಯ ಮೂಲಕ ಕಾಯಕ ಮಾಡುವವರ ಸಂಖ್ಯೆ ಹೆಚ್ಚಲಿ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಗಣೇಶ ಅಮೀನಗಡ

contributor

Similar News