×
Ad

ಸೌಹಾರ್ದ ಪರಿಮಳದ ‘ಪ್ರತಿ ಗಂಧರ್ವ’

Update: 2025-12-26 14:40 IST

ನಾಟಕ: ಪ್ರತಿ ಗಂಧರ್ವ

ಮೂಲ ಕೃತಿ: ಡಾ. ರಹಮತ್ ತರೀಕೆರೆ

ರಂಗರೂಪ: ಡಾ. ರಾಜಪ್ಪ ದಳವಾಯಿ

ವಿನ್ಯಾಸ, ನಿರ್ದೇಶನ: ಮಾಲತೇಶ ಬಡಿಗೇರ

ಸಂಗೀತ: ರವಿ ಮೂರೂರು

ವಸ್ತ್ರಾಲಂಕಾರ: ಛಾಯಾ ಭಾರ್ಗವಿ

ಪ್ರಸ್ತುತಿ: ವೃತ್ತಿ ರಂಗಭೂಮಿ ರಂಗಾಯಣ, ದಾವಣಗೆರೆ

ರಂಗದ ಮೇಲೆ:

ಸುರೇಂದ್ರಗೌಡ ಗೋಕರ್ಣ, ಡಾ. ಶೃತಿ ರಾಜ್, ಬಿ. ಸುಜಾತಾ ನೀಲಗುಂದ, ಕಲ್ಪನಾ ನಾಕೋಡ, ಸೋಮಶೇಖರ್ ಕಾರಿಗನೂರು, ಸಂತೋಷ್ ಸಂಗನಾಳ, ವೈ.ಶ್ವೇತಾ, ಜಿ.ಎಂ. ಪ್ರಕೃತಿ, ಬಸವರಾಜ ಕಡ್ಲೇಬಾಳು, ಕರಣಕುಮಾರ್, ಮುಖೇಶಕುಮಾರ್, ಅಮಿತ್‌ಕುಮಾರ್.

ದಾವಣಗೆರೆಯ ವೃತ್ತಿ ರಂಗಭೂಮಿ ರಂಗಾಯಣದ ಮೊದಲ ನಾಟಕ ‘ಪ್ರತಿ ಗಂಧರ್ವ’ ಬಹಳ ಮಹತ್ವವಾದುದು. ಏಕೆಂದರೆ ಪ್ರಸ್ತುತ ಸಂದರ್ಭದಲ್ಲಿ ವೃತ್ತಿ ರಂಗಭೂಮಿಯ ಅನೇಕ ನಾಟಕಗಳು ದ್ವಂದ್ವ ಸಂಭಾಷಣೆ, ಐಟಂ ಸಾಂಗ್, ಸಿನೆಮಾ ಹಾಡುಗಳ ಮೂಲಕ ಪ್ರದರ್ಶನ ಗೊಳ್ಳುತ್ತಿರುವಾಗ ‘ಪ್ರತಿ ಗಂಧರ್ವ’ ನಾಟಕವು ತನ್ನ ಗಂಧದಿಂದ ಪರಿಮಳ ಸೂಸುತ್ತ ಗಮನ ಸೆಳೆಯುತ್ತದೆ. ಕಳೆದ ವಾರ ಮೈಸೂರಿನಲ್ಲಿ ನಿರಂತರ ರಂಗೋತ್ಸವ ತಂಡದ ನಾಟಕೋತ್ಸವ ಹಾಗೂ ಬಹುರೂಪಿಗೆ ಮುನ್ನುಡಿಯಾಗಿ ಮೈಸೂರು ರಂಗಾಯಣದ ವತಿಯಿಂದ ಪ್ರದರ್ಶನಗೊಂಡ ಈ ನಾಟಕ ಚೆನ್ನಾಗಿದೆ. ರಾಜಪ್ಪ ದಳವಾಯಿ ಅವರ ಸತ್ವಯುತ ನಾಟಕಕ್ಕೆ ಪೂರಕವಾಗಿ ಹಾಡು, ದೃಶ್ಯಗಳಿವೆ.

ದಾವಣಗೆರೆ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಅವರ ಮಾತು ಗಮನಾರ್ಹ ‘‘ಕಂಪೆನಿ ಶೈಲಿಯ ರಂಗಸಂವೇದನೆಗಳನ್ನು ವರ್ತಮಾನೀಕರಿಸುವ ಸಮನ್ವಯದ ವಿಭಿನ್ನ ಯತ್ನವಿದು. ಬಯೋಪಿಕ್ ಕಥನವೊಂದನ್ನು ರಂಗಪಠ್ಯ ಆಗಿಸುವುದು ಸವಾಲಿನ ಕೆಲಸವೇ. ಒಂದೆಡೆ ಕನ್ನಡ-ಮರಾಠಿ ಮತ್ತು ಹಿಂದೂ-ಮುಸ್ಲಿಮ್ ಧರ್ಮಗಳ ಸಂಕೀರ್ಣತೆಗಳ ಗುದಮುರಗಿ. ಮತ್ತೊಂದೆಡೆ ಪ್ರೀತಿಪ್ರೇಮಗಳ ಸಾಮರಸ್ಯ, ಸೌಹಾರ್ದ. ಗಂಧರ್ವ ಮತ್ತು ಪ್ರತಿಗಂಧರ್ವ ಎಂಬ ನಾಟ್ಯಸಂಗೀತ ವ್ಯಕ್ತಿತ್ವಗಳ ಅನಾವರಣ. ಶತಮಾನದ ಹಿಂದೆ ಜರುಗುವ ಕನ್ನಡ, ಮರಾಠಿ ರಂಗಭೂಮಿಯ ಆನುಷಂಗಿಕ ಸಂಕಥನಗಳ ಹೂರಣ’’

ಇಂಥ ನಾಟಕ ಆರಂಭವಾಗುವುದೇ ಕೋಲ ಶಾಂತಪ್ಪ ಅವರ ನಾಂದಿ ಪದ್ಯದ ಮೂಲಕ. ಅದು ಹೀಗಿದೆ:

ಪಾಹಿ ಶಾಂತಃ ಭುವನೇಶ್ವರ

ಸುಮನೋಹರ ಭುವನತಾರ

ಪಾಪಹಾರ ಆನಂದಸಾರ

ವಿಕಾರ ದೂರ ಭವಸಂಹಾರ

ಪಾಹಿ ಶಾಂತಃ ಭುವನೇಶ್ವರ

ಸುಮನೋಹರ ಭುವನತಾರ

ಗೌರೀನಾಥ ಶಿವಪಾನ

ನಿತ್ಯಜ್ಞಾನ ಪರಿಶೋಧನ

ದೇವ ದೇವ ಅಘನಾಶನ

ಶಮದನವಿಭು ಸೌಖ್ಯಸಾರ

ಪಾಹಿಶಾಂತಃ ಭುವನೇಶ್ವರ

ಸುಮನೋಹರ ಭುವನತಾರ...

ಈ ಹಾಡು ಹಾಡಿದ ನಂತರ ಎಲ್ಲ ಕಲಾವಿದರು ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣಕ್ಕೆ ಜೈಕಾರ ಹಾಕುತ್ತಾರೆ. ನಾಟಕ ಮುಗಿದ ನಂತರವೂ ಈ ಜೈಕಾರ ಹಾಕುತ್ತಾರೆ. ಇದು ಕಂಪೆನಿ ನಾಟಕಗಳಲ್ಲಿ ‘‘ವೃತ್ತಿ ರಂಗಭೂಮಿಗೆ ಜಯವಾಗಲಿ’’ ಎಂದು ಹೇಳುವ ಹಾಗೆ. ಆಮೇಲೆ

ಶಕ್ತನು ನೀನು ಭಕ್ತನು ನೀನು

ಲಗುಣಗೊಂಡೆವು ಇನ್ನೇನು

ಎಂದು ಬೀಳಗಿ ಸೋದರಿಯರಾದ ಗೋಹರ ಹಾಗೂ ಅಮೀರ ಹಾಡುತ್ತಾರೆ. ಇವರಿಗೆ ಹಾರ್ಮೋನಿಯಂ ಸಾಥ್ ನೀಡುವ ಅವರ ಸೋದರಮಾವ, ರಂಗಭೂಮಿ ಕಲಾವಿದರಾದ ಬೇವೂರ ಬಾದಷಾ ಮಾಸ್ತರ ಸೂಕ್ತ ಸಲಹೆಗಳನ್ನೂ ನೀಡುತ್ತಾರೆ. ಆಮೇಲೆ ಗೋಹರ ಹಾಗೂ ಅಮೀರ ಅವರು ನಾಟಕದಲ್ಲಿ ಪಾತ್ರಗಳಿಗೆ ಬಣ್ಣ ಹಚ್ಚಿದ ದೃಶ್ಯಗಳಿವೆ. ಮುಂದೆ ಬಸವರಾಜ ಮನ್ಸೂರ ಅವರ ಕಂಪೆನಿ ಸೇರುತ್ತಾರೆ. ಆಗ ಬಸವರಾಜ ಮನ್ಸೂರ ಅವರೊಂದಿಗೆ ಗೋಹರಬಾಯಿ ‘‘ನಾ ಮನಸ ಇಟ್ಟೀನಿ ಮಾಲಕರ, ನೀವೂ ಮನಸ್ಸು ಕೊಟ್ಟೀರಿ. ಅಡ್ಡಿಗಳ್ನ ಕಡ್ಡಿ ಮುರದಂಗ ತಗೀಬೇಕ್ರಿ’’ ಎಂದು ಹೇಳಿ

‘‘ಪ್ರೀತಿ ಮಾಡಿದ ಮ್ಯಾಲ ಮಾನಪಮಾನ ಎಲ್ಲ್ಯದ

ಜಾತಿಪಾತಿ ಎಲ್ಲ್ಯದ, ಧರ್ಮ ಎಲ್ಲ್ಯದ?’’

ಎಂದು ಹಾಡುವ ಹಾಡು ಪ್ರೇಕ್ಷಕರನ್ನು ಸೆಳೆಯುತ್ತದೆ. ಮುಂದೆ ಮುಂಬೈಯಿಂದ ಬಂದ ನಟ ಹಾಗೂ ದಲ್ಲಾಳಿ ನಾನಾ ಚಾಪೇಕರ್ ಪರಿಚಯವಾಗಿ, ಮುಂಬೈಗೆ ಹಾಡಲು ಸೋದರಿಯರು ತೆರಳುತ್ತಾರೆ. ಅಲ್ಲಿ ಎಚ್‌ಎಂವಿ ಕಂಪೆನಿಯ ಧ್ವನಿಪರೀಕ್ಷೆಯಲ್ಲಿ ಗೋಹರ ಪಾಸಾದ ನಂತರ ಹಾಡುಗಳ ರೆಕಾರ್ಡಿಂಗ್ ನಡೆಯುತ್ತದೆ. ಅಲ್ಲಿಂದ ಹಿಂದಿ ಸಿನೆಮಾಗಳಿಗೂ ಗೋಹರಬಾಯಿ ಬಣ್ಣ ಹಚ್ಚುತ್ತಾರೆ. ಹೀಗಿದ್ದಾಗ ಬಸವರಾಜ ಮನ್ಸೂರ ಅವರ ಕಂಪೆನಿಯು ಬೆಳಗಾವಿಯಲ್ಲಿದ್ದಾಗ ಸುಟ್ಟು ಹೋದಾಗ ಅವರನ್ನು ನಾನಾ ಚಾಪೇಕರ್ ಗೋಹರಬಾಯಿ ಬಳಿ ಕರೆತರುತ್ತಾನೆ. ಆಮೇಲೆ ಗೋಹರಬಾಯಿ ಅವರೊಂದಿಗೆ ಬಸವರಾಜ ಅವರು ಕೂಡಾ ಹಿಂದಿ ಸಿನೆಮಾಗಳಲ್ಲಿ ನಟಿಸುತ್ತಾರೆ. ಹೀಗೆ ಬಾಗಲಕೋಟೆ ಜಿಲ್ಲೆಯ ಬೀಳಗಿ ಸೋದರಿಯರಾದ ಗೋಹರಬಾಯಿ ಕರ್ನಾಟಕಿ ಹಾಗೂ ಅಮೀರಬಾಯಿ ಕರ್ನಾಟಕಿ ಅವರು ‘ಕರ್ನಾಟಕಿ’ ಎಂದು ಹೆಸರಿಟ್ಟುಕೊಂಡು ಮುಂಬೈಯಲ್ಲಿ ಮಿಂಚುತ್ತಾರೆ. ಆದರೆ ಬಾಲಗಂಧರ್ವರು ಹಾಡುತ್ತಿದ್ದ ಹಾಡುಗಳನ್ನು ಗೋಹರಬಾಯಿ ಹಾಡಿದ ಪರಿಣಾಮ ಕೋರ್ಟ್‌ನಲ್ಲಿ ಬಾಲಗಂಧರ್ವರು ದಾವೆ ಹೂಡುತ್ತಾರೆ. ವಿಚಾರಣೆ ನಂತರ ಬಾಲಗಂಧರ್ವರು ಸೋಲುತ್ತಾರೆ. ಈ ಸೋಲಿನಿಂದಲೇ ಬಾಲಗಂಧರ್ವರು ಗೋಹರಬಾಯಿಗೆ ಸೋಲುತ್ತಾರೆ. ಮುಂದೆ ಅವರ ಕಂಪೆನಿಯನ್ನು ಗೋಹರಬಾಯಿ ಸೇರಿದರೆ, ಅಮೀರಬಾಯಿಗೆ ಹಿಮಾಲಯವಾಲಾನೊಂದಿಗೆ ಪ್ರೀತಿ ಅರಳುತ್ತದೆ. ಆದರೆ ಹಿಮಾಲಯವಾಲಾ ಕೈಕೊಟ್ಟಾಗ

‘‘ನಿನ್ನನೇ ನೆನೆಯುತೆ ರಾತ್ರಿಯ ಕಳೆದೆ

ಪ್ರೀತಿಯ ಮಾತಿಗೆ ನಾ ಮರುಳಾದೆ

ಸುಡುತಿರುವುದು ಆ ಪ್ರೀತಿಯ ಬೇಗೆ

ವಿರಹದ ಜಾವವ ಕಳೆಯುವುದು ಹೇಗೆ?’’

ಎಂದು ಅಳುತ್ತಾಳೆ. ಅಮೀರಬಾಯಿ ಪಾತ್ರ ಪೊರೆದ ಸುಜಾತಾ ನೀಲಗುಂದ ಅಕ್ಷರಶಃ ಅಳುತ್ತ ಹಾಡುತ್ತಾರೆ. ಬಳಿಕ ಬರುವ ನಾನಾ ಚಾಪೇಕರ್ ಸಮಾಧಾನಿಸುತ್ತಾನೆ. ಆಗ ಅವನ ಮಗಳ ಮದುವೆಗೆ ತನ್ನ ಚಿನ್ನಾಭರಣ ನೀಡುವ ಅಮೀರಬಾಯಿ, ತನ್ನ ಗಾಯನ ಮುಂದುವರಿಸುವುದಾಗಿ ಹೇಳುತ್ತಾಳೆ. ಅತ್ತ ಬಾಲಗಂಧರ್ವ ಕಂಪೆನಿಯಲ್ಲಿ ಮಿಂಚುವ ಗೋಹರಬಾಯಿ

‘‘ಮಾನಾಪಮಾನ ಜೀವನ ಯಾನ

ಗೆಲುವು ಸೋಲುಗಳ ಸಹಯಾನ’’

ಎಂದು ಹಾಡುತ್ತ, ನಟಿಸುತ್ತ, ನರ್ತಿಸುತ್ತ ಕಂಪೆನಿ ಮುನ್ನಡೆಸುತ್ತಾಳೆ. ಆಗ 63 ವರ್ಷ ವಯಸ್ಸಿನ ಬಾಲಗಂಧರ್ವರು 40 ವರ್ಷ ವಯಸ್ಸಿನ ಗೋಹರಬಾಯಿಯನ್ನು ಮದುವೆಯಾಗುತ್ತಾರೆ. ಇದರಿಂದ ಅವರ ಸೋದರ ಕಂಪೆನಿ ಬಿಟ್ಟು ಹೋಗುತ್ತಾರೆ. ಅವರ ಮೊದಲ ಪತ್ನಿಯೂ ದೂರಾಗುತ್ತಾರೆ. ಆದರೆ ನಷ್ಟದಲ್ಲಿದ್ದ ಕಂಪೆನಿಯನ್ನು ಗೋಹರಬಾಯಿ ಮುನ್ನಡೆಸುತ್ತಾಳೆ. ಮುಂದೆ ಬಾಲಗಂಧರ್ವರು ಅನಾರೋಗ್ಯಕ್ಕೀಡಾಗುತ್ತಾರೆ. ಜೊತೆಗೆ ಹಿಂದೂ-ಮುಸ್ಲಿಮ್ ಕೋಮುದಳ್ಳುರಿಯಲ್ಲಿ ಮುಂಬೈ ಬೇಯುವಾಗ ಅವರ ನಾಟಕ ಕಂಪೆನಿಯು ನಷ್ಟ ಅನುಭವಿಸುತ್ತದೆ. ಆರ್ಥಿಕ ಅಡಚಣೆಯಿಂದ ಬಾಲಗಂಧರ್ವರು ನರಳುತ್ತಾರೆ. ಆಗ ಪುಣೆಯ ಬ್ರಾಹ್ಮಣ ಸಮುದಾಯದವರು ಸನ್ಮಾನಿಸಿ, ನಿಧಿ ಅರ್ಪಿಸಲು ಆಹ್ವಾನಿಸುತ್ತಾರೆ. ಆದರೆ ಗೋಹರಬಾಯಿಯನ್ನು ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಲು ಬಾಲಗಂಧರ್ವರು ಮುಂದಾಗುತ್ತಾರೆ. ಇದಕ್ಕೆ ಸಂಘಟಕರು ‘ಕಾನಡಿ ದೇಶದಾಕಿ, ಮುಸಲರಕಿ ಅದಾಳ’ ಎಂದು ಗೋಹರಬಾಯಿಯನ್ನು ಕರೆತರಬಾರದೆಂದು ಕಟ್ಟಪ್ಪಣೆ ಮಾಡಿದಾಗ ಬಾಲಗಂಧರ್ವರು ಗೋಹರಬಾಯಿ ಬಂದರೆ ಸನ್ಮಾನಕ್ಕೆ ಹೋಗುವೆನೆಂದು ಹಟ ಹಿಡಿಯುತ್ತಾರೆ. ಕೊನೆಗೆ ಗೋಹರಬಾಯಿ ದೂರ ನಿಂತು ಕಾರ್ಯಕ್ರಮ ನೋಡುವೆ ಎಂದಾಗ ಒಪ್ಪುತ್ತಾರೆ. ಸಮಾರಂಭದ ದಿನ ಸನ್ಮಾನ ಸ್ವೀಕರಿಸಿ ಹಾಡುವಾಗ ಕುಸಿದು ಬೀಳುವ ಬಾಲಗಂಧರ್ವರ ಬದಲು ಗೋಹರಬಾಯಿ ಹಾಡಲು ಮುಂದಾದಾಗ ಪ್ರೇಕ್ಷಕರು ತಿರಸ್ಕರಿಸುತ್ತಾರೆ. ಆಗ ತಮಗೆ ಸನ್ಮಾನಿಸಿದಾಗ ಕೊಟ್ಟಿದ್ದೆಲ್ಲವನ್ನೂ ಹಿಂದಿರುಗಿಸಲು ಬಾಲಗಂಧರ್ವರು ಮುಂದಾಗುತ್ತಾರೆ. ಆಗ ಸಂಘಟಕರು ಬೇಡವೆಂದು ಮನವಿ ಮಾಡಿಕೊಂಡಾಗ ಯಾವುದಾದರೂ ದೇವಸ್ಥಾನಕ್ಕೊ, ಮಸೀದಿಗೊ ದೇಣಿಗೆ ಕೊಟ್ಟುಬಿಡು ಎಂದು ಬಾಲಗಂಧರ್ವರು ಚಾಪೇಕರ್‌ಗೆ ಹೇಳುತ್ತಾರೆ. ಬಾಲಗಂಧರ್ವರ ನಂತರ ಗೋಹರಬಾಯಿ ಬದುಕಿರುವವರೆಗೂ ಹಾಡು ಹಾಡುತ್ತಾಳೆ.

ಇಂಥ ಅಪರೂಪದ ನಾಟಕಕ್ಕೆ ಕಂಪೆನಿಯವರು ಬಳಸುವ ಹಾಗೆ ಪರದೆಗಳನ್ನು ಬಳಸಿದ್ದು ಮೆಚ್ಚತಕ್ಕ ಅಂಶ. ಆದರೆ ಕೆಲ ಕಲಾವಿದರ ಅಭಿನಯದ ಕೊರತೆಯಿಂದ ನಾಟಕ ಕಳೆಗಟ್ಟುವುದಿಲ್ಲ. ಅದರಲ್ಲೂ ಗೋಹರಬಾಯಿ ಪಾತ್ರ ಪೊರೆದ ಡಾ.ಶೃತಿ ರಾಜ್ ಅವರು ಕಾಲರ್ ಮೈಕ್ ಬಳಸಿದರೂ ಅವರ ಧ್ವನಿ ಪ್ರೇಕ್ಷಕರನ್ನು ತಲುಪುವುದು ಕಷ್ಟಸಾಧ್ಯವಿತ್ತು. ಆದರೆ ಬಾಲಗಂಧರ್ವ ಪಾತ್ರಧಾರಿ ಸುರೇಂದ್ರಗೌಡ ಗೋಕರ್ಣ, ಅಮೀರಬಾಯಿ ಪಾತ್ರಕ್ಕೆ ಬಣ್ಣ ಹಚ್ಚಿದ ಸುಜಾತಾ ನೀಲಗುಂದ, ನಾನಾ ಚಾಪೇಕರ್ ಪಾತ್ರಧಾರಿ ಸೋಮಶೇಖರ ಕಾರಿಗನೂರು ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಮನಸ್ಸು ಗೆಲ್ಲುತ್ತಾರೆ. ಅದರಲ್ಲೂ ಬೇಸ್ ಧ್ವನಿಯ ಸುರೇಂದ್ರಗೌಡ ಅವರು ಬಾಲಗಂಧರ್ವ ಪಾತ್ರಕ್ಕೆ ಕಳೆ ತಂದಿದ್ದಾರೆ.

ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ನಾಗಠಾಣದ ನಾರಾಯಣರಾವ್ ರಾಜಹಂಸನನ್ನು ಬಾಲಗಂಧರ್ವರೆಂದು ಕರೆದವರು ಲೋಕಮಾನ್ಯ ಬಾಲಗಂಗಾಧರನಾಥ ತಿಲಕರು. ಮಹಾರಾಷ್ಟ್ರದ ರಂಗಭೂಮಿಗೆ ಬಾಲಗಂಧರ್ವರ ಕೊಡುಗೆ, ಗೋಹರಬಾಯಿ ಹಾಗೂ ಅಮೀರಬಾಯಿ ಸೋದರಿಯರು ಮಹಾರಾಷ್ಟ್ರದಲ್ಲಿ ಮಿಂಚಿದ್ದು, ಅದರಲ್ಲೂ ಬಾಲಗಂಧರ್ವರಿಗೆ ಪ್ರತಿಗಂಧರ್ವಳಾಗಿ ಗೋಹರಬಾಯಿ ಮೆರೆದದ್ದು, ಕನ್ನಡ-ಮರಾಠಿ ಕೊಡುಕೊಳ್ಳುವಿಕೆ, ಕಂಪೆನಿ ಉಳಿಸುವ ಸಲುವಾಗಿ ನಟಿಯನ್ನು ಮದುವೆಯಾಗುವ ಅನಿವಾರ್ಯತೆ, ಪ್ರೀತಿ-ಪ್ರೇಮ, ವಿರಹ... ಇಂಥ ಹತ್ತಾರು ಅಂಶಗಳನ್ನು ಈ ನಾಟಕ ಅನಾವರಣಗೊಳಿಸುತ್ತದೆ. ಕನ್ನಡಿಗರಾದ ಬೀಳಗಿ ಸೋದರಿಯರು ಹಾಗೂ ಮರಾಠಿಯ ಬಾಲಗಂಧರ್ವರನ್ನು ಹೊಸಬಗೆಯ ಪ್ರೇಕ್ಷಕರಿಗೆ ತಲುಪಿಸಿದ ಹೆಗ್ಗಳಿಕೆ ಮಲ್ಲಿಕಾರ್ಜುನ ಕಡಕೋಳ ಅವರದು. ಆದರೆ ಈ ನಾಟಕ ಇನ್ನಷ್ಟು ಪರಿಣಾಮಕಾರಿಯಾಗಬೇಕಾದ ಜರೂರಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಗಣೇಶ ಅಮೀನಗಡ

contributor

Similar News