ಕಂದಗಲ್ಲ ಭಾರತಕ್ಕೆ ನಮಸ್ಕಾರ
ನಾಟಕ: ಕಂದಗಲ್ಲರಿಗೆ ನಮಸ್ಕಾರ ಅರ್ಥಾತ್ ಕಂದಗಲ್ಲ ಭಾರತ
ಮೂಲ: ಕಂದಗಲ್ಲ ಹನುಮಂತರಾಯರ
ಮಹಾಭಾರತ ಕುರಿತ ನಾಟಕಗಳು
ರಂಗರೂಪ/ನಿರ್ದೇಶನ: ಪ್ರಕಾಶ ಗರುಡ
ರಂಗವಿನ್ಯಾಸ: ಶ್ವೇತಾರಾಣಿ ಎಚ್.ಕೆ.
ವಸ್ತ್ರವಿನ್ಯಾಸ: ರಜನಿ ಗರುಡ
ಬೆಳಕಿನ ವಿನ್ಯಾಸ: ಮಧು ಮಳವಳ್ಳಿ
ಪ್ರಸ್ತುತಿ: ರೆಪರ್ಟರಿ ಕಲಾವಿದರು, ರಂಗಾಯಣ, ಧಾರವಾಡ
ರಂಗದ ಮೇಲೆ:
ಅಕ್ಕಮ್ಮಾ ದೇವರಮನಿ, ಹನುಮಂತ ರಾಯ್ಕರ, ರೋಹನ್ ದೇಸಾಯಿ, ವಿನೋದ ದಂಡಿನ, ದುಂಡೇಶ ಹಿರೇಮಠ, ಗೋಪಾಲ ಉಣಕಲ್, ಸುನೀಲ ಲಗಳಿ, ಕೃಷ್ಣ ಹೂಗಾರ, ಪವನ ದೇಶಪಾಂಡೆ, ಇಂದು ಡಿ., ರೇಖಾ ಹೊಂಗಲ, ಕೀರ್ತಿ ಸಿಂದೋಗಿ, ಯೋಗೇಶ ಬಗಲಿ.
ರಾಜು ತಾಳಿಕೋಟಿ ಅವರ ದೊಡ್ಡ ಕನಸು ಈಡೇರಿದೆ.
ಧಾರವಾಡ ರಂಗಾಯಣದ ನಿರ್ದೇಶಕರಾಗಿದ್ದ ರಾಜು ತಾಳಿಕೋಟಿ ಅವರು ನಿಧನರಾಗುವ ಮೊದಲು ‘ಕರ್ನಾಟಕದ ಷೇಕ್ಸ್‌ಪಿಯರ್’ ಎಂದೇ ಖ್ಯಾತರಾಗಿದ್ದ ಕಂದಗಲ್ಲ ಹನುಮಂತರಾಯರ ನಾಟಕಗಳನ್ನು ತಮ್ಮ ರಂಗಾಯಣದ ಮೂಲಕ ಪ್ರದರ್ಶಿಸಬೇಕೆಂದು ಕನಸು ಕಂಡಿದ್ದರು. ಆದರೆ ಅಕಾಲಿಕವಾಗಿ ನಿಧನರಾದರು. ಅವರ ಕನಸು ಕಮರಲಿಲ್ಲ. ಧಾರವಾಡ ರಂಗಾಯಣದ ಆಡಳಿತಾಧಿಕಾರಿ ಶಶಿಕಲಾ ಹುಡೇದ ನೇತೃತ್ವದಲ್ಲಿ, ಪ್ರಕಾಶ ಗರುಡ ಅವರು ‘ಕಂದಗಲ್ಲರಿಗೆ ನಮಸ್ಕಾರ ಅರ್ಥಾತ್ ಕಂದಗಲ್ಲ ಭಾರತ’ ನಾಟಕವನ್ನು ರಂಗಕ್ಕೇರಿಸಿದ್ದಾರೆ. ಈಮೂಲಕ ರಾಜು ತಾಳಿಕೋಟಿ ಅವರಿಗೆ ಗೌರವ ಸಲ್ಲಿಸಿದಂತಾಗಿದೆ. ರಾಜು ತಾಳಿಕೋಟಿ ಅವರು ಡಿ. ದುರ್ಗಾದಾಸ್ ಅವರ ಶಿಷ್ಯರು. ದುರ್ಗಾದಾಸ್ (ನೀನಾಸಂ ಪದವೀಧರೆಯಾಗಿದ್ದ ಹನುಮಕ್ಕ ಅವರ ತಂದೆ) ಅವರು ಕಂದಗಲ್ಲ ಹನುಮಂತರಾಯರ ಶಿಷ್ಯರು. ಹೇಗೆಂದರೆ ಕಂದಗಲ್ಲರು ಕಟ್ಟಿದ ಅರವಿಂದ ಸಂಗೀತ ನಾಟಕ ಮಂಡಳಿಯಲ್ಲಿದ್ದರು. ಕಂದಗಲ್ಲರ ‘ಚಿತ್ರಾಂಗದ’ ನಾಟಕದಲ್ಲಿ ಅರ್ಜುನನ ಪಾತ್ರಕ್ಕೆ ದುರ್ಗಾದಾಸ್ ಹೆಸರುವಾಸಿಯಾಗಿದ್ದರು. ಹೀಗಿದ್ದಾಗ ರಾಜು ತಾಳಿಕೋಟಿ ಅವರ ಕಂದಗಲ್ಲರ ನಾಟಕಗಳನ್ನು ಪ್ರದರ್ಶಿಸಬೇಕೆಂಬ ತಮ್ಮ ಕನಸನ್ನು ಪ್ರಕಾಶ ಗರುಡ ಅವರಿಗೆ ಹೇಳಿದರು. ಈ ಪ್ರಕಾಶ ಗರುಡ ಅವರು ದತ್ತಾತ್ರೇಯ ನಾಟಕ ಮಂಡಳಿ ಕಟ್ಟಿದ್ದ ಗರುಡ ಸದಾಶಿವರಾಯರು ಮೊಮ್ಮಗ. ಹೀಗೆ ಈ ನಾಟಕದ ಮೂಲಕ ರಂಗ ಪರಂಪರೆ ಬೆಳೆಯಿತು.
ಈ ನಾಟಕವು ಮೈಸೂರು ರಂಗಾಯಣದಲ್ಲಿ ಕಳೆದ ವಾರ (ಡಿಸೆಂಬರ್ 28) ಬಹುರೂಪಿಗೆ ಮುನ್ನುಡಿಯಾಗಿ ಪ್ರದರ್ಶನಗೊಂಡಿತು. ಮೂರೂವರೆ ಗಂಟೆಗಳ ಈ ನಾಟಕವು ಹಿಡಿದಿಟ್ಟಿತು. ಇದಕ್ಕೆ ಕಂದಗಲ್ಲ ಹನುಮಂತರಾಯರ ನಾಟಕಗಳ ಸಮಕಾಲೀನತೆ, ರಾಘವ ಕಮ್ಮಾರ ಅವರ ಸಂಗೀತ ಪೂರಕವಾಗಿದ್ದವು. ಕಂಠಪಾಠ ಮಾಡಿದ ಉದ್ದುದ್ದದ ಸಂಭಾಷಣೆಗಳನ್ನು ಕಲಾವಿದರು ಹೇಳುವಾಗ ಅಲ್ಲಲ್ಲಿ ಎಡವಿದರೂ ಸರಿಪಡಿಸಿಕೊಂಡರು. ಇದಕ್ಕೆ ಕಾರಣ; ಕಂದಗಲ್ಲರ ಅದ್ಭುತ ಸಂಭಾಷಣೆ. ಕಬ್ಬಿಣದ ಕಡಲೆ ಎಂದೇ ಜನಪ್ರಿಯ. ಇಂಥ ಸಂಭಾಷಣೆಗಳನ್ನು ನಿಧಾನವಾಗಿ, ಮನ ಮುಟ್ಟುವ ಹಾಗೆ ಕಲಾವಿದರು ಹೇಳಬಹುದಿತ್ತು. ಆದರೆ ಸಂಭಾಷಣೆ ಒಪ್ಪಿಸುವ ಭರದಲ್ಲಿದ್ದರು. ಅದರಲ್ಲೂ ಗೋಪಾಲ ಉಣಕಲ್ ಅವರು ದ್ರೌಪದಿ ತಂದೆ ದ್ರುಪದರಾಜ, ದುಶ್ಯಾಸನ, ಕೀಚಕ ಹಾಗೂ ಕಲಿ ಪಾತ್ರಗಳನ್ನು ನಿರ್ವಹಿಸಿ ನ್ಯಾಯ ಒದಗಿಸಿದರು. ಕೃಷ್ಣನ ಪಾತ್ರಕ್ಕೆ ಅಕ್ಕಮ್ಮಾ ಒಪ್ಪಿದ್ದಾರೆ. ಆದರೆ ಸಂಭಾಷಣೆಗಳನ್ನು ಕೊಂಚ ನಿಧಾನವಾಗಿ ಹೇಳಬೇಕಾದ ಅಗತ್ಯವಿದೆ. ಶಕುನಿ ಪಾತ್ರಕ್ಕೆ ವಿನೋದ ದಂಡಿನ ಇನ್ನಷ್ಟು ಜೀವ ತುಂಬಬೇಕಿತ್ತು. ಕೃಷ್ಣ-ಶಕುನಿಯರ ಸಂಭಾಷಣೆ ಇನ್ನಷ್ಟು ಮನ ಮುಟ್ಟಬೇಕಿತ್ತು. ಸೈರಂಧ್ರಿ ಹಾಗೂ ದ್ರೌಪದಿ ಪಾತ್ರಕ್ಕೆ ಜೀವ ತುಂಬಿದವರು ರೇಖಾ ಹೊಂಗಲ. ಹೀಗೆಯೇ ಕುಂತಿ, ಭಾನುಮತಿ, ಉತ್ತರೆ ಪಾತ್ರಕ್ಕೆ ಬಣ್ಣ ಹಚ್ಚಿದ ಇಂದು ಬಗಲಿ ಅವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದರು. ಒಟ್ಟಾರೆ ನಾಟಕ ಇನ್ನಷ್ಟು ಕಳೆಕಟ್ಟಬೇಕಿತ್ತು. ಏಕೆಂದರೆ ಬಳ್ಳಾರಿ ಜಿಲ್ಲೆಯಲ್ಲಿ ಕಂದಗಲ್ಲರ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಬೆಳಗಲ್ಲು ವೀರಣ್ಣ, ಸುಭದ್ರಮ್ಮ ಮನ್ಸೂರ ಮೊದಲಾದವರು ತಮ್ಮ ಭಾವಪೂರ್ಣ ಅಭಿನಯ ಹಾಗೂ ಸಶಕ್ತ ಸಂಭಾಷಣೆಗಳಿಂದ ಪ್ರೇಕ್ಷಕರ ಮನದಲ್ಲಿ ಅಚ್ಚೊತ್ತಿದ್ದರು. ಇಂದಿಗೂ ಬಳ್ಳಾರಿ ಜಿಲ್ಲೆಯಲ್ಲಿ ‘ರಕ್ತರಾತ್ರಿ’ ನಾಟಕವಾಡುವ ಕಲಾವಿದರು ಸಂಭಾಷಣೆ ಹೇಳುವಾಗ ತಪ್ಪಿದರೆ ಪ್ರೇಕ್ಷಕರು ಎದ್ದು ನಿಂತು ‘ಸಂಭಾಷಣೆ ತಪ್ಪಿದ್ರಿ’ ಎಂದು ಹೇಳುತ್ತಾರೆ. ಇದಕ್ಕೆಲ್ಲ ಬೆಳಗಲ್ಲು ವೀರಣ್ಣ, ಸುಭದ್ರಮ್ಮ ಮನ್ಸೂರ ಕಾರಣರು. ವೀರಣ್ಣ ಅವರು ‘ರಕ್ತರಾತ್ರಿ’ ನಾಟಕದ ಶಕುನಿ ಪಾತ್ರದಿಂದ ಪ್ರಸಿದ್ಧರಾಗಿದ್ದರು. ಭಾಷೆಯ ಮೇಲಿನ ಅವರ ಹಿಡಿತ, ಪ್ರಬುದ್ಧ ಅಭಿನಯ ಅದ್ಭುತವಾಗಿರುತ್ತಿತ್ತು. ಅವರು ಹೇಳುತ್ತಿದ್ದ ಶಕುನಿಯ ಮಾತು ಹೀಗಿದೆ- ‘‘ಈ ಶಕುನಿಯ ಎದೆ ಹುತ್ತದೊಳ್ ಅಡಗಿರುವ ಭೇದನೀತಿಯೆಂಬ ನಾಗಿಣಿಯ ಪೂತ್ಕಾರಕ್ಕೆ ಜಾತಿಗಳ ಝಳ ಹೊಡೆದು ಕಮರುವವು ಕೋಮಲ ಕರುಳ ಸೌಹಾರ್ದ ಸೂತ್ರಗಳು. ಮನುಷ್ಯತ್ವ ಮಣ್ಣುಗೂಡಿ ಸುರಶಿಲ್ಪಿ ವಿಶ್ವಕರ್ಮನ ಕೈಯ ಕುಂಚ ಕಠೋರ ಕುಠಾರಿಯಾಗುವುದು ಕೋಮು-ಜಾತಿಯ ಜಗಳದ ಘರ್ಜನೆಯಲ್ಲಿ. ಸರಸ್ವತಿಯ ತಂಬೂರಿ ಬಿರಿದು ಭೈರವ ಭೇರಿಯಾಗುವುದು ಕುಲಾಭಿಮಾನದ ಕಿಡಿಯಲಿ. ಅತಿ ತೀವ್ರವಾಗಿದೆ ಜಾತಿದ್ವೇಷ. ಇದರದೊಂದು ಕಿಡಿ ಬಗೆದು ನಿರ್ಮಿಸುವೆ ಕಾಳಾನಲ ಕಡಲನ್ನೇ ಕರ್ಣ-ಅಶ್ವತ್ಥಾಮರ ಮಧ್ಯದಲಿ. ಅಶ್ವತ್ಥಾಮನು ಪಾಂಡವರಿಗೆ ಪ್ರತಿಕಾಳಯಮ. ಅಶ್ವತ್ಥಾಮನನ್ನು ಯುದ್ಧಭೂಮಿಯಿಂದ ದೂರೀಕರಿಸದಿದ್ದರೆ ದಾರಿ ಕಾಣದು ಈ ಶಕುನಿಯ ಕಾರಸ್ಥಾನದ ಕಣ್ಣಿಗೆ ಅಶ್ವತ್ಥಾಮನ ಉರಿಗಣ್ಣು. ಸುರಸೇನಾಧಿಪತಿ ಷಣ್ಮುಖಸ್ವಾಮಿಯ ಕ್ಷಾತ್ರ ರಸಾಯನವೇ ತುಂಬಿ ತುಳುಕಾಡುತ್ತಿದೆ ಅಶ್ವತ್ಥಾಮನ ಎದೆಯೊಳು. ದುರ್ಯೋಧನನ ದಂಡಾಧಿಪತಿಯ ಪಟ್ಟವನ್ನು ಅಶ್ವತ್ಥಾಮನಿಗೆ ಕಟ್ಟಿದರೆ ಉಳಿಗಾಲವಿಲ್ಲ ಪಾಂಡವರಿಗೆ ಮತ್ ಅಳಿಗಾಲವಿಲ್ಲ ಆ ಕುರುಡನ ಕುನ್ನಿಗಳಿಗೆ. ಆದ್ದರಿಂದ ಹೂಡಿ ಹೊಡೆಯುವೆ ದುರ್ಯೋಧನನ ಎದೆಗೆ ಎರಡು ಬಾಣಗಳನ್ನು. ಗರತಿಯಾದ ಭಾನುಮತಿಯ ಶೀಲದ ಬಗ್ಗೆ ಸಂಶಯದ ಬಾಣ. ಇನ್ನೊಂದು; ಜಾತಿದ್ವೇಷದ ರಾಮಬಾಣ...’’
ಹೀಗೆ ಹೇಳಿ ವಿಕಟವಾಗಿ ನಕ್ಕು, ಕಣ್ಣು ತಿರುಗಿಸುತ್ತಿದ್ದರು ಬೆಳಗಲ್ಲು ವೀರಣ್ಣ. ಈಮೂಲಕ ಅವರು ಪ್ರೇಕ್ಷಕರ ಮನದಲ್ಲಿ ಅಚ್ಚೊತ್ತಿದ್ದರು. ಅವರ ಪುತ್ರ ಪ್ರಕಾಶ ಅವರು ಕೃಷ್ಣನ ಪಾತ್ರಕ್ಕೆ ಪ್ರಸಿದ್ಧರು. ಇವರಿಬ್ಬರು ‘ರಕ್ತರಾತ್ರಿ’ ನಾಟಕದಲ್ಲಿ ಪಾತ್ರ ನಿರ್ವಹಿಸಿದ್ದನ್ನು, ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದ್ದನ್ನು ನೋಡಿರುವೆ. ಹೀಗೆಯೇ ಭೀಷ್ಮನ ಪಾತ್ರಕ್ಕೆ ಹಂದಿಗನೂರು ಸಿದ್ರಾಮಪ್ಪ ಪ್ರಸಿದ್ಧರಾಗಿದ್ದರು. ಹೀಗೆ ಹೇಳಲು ಕಾರಣ; ಕಲಾವಿದರು ಸಂಭಾಷಣೆ ಹೇಳಿದ ಪರಿ ಮುಖ್ಯವಾಗುತ್ತದೆ. ಧಾರವಾಡ ರಂಗಾಯಣದ ಕಲಾವಿದರು ಹೇಳಿದ ಅಷ್ಟೂ ಸಂಭಾಷಣೆಗಳಲ್ಲಿ ಯಾವುದೂ ಮನದಲ್ಲಿ ಉಳಿಯಲಿಲ್ಲ. ಉಳಿಯಬೇಕಿತ್ತು ಎನ್ನುವ ವ್ಯಥೆಯಿದೆ. ಇದಕ್ಕಾಗಿ ಹೆಚ್ಚಿನ ತರಬೇತಿ ಅಗತ್ಯವಿತ್ತೇನೋ?
ಆಗಿನ ಹಾಗೆ ಆಳೆತ್ತರದ ನಟರ ಕೊರತೆ, ಕಂಚಿನ ಕಂಠದಿಂದ ಅಸ್ಖಲಿತವಾಗಿ ಸಂಭಾಷಣೆ ಹೇಳುವ ನಟರ ಕೊರತೆಯ ಕಾರಣಕ್ಕೆ ಕಂದಗಲ್ಲರ ನಾಟಕಗಳನ್ನು ಪ್ರದರ್ಶಿಸುವ ಸಾಹಸಕ್ಕೆ ಅನೇಕರು ಕೈಹಾಕುವುದಿಲ್ಲ. ಇಂಥ ಸಂದರ್ಭದಲ್ಲಿ ಧಾರವಾಡ ರಂಗಾಯಣದ ಕಲಾವಿದರ ಪ್ರಯತ್ನ ದೊಡ್ಡದು. ಅವರು ಇನ್ನಷ್ಟು ಶ್ರಮವಹಿಸಿದರೆ ನಾಟಕ ಇನ್ನಷ್ಟು ಯಶಸ್ವಿಯಾಗುತ್ತದೆ. ಇದನ್ನು ಹೇಳಲು ಕಾರಣವಿದೆ; ಕೆರೂರಿನ ಅದೃಶ್ಯಪ್ಪ ಮಾನ್ವಿ ಅವರು ಭೀಮನ ಪಾತ್ರದಿಂದ ಜನಪ್ರಿಯರಾಗಿದ್ದರು. ಕಂದಗಲ್ಲರು ಅದೃಶ್ಯಪ್ಪ ಮಾನ್ವಿ ಅವರನ್ನು ನೋಡಿರಲಿಲ್ಲ. ಆದರೆ ಅವರನ್ನು ಉದ್ದೇಶಿಸಿಯೇ ಬರೆದರೇನೋ ಎನ್ನುವ ಹಾಗೆ ಪ್ರೇಕ್ಷಕರು ಮಾತನಾಡಿಕೊಂಡರು.
ಮತ್ತೆ ಧಾರವಾಡ ರಂಗಾಯಣದ ಕಂದಗಲ್ಲರ ಕುರಿತ ನಾಟಕದತ್ತ ಹೊರಳುವೆ. ಈ ನಾಟಕಕ್ಕೆ ರಾಘವ ಕಮ್ಮಾರ ಗಾಯನ ಚೆನ್ನಾಗಿತ್ತು. ಆದರೆ ಅವರ ಸಂಗೀತ ಅಬ್ಬರವಾಗಿತ್ತು. ಇದನ್ನು ಮೆಲೊಡಿ ಮಾಡಬೇಕಿತ್ತು. ಇಷ್ಟನ್ನು ಹೊರತುಪಡಿಸಿದರೆ ನಾಟಕ ಚೆನ್ನಾಗಿದೆ. ಸಮಕಾಲೀನವಾಗುವ, ಸರ್ವಕಾಲಕ್ಕೂ ಸಲ್ಲುವ ಕಂದಗಲ್ಲರ ನಾಟಕಗಳನ್ನು ಒಟ್ಟುಗೂಡಿಸಿ ಪ್ರಕಾಶ ಗರುಡ ಅವರು ನಿರ್ದೇಶಿಸಿದ್ದು ಸಾಹಸವೇ ಸರಿ.
ಈಗಲೂ ಕಂದಗಲ್ಲರ ನಾಟಕಗಳಾಡುವ ಅಗತ್ಯವೇನಿದೆ ಎಂದು ಕೇಳುವವರಿಗೆ ಅವು ಸಮಕಾಲೀನವಾಗುತ್ತವೆಂಬ ಉತ್ತರ ಕೊಡಬಹುದು. ಅದರಲ್ಲೂ ‘ಟಂಗ್ ಟ್ವಿಸ್ಟ್’ ಎನ್ನುವ ಮಾದರಿಯಲ್ಲಿರುವ ಕಂದಗಲ್ಲರ ನಾಟಕದ ಸಂಭಾಷಣೆಗಳು ಕಲಾವಿದರಿಗೆ ಸವಾಲು.
ಇನ್ನು ನಾಟಕದ ಕುರಿತು; ಮಹಾಭಾರತ ಆಧರಿಸಿ ಕಂದಗಲ್ಲರು ದ್ರೌಪದಿ, ಸ್ವಯಂವರ, ಅಕ್ಷಯಾಂಬರ, ಬಾಣಸಿಗ ಭೀಮ, ನರವೀರ ಪಾರ್ಥ, ದೈವದುರಂತ ಕರ್ಣ, ಕುರುಕ್ಷೇತ್ರ, ಚಿತ್ರಾಂಗದ ಹಾಗೂ ಜಗನ್ಮಾಯ ನಾಟಕಗಳನ್ನು ರಚಿಸಿದ್ದಾರೆ. ಇದರಲ್ಲಿ ಏಳು ನಾಟಕಗಳನ್ನು ಕುಮಾರವ್ಯಾಸನ ‘ಕರ್ನಾಟಕ ಭಾರತ ಕಥಾಮಂಜರಿ’ ಕಾವ್ಯ ಆಧರಿಸಿ ನಾಟಕಗಳನ್ನು ರಚಿಸಿದ್ದಾರೆ. ಪ್ರಕಾಶ ಗರುಡ ಅವರು ಹೇಳುವಂತೆ ‘‘ಕಂಪನಿ ರಂಗಭೂಮಿಗೆ ಹೊಂದುವಂತೆ ತಮ್ಮದೇ ವಿಶಿಷ್ಟ ಭಾಷಾಶೈಲಿಯನ್ನು ಬಳಕೆ ಮಾಡಿದ್ದಾರೆ. ಆಗಿನ ಪ್ರೇಕ್ಷಕ ಮಾತ್ರ ಅವರ ನಾಟಕದ ಮುಕ್ತ ಛಂದಸ್ಸಿನ ಸಂಭಾಷಣೆಗೆ, ನವೀನ ಶೈಲಿಗೆ ಆಕರ್ಷಿತನಾಗಿದ್ದ. ಹೀಗಾಗಿ ಅವರ ನಾಟಕಗಳು ಈಗಲೂ ಜನಮಾನಸದಲ್ಲಿವೆ. ಪ್ರಸ್ತುತ ರಂಗರೂಪದಲ್ಲಿ ಕಂದಗಲ್ಲರು ’ಕರ್ನಾಟಕ ಭಾರತ ಕಥಾಮಂಜರಿ’ ಆಧರಿಸಿ ಬರೆದ ಏಳು ನಾಟಕಗಳಲ್ಲಿಯ ಪ್ರಮುಖ ದೃಶ್ಯಗಳನ್ನು ಜೋಡಣೆ ಮಾಡಿ ಒಟ್ಟು ಮಹಾಭಾರತದ ಕಥಾನಕದ ನಾಟ್ಯ ಚಿತ್ರಣ ನೀಡಲು ಪ್ರಯತ್ನಿಸಲಾಗಿದೆ. ಕುರುಕ್ಷೇತ್ರ ಯುದ್ಧದ ನಂತರ ಬರುವ ಪ್ರಸಂಗಗಳಾದ ಚಿತ್ರಾಂಗದ ಮತ್ತು ಜಗನ್ಮಾಯ (ಶ್ರೀಕೃಷ್ಣ ಗಾರುಡಿ) ನಾಟಕಗಳನ್ನು ಈ ರಂಗರೂಪದಲ್ಲಿ ಸೇರಿಸಿಲ್ಲ. ಈ ರಂಗರೂಪವು ಕಂದಗಲ್ಲರು ಮಹಾಭಾರತ ಕಥಾನಕವನ್ನು ಕುರಿತು ರಚಿಸಿದ ಏಳು ಕಂಪನಿ ನಾಟಕಗಳ ಹೃಸ್ವರೂಪವಾಗಿದ್ದರೂ ಕಥಾಸಂವಿಧಾನಕ್ಕೆ ಒಂದು ತಾರ್ಕಿಕ ಜೋಡಣೆ ನೀಡಲು ಪ್ರಯತ್ನಿಸಲಾಗಿದೆ. ಜಾತಿ-ಕುಲ ತಾರತಮ್ಯ, ರಾಷ್ಟ್ರೀಯತೆ, ದೇಸಿಯತೆ, ಖಾದಿ, ಮನುಕುಲಕ್ಕೆ ಮಾರಕವಾದ ವಿನಾಶಕಾರಿ ಯುದ್ಧ, ದಾಯಾದಿ ಮತ್ಸರ, ದ್ವೇಷರಾಜಕಾರಣ ಇವು ಸಮಕಾಲೀನ ವಿಷಯಗಳಾಗಿದ್ದು, ಕಂಪನಿ ನಾಟಕದ ಚೌಕಟ್ಟಿನಲ್ಲಿ ಮಹಾಭಾರತದ ಕಥೆಯಲ್ಲಿ ಬರುವ ಪಾತ್ರಗಳ ಮೂಲಕ ಮುಖಾಮುಖಿಯಾಗಿದ್ದಾರೆ’’ ಎನ್ನುವ ಮೂಲಕ ನಾಟಕದ ಕುರಿತು ಚಿತ್ರಣ ನೀಡಿದ್ದಾರೆ.
ಮಹಾತ್ಮಾ ಗಾಂಧೀಜಿ ಕರೆ ಕೊಟ್ಟ ಖಾದಿ ಬಟ್ಟೆಯ ಮಹತ್ವವನ್ನು ಸಾರುವ ಕುರಿತು ‘ಅಕ್ಷಯಾಂಬರ’ ನಾಟಕದಲ್ಲಿ ಕಂದಗಲ್ಲರು ನೇರವಾಗಿ ಹೇಳಲಿಲ್ಲ. ಹೇಳಿದ್ದರೆ ಬ್ರಿಟಿಷರಿಂದ ಪರವಾನಗಿ ಸಿಗುತ್ತಿರಲಿಲ್ಲ ಜೊತೆಗೆ ಬಂಧನವಾಗುವ ಭೀತಿಯಿತ್ತು. ಇದಕ್ಕಾಗಿ ಅವರು ಪೌರಾಣಿಕ ನಾಟಕದ ಮೊರೆ ಹೋದರು. ನೂಲುವ ಚರಕವನ್ನು ಶ್ರೀಕೃಷ್ಣನ ಸುದರ್ಶನ ಚಕ್ರಕ್ಕೂ ಖಾದಿ ಬಟ್ಟೆಯನ್ನು ದ್ರೌಪದಿಯ ಮಾನ ಕಾಯ್ದ ಅಕ್ಷಯಾಂಬರಕ್ಕೂ ಹೋಲಿಸಿ ಬರೆದದ್ದು ಅವರ ವಿಶೇಷ. ಹೀಗೆಯೇ ಉಳಿದ ನಾಟಕಗಳೂ ವಿಶೇಷವೇ.