ನೀರಿಳಿಯದ ಗಂಟಲಿಗೆ ಡೇಟಾ ಸೆಂಟರ್ ಕಡುಬು
ಸಾಂದರ್ಭಿಕ ಚಿತ್ರ (AI)
ಇತ್ತೀಚೆಗೆ ಮಂಗಳೂರಿಗೆ ಭೇಟಿ ನೀಡಿದ ಗೃಹ ಮತ್ತು ಐಟಿ-ಬಿಟಿ ಖಾತೆಯ ಸಚಿವ ಪ್ರಿಯಾಂಕ್ ಖರ್ಗೆ ಅವರು, ಬೆಂಗಳೂರಿನಿಂದ ಹೊರಗೆ ಐಟಿ ಉದ್ಯಮಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ, ದೇಶದ ಪ್ರಥಮ ‘ಸುಸ್ಥಿರ’ ಡೇಟಾ ಸೆಂಟರ್ ಅನ್ನು ತಣ್ಣೀರುಬಾವಿ ಸಮುದ್ರ ತೀರದ ಬಳಿ ಸ್ಥಾಪಿಸುವ ಕುರಿತು ಸರಕಾರ ಪರಿಶೀಲನೆ ನಡೆಸುತ್ತಿದೆ. ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು ಮತ್ತು ಜಿಲ್ಲಾ ಪಂಚಾಯತ್ ಸಿಇಒ ಜೊತೆ ಚರ್ಚಿಸಿ, ಈ ಕುರಿತು ಶೀಘ್ರವೇ ಶ್ವೇತಪತ್ರ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.
ಸಾಮಾನ್ಯ ಡೇಟಾ ಸೆಂಟರ್‌ಗಳಿಗೆ ಹೋಲಿಸಿದರೆ, ಈ ‘ಸುಸ್ಥಿರ ಡೇಟಾ ಸೆಂಟರ್‌ಗಳು’ ಎಂದರೆ ಏನು ಎಂದು ಹುಡುಕಿ ಹೊರಟರೆ, ಆಕರ್ಷಕ ಶಬ್ದಗಳ ಮಾಯಾಜಾಲ ಬಿಟ್ಟರೆ ಬೇರೇನೂ ಕಾಣಿಸುತ್ತಿಲ್ಲ. ಮಂಗಳೂರಿನಲ್ಲಿ ಇತ್ತೀಚೆಗೆ ನಡೆದಿದ್ದ ಕರ್ನಾಟಕ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕದ ಡೇಟಾ ಸೆಂಟರ್ ನೀತಿ 2026-31ಕ್ಕೆ ರಾಜ್ಯ ಸಚಿವಸಂಪುಟ ಅನುಮೋದನೆ ನೀಡಿತ್ತು. ಅದರ ಅನ್ವಯ, ರಾಜ್ಯದಲ್ಲಿ 2031ಕ್ಕೆ ಮುನ್ನ ಒಟ್ಟು ಒಂದು ಗಿಗಾವ್ಯಾಟ್ ಸಾಮರ್ಥ್ಯದ ಡೇಟಾ ಸೆಂಟರ್ ಸ್ಥಾಪನೆಯ ಗುರಿ ಮತ್ತು ಅದಕ್ಕಾಗಿ 1,300.45 ಕೋಟಿ ರೂ.ಗಳ ಬಜೆಟರಿ ಅನುದಾನವನ್ನು ಪ್ರಕಟಿಸಲಾಗಿದೆ. ನೀರಿನ ಬಳಕೆ ಕಡಿಮೆ ಮಾಡುವ, ವಿದ್ಯುತ್ ಕಡಿಮೆ ಬಳಸುವ, ಪರಿಸರಕ್ಕೆ ಹಾನಿಯಾಗದ, ಭವಿಷ್ಯದಲ್ಲಿ ತೊಂದರೆಯಾಗದ ‘ಸುಸ್ಥಿರ’ ಡೇಟಾ ಸೆಂಟರ್ ಸ್ಥಾಪನೆ ಸರಕಾರದ ಉದ್ದೇಶ ಎಂದು ಸರಕಾರದ ನೀತಿ ಹೇಳುತ್ತಿದೆ.
ಆದರೆ, ಇದನ್ನು ಸಾಧಿಸುವುದು ಹೇಗೆ ಎಂಬ ಬಗ್ಗೆ ಸರಕಾರಕ್ಕೆ ಸ್ಪಷ್ಟ ಕಲ್ಪನೆಗಳು ಇದ್ದಂತಿಲ್ಲ. ವಿದ್ಯುತ್ತಿನ ಪರಿಣಾಮಕಾರಿ ಬಳಕೆ ಮತ್ತು ನೀರಿನ ಪರಿಣಾಮಕಾರಿ ಬಳಕೆಗಳನ್ನು ಸಾಧಿಸುವುದಕ್ಕೆ ಖಾಸಗಿ ಡೇಟಾ ಸೆಂಟರ್ ಉದ್ಯಮಗಳಿಗೆ ಸರಕಾರದಿಂದ ಪ್ರೋತ್ಸಾಹನ/ಸಬ್ಸಿಡಿಗಳ ಕೊಡುಗೆಯನ್ನು ನೀತಿ ಪ್ರಕಟಿಸಿದೆ. ಈ ಪದಗಳ ಜಾಲದಲ್ಲಿ ‘ಸುಸ್ಥಿರ’ ಎಂದರೇನು ಪ್ರಶ್ನೆಗೆ ನಿಖರ ಉತ್ತರವಿಲ್ಲ. ಯಾಕೆಂದರೆ, ಯಾವುದೇ ಡೇಟಾ ಸೆಂಟರ್ ತನ್ನ 24x7 ಕಾರ್ಯಾಚರಣೆಗಾಗಿ ಅಗಾಧ ಪ್ರಮಾಣದ ವಿದ್ಯುತ್ ಬಳಸುವುದು ಅನಿವಾರ್ಯ. ಹಾಗೆಯೇ ಅದು ಕಾರ್ಯಾಚರಿಸುವಾಗ ಬಿಸಿಯಾಗುವುದನ್ನು ತಡೆಯಲು, ತಂಪಾಗಿರಿಸುವ ಫ್ಯಾನ್‌ಗಳ ಸದ್ದು ಅನಿವಾರ್ಯ; ಇಡಿಯ ಸ್ಥಾವರವನ್ನು ತಂಪಾಗಿರಿಸಲು ನೀರೂ ಕೂಡ ಅನಿವಾರ್ಯ. ಇವಿಲ್ಲದೇ ಡೇಟಾ ಸೆಂಟರ್ ಇಲ್ಲ. 400MW ಸಾಮರ್ಥ್ಯದ ಒಂದು ಸಾಮಾನ್ಯ ಡೇಟಾ ಸೆಂಟರಿಗೆ ಪ್ರತಿದಿನ ಎರಡೂವರೆ ಕೋಟಿ ಲೀಟರ್ ನೀರು, 96 ಲಕ್ಷ ಯೂನಿಟ್ ವಿದ್ಯುತ್ ಅಗತ್ಯವಿದೆ. ತಾನು ಹೇಳುತ್ತಿರುವ ಸುಸ್ಥಿರ ಡೇಟಾ ಸೆಂಟರಿಗೆ ಏನೆಲ್ಲ ಬೇಕು ಎಂಬುದನ್ನು ಸರಕಾರವೇ ಸ್ಪಷ್ಟಪಡಿಸಬೇಕಿದೆ.
ಕರಾವಳಿಯಲ್ಲಿ, ಅದರಲ್ಲೂ ಮಂಗಳೂರಿನಲ್ಲಿ ಕಡು ಬೇಸಗೆಯ ನಾಲ್ಕು ತಿಂಗಳುಗಳಲ್ಲಿ ಕುಡಿಯುವ ನೀರಿಗೆ ತತ್ವಾರ ಇರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಬರ ಪೀಡಿತ ಎಂದು ಗುರುತಿಸಲಾಗಿರುವ ಈ ವರ್ಷವಂತೂ ಈಗಾಗಲೇ ಕುಡಿಯುವ ನೀರಿಗಾಗಿ ಅಣೆಕಟ್ಟಿನ ಕಿಂಡಿಗಳನ್ನು ಅವಧಿಪೂರ್ವ ಮುಚ್ಚಿ ನೀರನ್ನು ಕಾಪಿಡಲು ವ್ಯವಸ್ಥೆಗಳಾಗುತ್ತಿವೆ. ವಾಸ್ತವ ಹೀಗಿರುವಾಗ, ಇನ್ನೂ ಹೆಚ್ಚು ನೀರಿಗೆ ಮೂಲ ಎಲ್ಲಿದೆ ಎಂಬುದನ್ನು ಸರಕಾರ ಸಾರ್ವಜನಿಕರಿಗೆ ಬಹಿರಂಗಪಡಿಸಿ ಮುಂದುವರಿಯಬೇಕು. ಸಮುದ್ರದ ನೀರು ಬಳಸುತ್ತೇವೆ ಎನ್ನುವುದಾದರೆ, ಆ ಉಪ್ಪು ನೀರು ಡೇಟಾ ಸೆಂಟರ್ ಸ್ಥಾವರದ ಶಾಖವನ್ನು ಕಡಿಮೆ ಮಾಡಿಯಾವೇ ಹೊರತು ಸರ್ವರ್‌ಗಳ ಸೂಕ್ಷ್ಮ ಭಾಗಗಳನ್ನಲ್ಲ. ಅವಕ್ಕೆ ಸಮುದ್ರ ನೀರನ್ನು ಬಳಸಲು ಸಜ್ಜುಗೊಳಿಸುವುದು ಇನ್ನಷ್ಟು ದುಬಾರಿ ವ್ಯವಹಾರ.
ಇನ್ನು, ವಿದ್ಯುತ್ತಿಗೆ ನವೀಕರಿಸಬಹುದಾದ ಇಂಧನ ಮೂಲಗಳನ್ನು ಬಳಸಲಾಗುವುದು ಎಂಬ ವಾದವನ್ನು ಮುಂದೊಡ್ಡಲಾಗುತ್ತಿದೆ. ಇದು ಕರಾವಳಿಗೆ ಇನ್ನಷ್ಟು ಮಾರಕ ಆಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ನ್ಯೂಕ್ಲಿಯರ್ ವಿದ್ಯುತ್ ಸ್ಥಾವರಕ್ಕೆ ಇದೆಲ್ಲ ಪೀಠಿಕೆ ಆಗಿರಲೂಬಹುದು. ಹೀಗೆ ಡೇಟಾ ಸೆಂಟರ್ ಸನ್ಯಾಸಿ ಸಂಸಾರವನ್ನು ಹಿಗ್ಗಿಸುವ ಮುನ್ನ, ರಾಜ್ಯಸರಕಾರವು ಕರಾವಳಿಯ ಧಾರಣ ಸಾಮರ್ಥ್ಯವನ್ನು ಅಧ್ಯಯನ ಮಾಡಿ, ವಿವರಗಳನ್ನು ಪಾರದರ್ಶಕವಾಗಿಸಬೇಕು.
ಗಮನಿಸಬೇಕಾದ ಮತ್ತೊಂದು ಸಂಗತಿ ಇದೆ. ಅಮೆರಿಕ, ಯುರೋಪ್‌ನ ರಕ್ಕಸ ಟೆಕ್ ಕಂಪೆನಿಗಳ ಡೇಟಾ ಸೆಂಟರ್‌ಗಳು ಅಲ್ಲಿ ಸಮೀಪದಲ್ಲೇ ಸ್ಥಾಪನೆ ಆಗುವುದು ಬಿಟ್ಟು, ಭಾರತದಂತಹ ದೇಶಗಳಿಗೆ ಯಾಕೆ ಬರುತ್ತಿವೆ? ಯಾಕೆಂದರೆ ಅಮೆರಿಕ ಮತ್ತು ಯುರೋಪ್‌ನಾದ್ಯಂತ ಡೇಟಾ ಸೆಂಟರ್‌ಗಳು ಮಾಡಿರುವ ಅವಾಂತರಗಳಿಗೆ ವ್ಯಾಪಕ ವಿರೋಧ ವ್ಯಕ್ತವಾಗತೊಡಗಿದೆ. ಎಷ್ಟರ ಮಟ್ಟಿಗೆ ಎಂದರೆ, ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ವೇಳೆ ಬಲವಾಗಿ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷದ ಪರ ಬಹುಮತ ನೀಡಿದ್ದ ಟೆಕ್ಸಾಸ್, ಒಹಾಯೊ, ಜಾರ್ಜಿಯಾ, ಅಯೋವಾ ಸೇರಿದಂತೆ 8-9 ರಾಜ್ಯಗಳು ನವೆಂಬರ್ ಆದಿಯಲ್ಲಿ ಅಮೆರಿಕದ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ, ರಿಪಬ್ಲಿಕನ್ ಪಕ್ಷದ ವಿರುದ್ಧ ಮತ ಚಲಾಯಿಸಿದ್ದವು. ಡೇಟಾ ಸೆಂಟರ್ ವಿರೋಧಿಗಳು ಟ್ರಂಪ್ ಪಕ್ಷದ ಸೋಲಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಎಂಬುದನ್ನು ಈಗ ವಿಶ್ಲೇಷಕರು ಗುರುತಿಸಿದ್ದಾರೆ.
ಈ ಯಾರೋ ಪರಕೀಯರ ಡೇಟಾ ಸಂಗ್ರಹಿಸಿಟ್ಟುಕೊಳ್ಳುವ ಡೇಟಾ ಸೆಂಟರ್‌ಗಳು, ಅಪಾರ ಪ್ರಮಾಣದಲ್ಲಿ ಸರಕಾರಿ ಮೂಲಸೌಕರ್ಯ ಹೂಡಿಕೆಯನ್ನು ಬೇಡುತ್ತವೆ. ನಾಳೆ ಕೃತಕ ಬುದ್ಧಿಮತ್ತೆಯ ಅಬ್ಬರದ ಬಬಲ್ ಒಡೆದು ಮಾರುಕಟ್ಟೆ ಕುಸಿದರೆ ಇದೆಲ್ಲ ಎಲ್ಲಿಗೆ ತಲುಪಲಿವೆ ಎಂಬುದನ್ನು ಊಹಿಸಿಕೊಂಡು ಎಚ್ಚರಿಕೆಯ ಹೆಜ್ಜೆ ಇಡದಿದ್ದರೆ, ಕರ್ನಾಟಕ ಅಕಾರಣ ಅಪಾಯಕ್ಕೆ ಸಿಲುಕಲಿದೆ. ಇಷ್ಟೆಲ್ಲ ನೆಲ-ಜಲ-ವಾತಾವರಣ ಹೂಡಿಕೆ ಮಾಡಿಯೂ, ಡೇಟಾಸೆಂಟರ್‌ಗಳು ಸೃಷ್ಟಿ ಮಾಡುವ ಉದ್ಯೋಗಗಳು ಅಷ್ಟರಲ್ಲೇ ಇವೆ. ಇದರ ಬದಲು ಸ್ವತಃ ಪ್ರಿಯಾಂಕ್ ಖರ್ಗೆಯವರು ಮೊನ್ನೆ ಉದ್ಘಾಟಿಸಿದ ಡೆಲಾಯಿಟ್ ಜೊತೆ ಇತರ ಮೂರು ಬಿಗ್ ಫೋರ್ ಲೀಗ್ ಕಂಪೆನಿಗಳಾದ ಪ್ರೈಸ್ ವಾಟರ್ ಹೌಸ್ ಕೂಪರ್ಸ್ (PwC), ಅರ್ನ್ಸ್ಟ್ ಆಂಡ್ ಯಂಗ್ (EY), KPMGಗಳಿಗೂ ಮಂಗಳೂರಿನಲ್ಲಿ ಅವಕಾಶ ತೆರೆಯಲಿ. ಬ್ಯಾಂಕಿಂಗ್‌ನ ತೊಟ್ಟಿಲಾಗಿದ್ದ ಕರಾವಳಿಗೆ ಅಕೌಂಟಿಂಗ್‌ನ ತೊಟ್ಟಿಲಾಗುವ ಅವಕಾಶ ಮೂಡಿಬರಲಿ. ಇಲ್ಲಿ ಆ ರಂಗಕ್ಕೆ ಟೈಮ್ ಟೆಸ್ಟೆಡ್ ಪ್ರತಿಭೆಗಳು ಲಭ್ಯವಿವೆ. ಬೇಕಿದ್ದರೆ ಗ್ಲೋಬಲ್ ಕೆಪಾಸಿಟಿ ಸೆಂಟರ್‌ಗಳು (GCC) ಇಲ್ಲಿಗೆ ಬರಲಿ. ಅದು ಬಿಟ್ಟು ಜನಸಂದಣಿ ಇರುವಲ್ಲೇ ಸ್ಥಾಪನೆಗೊಂಡು ಊರಿಗೆ ಕಿಚ್ಚಿಡುವ ಡೇಟಾ ಸೆಂಟರ್‌ಗಳು ಕರಾವಳಿಯ ಮಾತ್ರವಲ್ಲ, ನಾಡಿನ ಆರೋಗ್ಯಕ್ಕೆ ಒಳ್ಳೆಯದಲ್ಲ.