Photo credit: PTI

ರಾಜ್ಯ ಹಾಗೂ ಕೇಂದ್ರ ಸರಕಾರದ ಮುಖ್ಯಸ್ಥರಾಗಿ 25 ವರ್ಷ ಕಳೆದಿರುವ ನರೇಂದ್ರ ಮೋದಿ ಅವರ ಸಾರ್ವಜನಿಕ ನಾಯಕತ್ವದ ಅಧ್ಯಯನ ನಡೆಸುವ ಮೂಲಕ, ಅದನ್ನು ದೇಶದ ಎಲ್ಲರಿಗೂ ಲಾಭದಾಯಕವಾದ ‘ಸಾರ್ವತ್ರಿಕ ಜ್ಞಾನದ ಭಾಗ’ ಆಗುವಂತೆ ಮಾಡುವ ನಿಟ್ಟಿನಲ್ಲಿ ರಾಷ್ಟ್ರೀಯ ಕಾರ್ಯಾಗಾರಗಳ ಸರಣಿಯೊಂದನ್ನು ನಡೆಸುವುದಾಗಿ ದೇಶದ ‘ಥಿಂಕ್ ಟ್ಯಾಂಕ್’ ನೀತಿ ಆಯೋಗ ಪ್ರಕಟಿಸಿದೆ.

ಈ ಕಾರ್ಯಾಗಾರ ಸರಣಿಯ ಮೊದಲ ಕಾರ್ಯಾಗಾರವು ಇದೇ 17ರಂದು ದಿಲ್ಲಿಯ ಭಾರತ ಮಂಡಪಂನಲ್ಲಿ ನಡೆದಿದ್ದು, ಅದರ ಶೀರ್ಷಿಕೆ ‘ಧ್ಯೇಯವಾಗಿ ನಾಯಕತ್ವ’ ಎಂದಿತ್ತು. ಇದಲ್ಲದೆ, 2027ರ ಜನವರಿಯಲ್ಲಿ ‘ಹಂಚಿಕೆಯಾಗಬಲ್ಲ ಆಡಳಿತ’; ಎಪ್ರಿಲ್‌ನಲ್ಲಿ ‘ಒಳಗೊಳ್ಳುವಿಕೆಯಾಗಿ ಅಭಿವೃದ್ಧಿ’; ಜುಲೈನಲ್ಲಿ ‘ನಾಗರಿಕತೆಯಾಗಿ ಗುರುತಿಸಿಕೊಳ್ಳುವಿಕೆ’ ಮತ್ತು ಸೆಪ್ಟಂಬರ್‌ನಲ್ಲಿ ‘ಜಾಗತಿಕ ಶಕ್ತಿಯಾಗಿ ಭಾರತ’ ಎಂಬ ಶೀರ್ಷಿಕೆಯಡಿ ಕಾರ್ಯಾಗಾರಗಳ ಸರಣಿ ನಡೆಯಲಿದೆಯಂತೆ. ಪ್ರಧಾನ ಸೇವಕರಾಗಿ ಅವರ ಅಂತ್ಯೋದಯ, ಜನ ಭಾಗೀದಾರಿ, ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಸಬ್ ಕಾ ವಿಶ್ವಾಸ್ ಸಬ್ ಕಾ ಪ್ರಯಾಸ್ ಮತ್ತು 2047ರ ವಿಕಸಿತ ಭಾರತದ ಗುರಿಗಳಿಂದ ದೇಶಕ್ಕೆ ಅಗತ್ಯವಿರುವ ಪಾಠಗಳನ್ನು ಕಲಿಯುವ ಪ್ರಕ್ರಿಯೆ ಇದು. ಮೋದಿಯವರ ಆಡಳಿತ ಪ್ರಕ್ರಿಯೆಯಲ್ಲಿ ಪಾಲ್ಗೊಂಡವರ ಅನುಭವಗಳನ್ನು ದಾಖಲಿಸಿ, ಅದನ್ನು ಅಧಿಕಾರ ವರ್ಗಕ್ಕೆ, ತರಬೇತಿ ಸಂಸ್ಥೆಗಳಿಗೆ, ವಿವಿಗಳಿಗೆ, ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಕಲಿಕಾ ಸಂಪನ್ಮೂಲಗಳಾಗಿ ರೂಪಿಸುವುದು ಈ ಕಾರ್ಯಾಗಾರಗಳ ಉದ್ದೇಶ ಎಂದು ನೀತಿ ಆಯೋಗ ಹೇಳಿಕೊಂಡಿದೆ.

ನರೇಂದ್ರಮೋದಿಯವರು 2001ರ ಅಕ್ಟೋಬರ್ 7ರಂದು ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಂದಿನಿಂದ ಇಲ್ಲಿಯ ತನಕವೂ ಸರಕಾರವೊಂದರ ಮುಖ್ಯಸ್ಥರಾಗಿಯೇ ಕಾರ್ಯಾಚರಿಸುತ್ತಿದ್ದಾರೆ. ಅಂದಾಜು 14 ವರ್ಷಗಳ ರಾಜ್ಯಸರಕಾರದ ಆಡಳಿತ ಮತ್ತು ಅಂದಾಜು 12 ವರ್ಷಗಳ ಭಾರತ ಸರಕಾರದ ಆಡಳಿತಾನುಭವ ಸಣ್ಣದೇನಲ್ಲ. ಅವರ ಆಡಳಿತದ ಅವಧಿಯಲ್ಲಿನ ಸಾಧಕ-ಬಾಧಕಗಳ ವಿಶ್ಲೇಷಣೆ ನಡೆಯಲು ಇದು ಸಕಾಲ. ಅದರಲ್ಲಿ ಅನುಮಾನವೇನಿಲ್ಲ. ಆದರೆ ಈ ಕೆಲಸ ಸರಕಾರದ ಅಡಿಯಾಳಾಗಿರುವ ನೀತಿ ಆಯೋಗ ಮಾಡಬೇಕಾದಂತಹದೇ? ವಿಶ್ಲೇಷಣೆಯೊಂದು ನಿಷ್ಪಕ್ಷದಿಂದ ನಡೆಯಬೇಡವೆ?

2015ರ ಜನವರಿಯಲ್ಲಿ ಮೈದಳೆದ ನೀತಿ ಆಯೋಗವು ಭಾರತದ ಪ್ರಜಾತಾಂತ್ರಿಕ ವ್ಯವಸ್ಥೆಯ ಅತ್ಯಂತ ಎಳೆಯ ಸಂಸ್ಥೆಗಳಲ್ಲಿ ಒಂದು. ಅದು ಸ್ಥಾಪನೆ ಆದದ್ದು, ಸರಕಾರದ ಆರ್ಥಿಕ ಅಭಿವೃದ್ಧಿಗೆ ವೇಗ ನೀಡುವ, ಕೋಪರೇಟಿವ್ ಫೆಡರಲಿಸಂ ಅನ್ನು ಬೆಳೆಸುವ ಉದ್ದೇಶದಿಂದ.ಮೇಲ್ಮಟ್ಟದಲ್ಲಿ ತೀರ್ಮಾನಗಳನ್ನು ಕೈಗೊಂಡು, ಅದು ತಳಮಟ್ಟಕ್ಕೆ ಹನಿಸುವ ಹಳೆಯ ವಿಧಾನದ ಬದಲು ಆರ್ಥಿಕ ನೀತಿಗಳನ್ನು ರೂಪಿಸುವಲ್ಲಿ ರಾಜ್ಯ ಸರಕಾರಗಳು ಸ್ವತಃ ಪಾಲ್ಗೊಳ್ಳಬೇಕೆಂಬ ಉದಾತ್ತ ನೀತಿ ತನ್ನದು ಎಂದು ನೀತಿ ಆಯೋಗದ ವೆಬ್‌ಸೈಟ್ ಈವತ್ತಿಗೂ ಹೇಳಿಕೊಳ್ಳುತ್ತಿದೆ.

ನೀತಿ ಆಯೋಗ ಅಸ್ತಿತ್ವಕ್ಕೆ ಬರುವ ಮುನ್ನ ಆ ಜಾಗದಲ್ಲಿದ್ದ ಯೋಜನಾ ಆಯೋಗ ಸ್ಥಾಪನೆಗೊಂಡದ್ದು 1950ರ ಮಾರ್ಚ್ 15ರಂದು. ಪ್ರಧಾನಿ ಜವಾಹರ ಲಾಲ್ ನೆಹರೂ ಅವರು ಸ್ವತಂತ್ರ ಭಾರತದ ಆರ್ಥಿಕ ಸವಾಲುಗಳು, ಬಡತನ, ಅನಕ್ಷರತೆ, ಸಂಪನ್ಮೂಲಗಳ ಕೊರತೆಯಂತಹ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಕಂಡ ಕನಸದು. ದೇಶದ ಸಂಪನ್ಮೂಲಗಳ ವಿಶ್ಲೇಷಣೆ, ನಿಧಿಗಳ ಹಂಚಿಕೆ, ಸಂತುಲಿತವಾದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಪಂಚವಾರ್ಷಿಕ ಯೋಜನೆಗಳ ರೂಪಿಸುವಿಕೆ ಯೋಜನಾ ಆಯೋಗದ ಕಾರ್ಯವ್ಯಾಪ್ತಿಯಾಗಿತ್ತು. 1950ರಿಂದ 2014ರ ನಡುವೆ 12 ಪಂಚವಾರ್ಷಿಕ ಯೋಜನೆಗಳು ಕಾರ್ಯರೂಪಕ್ಕೆ ಬಂದಿದ್ದು, ದೇಶ ಈವತ್ತಿನ ಸ್ಥಿತಿಯಲ್ಲಿ ಇರುವುದಕ್ಕೆ ತಳಪಾಯ ಹಾಕುವುದರಲ್ಲಿ ಮಹತ್ವದ ಭೂಮಿಕೆ ಯೋಜನಾ ಆಯೋಗದ್ದು.

ಯೋಜನಾ ಆಯೋಗದ ಕೊನೆಯ ಮುಖ್ಯಸ್ಥರಾಗಿದ್ದ ಮೊಂಟೇಕ್ ಸಿಂಗ್ ಅಹ್ಲುವಾಲಿಯಾ ಅವರು, ಯೋಜನಾ ಆಯೋಗದ ಕಾರ್ಯವ್ಯಾಪ್ತಿ ಮತ್ತು ಕ್ಷಮತೆಗಳು ಉದಾರೀಕೃತ ವ್ಯವಸ್ಥೆಯೊಂದರಲ್ಲಿ ಸೀಮಿತಗೊಳ್ಳುತ್ತಿವೆ. ಹಾಗಾಗಿ, ಅದರ ಪಾತ್ರ ಮರುಚಿಂತನೆ ಆಗಬೇಕಿದೆ. ಸರಕಾರದ ನೀತ್ಯಾತ್ಮಕ ಚೌಕಟ್ಟಿನ ಒಳಗೆ ಖಾಸಗಿ ಮತ್ತು ವಿದೇಶಿ ಹೂಡಿಕೆಗಳಿಗೂ ಅವಕಾಶ ಕಲ್ಪಿಸುವ ಮೂಲಕ ವೇಗವಾಗಿ ಬೆಳೆಯಲು ಸರಕಾರವು ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕಾಗುತ್ತದೆ. ಈ ಸವಾಲನ್ನು ಸ್ವೀಕರಿಸಬಲ್ಲ ಮತ್ತು ಕೇಂದ್ರ-ರಾಜ್ಯ ಸರಕಾರಗಳೆರಡಕ್ಕೂ ಸ್ವೀಕಾರಾರ್ಹ ಆಗಬಲ್ಲ ಅಭಿವೃದ್ಧಿ ತಂತ್ರಗಳನ್ನು ವ್ಯಾಖ್ಯಾನಿಸುವಲ್ಲಿ ಸಹಾಯ ಮಾಡಬಲ್ಲ ಚಿಂತನೆಗಳನ್ನು ಸಿದ್ಧಗೊಳಿಸುವುದು ಹೊಸ ವ್ಯವಸ್ಥೆಯ ಜವಾಬ್ದಾರಿ ಆಗಬೇಕು ಎಂದು ಹೇಳಿದ್ದರು.

ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದ ತಕ್ಷಣ ತೆಗೆದುಕೊಂಡ ಪ್ರಮುಖ ನಿರ್ಧಾರಗಳಲ್ಲಿ ಯೋಜನಾ ಆಯೋಗವನ್ನು ಕಿತ್ತೆಸೆದು, ಆ ಜಾಗದಲ್ಲಿ ನೀತಿ ಆಯೋಗವನ್ನು ಸ್ಥಾಪಿಸಿದ್ದು ಕೂಡ ಒಂದು. ಫೆಡರಲಿಸಂಗೆ ಪ್ರೋತ್ಸಾಹದ ಮಾತುಗಳನ್ನು ಆಡುತ್ತಲೇ, ಭಾರತ ಸರಕಾರವು ಸಂವಿಧಾನದ ಜಂಟಿ ಪಟ್ಟಿಯ ಒಂದೊಂದೇ ಅಂಶಗಳನ್ನು ತನ್ನ ನೇರ ಹತೋಟಿಗೆ ತೆಗೆದುಕೊಳ್ಳುತ್ತಾ ಬಂದಿದೆ. ಆರೋಗ್ಯ, ಕೃಷಿ, ಸಹಕಾರ ಸೇರಿದಂತೆ ಹಲವು ವಲಯಗಳಲ್ಲಿ ಈ ನಿಟ್ಟಿನ ನಿರ್ಣಾಯಕ ಬೆಳವಣಿಗೆಗಳನ್ನು ದೇಶ ಕಂಡಿದೆ. ಇಷ್ಟು ಮಾತ್ರವಲ್ಲದೇ ರಾಜ್ಯ ಪಟ್ಟಿಯ ಸಂಗತಿಗಳಲ್ಲೂ ಹಸ್ತಕ್ಷೇಪ ನಡೆಯುತ್ತಿದೆ. ಇದೆಲ್ಲ ಎಲ್ಲಿಗೆ ತಲುಪಿದೆ ಎಂದರೆ, ವಿರೋಧ ಪಕ್ಷಗಳ ಸರಕಾರಗಳಿರುವ ರಾಜ್ಯಗಳು ನೀತಿ ಆಯೋಗವು ರಬ್ಬರ್ ಸ್ಟಾಂಪ್‌ನಂತೆ ವರ್ತಿಸುತ್ತಿದೆ ಎಂದು ದೂರಿ, ಅದರ ಆಡಳಿತಮಂಡಳಿ ಸಭೆಗಳಲ್ಲಿ ಪಾಲ್ಗೊಳ್ಳುತ್ತಿಲ್ಲ. ಜಿಎಸ್‌ಟಿ ಪರಿಹಾರ, ತೆರಿಗೆಗಳಲ್ಲಿ ರಾಜ್ಯಗಳ ಪಾಲು, ನದಿ ನೀರು ಹಂಚಿಕೆ ಸೇರಿದಂತೆ ಹಲವು ನಿರ್ಣಾಯಕ ಸಂಗತಿಗಳಲ್ಲಿ, ಇಲ್ಲಿಯ ತನಕ ನೀತಿ ಆಯೋಗದ ಪಾತ್ರ ಬಹುತೇಕ ಗೌಣ! ಅದು ತನ್ನ ಪ್ರಬಂಧಗಳಿಗೆ ಬಳಸಿಕೊಳ್ಳುತ್ತಿರುವ ಅಂಕಿಸಂಖ್ಯೆಗಳು ದಶಕಗಳಷ್ಟು ಹಿಂದಿನವು ಮತ್ತು ನಂಬಲರ್ಹ ಅಲ್ಲ.

ಥಿಂಕ್ ಟ್ಯಾಂಕ್ ಆಗಿ ಉದ್ಯೋಗ ಸೃಷ್ಟಿ, ಆರ್ಥಿಕ ಅಸಮಾನತೆಗಳ ನಿವಾರಣೆಯಂತಹ ಕಣ್ಣೆದುರು ಕಾಣಿಸಿಕೊಂಡು ದೇಶವನ್ನು ಕಂಗೆಡಿಸುತ್ತಿರುವ ಈವತ್ತಿನ ಸಮಸ್ಯೆಗಳ ನಿವಾರಣೆಗೆ ತಲೆ ಕೆಡಿಸಿಕೊಳ್ಳುವ ಬದಲು, ವ್ಯಕ್ತಿ ಕೇಂದ್ರಿತ ಭಜನೆಗೆ ಹೊರಟಿರುವುದು ನೀತಿ ಆಯೋಗ ತಲುಪಿರುವ ರಸಾತಳವನ್ನು ತೋರಿಸುತ್ತಿದೆ. ಕನಿಷ್ಠಪಕ್ಷ ವೃತ್ತಿಪರ ಸ್ವಾಯತ್ತೆಯನ್ನಾದರೂ ನೀತಿ ಆಯೋಗದ ಭಾಗವಾಗಿ ಕೆಲಸ ಮಾಡುತ್ತಿರುವವರು ಇಟ್ಟುಕೊಳ್ಳದಿದ್ದರೆ, ಅದು ಭಾರತದ ಬೌದ್ಧಿಕ ಸಾಮರ್ಥ್ಯಕ್ಕೆ ಅಭೂತಪೂರ್ವ ಕಪ್ಪುಚುಕ್ಕೆ ಆಗಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor