ಇಳೆಗೆ ಮಳೆ ಬೆನ್ನು ತೋರಿಸಿರುವುದರಿಂದ ರಾಜ್ಯದಲ್ಲಿ ಬರ ತೀವ್ರ ಸ್ವರೂಪ ಪಡೆದಿದೆ. ಪರಿಹಾರ ಮತ್ತು ಇತರ ನಿವಾರಣೋಪಾಯಗಳ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದ್ದ ನಮ್ಮ ಜನಪ್ರತಿನಿಧಿಗಳು ರಾಜಕೀಯ ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಆಡಳಿತ ಪಕ್ಷದ ಮೇಲೆ ವಿರೋಧ ಪಕ್ಷಗಳು ಮತ್ತು ವಿರೋಧ ಪಕ್ಷಗಳ ಮೇಲೆ ಆಡಳಿತ ಪಕ್ಷ ಗೂಬೆ ಕೂರಿಸುವ ಕೆಲಸದಲ್ಲಿ ತೊಡಗಿವೆ. ಪರಿಹಾರ ನೀಡುವ ವಿಚಾರದಲ್ಲಿ ರಾಜ್ಯ ಸರಕಾರದ ಹೊಣೆಗಾರಿಕೆ ಮತ್ತು ಕೇಂದ್ರ ಸರಕಾರ ಚಾಚಬೇಕಿರುವ ಸಹಾಯಹಸ್ತದ ಕುರಿತು ಪ್ರಕೃತಿ ವಿಕೋಪ ಎದುರಾದ ಪ್ರತೀ ಸಂದರ್ಭದಲ್ಲಿ ಯಥಾರೀತಿ ನಡೆಯುವಂತಹ ಒಣಚರ್ಚೆ ಈಗಲೂ ಮುನ್ನೆಲೆಗೆ ಬಂದಿದೆ. ಈ ಚರ್ಚೆಯಲ್ಲಿ ರೈತಪರ ಕಾಳಜಿಗಿಂತ ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರಗಳೇ ಎದ್ದುಕಾಣುತ್ತಿವೆ. ನೊಂದ ಮನಸ್ಸಿಗೆ ಸಾಂತ್ವನ ಹೇಳುವ ರೀತಿಯಲ್ಲಿ ಆಳುವ ಪಕ್ಷವೂ ಪ್ರಾಮಾಣಿಕವಾಗಿ ಸ್ಪಂದಿಸಿಲ್ಲ. ವಿರೋಧ ಪಕ್ಷಗಳಿಂದಲೂ ಅಂತಹ ಸ್ಪಂದನ ವ್ಯಕ್ತವಾಗಿಲ್ಲ ಎಂಬುದು ದುರದೃಷ್ಟದ ಸಂಗತಿ.

ವಿಧಾನಮಂಡಲದ ವಿಶೇಷ ಅಧಿವೇಶನ ಕರೆದು ಅನಾವೃಷ್ಟಿ ಕುರಿತು ಸದಸ್ಯರು ಮೂರು ದಿನ ಚರ್ಚೆ ಮಾಡಿದರು. ಸಾಲ ಮರುಪಾವತಿ ಅವಧಿಗೆ ಸಂಬಂಧಿಸಿದಂತೆ ಒಂದೆರಡು ಉಪಕ್ರಮ ಘೋಷಣೆಯಾಗಿರುವುದು ಬಿಟ್ಟರೆ, ರೈತರಲ್ಲಿ ನಿರಾಳಭಾವ ಮೂಡಿಸುವಂತಹ ಇನ್ನಾವುದೇ ಮಹತ್ವದ ಭರವಸೆ ಹೊರಬೀಳಲಿಲ್ಲ. ರಾಜ್ಯದ ಬರಪೀಡಿತ ಪ್ರದೇಶದ ರೈತರು ಸಂಕಷ್ಟದಲ್ಲಿ ಇರುವುದರಿಂದ ಕೃಷಿ ಉತ್ಪಾದನಾ ವೆಚ್ಚ ಕಡಿಮೆ ಮಾಡಲು ತಕ್ಷಣ ಜಾರಿಗೆ ಬರುವಂತೆ ಪ್ರತೀ ರೈತನಿಗೆ 2,500 ರೂ. ಆರ್ಥಿಕ ನೆರವು ನೀಡಲಾಗುವುದು ಎಂದು ಕಂದಾಯ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರು ಘೋಷಿಸಿದ್ದಾರೆ. ತಕ್ಷಣದ ಪರಿಹಾರವಾಗಿ ಸರಕಾರ ಘೋಷಿಸಿದ ಈ ನೆರವಿನಿಂದ ಉತ್ಪಾದನಾ ವೆಚ್ಚ ಅದು ಹೇಗೆ ಕಡಿಮೆ ಆಗುತ್ತದೋ? ರೈತರ ಸಂಕಷ್ಟ ಹೇಗೆ ನಿವಾರಣೆ ಆಗುತ್ತದೋ? ಇಂತಹ ಮಹತ್ವದ ಸಲಹೆ ಕೊಟ್ಟ ಅಧಿಕಾರಿಗಳನ್ನು ಗುರುತಿಸಿ, ಸನ್ಮಾನಿಸಬೇಕಾದ ಹೊಣೆ ರೈತ ಮುಖಂಡರ ಮೇಲಿದೆ.

ಬರಗಾಲದಲ್ಲಿ ನಾವು ರೈತರನ್ನು ಬದುಕಿಸಬೇಕು. ಕೇಂದ್ರ ಸರಕಾರವು ಕೈಗಾರಿಕೋದ್ಯಮಿಗಳಿಗೆ ಲಕ್ಷಾಂತರ ಕೋಟಿ ರೂ. ಸಾಲ ಮನ್ನಾ ಮಾಡಿದಂತೆ ರೈತರ ಸಾಲ ಮನ್ನಾ ಮಾಡಲಿ. ರಾಜ್ಯದ ಪಾಲನ್ನು ಭರಿಸಲು ನಾವು ಸಿದ್ಧರಿದ್ದೇವೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸದನದಲ್ಲಿ ಹೇಳಿದ್ದಾರೆ. ಬೃಹತ್ ಉದ್ಯಮಿಗಳ ಪರವಾಗಿ ಸರಕಾರಗಳು ತಳೆಯುವಂತಹ ಉದಾರ ಧೋರಣೆಯನ್ನು ರೈತರ ಪರವಾಗಿಯೂ ತಳೆಯಬೇಕು ಎಂದು ಅವರು ಹೇಳಿರುವುದು ಒಪ್ಪಬಹುದಾದ ಮಾತು. ಆದರೆ ದೀಪದ ಬುಡದಲ್ಲಿ ಕತ್ತಲು ಎಂಬಂತೆ ಅವರ ನೇತೃತ್ವದ ಸರಕಾರ ಮೂರು ಕಾಸಿನ ನೆರವು ಘೋಷಿಸಿ, ಕೇಂದ್ರ ಸರಕಾರದ ಕಡೆ ಬೆರಳು ತೋರಿಸಿದರೆ ಅಂತಹ ಮಾತಿಗೆ ಕಿಮ್ಮತ್ತು ಇರುವುದಿಲ್ಲ ಎಂಬುದನ್ನು ಮುಖ್ಯಮಂತ್ರಿ ಅರಿಯಬೇಕು. 2,500 ರೂ.ಗೆ ಈಗ ಇರುವ ಮಾರುಕಟ್ಟೆ ಮೌಲ್ಯವು ಅವರಿಗೆ ಗೊತ್ತಿಲ್ಲದೇ ಇರುವಂತಹ ಸಂಗತಿ ಏನೂ ಅಲ್ಲ. ಎನ್‌ಡಿಆರ್‌ಎಫ್ ಅನುದಾನದ ನಿರೀಕ್ಷೆಯಲ್ಲಿ ಈ ನೆರವು ನೀಡಲು ತೀರ್ಮಾನಿಸಿದ್ದೇವೆ. ಇದರಿಂದ 45 ಲಕ್ಷದಿಂದ 50 ಲಕ್ಷ ರೈತರಿಗೆ ಅನುಕೂಲ ಆಗಲಿದೆ ಎಂದು ಕಂದಾಯ ಸಚಿವರು ಹೇಳಿರುವ ಮಾತು ವಸ್ತುಸ್ಥಿತಿಯ ಅರಿವಿನ ಕೊರತೆಯನ್ನಷ್ಟೇ ಬಿಂಬಿಸುತ್ತದೆ. ‘ರೈತರಿಗೆ ಭಿಕ್ಷೆ ಬೇಡ. ಈ ರೀತಿ ಮೂರು ಕಾಸು ಕೊಟ್ಟು ರೈತರನ್ನು ಅವಮಾನಿಸಬೇಡಿ. ಈ ಎರಡೂವರೆ ಸಾವಿರ ರೂಪಾಯಿ ಪಡೆಯಲು ಕಚೇರಿಗೆ ಅಲೆದಾಡುವುದಕ್ಕೇ ಆ ದುಡ್ಡು ಖರ್ಚಾಗುತ್ತದೆ’ ಎಂದು ರೈತ ಸಂಘದ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ಗೋವಿಂದರಾಜು ವ್ಯಕ್ತಪಡಿಸಿರುವ ಆಕ್ರೋಶಕ್ಕೆ ಅರ್ಥ ಇದೆ ಮತ್ತು ಅವರ ಮಾತಿನಲ್ಲಿ ಹುರುಳಿದೆ ಎಂದು ಯಾರಿಗಾದರೂ ಮನವರಿಕೆಯಾಗುತ್ತದೆ. ಬರದ ಸಂಕಷ್ಟಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸ್ಪಂದಿಸುತ್ತಿಲ್ಲ ಎಂದು ಪ್ರತಿಭಟಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ತುಮಕೂರಿನಲ್ಲಿ ರೈತರು ಸೋಮವಾರ ನಡೆಸಿದ ಧರಣಿ ಸಂದರ್ಭದಲ್ಲಿ ಅವರು ಸಿಟ್ಟು ಹೊರಹಾಕಿದ್ದಾರೆ.

ರಾಜ್ಯದ ಬರ ಪರಿಸ್ಥಿತಿ ಕುರಿತು ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲು ದಿಲ್ಲಿಗೆ ಸರ್ವಪಕ್ಷ ನಿಯೋಗ ಒಯ್ಯುವ ಮುಖ್ಯಮಂತ್ರಿಯವರ ಪ್ರಸ್ತಾವಕ್ಕೂ ರಾಜಕೀಯದ ರಾಡಿ ಮೆತ್ತಿಕೊಂಡಿದೆ. ಬರ ವಿಚಾರದಲ್ಲಿ ಸರ್ವಪಕ್ಷ ನಿಯೋಗದ ಜೊತೆ ಹೋಗುವುದಿಲ್ಲ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಬರ ಪರಿಸ್ಥಿತಿ ನಿರ್ವಹಣೆಗೆ ಸಂಬಂಧಿಸಿದಂತೆ ರಾಜ್ಯ ಸರಕಾರವು ಕೇಂದ್ರದತ್ತ ಬೆಟ್ಟು ಮಾಡುವುದನ್ನು ಬಿಟ್ಟು, ರಾಜ್ಯದ ಸಂಪನ್ಮೂಲದಿಂದಲೇ ರೈತರಿಗೆ ಪರಿಹಾರ ನೀಡಬೇಕು. ‘‘ರಾಜ್ಯ ಸರಕಾರದ ಬೊಕ್ಕಸ ತುಂಬಿಸಿರುವವರು ನಮ್ಮ ಜನ. ಅವರು ಸಂಕಷ್ಟದಲ್ಲಿರುವಾಗ ಕೇಂದ್ರದತ್ತ ಕೈ ತೋರಿಸುತ್ತಿದ್ದೀರಿ ಏಕೆ? ಮನವಿಯ ನಾಟಕವೇಕೆ?’’ ಎಂದು ಕೇಂದ್ರ ಸಚಿವ ಹಾಗೂ ಜೆಡಿಎಸ್ ಮುಖಂಡ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಅಂದರೆ ನಿಯೋಗ ಒಯ್ಯುವ ವಿಚಾರದಲ್ಲಿಯೂ ರಾಜಕೀಯ ಪಕ್ಷಗಳ ನಡುವೆ ಸಹಮತ ಇಲ್ಲ ಎಂಬುದು ಖಾತರಿಯಾಯಿತು. ರೈತಪರ ಎಂದು ತೋರಿಸಿಕೊಳ್ಳಲು ರಾಜಕೀಯ ಪಕ್ಷಗಳ ನಡುವೆ ಪೈಪೋಟಿ ಇದೆ. ಆದರೆ ರೈತರಿಗೆ ಕಷ್ಟ ಎದುರಾದಾಗ ಸಂಕುಚಿತ ರಾಜಕಾರಣದ ಪರಿಧಿಯಿಂದ ಆಚೆ ನಿಂತು ಸ್ಪಂದಿಸುವಂತಹ ದೊಡ್ಡತನ ಯಾರಲ್ಲೂ ಇಲ್ಲ.

ಬರ ಪರಿಸ್ಥಿತಿ ಅಧ್ಯಯನಕ್ಕೆ ಕೇಂದ್ರ ಸರಕಾರದ ಅಂತರ್ ಸಚಿವಾಲಯಗಳ ಅಧಿಕಾರಿಗಳ ತಂಡ ಅಕ್ಟೋಬರ್ 3ರಂದು ರಾಜ್ಯಕ್ಕೆ ಆಗಮಿಸಲಿದೆ. ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತು ಕಂದಾಯ (ವಿಪತ್ತು ನಿರ್ವಹಣೆ) ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಅಂದು ಬೆಳಗ್ಗೆ ಪ್ರಾಥಮಿಕ ಸಭೆ ನಡೆಸಲಿದೆ. ಬಳಿಕ ಅಧಿಕಾರಿಗಳು ಮೂರು ತಂಡಗಳಾಗಿ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಲಿದ್ದಾರೆ. ಅಧಿಕಾರಿಗಳು ದಿಲ್ಲಿಗೆ ವಾಪಸ್ ಹೋಗಿ ವರದಿ ಸಲ್ಲಿಸಿದ ಬಳಿಕ ಕೇಂದ್ರ ಸರಕಾರ ಅನುದಾನ ನಿಗದಿ ಮಾಡಲಿದೆ. ಸಂಕಷ್ಟದ ಸಂದರ್ಭದಲ್ಲಿ ನಿಯಮಗಳನ್ನು ಬದಿಗೆ ಸರಿಸಿ ನೆರವಿನಹಸ್ತ ಚಾಚಬೇಕಾದುದು ಕೇಂದ್ರದ ಕರ್ತವ್ಯ. ರಾಜ್ಯದಲ್ಲಿ ಬೇರೆ ಪಕ್ಷದ ಸರಕಾರ ಇದೆ ಎಂಬ ಕಾರಣಕ್ಕೆ ತಾರತಮ್ಯ ಮಾಡುವುದು, ವಿಳಂಬ ಧೋರಣೆ ಅನುಸರಿಸುವುದು ತರವಲ್ಲ.

ಆದರೆ, ಕೇಂದ್ರದ ನೆರವಿಗಾಗಿ ಕಾಯದೆ ರೈತರ ನೋವಿಗೆ ಮಿಡಿಯಬೇಕಾದುದು ರಾಜ್ಯ ಸರಕಾರದ ಗುರುತರ ಜವಾಬ್ದಾರಿ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಹೆಚ್ಚಿನ ನೆರವು ನೀಡುವಂತೆ ಅವರನ್ನು ಬೇಡಿಕೊಳ್ಳೋಣ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ನಿಯೋಗದಲ್ಲಿ ಭಾಗಿಯಾಗುವಂತೆ ವಿರೋಧ ಪಕ್ಷಗಳ ಮನವೊಲಿಸುವುದು ಮತ್ತು ಕೇಂದ್ರದ ಮೇಲೆ ಒತ್ತಡ ಹೇರಿ ಹೆಚ್ಚಿನ ಅನುದಾನ ಪಡೆಯುವುದು ಸರಕಾರ ಮುನ್ನಡೆಸುವವರ ರಾಜಕೀಯ ಜಾಣ್ಮೆ ಮತ್ತು ಸಾಮರ್ಥ್ಯವನ್ನು ಅವಲಂಬಿಸಿದೆ. ಅದು ಆಗಲಿ, ಹೋಗಲಿ ರೈತರ ಜೊತೆ ರಾಜ್ಯ ಸರಕಾರ ಇದೆ. ಅವರು ಎದೆಗುಂದುವ ಅಗತ್ಯ ಇಲ್ಲ ಎಂದು ನೊಂದ ಮಂದಿಗೆ ಮನವರಿಕೆಯಾಗುವ ರೀತಿಯಲ್ಲಿ ಸರಕಾರ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು. ಅದು ಸಾಧ್ಯವಾದಾಗ ಮಾತ್ರ ಮಾತಿನಲ್ಲಿ ವ್ಯಕ್ತವಾಗುವ ರೈತಪರ ಕಾಳಜಿಗೆ ಕೊಂಚಮಟ್ಟಿಗಾದರೂ ಕಿಮ್ಮತ್ತು ಉಳಿಯುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor