ಬರ ಪರಿಸ್ಥಿತಿ; ಗುಳೆ ಹೋಗುವುದನ್ನು ತಪ್ಪಿಸಿ

Update: 2026-08-08 07:03 IST

ಸಾಂದರ್ಭಿಕ ಚಿತ್ರ Photo: ANI

ರಾಜ್ಯದಲ್ಲಿ ಹಲವೆಡೆ ಮುಂಗಾರು ಮಳೆಯಾಗುತ್ತಿದೆ. ಇನ್ನು ಕೆಲವೆಡೆ ಸಾಕೆನ್ನಿಸುವುದಕ್ಕಿಂತ ಜಾಸ್ತಿ ಮಳೆಯಾಗಿದೆ. ಇದರಿಂದಾಗಿ ಈಗಾಗಲೇ ಮಾಡಿದ ಬಿತ್ತನೆ ಹಾಳಾಗಿದೆ. ಮತ್ತೆ 3-4 ಜಿಲ್ಲೆಗಳಲ್ಲಿ ಬಿತ್ತನೆಗೆ ಸಾಕಾಗುವಷ್ಟು ಮಳೆಯಾಗಿಲ್ಲ. ಇದರಿಂದಾಗಿ ಬಿತ್ತನೆ ಮಾಡಿದ್ದ ಹೆಸರು, ಉದ್ದು ಹಾಗೂ ಈರುಳ್ಳಿ ಬೆಳೆಗಳು ಸಂಪೂರ್ಣವಾಗಿ ಕಮರಿ ಹೋಗಿವೆ. ಹೀಗಾಗಿ ಕೃಷಿ ಕ್ಷೇತ್ರ ತುಂಬಾ ಸಂಕಷ್ಟಕ್ಕೆ ಸಿಲುಕಿದೆ. ನೇಗಿಲ ಯೋಗಿಗಳ ಈ ದಾರುಣ ಪರಿಸ್ಥಿತಿಯಲ್ಲಿ ಸರಕಾರ ನೆರವಿಗೆ ಬರಬೇಕಾಗಿದೆ. ಕೃಷಿ ರಂಗ ಸಂಕಷ್ಟಕ್ಕೆ ಸಿಲುಕಿದರೆ ಇಡೀ ಆರ್ಥಿಕ ವ್ಯವಸ್ಥೆಯ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತದೆ. ಭತ್ತದ ಇಳುವರಿ ಕಡಿಮೆಯಾಗಿರುವುದರಿಂದ ಮಾರುಕಟ್ಟೆಯಲ್ಲಿ ಅಕ್ಕಿಯ ಬೆಲೆ ದುಬಾರಿಯಾಗಿದೆ. ಅಕ್ಕಿ, ಗೋಧಿ ಮಾತ್ರವಲ್ಲ ಜೀವನಾವಶ್ಯಕ ಪದಾರ್ಥಗಳ ಬೆಲೆ ಗಗನಕ್ಕೇರಿದೆ. ಅದರಲ್ಲೂ ಗ್ರಾಮೀಣ ಪರಿಸ್ಥಿತಿ ಇನ್ನೂ ಹದಗೆಟ್ಟಿದೆ.

ಈ ಎಲ್ಲ ವಿದ್ಯಮಾನಗಳಿಂದಾಗಿ ಕೃಷಿ ಚಟುವಟಿಕೆ ನಿಂತು ಹೋದಂತಾಗಿದೆ. ಇದರಿಂದಾಗಿ ಕೃಷಿ ಕಾರ್ಮಿಕರು ದೂರದ ಮಹಾ ನಗರಗಳಿಗೆ ಹಾಗೂ ಅಕ್ಕಪಕ್ಕದ ರಾಜ್ಯಗಳಿಗೆ ಗುಳೆ (ತಾತ್ಕಾಲಿಕ ವಲಸೆ) ಹೋಗುತ್ತಿದ್ದಾರೆ. ಉತ್ತರ ಕರ್ನಾಟಕದ ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ಭಾಗಗಳಲ್ಲಿ ಈ ವಲಸೆ ಸಮಸ್ಯೆ ವ್ಯಾಪಕವಾಗಿದೆ.ಕೃಷಿ ಕಾರ್ಮಿಕರು ಹೆಂಡತಿ, ಮಕ್ಕಳ ಸಹಿತ ಗುಳೆ ಹೋಗುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ. ಸಮಸ್ಯೆ ಎಷ್ಟು ತೀವ್ರವಾಗಿದೆಯೆಂದರೆ ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಮೋತಿಕಲ್ ಮುಂತಾದ ತಾಂಡಾಗಳು ಹಾಗೂ ಹಳ್ಳಿಗಳು ಸೇರಿದಂತೆ ವಿವಿಧ ಗ್ರಾಮಗಳಿಂದ 2 ಸಾವಿರಕ್ಕಿಂತ ಹೆಚ್ಚು ಕೃಷಿ ಕಾರ್ಮಿಕರು ಜುಲೈ ತಿಂಗಳಲ್ಲಿ ಗುಳೆ ಹೋಗಿದ್ದಾರೆ. ಇದು ಉದಾಹರಣೆ ಮಾತ್ರ, ಇಂಥ ನೂರಾರು ಪ್ರಕರಣಗಳು ವರದಿಯಾಗಿವೆ.

ಬರಗಾಲ ಬಂದಾಗ ಗುಳೆ ಹೋಗುವುದು, ಉತ್ತರ ಕರ್ನಾಟಕದ ಹಳ್ಳಿಗಳು ಸಂಪೂರ್ಣ ಖಾಲಿಯಾಗುವುದು ಹೊಸದೇನಲ್ಲ. ಹೀಗೆ ಗುಳೆ ಹೋದವರು ಗೋವಾ, ಮಂಗಳೂರು, ಉಡುಪಿ, ಮುಂಬೈ, ಬೆಂಗಳೂರು ಮುಂತಾದ ಕಡೆ ಖಾಯಂ ಆಗಿ ನೆಲೆಸಿರುವುದು ಎಲ್ಲರಿಗೂ ತಿಳಿದ ಸಂಗತಿ. ಆದರೆ ಊರಿನಲ್ಲಿ ಒಂದಿಷ್ಟು ಹೊಲ, ಮನೆಯಿದ್ದವರು ಬರಗಾಲದ ನಂತರ ಮಳೆಯಾದರೆ ಮತ್ತೆ ಊರಿಗೆ ಬರುತ್ತಾರೆ. ಈ ಸಲವೂ ಸಾವಿರಾರು ಸಂಖ್ಯೆಯಲ್ಲಿ ಜನರು ಗುಳೆ ಹೋಗುತ್ತಿದ್ದಾರೆ.

ವಿಜಯಪುರ, ಕೊಪ್ಪಳ, ಗದಗ, ಹಾವೇರಿ, ಯಾದಗಿರಿ, ಕಲಬುರಗಿ, ಬೀದರ್ ಮೊದಲಾದ ಜಿಲ್ಲೆಗಳಲ್ಲಿ ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಜನರು ಗುಳೆ ಹೋಗುತ್ತಿದ್ದಾರೆ. ಉತ್ತರ ಕರ್ನಾಟಕದ ರೈತಾಪಿ ವರ್ಗದ ಈ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಲ್ಪಿಸುವ ನಿಟ್ಟಿನಲ್ಲಿ ಯಾವುದೇ ಪ್ರಯತ್ನ ನಡೆದಿಲ್ಲ. ಬರಗಾಲ ಬಂದಾಗ ಸರಕಾರ ಒಂದಿಷ್ಟು ಪರಿಹಾರ ಕ್ರಮಗಳನ್ನು ಕೈಗೊಳ್ಳುತ್ತದೆ. ಇದರಿಂದ ಹೆಚ್ಚಿನ ಪ್ರಯೋಜನವಾಗುವುದಿಲ್ಲ. ಕೃಷ್ಣಾ, ಮಹಾದಾಯಿ ಸೇರಿದಂತೆ ಕೆಲವು ಪ್ರಮುಖ ನೀರಾವರಿ ಯೋಜನೆಗಳು ಹಲವಾರು ವರ್ಷಗಳಿಂದ ಕಾರ್ಯಗತವಾಗದೆ ಉಳಿದಿವೆ. ಹೀಗಾಗಿ ಈ ಭಾಗದ ರೈತರು ಕೇವಲ ಮಳೆಯನ್ನೇ ನಂಬಿ ಬೇಸಾಯ ಮಾಡುವುದರಿಂದ ಅವರ ತಾಪತ್ರಯಗಳು ತಪ್ಪಿಲ್ಲ. ಕೇಂದ್ರದ ನರೇಂದ್ರ ಮೋದಿಯವರ ನೇತೃತ್ವದ ಎನ್‌ಡಿಎ ಸರಕಾರ ಗ್ರಾಮೀಣ ಪ್ರದೇಶದ ಕೃಷಿ ಕಾರ್ಮಿಕರಿಗೆ ಒಂದಿಷ್ಟು ನೆರವಿಗೆ ಬರುತ್ತಿದ್ದ ಹಿಂದಿನ ಯುಪಿಎ ಸರಕಾರದ ನರೇಗಾ ಯೋಜನೆಯನ್ನು ಬದಲಿಸಿ ಜುಲೈ 1ರಿಂದ ವಿಬಿ-ಜಿ ರಾಮ್ ಜಿ ಯೋಜನೆಯನ್ನು ಜಾರಿ ಮಾಡಿದ್ದರೂ ಈವರೆಗೆ ಉದ್ಯೋಗ ಖಾತರಿಯ ಭರವಸೆ ದೊರಕಿಲ್ಲ. ಕರ್ನಾಟಕದ ಉತ್ತರ ಭಾಗದ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದ ಜಿಲ್ಲೆಗಳಲ್ಲಿ ಕೃಷಿಯನ್ನು ಬಿಟ್ಟರೆ ಬದಲಿ ಉದ್ಯೋಗವಾಗಿ ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳ ಕೊರತೆಯಿದೆ. ಹೀಗಾಗಿ ಆ ಭಾಗದ ಕೃಷಿ ಕಾರ್ಮಿಕರು ಮತ್ತು ರೈತರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ದೂರದ ಮಹಾನಗರಗಳಿಗೆ ಹಾಗೂ ಅಕ್ಕಪಕ್ಕದ ರಾಜ್ಯಗಳಿಗೆ ಗುಳೆ ಹೋಗಿ ಅತ್ಯಂತ ಕಡಿಮೆ ಕೂಲಿಗೆ ದುಡಿಯುವ ದಾರುಣ ಪರಿಸ್ಥಿತಿ ಇದೆ. ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಒದಗಿಸುವ ವ್ಯವಸ್ಥೆಯಾದರೆ ಗುಳೆ ಹೋಗುವ ಸಮಸ್ಯೆಗೆ ಒಂದಿಷ್ಟು ಪರಿಹಾರ ದೊರಕಬಹುದು.

ವಿಬಿ-ಜಿ ರಾಮ್ ಜಿ ಯೋಜನೆಯಲ್ಲಿ ಮಾನವ ದಿನ ಸೃಜನೆ ಮಾಡದೆ ನಿರ್ಲಕ್ಷ್ಯ ತೋರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ(ಪಿಡಿಒ) ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಸಚಿವ ಈಶ್ವರ್ ಖಂಡ್ರೆಯವರು ಸೂಚನೆಯನ್ನು ನೀಡಿದ್ದಾರೆ. ಗುರುವಾರ ಬೆಂಗಳೂರಿನಲ್ಲಿ ಇಲಾಖೆಯ ಉನ್ನತಾಧಿಕಾರಿಗಳ ಸಭೆಯನ್ನು ನಡೆಸಿದ ಖಂಡ್ರೆಯವರು ವಿಬಿ-ಜಿ ರಾಮ್ ಜಿ ಅಡಿಯಲ್ಲಿ ಪ್ರತಿದಿನ 5 ಲಕ್ಷ ಮಾನವ ದಿನ ಸೃಜನೆಯಾಗುವವರೆಗೆ ಕಾರ್ಯದರ್ಶಿಗಳು, ಆಯುಕ್ತರು, ಎಲ್ಲ ಜಿಲ್ಲಾ ಪಂಚಾಯತ್‌ಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ನಿತ್ಯ ವರ್ಚುವಲ್ ಸಭೆಯನ್ನು ನಡೆಸಿ ಪ್ರಗತಿ ಪರಿಶೀಲನೆ ಮಾಡಬೇಕೆಂದು ತಾಕೀತು ಮಾಡಿದ್ದಾರೆ.

ವಾಸ್ತವವಾಗಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ವಿಬಿ-ಜಿ ರಾಮ್ ಜಿ ಯೋಜನೆ ಪರಿಣಾಮಕಾರಿಯಾಗಿ ಜಾರಿಗೆ ಬಂದರೆ ಗ್ರಾಮೀಣ ಭಾಗದಲ್ಲಿ ಆರ್ಥಿಕತೆ ಕೊಂಚ ಚೇತರಿಸಲು ಸಾಧ್ಯವಾಗುತ್ತದೆ. ಈ ದೃಷ್ಟಿಯಿಂದ ಗಂಭೀರ ಪ್ರಯತ್ನಗಳು ನಡೆಯಬೇಕಾಗಿದೆ. ದೈಹಿಕ ಶ್ರಮದ ಕೆಲಸಗಳಲ್ಲದೆ ಸ್ಥಳೀಯ ಅಗತ್ಯಕ್ಕೆ ತಕ್ಕಂತೆ ಕೌಶಲ್ಯ ಆಧಾರಿತ ಕೆಲಸಗಳು ನಡೆಯಬೇಕಾಗಿದೆ. ಮುಖ್ಯವಾಗಿ ಕೂಲಿ ಹಣ ನೇರವಾಗಿ ಮತ್ತು ಸಕಾಲದಲ್ಲಿ ಕೃಷಿ ಕಾರ್ಮಿಕರ ಖಾತೆಗೆ ಜಮಾ ಆಗಬೇಕು. ಇದರಲ್ಲಿ ಸಂಪೂರ್ಣ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ಆರ್ಥಿಕ ಸ್ಥಿರತೆಯನ್ನು ತರುವ ನಿಟ್ಟಿನಲ್ಲಿ ದೀರ್ಘಾವಧಿಯ ಯೋಜನೆಗಳನ್ನು ರೂಪಿಸಬೇಕಾಗಿದೆ. ಇಂಥ ದೀರ್ಘಾವಧಿ ಯೋಜನೆಗಳಿಂದ ಮಾತ್ರ ಜನರು ಗುಳೆ ಹೋಗುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ.

ಇದರ ಜೊತೆಗೆ ಬೆಳೆ ನಷ್ಟದಿಂದ ತೊಂದರೆಗೆ ಸಿಲುಕಿದ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಬೆಳೆ ವಿಮೆ ನಿಯಮಗಳಲ್ಲಿ ಉಂಟಾಗಿರುವ ತೊಂದರೆಗಳನ್ನು ಸರಿಪಡಿಸಬೇಕು ಮತ್ತು ಬೆಳೆ ವಿಮೆ ಹಣವನ್ನು ಸರಕಾರವೇ ಭರಿಸಬೇಕು. ಅಷ್ಟೇ ಅಲ್ಲ, ಆದಷ್ಟು ಬೇಗ ಬರ ಘೋಷಣೆ ಮಾಡುವುದು ಅಗತ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News