ಸುಪ್ರೀಂ ಕೋರ್ಟ್ ಪ್ರಶ್ನೆಗೆ ಉತ್ತರ ಎಲ್ಲಿದೆ?
Photo : PTI
ಮತದಾರರ ಪಟ್ಟಿಯ ಪರಿಷ್ಕರಣೆಯ ಹೆಸರಿನಲ್ಲಿ ಸಾರಾ ಸಗಟಾಗಿ ಲಕ್ಷಾಂತರ ಜನರ ಮತದಾನದ ಹಕ್ಕನ್ನು ಅಪಹರಿಸುತ್ತಿರುವ ಚುನಾವಣಾ ಆಯೋಗದ ಸಂಶಯಾಸ್ಪದ ನಡೆ ವಿವಾದಕ್ಕೆ ಕಾರಣವಾಗಿದೆ. ಇಂಥ ಸನ್ನಿವೇಶದಲ್ಲಿ ಮುಖ್ಯ ಚುನಾವಣಾ ಆಯುಕ್ತರ ಹಾಗೂ ಚುನಾವಣಾ ಆಯುಕ್ತರ ನೇಮಕಾತಿ ಪ್ರಕ್ರಿಯೆಯ ಪಾರದರ್ಶಕತೆ ಬಗ್ಗೆ ಕಳೆದ ವಾರ ಸುಪ್ರೀಂ ಎತ್ತಿರುವ ಪ್ರಶ್ನೆ ಎಲ್ಲರ ಗಮನ ಸೆಳೆದಿದೆ ಹಾಗೂ ಸಮರ್ಪಕವಾಗಿದೆ. ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರದ ಬಿಜೆಪಿ, (ಎನ್‌ಡಿಎ) ಸರಕಾರ 2023ರಲ್ಲಿ ತಂದ ಮುಖ್ಯ ಚುನಾವಣಾ ಆಯುಕ್ತರು ಹಾಗೂ ಚುನಾವಣಾ ಆಯುಕ್ತರ ನೇಮಕಾತಿ ನಿಯಮಾವಳಿ ಕಾಯ್ದೆ ಸುಪ್ರೀಂ ಕೋರ್ಟ್ ಪ್ರಶ್ನೆಗೆ ಮುಖ್ಯ ಕಾರಣವಾಗಿದೆ. ಮುಂಚಿನ ನಿಯಮಾವಳಿಗಳ ಪ್ರಕಾರ ಚುನಾವಣಾ ಆಯುಕ್ತರನ್ನು ನೇಮಕಾತಿ ಮಾಡುವ ಸಮಿತಿಯಲ್ಲಿ ಪ್ರಧಾನ ಮಂತ್ರಿ, ಸಂಸತ್ತಿನ ಪ್ರತಿಪಕ್ಷ ನಾಯಕ ಮತ್ತು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರು ಇರುತ್ತಿದ್ದರು. ಹಿಂದಿನ ನಿಯಮಾವಳಿಯನ್ನು ಬದಲಿಸಿ ಈ ಸಮಿತಿಯಲ್ಲಿ ಪ್ರಧಾನ ಮಂತ್ರಿ, ಓರ್ವ ಕೇಂದ್ರ ಮಂತ್ರಿ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕರು ಮಾತ್ರ ಇರಬೇಕೆಂದು ಕೇಂದ್ರ ಸರಕಾರ ತೀರ್ಮಾನಿಸಿತು. ಅಂದರೆ ಸಮಿತಿಯಿಂದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಹೊರಗಿಟ್ಟಿತು. ಪ್ರಸಕ್ತ ಜಾರಿಯಲ್ಲಿರುವ ಮೋದಿ ಸರಕಾರದ ಈ ನೇಮಕಾತಿ ನಿಯಮವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಎತ್ತಿರುವ ಪ್ರಶ್ನೆಗಳು ಗಮನಾರ್ಹವಾಗಿವೆ.
ಲೋಕಸಭೆಯಲ್ಲಿ ಇರುವ ಬಹುಮತವನ್ನು ಬಳಸಿಕೊಂಡು ನಿರಂಕುಶ ಸರ್ವಾಧಿಕಾರದತ್ತ ಸಾಗಿರುವ ಕೇಂದ್ರದ ಬಿಜೆಪಿ ಸರಕಾರ ಸಾಂವಿಧಾನಿಕ ಸಂಸ್ಥೆಗಳನ್ನು ಹಂತ ಹಂತವಾಗಿ ಅಪ್ರಸ್ತುತಗೊಳಿಸುತ್ತ ಹಾಗೂ ನಿಷ್ಕ್ರಿಯಗೊಳಿಸುತ್ತ ಸಾಗಿದೆ. ತಾವು ಹೇಳಿದಂತೆ ಕೇಳುವ ಮುಖ್ಯ ಚುನಾವಣಾ ಆಯುಕ್ತರು ಸರಕಾರಕ್ಕೆ ಬೇಕಾಗಿದ್ದಾರೆ. ಹಾಗಾಗಿಯೇ ಸುಪ್ರೀಂ ಕೋರ್ಟ್ ತೀರ್ಪನ್ನು ಕಡೆಗಣಿಸಿ ಮುಖ್ಯ ನ್ಯಾಯಮೂರ್ತಿಗಳನ್ನು ಸಮಿತಿಯಿಂದ ಹೊರಗಿಟ್ಟು ಚುನಾವಣಾ ಆಯುಕ್ತರ ನೇಮಕಾತಿಗೆ ಚಾಲನೆ ನೀಡಲು ಸರಕಾರ ಮುಂದಾಗಿದೆ. ಸಂವಿಧಾನದ 324(2) ಕಲಮಿನ ಪ್ರಕಾರ ಚುನಾವಣಾ ಆಯೋಗದ ಹುದ್ದೆಗಳಿಗೆ ನೇಮಕಾತಿ ಮಾಡುವ ಅಧಿಕಾರ ರಾಷ್ಟ್ರಪತಿ ಅವರಿಗೆ ಸೇರಿದ್ದು. ಆದರೆ ಯಾರನ್ನು ಆಯ್ಕೆ ಮಾಡಬೇಕೆಂಬುದನ್ನು ನಿರ್ಧರಿಸುವುದು ಪ್ರಧಾನ ಮಂತ್ರಿ, ಮುಖ್ಯ ನ್ಯಾಯಮೂರ್ತಿಗಳು ಹಾಗೂ ಲೋಕಸಭೆಯ ಪ್ರತಿಪಕ್ಷ ನಾಯಕರನ್ನು ಒಳಗೊಂಡ ಸಮಿತಿ. ಈ ಸಮಿತಿಯ ಶಿಫಾರಸಿಗೆ ರಾಷ್ಟ್ರಪತಿಗಳು ಒಪ್ಪಿಗೆ ನೀಡುತ್ತಾರೆ. ಏತನ್ಮಧ್ಯೆ ಮುಖ್ಯ ನ್ಯಾಯಮೂರ್ತಿಗಳನ್ನು ನೇಮಕಾತಿ ಪ್ರಕ್ರಿಯೆಯಿಂದ ಹೊರಗಿಡಲು ಸರಕಾರ ಹೊರಟಿರುವುದು ಸುಪ್ರೀಂ ಕೋರ್ಟ್ ಅಸಮಾಧಾನಕ್ಕೆ ಕಾರಣವಾದ ಅಂಶವಾಗಿದೆ.
ವಾಸ್ತವವಾಗಿ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಆಯುಕ್ತರ ಆಯ್ಕೆ ಸಮಿತಿಯಲ್ಲಿ ಪ್ರಧಾನ ಮಂತ್ರಿ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕನೊಂದಿಗೆ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಇರಬೇಕೆಂದು ‘ಅನೂಪ್ ಬರನವಾಲ ಪ್ರಕರಣ’ದಲ್ಲಿ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ಸೂಚಿಸಿತ್ತು. ಸರಕಾರ ಹಾಗೂ ವಿರೋಧ ಪಕ್ಷಕ್ಕೆ ಸಮಾನ ಪ್ರಾತಿನಿಧ್ಯ ಲಭಿಸುವುದರ ಜೊತೆಗೆ ಮೂರನೇ ಸದಸ್ಯನ ರೂಪದಲ್ಲಿ ಸ್ವತಂತ್ರ, ತಟಸ್ಥ ಮತ್ತು ಗೌರವಾನ್ವಿತ ವ್ಯಕ್ತಿಯನ್ನು ಆಯ್ಕೆ ಸಮಿತಿಗೆ ಸೇರ್ಪಡೆ ಮಾಡುವ ಮೂಲಕ ನ್ಯಾಯ ಸಮ್ಮತ ಆಯ್ಕೆಯನ್ನು ಖಾತರಿ ಪಡಿಸುವ ವಿಧಾನವನ್ನು ಸುಪ್ರೀಂ ಕೋರ್ಟ್ ರೂಪಿಸಿತ್ತು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳಿಗೆ ಅತ್ಯಂತ ಮಹತ್ವದ ಸ್ಥಾನವಿದೆ.ಚುನಾವಣೆಗಳನ್ನು ಮುಕ್ತವಾಗಿ ಮತ್ತು ನ್ಯಾಯ ಸಮ್ಮತವಾಗಿ ನಡೆಸುವುದು ಅಗತ್ಯ. ಹೀಗಾಗಿ ಚುನಾವಣೆಗಳನ್ನು ನಡೆಸುವ ಆಯೋಗವನ್ನು ನಿರ್ವಹಿಸುವ ಆಯುಕ್ತರನ್ನು ಆಯ್ಕೆ ಮಾಡುವ ಸಮಿತಿಯಲ್ಲಿ ತಟಸ್ಥ ಸದಸ್ಯರು ಇರಬೇಕಾದುದು ಅಗತ್ಯ ಎಂದು ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಹಾಗೂ ಸತೀಶ್ ಚಂದ್ರ ಶರ್ಮಾ ಅವರನ್ನೊಳಗೊಂಡ ಪೀಠವು ಹೇಳಿರುವುದು ಸೂಕ್ತವಾಗಿದೆ. ಆದರೆ ಇದಕ್ಕೆ ಆಕ್ಷೇಪಿಸಿದ ಸರಕಾರವನ್ನು ಪ್ರತಿನಿಧಿಸುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಪ್ರಧಾನಮಂತ್ರಿ ಮತ್ತು ಸದಸ್ಯರು ಪ್ರಜಾಪ್ರಭುತ್ವದ ಹಿತಾಸಕ್ತಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಾರೆ ಎಂದು ಊಹಿಸುವುದು ಸರಿಯಲ್ಲ. ಪ್ರಧಾನ ಮಂತ್ರಿ ಹುದ್ದೆಗೆ ಸಾಂವಿಧಾನಿಕ ಅಧಿಕಾರ ಹಾಗೂ ಅತ್ಯುನ್ನತ ಗೌರವವಿದ್ದು ಸಮಿತಿಯಲ್ಲಿ ತಟಸ್ಥ ವ್ಯಕ್ತಿಯನ್ನು ಸೇರಿಸಬೇಕೆನ್ನುವ ವಾದವು ಪ್ರಧಾನಮಂತ್ರಿಯ ಮೇಲಿನ ಅಪನಂಬಿಕೆಗೆ ಕಾರಣವಾಗುತ್ತದೆ ಎಂದು ವಾದಿಸಿದರು.
ಆದರೆ ಸಾಲಿಸಿಟರ್ ಜನರಲ್ ಅವರ ವಾದದಲ್ಲಿ ಹುರುಳಿಲ್ಲ. ಆಯ್ಕೆ ಸಮಿತಿಯಲ್ಲಿ ತಟಸ್ಥ ವ್ಯಕ್ತಿಯನ್ನು ನಿರೀಕ್ಷಿಸುವುದು ಪ್ರಧಾನಿಯ ಮೇಲಿನ ನಂಬಿಕೆ ಇಲ್ಲವೇ ಅಪನಂಬಿಕೆಯ ಪ್ರಶ್ನೆಯಲ್ಲ. ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಲ್ಲಿನ ಅಸಮತೋಲನಕ್ಕೆ ಸಂಬಂಧಿಸಿದ ವಿಷಯವಾಗಿದೆ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲ ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳು ನ್ಯಾಯ ಸಮ್ಮತವಾಗಿ ನಡೆದಿವೆ ಎಂದು ಹೇಳಿದರೆ ಸಾಲದು. ಅವು ನ್ಯಾಯ ಸಮ್ಮತವಾಗಿವೆ ಎನ್ನುವ ನಂಬಿಕೆ ಜನರಲ್ಲಿ ಬರಬೇಕು. ಜನರು ನಂಬುವಂತೆ ಎಲ್ಲವೂ ಪಾರದರ್ಶಕವಾಗಿ ನಡೆಯಬೇಕು. ಪ್ರಧಾನ ಮಂತ್ರಿ ಹುದ್ದೆಗಿರುವ ಮಹತ್ವವು ವಾಸ್ತವವಾಗಿ ನ್ಯಾಯಪರತೆ ಹಾಗೂ ತಟಸ್ಥತೆಯನ್ನು ಖಾತ್ರಿಪಡಿಸುವುದಿಲ್ಲ ಎಂಬ ನ್ಯಾಯಾಲಯದ ಹೇಳಿಕೆ ಸಮರ್ಥನೀಯವಾಗಿದೆ.
ಯಾವುದೇ ಕಾನೂನು ರಾಜಕೀಯ ಕಾರಣಕ್ಕಾಗಿ ತರಾತುರಿಯಲ್ಲಿ ರೂಪುಗೊಳ್ಳಬಾರದು. ಮುಂದಿನ ಮುಖ್ಯ ನ್ಯಾಯಮೂರ್ತಿಗಳ ನೇಮಕಕ್ಕೂ ಮುನ್ನ ಆಯ್ಕೆ ಸಮಿತಿಯನ್ನು ತನ್ನ ಹತೋಟಿಗೆ ತೆಗೆದುಕೊಳ್ಳುವ ಉದ್ದೇಶದಿಂದ ಹಾಗೂ ಅನೂಪ್ ಬರನವಾಲ ಕುರಿತ ಸುಪ್ರೀಂಕೋರ್ಟ್ ತೀರ್ಪಿನ ಪರಿಣಾಮವನ್ನು ದುರ್ಬಲಗೊಳಿಸುವುದಕ್ಕಾಗಿ ಸರಕಾರ ಅವಸರವಸರದಲ್ಲಿ ಈ ಕಾಯ್ದೆಯನ್ನು ರೂಪಿಸಿತು ಎಂಬುದು ಬರೀ ಟೀಕೆಯಲ್ಲ, ಇದು ವಾಸ್ತವ ಸಂಗತಿಯಾಗಿದೆ. ಇಂಥ ರಾಜಕೀಯ ಉದ್ದೇಶದ ಯಾವುದೇ ಚರ್ಚೆ, ಪರಾಮರ್ಶೆಗಳಿಲ್ಲದೆ ರೂಪುಗೊಳ್ಳುವ ಕಾನೂನು ಚುನಾವಣಾ ಆಯೋಗದ ಸ್ವಾಯತ್ತ ಸ್ಥಾನಮಾನಕ್ಕೆ ಧಕ್ಕೆಯನ್ನುಂಟು ಮಾಡುತ್ತದೆ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ.
ಸರಕಾರ ರಾಜಕೀಯ ಉದ್ದೇಶದಿಂದ ತರಾತುರಿಯಲ್ಲಿ ರೂಪಿಸಿದ ನಿಯಮಾವಳಿಯ ಪರಿಣಾಮ ಈಗ ಚುನಾವಣಾ ಆಯೋಗದ ಕಾರ್ಯ ವೈಖರಿಯಲ್ಲಿ ಸ್ಪಷ್ಟವಾಗಿ ಕಂಡುಬರುತ್ತಿದೆ. ಈಗ ಸ್ವಾಯತ್ತ ಸಾಂವಿಧಾನಿಕ ಸಂಸ್ಥೆಯಾಗಿ ಕಾರ್ಯ ನಿರ್ವಹಿಸಬೇಕಾದ ಚುನಾವಣಾ ಆಯೋಗ ಸರಕಾರದ ಅಂಗಸಂಸ್ಥೆಯಂತೆ ಕಾರ್ಯ ನಿರ್ವಹಿಸುತ್ತಿದೆ. ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಆಯುಕ್ತರನ್ನು ಆಯ್ಕೆ ಮಾಡುವ ಸಮಿತಿಯಿಂದ ತಟಸ್ಥ ಸದಸ್ಯರನ್ನು ಹೊರಗಿಡುವ ಕುರಿತು ಸುಪ್ರೀಂಕೋರ್ಟ್ ಸಹಜವಾಗಿ ವ್ಯಕ್ತಪಡಿಸಿರುವ ಕಳಕಳಿ ಮತ್ತು ಸರಕಾರಕ್ಕೆ ಕೇಳಿರುವ ಪ್ರಶ್ನೆಗಳು ನ್ಯಾಯ ಸಮ್ಮತವಾಗಿವೆ. ಅಷ್ಟೇ ಅಲ್ಲ ಸಾಂವಿಧಾನಿಕ ಆಶಯದಿಂದ ಕೂಡಿವೆ. ಇದಕ್ಕೆ ಪ್ರತಿಯಾಗಿ ಸರಕಾರದ ಲೋಪದೋಷಗಳಿಂದ ಕೂಡಿದ ನಿಲುವನ್ನು ಸಮರ್ಥಿಸಲು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಮಂಡಿಸಿರುವ ವಾದ ಅತ್ಯಂತ ದುರ್ಬಲವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಂಸ್ಥಿಕ ನಿಯಂತ್ರಣ ಮತ್ತು ಸಮತೋಲನ ಅತ್ಯಗತ್ಯ ಎನ್ನುವುದನ್ನು ಸರಕಾರಕ್ಕೆ ಸುಪ್ರೀಂಕೋರ್ಟ್ ಕೇಳಿರುವ ಪ್ರಶ್ನೆಗಳು ಮತ್ತೊಮ್ಮೆ ಖಚಿತಪಡಿಸಿವೆ.