ಭಿನ್ನಮತ ದಮನ ಮಾಡಲು ಮತ್ತೊಂದು ಕುತಂತ್ರ
Photo: /x.com/pradip103
ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರ ರಾಜಕೀಯ ವಿರೋಧಿಗಳನ್ನು ಮತ್ತು ಭಿನ್ನಮತವನ್ನು ಎಂದೂ ಸಹಿಸುವುದಿಲ್ಲ. ಯಾವುದೇ ಪ್ರತಿಭಟನೆಗೂ ಸೊಪ್ಪು ಹಾಕುವುದಿಲ್ಲ ಎಂಬ ಭಾವನೆ ವ್ಯಾಪಕವಾಗಿತ್ತು. ಆದರೆ ಅದೀಗ ಸುಳ್ಳಾಗಿದೆ. ಅದಕ್ಕೆ ಮೊದಲ ಬಾರಿ ಹಿನ್ನಡೆಯಾಗಿದ್ದು ದಿಲ್ಲಿಯಲ್ಲಿ ಈಚೆಗೆ ನಡೆದ ವಿದ್ಯಾರ್ಥಿಗಳ ವಿನೂತನ ಚಳವಳಿಯ ಸಂದರ್ಭದಲ್ಲಿ ಎಂದು ಹೇಳಿದರೆ ತಪ್ಪಿಲ್ಲ. ಭಿನ್ನಮತವನ್ನು ದಮನ ಮಾಡಲು ಅದು ನಡೆಸುವ ಕುತಂತ್ರಗಳು ಒಂದೆರಡಲ್ಲ.ರಾಜಕೀಯ ವಿರೋಧಿಗಳನ್ನು ಮಾತ್ರವಲ್ಲ ರಾಜಕೀಯೇತರ ಸಂಘ ಸಂಸ್ಥೆಗಳನ್ನು ಅದರಲ್ಲೂ ವಿಶೇಷವಾಗಿ ಸ್ವಯಂ ಸೇವಾ ಸಂಸ್ಥೆಗಳ(ಎನ್‌ಜಿಒ) ಚಟುವಟಿಕೆಗಳಿಗೆ ಕಡಿವಾಣ ಹಾಕುವುದಕ್ಕಾಗಿ ಅವುಗಳ ಆರ್ಥಿಕ ಮೂಲವನ್ನು ಕಡಿತಗೊಳಿಸಲು ಅದೀಗ ಮುಂದಾಗಿದೆ. ಸರಕಾರೇತರ ಸಂಸ್ಥೆಗಳು ವಿದೇಶಗಳಿಂದ ಪಡೆಯುವ ದೇಣಿಗೆಗೆ ಸಂಬಂಧಿಸಿದ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಲು ಸರಕಾರ ತೀರ್ಮಾನಿಸಿದೆ. ಇದರಿಂದ ಅಲ್ಪಸಂಖ್ಯಾತ ಸಮುದಾಯಗಳ ಸಂಘ ಸಂಸ್ಥೆಗಳು ಮಾತ್ರವಲ್ಲದೆ ಮಾನವ ಹಕ್ಕುಗಳು ಹಾಗೂ ನಾಗರಿಕ ಸಂಘಟನೆಗಳು, ಪರಿಸರ ಸಂಘಟನೆಗಳು ಹಾಗೂ ಸಂಶೋಧನಾ ಸಂಸ್ಥೆಗಳ ಚಟುವಟಿಕೆಗಳಿಗೆ ತೊಂದರೆಯಾಗುವ ಸಂಭವವಿದೆ.
ಗುಜರಾತ್‌ನಲ್ಲಿ 2002ರಲ್ಲಿ ನಡೆದ ಹತ್ಯಾಕಾಂಡ ಮತ್ತು ಹಿಂಸಾಚಾರದ ಸಂದರ್ಭದಲ್ಲಿ ಬೀದಿಗೆ ಬಿದ್ದವರ ಪುನರ್ವಸತಿ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಮತ್ತು ಅಪರಾಧಿಗಳಿಗೆ ಶಿಕ್ಷೆಯಾಗಲೇಬೇಕೆಂದು ಅವಿರತ ಪ್ರಯತ್ನಿಸಿದ ತೀಸ್ತಾ ಸೆಟಲ್ವಾಡ್ ಅವರಂಥ ಮಾನವ ಹಕ್ಕುಗಳ ಸಂಘಟನೆಗಳು ಸೇರಿದಂತೆ ಬಹುತೇಕ ಎಲ್ಲ ಸರಕಾರೇತರ ಸ್ವಯಂ ಸೇವಾ ಸಂಸ್ಥೆಗಳ ಬಗ್ಗೆ ತೀವ್ರ ಅಸಮಾಧಾನ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಹೇಗಾದರೂ ಮಾಡಿ ಎನ್‌ಜಿಒಗಳ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮಸಲತ್ತು ನಡೆಸುತ್ತಲೇ ಬಂದಿದ್ದರು. ಈಗ ತಮಗೆ ದೊರೆತ ಅಧಿಕಾರವನ್ನು ಬಳಸಿಕೊಂಡು ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ನಿಯಮಗಳು 2026ನ್ನು ಪರಿಷ್ಕರಿಸಿ ಗೆಜೆಟ್‌ನಲ್ಲಿ ಪ್ರಕಟಿಸಲಾಗಿದೆ.
ಈಗ ಮಾಡಲಾಗಿರುವ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ನಿಯಮಗಳನ್ನು 2011ರಿಂದ ಇಲ್ಲಿಯ ವರೆಗೆ ಒಂದಲ್ಲ, ಎರಡಲ್ಲ ಹತ್ತು ಸಲ ತಿದ್ದುಪಡಿ ಮಾಡಲಾಗಿದೆ. ಒಂದು ಕಾನೂನನ್ನು ಹೀಗೆ ಪದೇ ಪದೇ ತಿದ್ದುಪಡಿ ಮೂಲಕ ಬದಲಾಯಿಸುವ ಪ್ರಕ್ರಿಯೆ ಸರಿಯೇ ಎಂಬ ಪ್ರಶ್ನೆ ಸಹಜವಾಗಿ ಉದ್ಭವವಾಗಿದೆ. ಇತ್ತೀಚೆಗೆ ನಡೆದ ಕೆಲವು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಮುನ್ನ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ) ತಿದ್ದುಪಡಿ ವಿಧೇಯಕವನ್ನು ಸರಕಾರ ಸಂಸತ್‌ನಲ್ಲಿ ಮಂಡಿಸಿತ್ತು. ಈ ವಿಧೇಯಕಕ್ಕೆ ಬಂದ ಪ್ರತಿರೋಧದಿಂದಾಗಿ ಅದರಲ್ಲೂ ಅಲ್ಪಸಂಖ್ಯಾತ ಸಮುದಾಯಗಳ ತೀವ್ರ ವಿರೋಧದಿಂದಾಗಿ ಅದನ್ನು ಕೈ ಬಿಡಲಾಯಿತು. ಕೈ ಬಿಡಲಾಗಿದ್ದ ವಿಧೇಯಕದಲ್ಲಿದ್ದ ಅಂಶಗಳನ್ನೇ ಹೊಸ ನಿಯಮಗಳ ಮೂಲಕ ಜಾರಿಗೊಳಿಸಲು ಸರಕಾರ ಮುಂದಾಗಿದೆ ಎಂಬ ಟೀಕೆಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ. ಹಾಗಾಗಿಯೇ ಸರಕಾರದ ಈ ಮಸಲತ್ತಿನ ಬಗ್ಗೆ ಸಹಜವಾಗಿ ಆಕ್ರೋಶ ಕಂಡು ಬರುತ್ತಿದೆ.
ಮೋದಿ ಸರಕಾರ ರೂಪಿಸಿದ ಹೊಸ ನಿಯಮಾವಳಿಯ ಪ್ರಕಾರ ವಿದೇಶಿ ದೇಣಿಗೆ ಪಡೆಯುವ ಸಂಘ ಸಂಸ್ಥೆಗಳು ತಾವು ಕಾರ್ಯನಿರ್ವಹಿಸುವ ನಿರ್ದಿಷ್ಟ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನೋಂದಾಯಿಸಿಕೊಳ್ಳುವುದು ಕಡ್ಡಾಯ. ವಿದೇಶಗಳಿಂದ ಪಡೆಯುವ ದೇಣಿಗೆಯನ್ನು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಬಳಸಿಕೊಳ್ಳಬಹುದಾಗಿದೆ. ಅನೇಕ ಸ್ವಯಂ ಸೇವಾ ಸಂಸ್ಥೆಗಳು ಕಾರ್ಯ ನಿರ್ವಹಿಸುವ ಆರೋಗ್ಯ ಕ್ಷೇತ್ರವನ್ನು ಪ್ರತ್ಯೇಕವಾಗಿ ಹೆಸರಿಸಿಲ್ಲ. ಧಾರ್ಮಿಕ ಶಿಕ್ಷಣ ಹಾಗೂ ಧಾರ್ಮಿಕ ಪರಂಪರೆಗಳ ದಾಖಲೀಕರಣ ಹಾಗೂ ಸ್ಥಳೀಯ ನಂಬಿಕೆಗಳ ರಕ್ಷಣೆಗೆ ಅವಕಾಶವನ್ನು ಕಲ್ಪಿಸಲಾಗಿದ್ದರೂ ಮತಾಂತರ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ. ಈ ನಿರ್ಬಂಧದ ಮೂಲಕ ಅಲ್ಪಸಂಖ್ಯಾತ ಸಮುದಾಯಗಳ ಚಟುವಟಿಕೆಗಳನ್ನು ಮತಾಂತರದ ಪ್ರಯತ್ನಗಳೆಂದು ವ್ಯಾಖ್ಯಾನಿಸುವ ಸಾಧ್ಯತೆಗಳಿವೆ ಎಂದು ಕೆಲವು ಅಲ್ಪಸಂಖ್ಯಾತರ ಸಂಘಟನೆಗಳು ಸಹಜವಾಗಿ ಆತಂಕವನ್ನು ವ್ಯಕ್ತಪಡಿಸಿವೆ.
ಹೊಸ ನಿಯಮಾವಳಿಯ ಪ್ರಕಾರ ಸ್ವಯಂ ಸೇವಾ ಸಂಘಟನೆಗಳು ತಾವು ಕಾರ್ಯ ನಿರ್ವಹಿಸುವ ನಿರ್ದಿಷ್ಟ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನೋಂದಾಯಿಸಿ ಕೊಳ್ಳಬೇಕೆಂಬುದು ಅವುಗಳ ಕಾರ್ಯ ವ್ಯಾಪ್ತಿಯನ್ನು ಸೀಮಿತಗೊಳಿಸುತ್ತದೆ. ಬೇರೆ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಬೇಕಾದರೆ ಪ್ರತ್ಯೇಕ ನೋಂದಣಿ ಮಾಡಿಸಿಕೊಳ್ಳಬೇಕಾಗುತ್ತದೆ ಎಂಬ ನಿಯಮ ಸರಿಯಲ್ಲ. ಅಲ್ಲದೆ ನೋಂದಣಿ ಸಂದರ್ಭದಲ್ಲಿ ಮಾಹಿತಿ ಹಾಗೂ ಪ್ರಕಟಣೆಗಳನ್ನು ಬಹಿರಂಗಪಡಿಸಬೇಕೆಂಬ ಷರತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ನಿರ್ಬಂಧ ಎಂದು ಕೆಲವು ಪರಿಣಿತರು ವ್ಯಾಖ್ಯಾನಿಸಿದ್ದಾರೆ.
ಸಂಘಪರಿವಾರದ ಸಂಘಟನೆಗಳು ವಿದೇಶಗಳಿಂದ ಕೋಟ್ಯಂತರ ರೂಪಾಯಿ ದೇಣಿಗೆಯನ್ನು ಪಡೆಯುತ್ತವೆ. ಅವುಗಳಿಗಿಲ್ಲದ ನಿರ್ಬಂಧವನ್ನು ಇತರ ಅವಕಾಶ ವಂಚಿತ ಸಮುದಾಯಗಳ ಹಿತರಕ್ಷಣೆಗಾಗಿ ಕೆಲಸ ಮಾಡುವ ಸ್ವಯಂ ಸೇವಾ ಸಂಸ್ಥೆಗಳ ಮೇಲೆ ಹೇರಲಾಗಿದೆ. ಹೊಸ ನಿಯಮಾವಳಿ ಪ್ರಕಾರ ಸರಕಾರ ಸ್ವಯಂ ಸೇವಾ ಸಂಸ್ಥೆಗಳ ಚಟುವಟಿಕೆಗಳ ಮೇಲೆ ನೇರ ಹಸ್ತಕ್ಷೇಪಕ್ಕೆ ಅವಕಾಶ ನೀಡುತ್ತದೆ. ಇದು ಭಿನ್ನಮತವನ್ನು ಸದೆ ಬಡಿಯುವ ಇನ್ನೊಂದು ಯತ್ನವಲ್ಲದೆ ಬೇರೇನೂ ಅಲ್ಲ.
ಕೇಂದ್ರ ಸರಕಾರ ಈ ಹೊಸ ತಿದ್ದುಪಡಿ ತರುವ ಮುಂಚೆಯೇ ಸರಕಾರೇತರ ಸ್ವಯಂ ಸೇವಾ ಸಂಸ್ಥೆಗಳಿಗೆ ಸಾಕಷ್ಟು ಕಿರುಕುಳ ನೀಡುತ್ತಾ ಬಂದಿದೆ. ಹೀಗಾಗಿ ಗ್ರಾಮೀಣ ಪ್ರದೇಶದಲ್ಲಿ ಮಕ್ಕಳು, ಮಹಿಳೆಯರು, ಆರೋಗ್ಯ ಮತ್ತು ಶಿಕ್ಷಣಗಳಿಗೆ ಸಂಬಂಧಿಸಿದಂತೆ ಕೆಲಸ ಮಾಡುತ್ತಿದ್ದ ಸ್ವಯಂ ಸೇವಾ ಸಂಸ್ಥೆಗಳು ಈ ಕಿರುಕುಳ ತಾಳಲಾಗದೆ ಸಂಪೂರ್ಣವಾಗಿ ನಿಷ್ಕ್ರಿಯವಾಗಿವೆ. ಈಗ ತರಲು ಹೊರಟಿರುವ ಈ ಹೊಸ ಕಾಯ್ದೆಯಿಂದ ಇನ್ನಷ್ಟು ತೊಂದರೆಯನ್ನು ಅನುಭವಿಸಬೇಕಾಗಿ ಬಂದಿದೆ.
ಕೇಂದ್ರ ಸರಕಾರ ಜನ ವಿರೋಧಿಯಾದ ಈ ತಿದ್ದುಪಡಿಯನ್ನು ತಕ್ಷಣವೇ ಕೈ ಬಿಡಬೇಕು. ಸ್ವಯಂ ಸೇವಾ ಸಂಸ್ಥೆಗಳಿಗೆ ಜನಪರ ಚಟುವಟಿಕೆಗಳನ್ನು ನಡೆಸಲು ಮುಕ್ತ ಅವಕಾಶವನ್ನು ನೀಡಬೇಕು.