ಚುನಾವಣಾ ಭ್ರಷ್ಟಾಚಾರಕ್ಕೆ ಇಷ್ಟು ಮೂಗುದಾರ ಸಾಕೆ?
ಸಾಂದರ್ಭಿಕ ಚಿತ್ರ | PC : PTI
ಒಂದು ಸಂಸತ್ ಕ್ಷೇತ್ರದಲ್ಲಿ ಒಬ್ಬರು ಚುನಾವಣಾ ಅಭ್ಯರ್ಥಿಗೆ ತನ್ನ ಪ್ರಚಾರದ ವೇಳೆ ಖರ್ಚು ಮಾಡುವುದಕ್ಕೆ ಚುನಾವಣಾ ಆಯೋಗವು ಹಾಕಿರುವ ಗರಿಷ್ಠ ಮಿತಿ ಕೇವಲ 95 ಲಕ್ಷ ರೂ.ಗಳು. ಬಹುತೇಕ ಎಲ್ಲ ಅಭ್ಯರ್ಥಿಗಳೂ ತಮ್ಮ ಖರ್ಚು ಈ ಮಿತಿಯ ಒಳಗೇ ಇದೆ ಎಂಬ ಲೆಕ್ಕಪತ್ರಗಳನ್ನು ಚುನಾವಣೆಯ ಕೊನೆಯಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿರುತ್ತಾರೆ. ಆದರೆ, ಈ ಮಿತಿಯ ನೂರು-ಐನೂರು ಪಟ್ಟು ಹೆಚ್ಚು ಹಣ, ಸೊತ್ತು, ಹೆಂಡ ಇತ್ಯಾದಿಗಳ ಹೊಳೆಯೇ ಹರಿದಿರುತ್ತದೆ ಎಂಬುದು ಬಹಿರಂಗ ಸತ್ಯ.
2024ರ ಸಾರ್ವತ್ರಿಕ ಚುನಾವಣೆಗಳ ವೇಳೆ, ದೇಶದಲ್ಲಿ ಒಟ್ಟು 10,106 ಕೋಟಿ ರೂ. ಅಕ್ರಮ ನಗದು ಮತ್ತು ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ, ಇದು 2019ರ ಚುನಾವಣೆಗಳಿಗೆ ಹೋಲಿಸಿದರೆ ಶೇ. 290 ಹೆಚ್ಚಳ ಎಂದು ಚುನಾವಣಾ ಆಯೋಗವೇ ಅಧಿಕೃತವಾಗಿ ಹೇಳಿಕೊಂಡಿದೆ. ಈ ಮೊತ್ತ ಕೂಡ ಭ್ರಷ್ಟಾಚಾರದ ಮಹಾಪರ್ವತದ ತುದಿ ಮಾತ್ರ.
ಈ ಎಲ್ಲ ಸಂಗತಿಗಳು ಅಧಿಕೃತವಾಗಿಯೇ ಗೊತ್ತಿರುವಾಗ, ಭಾರತದ ಸುಪ್ರೀಂಕೋರ್ಟ್ ಇತ್ತೀಚೆಗೆ (ಆಗಸ್ಟ್ 17) ಚುನಾವಣೆಗಳಲ್ಲಿ ಕಪ್ಪುಹಣದ ನಿಯಂತ್ರಣಕ್ಕೆ ನೀಡಿರುವ ಸೂಚನೆಗಳು ಕೊಬ್ಬಿದ ಗುಟುರು ಗೂಳಿಗೆ ಹಾಕಿರುವ ಹತ್ತಿ ನೂಲಿನ ಮೂಗುದಾರದಂತೆ ತೋರುತ್ತಿವೆ.
2014ರ ಮಹಾ ಚುನಾವಣೆಗಳ ವೇಳೆ, ಕರ್ನಾಟಕದ ಬಳ್ಳಾರಿಯಲ್ಲಿ ಸ್ವತಂತ್ರ ಅಭ್ಯರ್ಥಿ ಆಗಿದ್ದ ಪ್ರತೀಕ್ ಪಾರಸ್ರಾಂಪುರೀಯಾ ಅವರ ಮನೆ-ವ್ಯವಹಾರಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದಾಗ, ಅಲ್ಲಿ ಮತದಾರರಿಗೆ ಹಂಚಲು ಎಂದು ದಾಸ್ತಾನಿರಿಸಿದ್ದ 20.48 ಲಕ್ಷ ರೂ. ನಗದು ಸಿಕ್ಕಿತ್ತು ಮತ್ತು ಈ ಬಗ್ಗೆ ಪ್ರಕರಣ (0107 oಜಿ 2014) ದಾಖಲಾಗಿತ್ತು. ಆದರೆ, ಆ ಹಣ ಯಾರಿಗೆ ಹಂಚುವುದಕ್ಕೆ ಎಂಬುದು ಸ್ಪಷ್ಟ ಇಲ್ಲ ಎಂಬ ಕಾರಣ ಕೊಟ್ಟು ಕರ್ನಾಟಕ ಹೈಕೋರ್ಟ್ ಈ ಎಫ್‌ಐಆರ್‌ನ್ನು ರದ್ದುಪಡಿಸಿತ್ತು. ಅದರ ವಿರುದ್ಧ ಕರ್ನಾಟಕ ಸರಕಾರ ಸಲ್ಲಿಸಿದ್ದ ಅರ್ಜಿಯ ಮೇಲೆ (SಐP (ಅಡಿಟ.) ಓo. 3549 oಜಿ 2016 ಸುಪ್ರೀಂಕೋರ್ಟ್‌ನ ನ್ಯಾ. ಸಂಜಯ್ ಕಾರೋಲ್ ಮತ್ತು ನ್ಯಾ. ಕೋಟೀಶ್ವರ ಸಿಂಗ್ ಅವರ ಪೀಠವು ವಿಚಾರಣೆಗೆ ಸ್ವೀಕರಿಸಿತಲ್ಲದೆ ಈ ಪ್ರಕರಣದ ವಿಚಾರಣೆಯ ನೆಪದಲ್ಲಿ, ದೇಶದ ಚುನಾವಣೆಗಳಲ್ಲಿ ಕಪ್ಪುಹಣದ ಬಳಕೆಯನ್ನು ಸಮಗ್ರವಾಗಿ ಪರಿಗಣಿಸಿ ಹಲವು ನಿರ್ದೇಶನಗಳನ್ನು ನೀಡಿದೆ.
ಚುನಾವಣೆಗೆ ಸಂಬಂಧಿಸಿದ ಅಪರಾಧಗಳ ತನಿಖೆಗಳು ಒಂದು ವರ್ಷದ ಒಳಗೆ ಮುಗಿಸಬೇಕು, ಪ್ರಕರಣಗಳ ತ್ವರಿತ ವಿಲೇವಾರಿಗೆ ಹೈಕೋರ್ಟ್‌ಗಳು ವಿಶೇಷ ಬೆಂಚ್ ಸ್ಥಾಪಿಸಬೇಕು, ಅಕ್ರಮ ಸೊತ್ತುಗಳನ್ನು ವಶಪಡಿಸಿಕೊಂಡಾಗ ಅದನ್ನು 24 ತಾಸುಗಳ ಒಳಗೆ ಜಿಲ್ಲಾ ಮ್ಯಾಜಿಸ್ಟ್ರೇಟರ ಗಮನಕ್ಕೆ ತರಬೇಕು, 10 ಲಕ್ಷ ರೂ.ಕ್ಕಿಂತ ಹೆಚ್ಚಿನ ಮೌಲ್ಯವನ್ನು ವಶಪಡಿಸಿಕೊಂಡರೆ ಅದನ್ನು ಆದಾಯ ತೆರಿಗೆ ಇಲಾಖೆಯ ಗಮನಕ್ಕೆ ತರಬೇಕು ಎಂಬಿತ್ಯಾದಿ ನಿರ್ದೇಶನಗಳನ್ನು ನೀಡಿರುವ ಸುಪ್ರೀಂಕೋರ್ಟ್ ‘‘ಆಡಳಿತದ ಮೇಲೆ ತಮ್ಮ ಪ್ರಭಾವ ಬೀರಲು ನಾಗರಿಕರಿಗೆ ಇರುವ ಏಕೈಕ ಅವಕಾಶ ಎಂದರೆ ಮತದಾನ. ಈ ಆಯ್ಕೆಯ ಹಕ್ಕನ್ನು ಕೂಡ ಬಾಹ್ಯ ಪ್ರಭಾವಗಳಿಂದ ಕಲುಷಿತಗೊಳಿಸಿದರೆ, ಪ್ರಜಾತಾಂತ್ರಿಕ ವ್ಯವಸ್ಥೆಯ ತಳಹದಿಯೇ ನಾಶವಾದಂತೆ. ಅಂತಹ ಅಂಶಗಳಿಂದ ಚುನಾವಣಾ ಆಯ್ಕೆಗಳು ಪ್ರಭಾವಿತಗೊಳ್ಳುವುದೆಂದರೆ ಬೇರೊಬ್ಬರ ಆಯ್ಕೆಯನ್ನು ನಮ್ಮ ಮೇಲೆ ಹೇರಿದಂತೆ’’ ಎಂದು ಹೇಳಿದೆ.
ಸುಪ್ರೀಂಕೋರ್ಟ್‌ಗೆ ಚುನಾವಣೆಯ ಮೇಲೆ ಹಣದ ಪ್ರಭಾವದ ಗಂಭೀರತೆ ಅರಿವಾಗಿರುವುದು ಒಳ್ಳೆಯ ಬೆಳವಣಿಗೆ. ಆದರೆ, ಸನ್ನಿವೇಶವನ್ನು ಪೂರ್ಣಪ್ರಮಾಣದಲ್ಲಿ ಗ್ರಹಿಸಿದ ಬಳಿಕ ಸುಪ್ರೀಂಕೋರ್ಟ್ ನೀಡಿರುವ ಈ ನಿರ್ದೇಶನಗಳು ತೀರಾ ಮೇಲುಪದರದ ತೇಪೆಗಳಂತೆ ಕಾಣಿಸುತ್ತಿವೆ. ಚುನಾವಣಾ ಭ್ರಷ್ಟಾಚಾರದ ಆಳ ಅಗಲಗಳ ಅರಿವು ಇರುವವರಿಗೆ ಯಾರಿಗೂ ಈ ನಿರ್ದೇಶನಗಳು ಪರ್ಯಾಪ್ತ ಅನ್ನಿಸಲಾರವು.
ಈ ಪ್ರಕರಣದ ವಿಚಾರಣೆಯ ವೇಳೆ ಸುಪ್ರೀಂಕೋರ್ಟ್ 2024ರ ಲೋಕಸಭಾ ಚುನಾವಣೆಗಳಲ್ಲಿ ದಾಖಲಾದ ಪ್ರಕರಣಗಳ ಕುರಿತು ವಿವರಗಳನ್ನು ಚುನಾವಣಾ ಆಯೋಗದಿಂದ ತರಿಸಿಕೊಂಡಿತ್ತು. ಆಯೋಗದ ಪ್ರಕಾರ, ಆ ಚುನಾವಣೆಗಳ ವೇಳೆ ಅಕ್ರಮಗಳ ವಿರುದ್ಧ ಒಟ್ಟು 3,87,430 ಎಫ್‌ಐಆರ್‌ಗಳು ದಾಖಲಾಗಿದ್ದು, ಅವುಗಳಲ್ಲಿ 7,930 ಪ್ರಕರಣಗಳು ಇನ್ನೂ ತನಿಖೆಯಲ್ಲಿವೆ; 76,987 ಪ್ರಕರಣಗಳನ್ನು ಸಾಕ್ಷ್ಯಾಧಾರಗಳಿಲ್ಲದೆ ಮುಚ್ಚಲಾಗಿದೆ; 1,66,044 ಪ್ರಕರಣಗಳಲ್ಲಿ ತೀರ್ಪು ಬಂದಿದೆ; 1,06,841 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ ಹಾಗೂ 24,950 ಪ್ರಕರಣಗಳಲ್ಲಿ ಆರೋಪಿಗಳು ನಿರ್ದೋಷಿ ಎಂದು ಬಿಡುಗಡೆ ಆಗಿದ್ದಾರೆ. ಈ ಅಂಕಿ-ಸಂಖ್ಯೆಗಳೆಲ್ಲ ಭಾರತೀಯ ಚುನಾವಣೆಗಳು ತಲುಪಿರುವ ನೈತಿಕ ರಸಾತಳದ ಕಿರುಬೆರಳನ್ನೂ ಪ್ರತಿನಿಧಿಸುವುದಿಲ್ಲ.
ದುರದೃಷ್ಟವಶಾತ್, ನಿಷ್ಪಕ್ಷ ಚುನಾವಣಾ ವ್ಯವಸ್ಥೆಯ ಚುಕ್ಕಾಣಿ ಹಿಡಿಯಬೇಕಾಗಿರುವ ಚುನಾವಣಾ ಆಯೋಗದ ಚಹರೆಗಳನ್ನೇ ಇಂದು ಸಂವಿಧಾನದ ನಿಕಷಕ್ಕೆ ಒಡ್ಡಬೇಕಾದ ಸ್ಥಿತಿ ಇದೆ. ಸರಕಾರದ ಮರ್ಜಿಗೆ ತಕ್ಕಂತೆ ನೇಮಕಗೊಂಡು, ಅದರ ಮುಲಾಜಿಗೆ ಒಳಪಟ್ಟಿರುವಂತೆ ವರ್ತಿಸುವ ಚುನಾವಣಾ ಆಯೋಗದ ತಾಯಿಬೇರಿನಲ್ಲೇ ಸಮಸ್ಯೆ ಇರುವಾಗ, ಪ್ರಜಾತಂತ್ರದ ಮಹಾವೃಕ್ಷ ಆರೋಗ್ಯವಂತವಾಗಿ ಬೆಳೆಯುತ್ತದೆಂದು ಊಹಿಸಿಕೊಳ್ಳುವುದೇ ಮೂರ್ಖತನ.
ಈವತ್ತಿನ ಸ್ಥಿತಿಯಲ್ಲಿ ನಿಷ್ಪಕ್ಷ ಚುನಾವಣೆಯ ನೈತಿಕ-ಪ್ರಜಾತಾಂತ್ರಿಕ ಹೊಣೆಯನ್ನು ಸಂಪೂರ್ಣವಾಗಿ ಚುನಾವಣಾ ಆಯೋಗಕ್ಕೆ ವಹಿಸಿಕೊಟ್ಟು ಕುಳಿತುಕೊಳ್ಳುವುದೆಂದರೆ, ಸುಟ್ಟ ಮೀನನ್ನು ಕಾಯುವ ಜವಾಬ್ದಾರಿಯನ್ನು ಬೆಕ್ಕಿಗೆ ವಹಿಸಿಕೊಟ್ಟಂತೆಯೇ ಸರಿ. ದೇಶದ ಚುನಾವಣಾ ವ್ಯವಸ್ಥೆ ಈವತ್ತಿನ ಸಾಮಾಜಿಕ ಪರಿಸ್ಥಿತಿಗೆ ತಕ್ಕಂತೆ ಸಮಗ್ರವಾಗಿ ಮರುಪರಿಶೀಲನೆ ಆಗಬೇಕಿದೆ. ಆ ಸಾಂವಿಧಾನಿಕ ಜವಾಬ್ದಾರಿಯನ್ನು ಸುಪ್ರೀಂಕೋರ್ಟ್ ಹೊರುವುದು ಮತ್ತು ಸ್ಟೇಕ್ ಹೋಲ್ಡರುಗಳಾದ ದೇಶದ ಪ್ರಜೆಗಳ ಆಶಯಗಳಿಗೆ ಧಕ್ಕೆ ಆಗದಂತೆ ಅದನ್ನು ನಿಭಾಯಿಸುವುದು ಈವತ್ತಿನ ಸ್ಥಿತಿಯಲ್ಲಿ ಅನಿವಾರ್ಯ.