ಉತ್ತರದಾಯಿತ್ವ ಮರೆತ ಸರಕಾರ
Photo: x.com/pradip103
ಆಗಸ್ಟ್ 13ರಂದು ಕೊನೆಗೊಂಡ ಸಂಸತ್ತಿನ ಮುಂಗಾರು ಅಧಿವೇಶನವು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಜೆಗಳಿಂದ ಚುನಾಯಿಸಲ್ಪಟ್ಟ ಸರಕಾರವು ತನ್ನ ಆಡಳಿತೆಯ ವೈಫಲ್ಯಕ್ಕೆ ಉತ್ತರದಾಯಿತ್ವ ಹೊಂದಿದೆಯೇ ಇಲ್ಲವೇ ಎಂಬ ಮೂಲಭೂತ ಪ್ರಶ್ನೆಯನ್ನು ಮುನ್ನೆಲೆಗೆ ತಂದಿದೆ.
ಮಣಿಪುರದಲ್ಲಿ 2023ಮೇ ತಿಂಗಳಿನಲ್ಲಿ ಬೆಳಕಿಗೆ ಬಂದ ಜನಾಂಗೀಯ ಹಿಂಸೆ ಮತ್ತು ಮಹಿಳೆಯರ ಮೇಲಿನ ಅತ್ಯಾಚಾರ ದೇಶವನ್ನೇ ಬೆಚ್ಚಿಬೀಳಿಸಿತು. ಕಾಶ್ಮೀರದ ಪಹಲ್ಗಾಮ್‌ನಲ್ಲಿ 2025ರ ಎಪ್ರಿಲ್ ತಿಂಗಳಿನಲ್ಲಿ 26 ಮಂದಿ ನಾಗರಿಕರನ್ನು ಗಡಿಯಾಚೆಯ ಉಗ್ರಗಾಮಿಗಳು ಗುಂಡಿಕ್ಕಿ ಕೊಂದರು. 2023ರಲ್ಲಿ ಪ್ರತಿಷ್ಠಾಪನೆಗೊಂಡ ಅಯೋಧ್ಯೆಯ ಬಾಲರಾಮನ ದೇವಸ್ಥಾನಕ್ಕೆ ಕೋಟ್ಯಂತರ ಭಕ್ತರು ಕೊಟ್ಟ ಕಾಣಿಕೆಯ ಹಣದ ಬೃಹತ್ಪ್ರಮಾಣದ ವಂಚನೆಯು ಇದೇ ವರ್ಷ ಮೇ ತಿಂಗಳಿನಲ್ಲಿ ಹೊರಗೆ ಬಂತು. ದೇವಸ್ಥಾನದ ರಚನೆ ಮತ್ತು ಆಡಳಿತ ನಡೆಸಲು ಕೇಂದ್ರ ಮಂತ್ರಿಮಂಡಲವು ರಾಮಜನ್ಮಭೂಮಿ ಟ್ರಸ್ಟ್ ಅನ್ನು ನೇಮಿಸಿದ್ದರ ಬಗ್ಗೆ ಪ್ರಧಾನಿಯವರೇ ಸಂಸತ್ತಿನಲ್ಲಿ ಫೆಬ್ರವರಿ 2020ಕ್ಕೆ ಘೋಷಣೆಯನ್ನು ಮಾಡಿದ್ದರು. ಈ ಮೇ ತಿಂಗಳಿನಲ್ಲಿ ಸುಮಾರು 23 ಲಕ್ಷ ಯುವಜನರ ಭವಿಷ್ಯವನ್ನು ರೂಪಿಸುವ ನೀಟ್ ಪರೀಕ್ಷೆಯ ಅವಾಂತರ ನಡೆಯಿತು; ಜುಲೈಯಲ್ಲಿ ಸಾವಿರಾರು ಯುವಜನರು ಸರಕಾರದಿಂದ ನ್ಯಾಯವನ್ನು ಅಪೇಕ್ಷಿಸಿ ಶಾಂತಿಯಿಂದ ಬೀದಿಗೆ ಇಳಿದಾಗ ದಿಲ್ಲಿ ಪೊಲೀಸರು ಜಂತರ್-ಮಂತರ್‌ನ ಪ್ರತಿಭಟನಾಕಾರರ ಮೇಲೆ ತೀವ್ರವಾದ ಹಲ್ಲೆಯನ್ನು ನಡೆಸಿದರು.
ಈ ಬೆಳವಣಿಗೆಗಳು ಕೇಂದ್ರ ಸರಕಾರದ ಉತ್ತರದಾಯಿತ್ವದ ಬಗ್ಗೆ ಬೆಳಕನ್ನು ಚೆಲ್ಲುತ್ತವೆ. ಮಣಿಪುರದಲ್ಲಿ ಇನ್ನೂ ಅಂತ್ಯ ಕಾಣದ ಹಿಂಸೆ ಮತ್ತು ಸಂತ್ರಸ್ತರಿಗೆ ಒದಗದ ನ್ಯಾಯ ಆಡಳಿತದ ವೈಫಲ್ಯವನ್ನು ಎತ್ತಿ ತೋರಿಸುತ್ತವೆ. ದೇಶದ ಅವಿಭಾಜ್ಯ ಅಂಗವಾದ ಒಂದು ರಾಜ್ಯದ ಪ್ರಜೆಗಳು ನಿರಂತರ ಕ್ರೌರ್ಯಕ್ಕೆ ಬಲಿಯಾದಾಗ ಕೇಂದ್ರಸರಕಾರಕ್ಕೆ ಉತ್ತರದಾಯಿತ್ವವಿಲ್ಲವೇ? ಬಿಗಿ ಭದ್ರತೆಯುಳ್ಳ ಪ್ರದೇಶವಾದ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಗಡಿಯಾಚೆಯಿಂದ ದಾಳಿಕೋರರು ಹೇಗೆ ನುಗ್ಗಿದರು? ಭದ್ರತಾ ವ್ಯವಸ್ಥೆಯ ಹೊಣೆ ಹೊತ್ತ ಕೇಂದ್ರ ಸರಕಾರ ಈ ವೈಫಲ್ಯಕ್ಕೆ ಉತ್ತರದಾಯಿಯಲ್ಲವೇ? ತಾನೇ ಸ್ಥಾಪಿಸಿದ ರಾಮ ಜನ್ಮಭೂಮಿ ಟ್ರಸ್ಟ್‌ನ ಮೂಲಕ ಭಕ್ತರ ಹಣ ಅಪಹರಣವಾಗುತ್ತಿದ್ದಾಗ ಟ್ರಸ್ಟ್‌ನ ವೈಫಲ್ಯಕ್ಕೆ ಸರಕಾರ ಉತ್ತರಿಸಬೇಡವೇ? ಯುವಜನರ ಭವಿಷ್ಯಕ್ಕೆ ಕೊಡಲಿ ಯೇಟು ನೀಡಿದ ಪರೀಕ್ಷೆಯ ಅವ್ಯವಹಾರಗಳಿಗೆ ಪರೀಕ್ಷೆಯ ಜವಾಬ್ದಾರಿ ಹೊತ್ತ ಸರಕಾರ ಉತ್ತರದಾಯಿಯಾಗಬೇಡವೆ?
ಪ್ರಜಾತಂತ್ರದಲ್ಲಿ ಚುನಾಯಿತ ಸರಕಾರವು ಪ್ರಜೆಗಳ ಸಮಸ್ಯೆಗಳಿಗೆ ಸಕಾಲಿಕವಾಗಿ ಸ್ಪಂದಿಸಬೇಕು. ಈ ಸಮಸ್ಯೆಗಳನ್ನು ಅರಿತುಕೊಳ್ಳಲು ಸೂಕ್ತವಾದ ವೇದಿಕೆ ದೇಶದ ಲೋಕಸಭೆ ಮತ್ತು ರಾಜ್ಯಸಭೆಯನ್ನು ಒಳಗೊಂಡ ಸಂಸತ್ತು. ಸಂಸತ್ತಿನ ಜವಾಬ್ದಾರಿ ಕೇವಲ ಶಾಸನಗಳನ್ನು ರೂಪಿಸುವುದಕ್ಕೆ ಸೀಮಿತವಲ್ಲ. ಅದಕ್ಕೂ ಮಿಗಿಲಾಗಿ ಅದು ಪ್ರಜೆಗಳ ಸಂಕಟಗಳಿಗೆ ಸ್ಪಂದಿಸಿ ಆಡಳಿತ ಸೂತ್ರವನ್ನು ಹೊತ್ತ ಸರಕಾರಕ್ಕೆ ತನ್ನ ಜವಾಬ್ದಾರಿಯನ್ನು ದಕ್ಷತೆಯಿಂದ ನಿರ್ವಹಿಸಲು ಎಚ್ಚರಿಸಬೇಕು.
ಎರಡು ರೀತಿಯಲ್ಲಿ ಸರಕಾರವು ತನ್ನ ಸಂವೇದನಾಶೀಲತೆಯನ್ನು ತೋರಿಸಿ ಕಾರ್ಯಪ್ರವೃತ್ತವಾಗಲು ಸಾಧ್ಯವಿದೆ. ಒಂದು, ಸಮಸ್ಯೆಗಳು ಹುಟ್ಟಿದಾಗ ತಾನಾಗಿಯೇ ಅವುಗಳನ್ನು ಗಮನಿಸಿ ಸೂಕ್ತ ಕ್ರಮವನ್ನು ಕೈಗೊಳ್ಳುವುದು ಮತ್ತು ಆ ಬಳಿಕ ದೇಶದ ಪರಮೋಚ್ಚ ಪ್ರತಿನಿಧಿ ಸಭೆಯಾದ ಸಂಸತ್ತಿಗೆ ತನ್ನ ವರದಿಯನ್ನು ನೀಡಿ ಸಂಸದರ ಅಭಿಪ್ರಾಯಗಳನ್ನು ಸ್ವೀಕರಿಸಿ ಮತ್ತಷ್ಟು ಕ್ರಮಗಳನ್ನು ಕೈಗೊಳ್ಳುವುದು. ಎರಡು, ತಾನು ಕ್ರಮಗಳನ್ನು ಕೈಗೊಳ್ಳುವ ಮುಂಚಿತವಾಗಿಯೇ ಸಂಸತ್ತಿನಲ್ಲಿ ಈ ಬೆಳವಣಿಗೆಯ ಬಗ್ಗೆ ಮುಕ್ತ ಚರ್ಚೆಗೆ ಅವಕಾಶ ನೀಡಿ ಜನಪ್ರತಿನಿಧಿಗಳ ಅಭಿಪ್ರಾಯಗಳನ್ನು ತಿಳಿದು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು.
ಸಂಸತ್ತಿನಲ್ಲಿ ಯಾವುದೇ ವಿಷಯದ ಕುರಿತು ಚರ್ಚೆಯಾಗಬೇಕಿದ್ದರೆ ಸರಕಾರದ ಪಾತ್ರ ನಿರ್ಣಾಯಕವಾಗುತ್ತದೆ. ಸದನಗಳ ಕಲಾಪವನ್ನು ಸುಗಮಗೊಳಿಸಲು ರೂಪಿಸಲಾದ ನಿಯಮಗಳಿಗೆ ಅನುಸಾರವಾಗಿ ಸಂಸತ್ತಿನ ಸದಸ್ಯರು ಯಾವುದೇ ಗಂಭೀರವಾದ ಸಮಸ್ಯೆಗಳ ಬಗ್ಗೆ ಪೂರ್ವಸೂಚನೆಯನ್ನು ಕೊಟ್ಟು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅವುಗಳ ಕುರಿತು ಚರ್ಚಿಸಲು ಒತ್ತಾಯಿಸಬಹುದು. ಸರಕಾರವು ಇದಕ್ಕೆ ಒಪ್ಪಬೇಕು; ಲೋಕಸಭೆ ಮತ್ತು ರಾಜ್ಯಸಭೆಯ ಅಧ್ಯಕ್ಷರು ಮುಕ್ತ ಚರ್ಚೆಗೆ ಅವಕಾಶ ನೀಡಬೇಕು ಮಾತ್ರವಲ್ಲ, ಸರಕಾರಕ್ಕೂ ಈ ಅಗತ್ಯವನ್ನು ಮನವರಿಕೆ ಮಾಡಬೇಕು. ಅವರಿಬ್ಬರೂ ಸಂವಿಧಾನದತ್ತ ಹುದ್ದೆಯಲ್ಲಿರುವವರು, ಹಾಗಾಗಿ ಸರಕಾರದಲ್ಲಿರುವ ಪಕ್ಷದ ಸದಸ್ಯರಾಗಿದ್ದರೂ ಅವರು ಆ ಸ್ಥಾನದಲ್ಲಿರುವಾಗ ಸರಕಾರದ ಅಡಿಯಾಳುಗಳಲ್ಲ ಎಂಬುದನ್ನು ಅರಿತುಕೊಳ್ಳಬೇಕು.
ಚರ್ಚೆಯ ಜೊತೆಗೆ, ಪ್ರಜಾತಂತ್ರವ್ಯವಸ್ಥೆಯಲ್ಲಿ ಸರಕಾರ ಮತ್ತು ಅದರ ಮಂತ್ರಿಗಳು ಜನರಿಗೆ ಉತ್ತರದಾಯಿಗಳಾಗುತ್ತಾರೆ. ಈ ಉತ್ತರದಾಯಿತ್ವದ ಲಕ್ಷಣವೆಂದರೆ ತಮ್ಮ ವೈಫಲ್ಯಗಳನ್ನು ತಾವಾಗಿಯೇ ಒಪ್ಪಿಕೊಳ್ಳುವುದು ಅಥವಾ ಸಂಸತ್ತಿನ ಚರ್ಚೆಯಲ್ಲಿ ಸದಸ್ಯರ ಅಭಿಪ್ರಾಯಗಳಿಗೆ ಸ್ಪಂದಿಸಿ ವೈಫಲ್ಯಗಳ ಕಾರಣಗಳನ್ನು ವಿವರಿಸಿ ಜವಾಬ್ದಾರಿಯನ್ನು ಒಪ್ಪಿಕೊಳ್ಳುವುದು. ಇದು ಮೂಲತಃ ನೈತಿಕತೆಯ ಪ್ರಶ್ನೆ. ರೈಲು ಅಪಘಾತವಾದಾಗ ರೈಲ್ವೆ ಮಂತ್ರಿಯವರು ಅದಕ್ಕೆ ನೇರ ಹೊಣೆಗಾರರಲ್ಲ; ರೈಲ್ವೆ ಮಂಡಳಿಯ ಅಥವಾ ಉದ್ಯೋಗಿಗಳ ಅದಕ್ಷತೆಯಿಂದ ಅಪಘಾತ ಸಂಭವಿಸಿ ಅದರಿಂದಾದ ಜೀವ ಮತ್ತು ಸಂಪತ್ತು ಹಾನಿಗೆ ಉದ್ಯೋಗಿಗಳು ಹೊಣೆಯಾಗುತ್ತಾರೆ. ಆದರೆ ಆ ವಿಭಾಗದ ಹೊಣೆ ಹೊತ್ತಿರುವ ರೈಲ್ವೆ ಮಂತ್ರಿಗೆ ನೈತಿಕ ಜವಾಬ್ದಾರಿಯೂ ಇದೆ. ಅದೇ ರೀತಿ ದೇಶದಲ್ಲಿ ಎಲ್ಲಿಯಾದರೂ ಕಾನೂನು ವ್ಯವಸ್ಥೆ ಬಿಗಡಾಯಿಸಿ ಜೀವ ಹಾನಿಯಾದರೆ ಅಲ್ಲಿ ಪೊಲೀಸರು ನೇರವಾಗಿ ಜವಾಬ್ದಾರರಾದರೂ ದೇಶದ ಗೃಹ ಮಂತ್ರಿಗಳು ನೈತಿಕತೆಯ ಆಧಾರದಲ್ಲಿ ಆ ವೈಫಲ್ಯಕ್ಕೆ ಹೊಣೆಯಾಗುತ್ತಾರೆ. ಈ ಬಗ್ಗೆ ಸಂಸತ್ತಿನ ಪ್ರಶ್ನೆಗಳನ್ನು ಎದುರಿಸಲು ದೇಶದ ಗೃಹಮಂತ್ರಿ ಮುಂದೆ ಬರಲಿಲ್ಲ.
ಮುಂಗಾರು ಅಧಿವೇಶನದಲ್ಲಿ ವಿರೋಧಪಕ್ಷಗಳು ರಾಮಮಂದಿರದ ಕಾಣಿಕೆಯ ಹಣದ ಅಪಹರಣ ಮತ್ತು ನೀಟ್ ಪರೀಕ್ಷೆಯ ರಾದ್ಧಾಂತದ ವಿರುದ್ಧ ಯುವಜನರ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸರ ವರ್ತನೆಯ ಬಗ್ಗೆ ಚರ್ಚೆಯಾಗಬೇಕೆಂದು ಮಂಡಿಸಿದ ಬೇಡಿಕೆಗಳನ್ನು ಸರಕಾರವು ಕೊನೆಯ ತನಕವೂ ಒಪ್ಪಲೇ ಇಲ್ಲ. ನರೇಂದ್ರ ಮೋದಿಯವರ ಸಾರಥ್ಯದ ಮೂರು ಸರಕಾರಗಳ (2014ರಿಂದ ಇಂದಿನ ತನಕ) ಅವಧಿಯಲ್ಲಿ ಸರಕಾರದ ನಿರ್ಧಾರಗಳಿಂದ ಮತ್ತು ವೈಫಲ್ಯಗಳಿಂದ ಜನಸಾಮಾನ್ಯರು ಅನುಭವಿಸಬೇಕಾಗಿ ಬಂದ ಬವಣೆಗಳಿಗೆ ಯಾವುದೇ ಸಂದರ್ಭದಲ್ಲಿ ಸಂಸತ್ತಿನಲ್ಲಿ ಮುಕ್ತ ಚರ್ಚೆಯಾದದ್ದೇ ಇಲ್ಲ ಮತ್ತು ಸರಕಾರವು ತನ್ನ ಉತ್ತರದಾಯಿತ್ವದಿಂದ ವಿಮುಖವಾಗಿದೆ ಎಂಬುದು ವಿಶ್ವದ ಅತ್ಯಂತ ದೊಡ್ಡ ಪ್ರಜಾತಂತ್ರಕ್ಕೆ ಈಗಲೂ ಆಗುತ್ತಿರುವ ಅಳಿಸಲಾಗದ ಕಳಂಕ.